ADVERTISEMENT

ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಪಟ್ಟಿ: ಪಾಕ್ ಸೇರ್ಪಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ವಾಷಿಂಗ್ಟನ್ (ಪಿಟಿಐ):  ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಸ್ವಾತಂತ್ರ್ಯದ ಹೀನ ಉಲ್ಲಂಘನೆಗೆ ಕಾರಣವಾಗಿರುವ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನೂ ಸೇರಿಸುವಂತೆ ಅಮೆರಿಕ ಕಾಂಗ್ರೆಸ್ ರಚಿಸಿರುವ ಫೆಡರಲ್ ಆಯೋಗವು ಒಬಾಮ ಸರ್ಕಾರವನ್ನು ಆಗ್ರಹಿಸಿದೆ.

‘2015ರಲ್ಲಿ ಪಾಕಿಸ್ತಾನ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯನ್ನು ಶಾಶ್ವತಗೊಳಿಸುವ, ವ್ಯವಸ್ಥಿತವಾಗಿ ಸಹಿಸಿಕೊಳ್ಳುವ, ಮುಂದುವರಿಸುವ ಕೆಲಸ ಮಾಡಿದೆ’ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಆಯೋಗವು (ಯುಎಸ್‌ಸಿಐಆರ್‌ಎಫ್‌) ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಪಾಕಿಸ್ತಾನವನ್ನು ‘ಕಂಟ್ರಿ ಆಫ್ ಪರ್ಟಿಕುಲರ್ ಕನ್ಸರ್ನ್’ (ಸಿಪಿಸಿ) ಅಡಿ ಅಥವಾ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ (ಐಆರ್‌ಎಫ್‌ಎ) ಹೆಸರಿಸಬೇಕು ಎಂದು ಯುಎಸ್‌ಸಿಐಆರ್‌ಎಫ್‌ ಮತ್ತೊಮ್ಮೆ ಅಮೆರಿಕ ವಿದೇಶಾಂಗ ಇಲಾಖೆಗೆ ಶಿಫಾರಸು ಮಾಡಿದೆ.

ಸಿಪಿಸಿ ಅಡಿ ಪಾಕಿಸ್ತಾನವಲ್ಲದೆ ಇನ್ನೂ ಏಳು ದೇಶಗಳನ್ನು ಹೆಸರಿಸುವಂತೆ ಆಯೋಗ ಶಿಫಾರಸು ಮಾಡಿದೆ. ಇದರಲ್ಲಿ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್, ಈಜಿಪ್ಟ್, ಇರಾಕ್, ನೈಜೀರಿಯಾ, ಸಿರಿಯಾ, ತಜಕಿಸ್ತಾನ ಮತ್ತು ವಿಯೆಟ್ನಾಂ ಸೇರಿವೆ. ಅಮೆರಿಕ ವಿದೇಶಾಂಗ ಇಲಾಖೆ ಈಗಾಗಲೇ ಸಿಪಿಸಿ ಅಡಿ ಹೆಸರಿಸಿರುವ ದೇಶಗಳ ಪಟ್ಟಿಯಲ್ಲಿ ಮ್ಯಾನ್ಮಾರ್, ಚೀನಾ, ಎರಿಟ್ರಿಯಾ, ಇರಾನ್, ಉತ್ತರ ಕೊರಿಯಾ, ಸೌದಿ ಅರೇಬಿಯಾ, ಸುಡಾನ್, ತುರ್ಕ್‌ಮೆನಿಸ್ತಾನ ಹಾಗೂ ಉಜ್ಬೇಕಿಸ್ತಾನ ದೇಶಗಳು ಇವೆ.

‘ಪಾಕ್‌ನ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಾದ ಷಿಯಾ, ಅಹ್ಮದಿಯ ಮುಸ್ಲಿಂ, ಕ್ರೈಸ್ತ, ಹಿಂದೂಗಳು ಉಗ್ರ ಸಂಘಟನೆಗಳು ಹಾಗೂ ಸಮಾಜದ ಇತರೆ ವ್ಯಕ್ತಿಗಳಿಂದ ಧಾರ್ಮಿಕ ಹಿಂಸಾಚಾರ ಅನುಭವಿಸುತ್ತಿವೆ’ ಎಂದು ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.