ADVERTISEMENT

ವಿಶ್ವಸಂಸ್ಥೆ ನಿರ್ಧಾರಕ್ಕೆ ಸಿಬ್ಬಂದಿ ಆಕ್ರೋಶ

ವಿಶ್ವಸಂಸ್ಥೆ ರಾಯಭಾರಿಯಾಗಿ ವಂಡರ್‌ ವುಮನ್‌ ಕಾಲ್ಪನಿಕ ಪಾತ್ರ

ಏಜೆನ್ಸೀಸ್
Published 23 ಅಕ್ಟೋಬರ್ 2016, 19:30 IST
Last Updated 23 ಅಕ್ಟೋಬರ್ 2016, 19:30 IST

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಹಿಳೆ ಮತ್ತು ಹೆಣ್ಣುಮಕ್ಕಳ ಸಬಲೀಕರಣ ಆಂದೋಲನದ ಗೌರವ ರಾಯಭಾರಿಯಾಗಿ ವಂಡರ್‌ ವುಮನ್‌ ಕಾಲ್ಪನಿಕ ಕಾರ್ಟೂನ್‌ ಪಾತ್ರವನ್ನು  ಸೂಚಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ವಿಶ್ವಸಂಸ್ಥೆ ಸಿಬ್ಬಂದಿ ಮತ್ತು ಕೆಲ ಸ್ತ್ರೀವಾದಿ ಸಂಘಟನೆ ಸದಸ್ಯರು ವಿಶ್ವಸಂಸ್ಥೆಯ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಂಡರ್‌ ವುಮನ್‌ ಪಾತ್ರದ ಹಕ್ಕುಸ್ವಾಮ್ಯ ಪಡೆದಿರುವ ಡಿಸಿ ಎಂಟರ್‌ಟೈನ್‌ಮೆಂಟ್‌ ಅಧ್ಯಕ್ಷ ದಿಯಾನೆ ನೆಲ್ಸನ್‌ ಮತ್ತು ಹಿರಿಯ ನಟಿ ಲಿಂಡಾ ಕಾರ್ಟರ್‌ ಅವರ ಉಪಸ್ಥಿತಿಯಲ್ಲಿ ವಿಶ್ವಸಂಸ್ಥೆ ಈ ನಿರ್ಧಾರ ಪ್ರಕಟಿಸಿದೆ. ವಂಡರ್‌ ವುಮನ್‌ ಪಾತ್ರದಲ್ಲಿ ಅಭಿನಯಿಸಲಿರುವ ಹಾಲಿವುಡ್‌ ನಟಿ ಗಾಲ್‌ ಗಾಡೊಟ್‌ ಅವರೂ ಈ ಸಂದರ್ಭದಲ್ಲಿ ಇದ್ದರು.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರು ನಿಗದಿತ ಸಭೆಯಲ್ಲಿ ಹಾಜರಿರಲಿಲ್ಲ. ಸಂವಹನ ವಿಭಾಗದ ಅಧೀನ ಕಾರ್ಯದರ್ಶಿ ಕ್ರಿಸ್ಟಿನಾ ಗಲ್ಲಾಚ್‌ ಮಾತನಾಡಿ, ‘ವಂಡರ್‌ ವುಮನ್‌ ಪಾತ್ರವು ನ್ಯಾಯ, ಶಾಂತಿ ಮತ್ತು ಸಮಾನತೆಯ ಪ್ರತೀಕ’ ಎಂದು ಹೇಳಿದ್ದಾರೆ.

‘ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಪರವಾಗಿ ಕೆಲಸ ನಿರ್ವಹಿಸಿದ ಹಲವು ಮಹಿಳೆಯರಿರುವಾಗ ಕಾರ್ಟೂನ್‌ ಪಾತ್ರವನ್ನು ಆಂದೋಲನ ರಾಯಭಾರಿಯಾಗಿ ಸೂಚಿಸಿರುವುದು ಸರಿಯಲ್ಲ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಶಾಜಿಯಾ ರಫಿ ತಿಳಿಸಿದ್ದಾರೆ.

ಕಾರ್ಟೂನ್‌ ಪಾತ್ರವನ್ನು ಆಂದೋಲದ ರಾಯಭಾರಿಯಾಗಿ ಸೂಚಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ವಿಶ್ವಸಂಸ್ಥೆಯ 350ಕ್ಕೂ ಹೆಚ್ಚು ಸಿಬ್ಬಂದಿ ಸಹಿ
ಸಂಗ್ರಹ ಚಳವಳಿ ಮೂಲಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.