ADVERTISEMENT

ಲುವಾಂಡಾ ವಿಶ್ವದ ದುಬಾರಿ ನಗರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಲುವಾಂಡಾ ವಿಶ್ವದ ದುಬಾರಿ ನಗರ
ಲುವಾಂಡಾ ವಿಶ್ವದ ದುಬಾರಿ ನಗರ   

ಪ್ಯಾರಿಸ್‌ : ಅಂಗೋಲಾದ ರಾಜಧಾನಿ ಲುವಾಂಡಾ  ಜಗತ್ತಿನಲ್ಲೇ ಅತ್ಯಂತ ದುಬಾರಿ ನಗರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನಡೆಸಿದ 23ನೇ ವಾರ್ಷಿಕ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.

ಡಾಲರ್‌ ಎದುರು ಅಂಗೋಲಾದ ಸ್ಥಳೀಯ ಕರೆನ್ಸಿ ‘ಕ್ವಾಂಝಾ’ ಮೌಲ್ಯ  ಕುಸಿತವಾಗಿದ್ದರೂ ಲುವಾಂಡಾ  ದುಬಾರಿ ನಗರದ ಪಟ್ಟ ಪಡೆದುಕೊಂಡಿದೆ.
ಜೀವನ ವೆಚ್ಚ ಕುರಿತ ವರದಿಯಲ್ಲೂ  ಸತತ ಮೂರು ವರ್ಷಗಳ ಕಾಲ ಲುವಾಂಡಾ  ನಗರ ಪ್ರಥಮ ಸ್ಥಾನ ಪಡೆದಿತ್ತು.

ಮೊದಲ ಸ್ಥಾನದಲ್ಲಿದ್ದ ಹಾಂಗ್‌ಕಾಂಗ್‌ ನಗರ ಈಗ ಎರಡನೇ ಸ್ಥಾನ ಪಡೆದಿದೆ.  ಆದರೆ, ಏಷ್ಯಾದಲ್ಲೇ ಅತ್ಯಂತ ದುಬಾರಿ ನಗರವಾಗಿದೆ. ಈ ನಗರದಲ್ಲಿ ವಾಸಿಸುವ ಮನೆಗಳು ದುಬಾರಿಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

ADVERTISEMENT

200 ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು,  ವಸತಿ, ಆಹಾರ, ಸಾರಿಗೆ ಮತ್ತು ಮನರಂಜನೆ ಸೇರಿದಂತೆ  200 ಅಂಶಗಳನ್ನು ಹೋಲಿಕೆ ಮಾಡಲಾಗಿದೆ.
ಕಳೆದ ಬಾರಿ 5ನೇ ಸ್ಥಾನದಲ್ಲಿದ್ದ ಟೋಕಿಯೊ ಈ ಸಲ ಮೂರನೇ ಸ್ಥಾನ ಪಡೆದಿದೆ. ಯೆನ್‌ ಮೌಲ್ಯ ಮತ್ತು ವಸತಿ ವಹಿವಾಟಿನಲ್ಲಿ ಹೆಚ್ಚಳವಾಗಿರುವುದು  ಇದಕ್ಕೆ ಕಾರಣವಾಗಿದೆ.

ಸಿಂಗಪುರ 5ನೇ ಸ್ಥಾನದಲ್ಲಿದ್ದರೆ, ನ್ಯೂಯಾರ್ಕ್‌ ಒಂಬತ್ತನೇ ಸ್ಥಾನ ಪಡೆದಿದೆ.

ಸಮೀಕ್ಷೆಯನ್ನು ವಿವಿಧ ದೇಶಗಳು ಮತ್ತು ಉದ್ಯಮಗಳು ಗಂಭೀರವಾಗಿ ಪರಿಗಣಿಸಿವೆ. ವಿದೇಶಗಳಿಗೆ ತಮ್ಮ ನೌಕರರನ್ನು ಕಳುಹಿಸುವ ಸಂದರ್ಭದಲ್ಲಿ ಈ ಅಂಶಗಳನ್ನು ಪರಿಗಣಿಸುತ್ತವೆ ಎಂದು ವಿಶ್ಲೇಷಿಸಲಾಗಿದೆ.
ರಷ್ಯಾದ ಕೆಲವು ನಗರಗಳು ಮತ್ತಷ್ಟು ದುಬಾರಿಯಾಗಿವೆ. ಕಳೆದ ವರ್ಷ 53ನೇ ಸ್ಥಾನದಲ್ಲಿದ್ದ  ಮಾಸ್ಕೊ ನಗರ ಈ ಬಾರಿ 14ನೇ ಸ್ಥಾನದಲ್ಲಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ 116ರಿಂದ 36ನೇ ಸ್ಥಾನಕ್ಕೇರಿದೆ.

ದುಬಾರಿ ನಗರಗಳು
 ಲುವಾಂಡಾ
 ಹಾಂಗ್‌ಕಾಂಗ್
ಟೋಕಿಯೊ
 ಜ್ಯೂರಿಚ್‌
 ಸಿಂಗಪುರ

ಬೆಂಗಳೂರಿಗೆ 166ನೇ ಸ್ಥಾನ
ವಲಸಿಗರಿಗೆ ಮುಂಬೈ ದೇಶದಲ್ಲಿ ದುಬಾರಿ ನಗರವಾಗಿದ್ದು, ಜಗತ್ತಿನ ಪ್ರಮುಖ ನಗರಗಳ ಪಟ್ಟಿಯಲ್ಲಿ 57ನೇ ಸ್ಥಾನ ಪಡೆದಿದೆ.
ಆರ್ಥಿಕ ಬೆಳವಣಿಗೆ, ಹಣದುಬ್ಬರ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಜಾಗತಿಕ ಪಟ್ಟಿಯಲ್ಲಿ ನವದೆಹಲಿ 99, ಚೆನ್ನೈ 135, ಬೆಂಗಳೂರು 166 ಹಾಗೂ ಕೋಲ್ಕತ್ತ 184ನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.