ADVERTISEMENT

ಬೇಹು ಮಾಹಿತಿ ಹಂಚಿಕೆ ಲೋಪವೇ ಕಾರಣ

26/11: ಮುಂಬೈ ದಾಳಿ ತಡೆಗೆ ಭಾರತ, ಅಮೆರಿಕ, ಬ್ರಿಟನ್‌ಗಳ ಜಂಟಿ ವೈಫಲ್ಯ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ನ್ಯೂಯಾರ್ಕ್‌ (ಪಿಟಿಐ):  ಅಮೆರಿಕ, ಬ್ರಿಟನ್‌ ಮತ್ತು ಭಾರತದ ಗೂಢಚರ ಸಂಸ್ಥೆಗಳು ತಮ್ಮ ಅತ್ಯಾ­ಧುನಿಕ ಸರ್ವೇಕ್ಷಣಾ ವ್ಯವಸ್ಥೆ ಮೂಲಕ ಸಂಗ್ರಹಿಸಿದ್ದ ಸುಳಿವುಗಳನ್ನು ಒಟ್ಟು­ಗೂಡಿಸಿ ವಿಶ್ಲೇಷಣೆ ನಡೆಸಿದ್ದರೆ  ಮುಂಬೈ ಮೇಲಿನ 26/11ರ ಉಗ್ರರ ದಾಳಿ  ತಪ್ಪಿಸಬಹುದಾಗಿತ್ತು ಎಂದು ತನಿಖಾ ವರದಿ­ಯೊಂದು ಹೇಳಿದೆ.

ನ್ಯೂಯಾರ್ಕ್‌ ಟೈಮ್ಸ್‌, ಪ್ರೊ ಪಬ್ಲಿಕಾ ಮತ್ತು ಪಿಬಿಎಸ್‌ ಫ್ರಂಟ್‌ಲೈನ್‌ ಸಂಸ್ಥೆಗಳು ಈ ವಿವರವಾದ ವರದಿ ಸಿದ್ಧಪಡಿಸಿವೆ. ಭಯೋ­ತ್ಪಾದನೆ ತಡೆ ಆಯುಧವಾಗಿ ಕಂಪ್ಯೂಟರ್‌ ಆಧಾ­ರಿತ ಸರ್ವೇಕ್ಷಣೆ ಮತ್ತು ಸಂವಹನ ಪ್ರತಿಬಂಧಿಸಿ ಮಾಹಿತಿ ಸಂಗ್ರಹದ ಶಕ್ತಿ ಮತ್ತು ದೌರ್ಬಲ್ಯ ಗಳೆರಡನ್ನೂ ಮುಂಬೈ ದಾಳಿಯು ಬಹಿರಂಗ­ಪಡಿಸಿದೆ ಎಂದು ವರದಿ ಹೇಳಿದೆ.

‘ಇದು ಗೂಢಚರ್ಯೆಯ ಇತಿಹಾಸ­ದಲ್ಲಿಯೇ ಅತ್ಯಂತ ಘೋರ ಪರಿಣಾಮಕ್ಕೆ ಕಾರಣವಾದ ಲೋಪವಾಗಿದೆ. ಅತ್ಯಾ­ಧುನಿಕ ಸರ್ವೇಕ್ಷಣೆ ಮತ್ತು ಇತರ ವ್ಯವಸ್ಥೆಗಳನ್ನು ಬಳಸಿ ಮೂರೂ ದೇಶಗಳ ಗೂಢಚಾರ ಸಂಸ್ಥೆಗಳು ಸಂಗ್ರಹಿಸಿದ್ದ ಮಾಹಿತಿಯನ್ನು ಪರಸ್ಪರ ಹಂಚಿ­ಕೊಳ್ಳುವ ಕೆಲಸ ಮಾಡಲಿಲ್ಲ. ಒಂದು ವೇಳೆ ಈ ಎಲ್ಲ ಮಾಹಿತಿ ಕ್ರೋಡೀಕರ­ಣಗೊಂಡಿದ್ದರೆ ಮುಂಬೈ ಮೇಲಿನ ಅತ್ಯಂತ ಭಯಾನಕ ದಾಳಿಯನ್ನು ತಪ್ಪಿಸಲು ಅವಕಾಶ ದೊರೆಯುತ್ತಿತ್ತು’ ಎಂದು ದೀರ್ಘವಾದ ವರದಿಯಲ್ಲಿ ವಿವರಿಸಲಾಗಿದೆ.

ಲಷ್ಕರ್‌ ಎ ತಯಬಾದ ತಾಂತ್ರಿಕ ವಿಭಾಗದ ಮುಖ್ಯಸ್ಥ ಮತ್ತು ಮುಂಬೈ ದಾಳಿಯ ಷಡ್ಯಂತ್ರ ರೂಪಿಸಿದವರಲ್ಲಿ ಒಬ್ಬನಾದ ಜರಾರ್‌ ಷಾ ಎಂಬಾತನ ಅಂತರ್ಜಾಲ ಚಟುವಟಿಕೆಗಳ ಮೇಲೆ ಭಾರತ ಮತ್ತು ಬ್ರಿಟನ್‌ ಗುಪ್ತಚರ ಸಂಸ್ಥೆಗಳು ಕಣ್ಣಿಟ್ಟಿದ್ದವು. ಆದರೆ ಮುಂಬೈ ದಾಳಿಗೆ ಮೊದಲೇ ಈ ಮಾಹಿತಿಯ ಸಂಯೋಜನೆ ಸಾಧ್ಯವಾಗಲಿಲ್ಲ. ಇದು ಅತ್ಯಂತ ದೊಡ್ಡ ಗುಪ್ತಚರ ವೈಫಲ್ಯ ಎಂದು ವರದಿ ಹೇಳಿದೆ.

ಅಮೆರಿಕ ಕೂಡ ಇತರ ಮೂಲಗಳಿಂದ ಮಾಹಿತಿ ಸಂಗ್ರಹಿ­ಸುತ್ತಿತ್ತು. ಇದರ ಆಧಾರದಲ್ಲಿ ದಾಳಿಗೆ ಮೊದಲು ಹಲವು ಬಾರಿ ಭಾರತದ ಭದ್ರತಾ ಸಂಸ್ಥೆಗಳಿಗೆ ದಾಳಿ ಸಂಚಿನ ಎಚ್ಚರಿಕೆ ನೀಡಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದ ಉದ್ಯಮಿ ಎಂಬ ಸುಳ್ಳು: ಜರಾರ್‌ ಷಾ ಅಮೆರಿಕದ ಕಂಪೆನಿ­ಯೊಂದರಿಂದ ಇಂಟರ್‌ ನೆಟ್‌ ಫೋನ್‌ (ವಿಒಐಪಿ–- ಅಂತರ್ಜಾಲ ಮೂಲಕ ಸಂವ­ಹನ ನಡೆಸುವ ಉಪಕರಣ) ಖರೀದಿ­ಸುವಾಗ ತಾನು ಭಾರತದ ಉದ್ಯಮಿ ಎಂದು ಹೇಳಿ ಕೊಂಡಿದ್ದ. ನಂತರ ಇದನ್ನೇ ಬಳಸಿ ಮುಂಬೈ ದಾಳಿಕೋರ­ರೊಂದಿಗೆ ಪಾಕಿಸ್ತಾನ ದಲ್ಲಿದ್ದ ಸಂಚುಕೋರರು ಸಂವಹನ ನಡೆಸಿದ್ದರು.

ಹೆಡ್ಲಿ ಬಗ್ಗೆ ಅನುಮಾನ ಬರಲಿಲ್ಲ:  ಪಾಕಿಸ್ತಾನ ಮೂಲದ ಅಮೆರಿಕನ್‌ ಡೇವಿಡ್‌ ಹೆಡ್ಲಿ, ಲಷ್ಕರ್ ಎ ತಯಬಾ ಮತ್ತು ಐಎಸ್‌ಐ ಸಂಚುಕೋರರಿಗೆ ಹಲವು ಅತ್ಯಂತ ಶಂಕಾಸ್ಪದ ಇ-ಮೇಲ್‌ ಸಂದೇಶಗಳನ್ನು ಕಳುಹಿಸಿದ್ದರೂ ಮುಂಬೈ ದಾಳಿಯಲ್ಲಿ ಆತನ ಪಾತ್ರವನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.

ದಾಳಿಗೆ ಮೊದಲು ಮತ್ತು ನಂತರ ಆತ ಹಲವು ಇ–ಮೇಲ್‌ ಸಂದೇಶಗಳನ್ನು ಕಳುಹಿಸಿದ್ದಾನೆ.
ಆದರೆ ಭಾರತ, ಅಮೆ­ರಿಕ ಮತ್ತು ಬ್ರಿಟನ್‌ನ ಬೇಹು­ಗಾರಿಕೆ ಮಾಹಿತಿಯಲ್ಲಿ ಹೆಡ್ಲಿಯ ಹೆಸರು ಇರಲೇ ಇಲ್ಲ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯು ಹೆಡ್ಲಿಯ ಹಲವು ಇ–ಮೇಲ್‌ ಸಂದೇಶಗಳನ್ನು ಸಂಗ್ರಹಿಸಿತ್ತು. ಆದರೂ ದಾಳಿಯಲ್ಲಿ ಆತನ ಒಳಗೊಳ್ಳುವಿಕೆ ಸ್ಪಷ್ಟವಾಗಲಿಲ್ಲ. ಡೆನ್ಮಾರ್ಕ್‌ನ ಪತ್ರಿಕೆ­ಯೊಂದರ ಮೇಲೆ ದಾಳಿ ನಡೆಸಲು ಆತ ಸಂಚು ರೂಪಿಸಲಾರಂಭಿಸಿದ ನಂತರವೇ ಎಫ್‌ಬಿಐ ಈತನ ಮೇಲೆ ನಿಗಾ ಇರಿಸಲು ಆರಂಭಿಸಿತು ಎಂದು ವರದಿ ಹೇಳಿದೆ.

ಐಎಸ್‌ಐ ಅಧಿಕಾರಿಗಳು ಶಾಮೀಲು
ಲಷ್ಕರ್‌ ಎ ತಯಬಾ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಯ ಕೆಲವು ಅಧಿಕಾರಿಗಳು ಸೇರಿ ಮುಂಬೈ ದಾಳಿಯ ಸಂಚು ರೂಪಿಸಿದ್ದರು ಎಂದು ವರದಿ ಹೇಳೀದೆ.

ಲಷ್ಕರ್‌ ಉಗ್ರರು ತಮ್ಮ ಗುರಿಯನ್ನು ಪಶ್ಚಿಮದ ರಾಷ್ಟ್ರಗಳತ್ತ ತಿರುಗಿಸಿದಾಗ ಅವರ ನಡುವಣ ಸಂಬಂಧ ಹದಗೆಟ್ಟಿತ್ತು ಎಂದು ವರದಿ ಹೇಳಿದೆ. ಲಷ್ಕರ್‌ ಮತ್ತು ಐಎಸ್‌ಐ ನಡುವಣ ಸಂಬಂಧ ಮರು ಸ್ಥಾಪನೆ ಹಾಗೂ ಲಷ್ಕರ್‌ನ ಪ್ರಭಾವವನ್ನು ಹೆಚ್ಚಿಸುವುದಕ್ಕಾಗಿ ಭಾರತದ ಮೇಲೆ ಕಮಾಂಡೊ ಶೈಲಿಯ ದಾಳಿಯ ಯೋಜನೆ ರೂಪಿಸಲಾಯಿತು ಎಂದು ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT