ADVERTISEMENT

ಶನಿಗೊಂದು ಹೊಸ ಉಪಗ್ರಹ?

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಲಂಡನ್‌ (ಐಎಎನ್‌ಎಸ್‌): ಗ್ರಹಗಳು ಹೇಗೆ ಹುಟ್ಟುತ್ತವೆ. ಅವುಗಳ ಸುತ್ತ ಪರಿಭ್ರಮಿಸುವ ಉಪಗ್ರಹಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದೆಲ್ಲ ಕೌತುಕಮಯ ವಿದ್ಯಮಾನ. ಖಗೋಳವಿಜ್ಞಾನಿಗಳು ಈವರೆಗೆ ಅವನ್ನೆಲ್ಲ ಸಿದ್ಧಾಂತಗಳ ಮೂಲಕ ಮಂಡಿಸಿದ್ದಾರೆ.

ಆದರೆ, ಇದೇ ಮೊದಲ ಬಾರಿ ಸೌರವ್ಯೂಹದಲ್ಲಿ ಉಪಗ್ರಹವೊಂದು ಹುಟ್ಟುತ್ತಿರುವ ರೋಚಕ ವಿದ್ಯಮಾನದ   ಚಿತ್ರಗಳನ್ನು ನಾಸಾದ ಕ್ಯಾಸಿನಿ ನೌಕೆ ರವಾನಿಸಿದೆ.ಶನಿಗ್ರಹದ ಸುತ್ತ ಇರುವ ಬಳೆಗಳ  ಪೈಕಿ ಕಾಂತಿಯುಕ್ತವಾದ ಹೊರ ಉಂಗುರ ಒಂದೆಡೆ ಉಬ್ಬಿಕೊಂಡಿದ್ದು, ಶನಿಗ್ರಹದಿಂದ ಬೇರ್ಪಟ್ಟು ಉಪಗ್ರಹವಾಗುವ ಎಲ್ಲ ಲಕ್ಷಣಗಳಿವೆ.ಶನಿಗ್ರಹಕ್ಕೆ ಈಗಾಗಲೇ ೬೨ ಉಪಗ್ರಹಗಳಿವೆ.  

ಈ ಉಬ್ಬಿದ ಭಾಗ ಸುತ್ತಲಿನ ಉಂಗುರಕ್ಕಿಂತ ಶೇ ೨೦ರಷ್ಟು ಹೆಚ್ಚು ಕಾಂತಿಯುಕ್ತವಾಗಿದೆ. ಈ ನವಜಾತ ಉಪಗ್ರಹದಿಂದಾಗಿ ಉಂಟಾಗಿರುವ  ಗುರುತ್ವದ ವ್ಯತ್ಯಾಸದಿಂದ ಆ ಭಾಗ ಹಾಗೆ ಕಾಣುತ್ತಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

‘ಇಂಥದ್ದೊಂದು ಘಟನೆಯನ್ನು ನಾವು ಈವರೆಗೆ ನೋಡಿಯೇ ಇಲ್ಲ. ಈ ವಸ್ತು ಶನಿಯ ಬಳೆಯಿಂದ ದೂರವಾಗಿ ಉಪಗ್ರಹವಾಗಿ ಸುತ್ತಬಹುದು’ ಎಂದು  ಈ ಚಿತ್ರಗಳ ಅಧ್ಯಯನ ನಡೆಸಿದ ಲಂಡನ್‌ನ ಕ್ವೀನ್‌ ಮೇರಿ ವಿವಿಯ ಖಗೋಳ ವಿಜ್ಞಾನಿ ಕಾರ್ಲ್‌ ಮುರ್ರೆ ಅಭಿಪ್ರಾಯಪಟ್ಟಿದ್ದಾರೆ. 

ಇನ್ನೂ ಹುಟ್ಟದಿರುವ ಈ ಉಪಗ್ರಹಕ್ಕೆ ವಿಜ್ಞಾನಿಗಳು ಪ್ರೀತಿಯಿಂದ ‘ಪೆಗ್ಗಿ’ ಎಂದು ಹೆಸರಿಟ್ಟಿದ್ದಾರೆ.ಶನಿಯ ಹೊರ ಉಂಗುರದ ೧,೨೦೦ ಕಿ.ಮೀ.ಗುಂಟ, ೧೦. ಕಿ.ಮೀ.ಯಷ್ಟು ಅಗಲವಾದ ಜಾಗದಲ್ಲಿ ಉಬ್ಬಿದ ಕಾಂತಿಯುಕ್ತ ಪ್ರದೇಶ ಕಾಣುತ್ತದೆ. ಆದರೆ, ಹೊಸ ಉಪಗ್ರಹ ಹುಟ್ಟಿದಲ್ಲಿ ಅದು ಕೇವಲ ಅರ್ಧ ಮೈಲಿಯಷ್ಟು ವ್ಯಾಸ ಹೊಂದಿರುತ್ತದೆ. ಶನಿಯ ಅತಿದೊಡ್ಡ ಉಪಗ್ರಹವಾಗಿರುವ ಟೈಟನ್‌ ೫,೦೦೦ ಕಿ.ಮೀ. ವ್ಯಾಸ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.