ADVERTISEMENT

ಬ್ರಿಟನ್‌: ವಿದೇಶಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವೀಸಾ ಯೋಜನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

ಲಂಡನ್ (ಪಿಟಿಐ): ಇಲ್ಲಿನ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಆಯ್ಕೆಯಾದ ಭಾರತ ಸೇರಿದಂತೆ ವಿದೇಶಿ ವಿದ್ಯಾರ್ಥಿಗಳಿಗಾಗಿ ಬ್ರಿಟನ್ ಸರ್ಕಾರವು ಪ್ರಾಯೋಗಿಕ (ಪೈಲಟ್) ವೀಸಾ ಯೋಜನೆ ಜಾರಿಗೊಳಿಸಿದೆ. ಯೋಜನೆಯನ್ವಯ ವೀಸಾ ಪಡೆಯುವ ವಿದ್ಯಾರ್ಥಿಯು ಕೋರ್ಸ್ ಅವಧಿ ಮುಗಿದು ಆರು ತಿಂಗಳವರೆಗೂ ಇಲ್ಲಿ ನೆಲೆಸಬಹುದು.

ಲಂಡನ್ ಇಂಪೀರಿಯಲ್ ಕಾಲೇಜ್, ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌ ಅಥವಾ ಬಾಥ್ ವಿವಿಗಳಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿಗೆ ಆಯ್ಕೆಯಾದವರಿಗೆ ಈ ಯೋಜನೆ ಅನ್ವಯಿಸುತ್ತದೆ.

ಈ ವೀಸಾಗಳನ್ನು ಸಂಬಂಧಪಟ್ಟ ವಿವಿಗಳು ನಿರ್ವಹಿಸುತ್ತವೆ. ಫಲಾನುಭವಿ ವಿದ್ಯಾರ್ಥಿಗೆ ತನ್ನ ಕೋರ್ಸ್ ಮುಗಿದ ನಂತರದ ಆರು ತಿಂಗಳ ಅವಧಿಯು ಬೇರೊಂದು ಕೋರ್ಸ್‌ನಲ್ಲಿ ತೊಡಗಿ ಕೊಳ್ಳಲು, ನವೋದ್ಯಮಕ್ಕೆ ಪ್ರಯತ್ನಿಸಲು ಅಥವಾ ಪ್ರಯಾಣ ಬೆಳೆಸಲು ನೆರವಾಗುತ್ತದೆ.

ಇದೊಂದು ಉತ್ತೇಜಕ ಕ್ರಮ ವಾಗಿದ್ದು, ಕೋರ್ಸ್ ಮುಗಿಸಿದ ವಿದ್ಯಾರ್ಥಿಯು ತನ್ನ ಔದ್ಯಮಿಕ ಜ್ಞಾನವನ್ನು ದೇಶದಲ್ಲಿ ಒರೆಗೆ ಹಚ್ಚು ಬಹುದು, ಹೆಚ್ಚಿನ ಅಧ್ಯಯನದಲ್ಲಿ ತೊಡಗಿಕೊಳ್ಳಬಹುದು ಅಥವಾ  ಬ್ರಿಟನ್‌ನ ಪ್ರತಿಭಾ ವಲಯದಲ್ಲಿ ಗುರು ತಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಇಂಪೀರಿಯಲ್ ಕಾಲೇಜಿನ ಮುಖ್ಯಸ್ಥ ಅಲೀಸ್ ಗಾಸ್ಟ್ ಹೇಳಿದ್ದಾರೆ.

ಜುಲೈ 25ರಂದು ಹಾಗೂ ಆ ಬಳಿಕ ಸಲ್ಲಿಸಿದ ವೀಸಾಗಳನ್ನು ಈ ಯೋಜನೆಗೆ ಪರಿಗಣಿಸಲಾಗುತ್ತದೆ. 2016–17 ಹಾಗೂ 2017–18ನೇ ಸಾಲಿನ ಕೋರ್ಸ್‌ಗಳಿಗೆ ಇದು ಅನ್ವಯವಾಗಲಿದೆ.  13 ತಿಂಗಳು ಹಾಗೂ ಅದಕ್ಕಿಂತ ಕಡಿಮೆ ಅವಧಿಯ ಸ್ನಾತಕೋತ್ತರ ಪದವಿಗೆ ಮಾತ್ರ ಪ್ರಾಯೋಗಿಕ ವೀಸಾ ಸಿಗಲಿದೆ.

ಪದವಿ ಮಾಡಬಯಸುವರು ಹಾಗೂ ಪಿಎಚ್.ಡಿ ವಿದ್ಯಾರ್ಥಿಗಳು ಮತ್ತು 13 ತಿಂಗಳಿಗಿಂತ ಹೆಚ್ಚು ಅವಧಿಯ ಕೋರ್ಸ್ ಮಾಡುತ್ತಿರುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು  ಕೂಡಾ ಸಂಬಂಧಿಸಿದ ಎಲ್ಲ ಪೂರಕ ದಾಖಲೆಗಳನ್ನು ವೀಸಾ ಅರ್ಜಿ ಜತೆ ಸಲ್ಲಿಸಬೇಕಾಗುತ್ತದೆ.

ಈ ಯೋಜನೆಯು ಎರಡು ವರ್ಷ ಚಾಲ್ತಿಯಲ್ಲಿರುತ್ತದೆ. ಇದರ ಯಶಸ್ಸನ್ನು ನೋಡಿಕೊಂಡು ಯೋಜನೆ ಶಾಶ್ವತ ಗೊಳಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಬ್ರಿಟನ್ ಗೃಹಕಚೇರಿ ಮಾರ್ಗಸೂಚಿ ತಿಳಿಸಿದೆ.

ಇಂಗ್ಲೆಂಡ್‌ಗೆ ವಿದ್ಯಾಭ್ಯಾಸಕ್ಕೆ ತೆರಳುವ  ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಕಂಡಿದೆ ಎಂದು ಉನ್ನತ ಶಿಕ್ಷಣ ಅನುದಾನ ಮಂಡಳಿಯ ವರದಿ ತಿಳಿಸಿದೆ. (2010–11ರಲ್ಲಿ 18, 535 ವಿದ್ಯಾರ್ಥಿಗಳು. 2012–13ರಲ್ಲಿ 10, 235 ವಿದ್ಯಾರ್ಥಿಗಳು).

ಇಂಗ್ಲೆಂಡ್‌ನ ವೀಸಾ ನೀತಿಯಿಂದ ಭಾರತೀಯ ವಿದ್ಯಾರ್ಥಿಗಳು  ಆಸ್ಟ್ರೇಲಿಯಾ ಮತ್ತು ಅಮೆರಿಕ ಕಡೆ ಮುಖ ಮಾಡಿದ್ದಾರೆ. ಹೊಸ ಪ್ರಾಯೋಗಿಕ ವೀಸಾದಿಂದ ಕೆಲವು ಭಾರತೀಯ ವಿದ್ಯಾರ್ಥಿಗಳಾದರೂ ಕಡಿಮೆ ಅವಧಿಯ ಕೋರ್ಸ್‌ಗಳಿಗೆ ಇಂಗ್ಲೆಂಡ್‌ನತ್ತ ಬರಬಹುದು ಎಂಬ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.