ADVERTISEMENT

ಸರ್ಜನ್‌ ಜನರಲ್‌ ವಿವೇಕ್ ಮೂರ್ತಿ ವಜಾ

ಪಿಟಿಐ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ಡಾ. ವಿವೇಕ್‌
ಡಾ. ವಿವೇಕ್‌   

ವಾಷಿಂಗ್ಟನ್‌: ಅಮೆರಿಕದ ಸರ್ಜನ್‌ ಜನರಲ್‌ ಆಗಿ ನೇಮಕವಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಂಡ್ಯದ ಹಲ್ಲೆಗೆರೆಯ
ಡಾ. ವಿವೇಕ್‌ ಮೂರ್ತಿ ಅವರನ್ನು ಡೊನಾಲ್ಡ್‌ ಟ್ರಂಪ್ ಸರ್ಕಾರ ಹುದ್ದೆಯಿಂದ ವಜಾಗೊಳಿಸಿದೆ. ಅವರ ಸ್ಥಾನಕ್ಕೆ ರಿಯರ್‌ ಅಡ್ಮಿರಲ್‌ ಸಿಲ್ವಿಯಾ ಟ್ರೆಂಟ್‌ ಆಡಮ್ಸ್‌ ಅವರನ್ನು ನೇಮಿಸಲಾಗಿದೆ.

ವಿವೇಕ್‌ ಮೂರ್ತಿ (39) ಅವರನ್ನು  2014ರ ಡಿಸೆಂಬರ್‌ನಲ್ಲಿ ಆಗಿನ ಅಧ್ಯಕ್ಷ ಬರಾಕ್‌ ಒಬಾಮ ದೇಶದ 19ನೇ ಮುಖ್ಯ ಸರ್ಜನ್‌ ಆಗಿ ನೇಮಿಸಿದ್ದರು. ಈ ಹುದ್ದೆಗೆ ಏರಿದ ಅತಿ ಕಿರಿಯ ವೈದ್ಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

‘ಹೊಸ ಸರ್ಕಾರ ಸುಗಮ ಆಡಳಿತದ ದೃಷ್ಟಿಯಿಂದ ಸಾರ್ವಜನಿಕ ಆರೋಗ್ಯ ಸೇವೆಯ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡುವಂತೆ ಮೂರ್ತಿ ಅವರಿಗೆ ಸೂಚಿಸಲಾಗಿದೆ. ಆದರೆ ಅವರು ಇಲಾಖೆಯ ಸದಸ್ಯರಾಗಿ ಮುಂದುವರಿಯಲಿದ್ದಾರೆ’ ಎಂದು ಅಮೆರಿಕ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಹೇಳಿಕೆ ತಿಳಿಸಿದೆ.

ADVERTISEMENT

ವಿವೇಕ್‌ ಅವರು ಟ್ರಂಪ್‌ ಆಡಳಿತ ಅಸ್ತಿತ್ವಕ್ಕೆ ಬಂದ ಬಳಿಕ ಉನ್ನತ ಹುದ್ದೆಯಿಂದ ವಜಾಗೊಂಡಿರುವ ಭಾರತ ಮೂಲದ ಎರಡನೆಯ ವ್ಯಕ್ತಿಯಾಗಿದ್ದಾರೆ. ನ್ಯೂಯಾರ್ಕ್‌ನ ಅಟಾರ್ನಿ ಪ್ರೀತ್‌ ಭರಾರಾ ಅವರಿಗೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿತ್ತು. ಅದಕ್ಕೆ ಅವರು ನಿರಾಕರಿಸಿದ್ದರಿಂದ ಅವರನ್ನು ವಜಾಗೊಳಿಸಲಾಗಿತ್ತು.

‘ಅಮೆರಿಕಕ್ಕೆ ಕೃತಜ್ಞ’

‘ಭಾರತದ ಬಡ ರೈತನ ಮೊಮ್ಮಗನಾದ ನನಗೆ ಇಡೀ ದೇಶದ ಆರೋಗ್ಯ ಸೇವೆಯನ್ನು ನಿಭಾಯಿಸುವ ಹೊಣೆಗಾರಿಕೆ ನೀಡಲು ಅಧ್ಯಕ್ಷರು ಸೂಚಿಸಿದ್ದು ಅಪೂರ್ವ ಅವಕಾಶ. ಸುಮಾರು 40 ವರ್ಷಗಳ ಹಿಂದೆ ನನ್ನ ವಲಸಿಗ ಕುಟುಂಬವನ್ನು ಸ್ವಾಗತಿಸಿ, ಸೇವೆ ಸಲ್ಲಿಸುವ ಈ ಅವಕಾಶ ನೀಡಿದ್ದಕ್ಕೆ ನಮ್ಮ ದೇಶಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ’ ಎಂದು ವಿವೇಕ್‌ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.