ADVERTISEMENT

ಶ್ರೀದೇವಿ ಹೃದಯಾಘಾತದಿಂದಲೇ ನಿಧನ: ವಿಧಿ ವಿಜ್ಞಾನ ಪ್ರಯೋಗಾಲಯದಿಂದ ದೃಢ

ಏಜೆನ್ಸೀಸ್
Published 26 ಫೆಬ್ರುವರಿ 2018, 16:41 IST
Last Updated 26 ಫೆಬ್ರುವರಿ 2018, 16:41 IST
ಶ್ರೀದೇವಿ ಹೃದಯಾಘಾತದಿಂದಲೇ ನಿಧನ: ವಿಧಿ ವಿಜ್ಞಾನ ಪ್ರಯೋಗಾಲಯದಿಂದ ದೃಢ
ಶ್ರೀದೇವಿ ಹೃದಯಾಘಾತದಿಂದಲೇ ನಿಧನ: ವಿಧಿ ವಿಜ್ಞಾನ ಪ್ರಯೋಗಾಲಯದಿಂದ ದೃಢ   

ದುಬೈ: ಇಲ್ಲಿ ಶನಿವಾರ ರಾತ್ರಿ ನಿಧನರಾದ ಬಹುಭಾಷಾ ನಟಿ ಹಾಗೂ ಮೋಹಕ ತಾರೆ ಶ್ರೀದೇವಿ (54) ಅವರು ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಇಲ್ಲಿನ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರು ದೃಢಪಡಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅವರ ಸಾವಿನ ಬಗ್ಗೆ ಯಾವುದೇ ಅನುಮಾನಗಳಿಲ್ಲ ಎಂದು ಅವರು ಹೇಳಿದ್ದಾಗಿ ವರದಿಯಾಗಿದೆ.

ಹತ್ತಿರದ ಸಂಬಂಧಿ ಮೊಹಿತ್‌ ಮಾರ್ವಾ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜೊತೆ ಅವರು ಬುಧವಾರ ದುಬೈಗೆ ಶ್ರೀದೇವಿ ತೆರಳಿದ್ದರು. ಹೋಟೆಲ್‌ನ ಸ್ನಾನಗೃಹದಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ADVERTISEMENT

ಇಲ್ಲಿನ ಕಾನೂನಿನ ಪ್ರಕಾರ ಶವ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ನೀಡುವ ವ್ಯವಸ್ಥೆ ಇದೆ. ಆದ್ದರಿಂದ, ಈ ಎಲ್ಲಾ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕು.

ಸಹಜ ಸಾವಿಗೂ ಜಟಿಲ ನಿಯಮ ಪಾಲನೆ

ಗಲ್ಫ್‌ನಲ್ಲಿ ಸ್ವತಂತ್ರ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿರುವ ವಾಸುದೇವ ರಾವ್‌ ಅವರ ಪ್ರಕಾರ, ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರೆ ಸಾವಿನ ಕಾರಣ ತಿಳಿಯುತ್ತದೆ ಮತ್ತು ಮೃತ ದೇಹವನ್ನು ಹಸ್ತಾಂತರಿಸುವ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ. ಆದರೆ, ಆಸ್ಪತ್ರೆಯ ಹೊರಗೆ ವ್ಯಕ್ತಿ ಮೃತಪಟ್ಟರೆ ಅದು ಸಹಜ ಸಾವಾಗಿದ್ದರೂ ಕೂಡಾ, ಪೋಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಾದ ಬಳಿಕ ಅವರು ತನಿಖೆ ನಡೆಸುತ್ತಾರೆ. ವ್ಯಕ್ತಿ ಸಹಜ ಸಾವಾಗಿದ್ದರೂ ಮೃತ ದೇಹವನ್ನು ವಿದೇಶಗಳಿಗೆ ಕಳುಹಿಸುವಲ್ಲಿ ಅಧಿಕೃತ ಕ್ರಮಗಳು ಹೆಚ್ಚಾಗಿಯೇ ಇರುತ್ತವೆ ಎಂದು ಹೇಳಿದ್ದಾರೆ. ಈ ಕುರಿತು ‘ದಿ ಎಕಾನಮಿಕ್ಸ್ ಟೈಂಮ್ಸ್’ ವರದಿ ಮಾಡಿದೆ.

ಇಲ್ಲಿನ ಕಾರ್ಯ ವಿಧಾನದ ಪ್ರಕಾರ, ಮೃತ ದೇಹವನ್ನು ಮೊದಲಿಗೆ ಆಲ್‌ ಕ್ಯುಸೈನಲ್ಲಿರುವ ಶವಾಗಾರದಲ್ಲಿ ಇರಿಸಲಾಗುತ್ತದೆ. ಬಳಿಕ, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ದೇಹವನ್ನು ಪೊಲೀಸರಿಗೆ ಒಪ್ಪಿಸಿ, ಮರಣ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದಾದ ಬಳಿಕ ಪೊಲೀಸರು ಅನುಮತಿ ನೀಡುತ್ತಾರೆ.

ಬಳಿಕ, ಮೃತಪಟ್ಟವರಿಗೆ ಪೊಲೀಸ್‌ ವೀಸಾ ನೀಡಲಾಗುತ್ತದೆ. ವೀಸಾವನ್ನು ಪೊಲೀಸರು ದೃಢೀಕರಿಸುತ್ತಾರೆ. ನಂತರ ದುಬೈನಲ್ಲಿ ಭಾರತೀಯ ರಾಯಭಾರಿ ಅವರ ಪಾಸ್‌ಪೋರ್ಟ್‌ಅನ್ನು ರದ್ದುಗೊಳಿಸಿ, ಮರಣ ಪ್ರಮಾಣಪತ್ರ ಮತ್ತು ಭಾರತಕ್ಕೆ ಮೃತದೇಹವನ್ನು ಸಾಗಿಸಲು ಅನುಕೂಲವಾಗುವಂತೆ ನಿರಾಪೇಕ್ಷ‌‌ಣಾ ಪತ್ರ ನೀಡುತ್ತದೆ.

ಇದಾದ ಬಳಿಕ, ಮೃತ ದೇಹವನ್ನು ಶವಾಗಾರ ಅಥವಾ ಆಸ್ಪತ್ರೆಯಿಂದ ಪಡೆದು ವಿಮಾನನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗೆ ಸಲ್ಲಿಸಲು ಪೊಲೀಸರು ಹಲವು ಪತ್ರಗಳನ್ನು ನೀಡುತ್ತಾರೆ. ಮರಣ ಪ್ರಮಾಣ ಪತ್ರವನ್ನು ಅರೆಬಿಕ್‌ ಭಾಷೆಯಲ್ಲಿ ನೀಡಲಾಗಿರುತ್ತದೆ. ಆಂಗ್ಲ ಭಾಷೆಗೆ ಭಾಷಾಂತರಿಸಿದ ಪ್ರತಿಯನ್ನು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನೀಡಲಾಗುತ್ತದೆ. ನಂತರ, ಕುಟುಂಬಕ್ಕೆ ನಿರಪೇಕ್ಷಣಾ ಪ್ರಮಾಣಪತ್ರ ಹಾಗೂ ಮೃತದೇಹನ್ನು ಬಾರತಕ್ಕೆ ಮರಳಿ ತರಲು ಅನುಮತಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.