ADVERTISEMENT

ಫಿಲಿಪ್ಪಿನ್ಸ್‌: ದೋಣಿ ಮುಗುಚಿ 36 ಜನ ಸಾವು

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 12:06 IST
Last Updated 2 ಜುಲೈ 2015, 12:06 IST

ಮನಿಲಾ (ಐಎಎನ್ಎಸ್): ದೋಣಿ ಮುಗುಚಿ 36 ಮಂದಿ ಸಾವನ್ನಪ್ಪಿ, 19 ಜನರು ಕಾಣೆಯಾದ ಘಟನೆ ಫಿಲಿಪ್ಪಿನ್ಸ್‌ ಲೆಯ್ಟೆ ಪ್ರಾಂತ್ಯದ ಆರ್ಮೊಕ್‌ ನಗರದ ಸಮುದ್ರ ತೀರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ ಎಂದು ಫಿಲಿಪ್ಪಿನ್ಸ್‌ ಕರಾವಳಿ ಭದ್ರತಾ ಪಡೆ  (ಪಿಸಿಜಿ) ತಿಳಿಸಿದೆ.

173 ಜನರನ್ನು ಹೊತ್ತುಯ್ಯುತ್ತಿದ್ದ ‘ಎಂ/ಬಿ ನಿವ್ರಾನ್–ಬಿ’ ಹೆಸರಿನ ಪ್ರಯಾಣಿಕ ದೋಣಿಯು ಆರ್ಮೊಕ್  ಕಡಲ ತೀರದಿಂದ 200 ಮೀಟರ್‌ಗಳಷ್ಟು ದೂರದಲ್ಲಿ ಹವಾಮಾನ ವೈಪರಿತ್ಯದಿಂದ ಮಧ್ಯಾಹ್ನದ ವೇಳೆಗೆ ಮುಳುಗಿದೆ ಎಂದು ಪಿಸಿಜಿ ಸಾರ್ವಜನಿಕ ವ್ಯವಹಾರಗಳ ಮುಖ್ಯ ಕಮಾಂಡರ್‌ ಅರ್ಮಾಂಡೊ ಬಲಿಲೊ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ದೋಣಿಯು  ಕಮೊಟೆಸ್‌ ದ್ವೀಪದಲ್ಲಿರುವ ಪಿಲಾರ್ ಪಟ್ಟಣಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದೂ ಬಲಿಲೊ ಅವರು ತಿಳಿಸಿದ್ದಾರೆ.

ಸುಮಾರು 118 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆರ್ಮೊಕ್ ನಗರಕ್ಕೆ ಕಳುಹಿಸಲಾಗಿದೆ.     ರಕ್ಷಣಾ  ತಂಡಗಳು ಕಾಣೆಯಾದವರ  ಶೋಧ ಕಾರ್ಯದಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT