ADVERTISEMENT

ರಾಷ್ಟ್ರಪತಿ ಕೋವಿಂದ್‌ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ

ಪಿಟಿಐ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST

ಬೀಜಿಂಗ್‌: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನಾ ಬಲವಾಗಿ ಆಕ್ಷೇಪಿಸಿದೆ. ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಈ ಸಂದರ್ಭದಲ್ಲಿ ಭಾರತವು ಗಡಿ ವಿವಾದವನ್ನು ಸಂಕೀರ್ಣಗೊಳಿಸಬಾರದು ಎಂದು ಚೀನಾ ಹೇಳಿದೆ. ಕೋವಿಂದ್‌ ಅವರು ಭಾನುವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು.

‘ಅರುಣಾಚಲ ಪ್ರದೇಶ ಮತ್ತು ಗಡಿಯಲ್ಲಿ ತನ್ನ ಸ್ಥಾನದ ಬಗ್ಗೆ ಚೀನಾ ಸರ್ಕಾರದ ನಿಲುವು ಸ್ಪಷ್ಟವಾಗಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಉಭಯ ದೇಶಗಳು ಸಂಧಾನ ಮತ್ತು ಸಮಾಲೋಚನೆಯ ಮೂಲಕ ಎಲ್ಲರಿಗೂ ಅನುಕೂಲಕರವಾಗುವ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿವೆ. ಎಲ್ಲಾ ಪಕ್ಷಗಳೂ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ಚೀನಾ ಮತ್ತು ಭಾರತದ ಸಂಬಂಧ ನಿರ್ಣಾಯಕ ಹಂತದಲ್ಲಿರುವಾಗ ಭಾರತದ ನಾಯಕರು ಗಡಿ ವಿವಾದಿತ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ. ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿಗಾಗಿ ಗಡಿ ಸಂಧಾನಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು, ಗಡಿ ಸಮಸ್ಯೆ ಸಂಕೀರ್ಣವಾಗುವುದನ್ನು ತಡೆಯಬೇಕು ಎಂದು ಅವರು ಹೇಳಿದ್ದಾರೆ.

ಭಾರತದ ಅಧಿಕಾರಿಗಳು ಈ ಭಾಗಗಳಿಗೆ ಭೇಟಿ ನೀಡುವುದನ್ನು ಚೀನಾ ಆಗಾಗ ವಿರೋಧಿಸುತ್ತಲೇ ಬಂದಿದೆ.ಆದರೆ, ಚೀನಾದ ವಿರೋಧವನ್ನು ಭಾರತ ತಿರಸ್ಕರಿಸಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ದೇಶದ ಯಾವುದೇ ರಾಜ್ಯಗಳಿಗೆ ಭೇಟಿ ನೀಡಲು ನಾಯಕರಿಗೆ ಸ್ವಾತಂತ್ರ್ಯವಿದೆ ಎಂದು ಭಾರತ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.