ADVERTISEMENT

ಟ್ರಂಪ್‌ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ಒತ್ತಾಯ

ಪಿಟಿಐ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ಬಾಕಿ ಇರುವ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ 54 ಮಹಿಳಾ ಸಂಸದರು ಕಾಂಗ್ರೆಸ್‌ನ ಮೇಲ್ವಿಚಾರಣೆ ಮತ್ತು ಸರ್ಕಾರದ ಸುಧಾರಣೆಗಳ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ದೇಶದಾದ್ಯಂತ ಅನೇಕ ಮಹಿಳೆಯರು ತಮ್ಮ ಮೇಲೆ ನಡೆದಿರುವ ಲೈಂಗಿಕ ಕಿರುಕುಳದ ಕತೆಗಳನ್ನು ‘ಮಿ ಟೂ’ ಅಭಿಯಾನದ ಮೂಲಕ ಬಹಿರಂಗಪಡಿಸುತ್ತಿದ್ದಾರೆ. ಕಾಂಗ್ರೆಸ್‌ನ ಸದಸ್ಯರ ಮೇಲಿನ ಆರೋಪಗಳೂ ತನಿಖೆಗೆ ಒಳಗಾಗಿ ಸತ್ಯಾಂಶ ಹೊರಬರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ವಿಶ್ವದಾದ್ಯಂತ ಮನರಂಜನೆ, ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರಗಳ ಪ್ರಮುಖರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದ ನಂತರ 71 ವರ್ಷ ವಯಸ್ಸಿನ ಟ್ರಂಪ್‌ ವಿರುದ್ಧದ ಆರೋಪಗಳಿಗೆ ಮರುಜೀವ ಬಂದಿದೆ.

ADVERTISEMENT

ಕಳೆದ ಎರಡು ವರ್ಷಗಳಲ್ಲಿ 16 ಮಹಿಳೆಯರು ಟ್ರಂಪ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅವರಲ್ಲಿ ಮೂವರು ಮಹಿಳೆಯರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಆರೋಪಗಳ ಕುರಿತು ಕಾಂಗ್ರೆಸ್‌ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಬಲವಂತವಾಗಿ ಚುಂಬಿಸಿರುವ ಆರೋಪ ಕಳೆದ ವರ್ಷ ಟ್ರಂಪ್‌ ಮೇಲೆ ಬಂದಿತ್ತು. ಆದರೆ,ತಮ್ಮ ಮೇಲಿನ ಆಪಾದನೆಗಳನ್ನು ಸುಳ್ಳು ಎಂದು ತಳ್ಳಿ ಹಾಕಿದ್ದರು. ಒಪ್ಪಿಗೆ ಇಲ್ಲದೆ ಮಹಿಳೆಯರಿಗೆ ಚುಂಬಿಸಿಲ್ಲ ಎಂದು ಹೇಳಿಕೆ ನೀಡಿದ್ದರು.

ಅಧ್ಯಕ್ಷರು ತಮ್ಮ ಮೇಲಿನ ಆರೋಪಗಳ ಬಗ್ಗೆ ನೇರವಾಗಿ ಉತ್ತರಿಸಿದ್ದಾರೆ. ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು  ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ತಿಳಿಸಿದ್ದಾರೆ.

‘ಟ್ರಂಪ್‌ ಅಧ್ಯಕ್ಷರಾಗುವುದಕ್ಕೂ ಮುನ್ನ ಈ ಆರೋಪಗಳನ್ನು ಮಾಡಲಾಗಿದೆ. ಆದರೆ, ನಿರ್ಣಾಯಕ ಚುನಾವಣೆಯಲ್ಲಿ ದೇಶದ ಜನ ಟ್ರಂಪ್‌ ಅವರಿಗೆ ಬೆಂಬಲ ನೀಡಿ ಆಯ್ಕೆ ಮಾಡಿದ್ದಾರೆ. ಆರೋಪಗಳಿಗೆ ಆ ಮೂಲಕ ಉತ್ತರ ನೀಡಲಾಗಿದೆ. ಮಹಿಳೆಯರು ಈ ರೀತಿ ಮುಂದೆ ಬಂದು ತಮಗಾದ ಕಿರುಕುಳಗಳನ್ನು ಹೇಳಿಕೊಳ್ಳುವುದು ಉತ್ತಮ ಬೆಳವಣಿಗೆ. ಆದರೆ, ಆರೋಪ ಮಾಡಿದ ತಕ್ಷಣ ನಿಜ ಎಂಬ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂಬುದನ್ನು ಸ್ವತಃ ಅಧ್ಯಕ್ಷರೇ ಹೇಳಿದ್ದಾರೆ’ ಎಂದು ಸ್ಯಾಂಡರ್ಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.