ADVERTISEMENT

ಬಾಹ್ಯಾಕಾಶದಲ್ಲಿ ವಾಸ: ದಾಖಲೆ ನಿರ್ಮಿಸಿದ ಪೆಗ್ಗಿ

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಪೆಗ್ಗಿ ವಿಟ್ಸನ್
ಪೆಗ್ಗಿ ವಿಟ್ಸನ್   

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅತಿ ಹೆಚ್ಚು ಕಾಲ ಕಳೆದ ಮಹಿಳೆ ಎಂಬ ಹೆಗ್ಗಳಿಕೆಗೆ ಅಮೆರಿಕದ ಗಗನಯಾತ್ರಿ ಪೆಗ್ಗಿ ವಿಟ್ಸನ್‌  ಪಾತ್ರರಾಗಿದ್ದಾರೆ.

ಅವರು 577 ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ. ಈ ಹಿಂದೆ ಗಗನಯಾತ್ರಿ ಜೆಫ್ ವಿಲಿಯಮ್ಸ್ ಅವರು 534 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದಿದ್ದರು. ಈ ದಾಖಲೆಯನ್ನು ಪೆಗ್ಗಿ ಅವರು ಮುರಿದಿದ್ದಾರೆ.

2008ರಲ್ಲಿ ಬಾಹ್ಯಾಕಾಶ ನಿಲ್ದಾಣದ ಸಾರಥ್ಯ ವಹಿಸಿಕೊಳ್ಳುವ ಮೂಲಕ ಈ ಗೌರವ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದ ಪೆಗ್ಗಿ, 53 ಗಂಟೆಗೂ ಹೆಚ್ಚು ಕಾಲ ಬಾಹ್ಯಾಕಾಶ ನಡಿಗೆ ನಡೆಸಿದ ದಾಖಲೆಯನ್ನೂ ಮಾರ್ಚ್‌ನಲ್ಲಿ ತಮ್ಮದಾಗಿಸಿಕೊಂಡಿದ್ದರು.  ಭಾರತ ಮೂಲದ ಅಮೆರಿಕದ ನಿವಾಸಿ ಸುನಿತಾ ವಿಲಿಯಮ್ಸ್‌ ಅವರು 50 ಗಂಟೆ 40 ನಿಮಿಷದ ಅವಧಿಯಲ್ಲಿ ಒಟ್ಟು ಏಳು ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದರು.

ADVERTISEMENT

ಈ ಮೊದಲು 377 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದ ಪೆಗ್ಗಿ, ಕಳೆದ ವರ್ಷ ನವೆಂಬರ್‌ 17ರಂದು ಮತ್ತೆ ಅಲ್ಲಿಗೆ ಹೋಗಿದ್ದರು.

ಭೂಮಿಗೆ ಮರಳುವ ವೇಳೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಅವರು ಕಳೆದ ದಿನಗಳು 650ಅನ್ನೂ ಮೀರಲಿದೆ ಎಂದು ನಾಸಾ ತಿಳಿಸಿದೆ.

1980ರಲ್ಲಿ ನಾಸಾದಲ್ಲಿ ವೃತ್ತಿ ಬದುಕು ಆರಂಭಿಸಿದ ಪೆಗ್ಗಿ, ಸಂಶೋಧನೆ ಸಂಬಂಧಿತ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. 1992ರಲ್ಲಿ ಷಟ್ಲ್‌ ಮಿರ್‌ ಕಾರ್ಯಕ್ರಮದ ಯೋಜನಾ ವಿಜ್ಞಾನಿಯಾಗಿ ನೇಮಕವಾಗಿದ್ದರು.  2002ರಲ್ಲಿ ಅವರು ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಆಗ 184 ದಿನಗಳಲ್ಲಿ ಅಲ್ಲಿ ಕಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.