ADVERTISEMENT

ಸಾಲ ಮರುಪಾವತಿ ಯೋಜನೆಗೆ ‘ಇಲ್ಲ’ ಎನ್ನಿ: ಪ್ರಧಾನಿ ಸಿಪ್ರಾಸ್‌

ಗ್ರೀಕ್‌ ಆರ್ಥಿಕ ನೆರವಿಗೆ ಷರತ್ತು: ಇಂದು ಜನಮತಗಣನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 20:24 IST
Last Updated 4 ಜುಲೈ 2015, 20:24 IST

ಅಥೆನ್ಸ್ (ಐಎಎನ್‌ಎಸ್): ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರೀಕ್‌ನಲ್ಲಿ ‘ಸಾಲ ಮರುಪಾವತಿ ಯೋಜನೆ’ ಸಂಬಂಧ ಭಾನುವಾರ ಜನಮತಗಣನೆ ನಡೆಯಲಿದೆ.

‘ಜನಮತಗಣನೆಯಲ್ಲಿ ಸಾಲ ಮರುಪಾವತಿ ಯೋಜನೆಗೆ ‘ಇಲ್ಲ’ ಎನ್ನಿ’ ಎಂದು ಗ್ರೀಕ್ ಪ್ರಧಾನಿ ಅಲೆಕ್ಸಿಸ್ ಸಿಪ್ರಾಸ್ ಕರೆ ನೀಡಿದ್ದಾರೆ.  ಜನಮತಗಣನೆಗೆ  ಪೂರ್ವಭಾವಿಯಾಗಿ ಅಥೆನ್ಸ್‌ನಲ್ಲಿ ಶನಿವಾರ  ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಅವರು, ‘ಹಣಕಾಸು ಸಂಸ್ಥೆಗಳು ವಿಧಿಸುತ್ತಿರುವ ಷರತ್ತುಗಳ ವಿರುದ್ಧವಾಗಿ ನೀವು ಮತ ನೀಡಿ’ ಎಂದು  ಜನರಲ್ಲಿ ಆಗ್ರಹಿಸಿದರು.

‘ಇಲ್ಲ’ ಎಂಬ ಮತ ಗ್ರೀಕನ್ನು ದಿವಾಳಿಮಾಡುವುದಿಲ್ಲ. ಗ್ರೀಕ್ ಐರೋಪ್ಯ ಒಕ್ಕೂಟದಲ್ಲಿ ಉಳಿಯಬೇಕೆ ಎಂಬುವುದನ್ನಷ್ಟೇ ನಾವು ಭಾನುವಾರ ನಿರ್ಧರಿಸುವುದಿಲ್ಲ. ಯೂರೋಪ್‌ನಲ್ಲಿ ಇತರರಿಗೆ ಸಮಾನರಾಗಿ ಉಳಿಯುವುದನ್ನೂ ನಿರ್ಧರಿಸುತ್ತೇವೆ’ ಎಂದು ಅವರು ಹೇಳಿದರು.

‘ಪರ’ ‘ವಿರುದ್ಧ’ಗಳ ಒಡಕು: ಆರ್ಥಿಕ ಸಂಕಷ್ಟ ಎದುರಾಗಿರುವ ಕಾರಣ ‘ಸಾಲ ಮರುಪಾವತಿ ಯೋಜನೆ’ಗೆ ‘ಪರ’ ಮತ್ತು ‘ವಿರುದ್ಧ’ ಎಂದು ಗ್ರೀಕ್ ಒಡೆದಿದೆ.
ಸಾಲ ಮರುಪಾವತಿ ಯೋಜನೆ ವಿರುದ್ಧವಾಗಿ ಮತ ನೀಡುವಂತೆ ಅಭಿಯಾನ ಮತ್ತು ಮೆರವಣಿಗೆ ನಡೆಯುತ್ತಿರುವಂತೆಯೇ ಯೋಜನೆ ಪರವಾಗಿಯೂ ಗ್ರೀಕ್‌ನಲ್ಲಿ ಅಭಿಯಾನ ನಡೆಯುತ್ತಿದೆ. ಯೋಜನೆ ವಿರುದ್ಧವಾಗಿ ಮತ ನೀಡುವಂತೆ ಗ್ರೀಕ್‌ನ ಎಡಪಂಥೀಯ ಸರ್ಕಾರ ಶನಿವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸುಮಾರು 35 ಸಾವಿರ ಮಂದಿ ಭಾಗವಹಿಸಿದ್ದರು.

ಇದೇ ಸಮಯದಲ್ಲಿ ಯೋಜನೆ ಪರವಾಗಿ ಮತ ನೀಡುವಂತೆಯೂ ಅಥೆನ್ಸ್‌ನಲ್ಲಿ ಮೆರವಣಿಗೆ ನಡೆಯಿತು. ಅಥೆನ್ಸ್‌ನ ಮೇಯರ್, ಶಿಕ್ಷಣ ಮತ್ತು ಆರ್ಥಿಕ ತಜ್ಞರು ಹಾಗೂ ಉದ್ಯಮಿಗಳು ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ. ಗ್ರೀಕ್ ಐರೋಪ್ಯ ಒಕ್ಕೂಟದಲ್ಲಿ ಉಳಿಯುವುದಕ್ಕೆ ಸರ್ಕಾರದ ನಿಲುವು  ಕುತ್ತು ತಂದಿದೆ ಎಂದು ಈ ಬಣ ಆರೋಪಿಸುತ್ತಿದೆ. ಶನಿವಾರ ನಡೆದ ಈ ಮೆರವಣಿಗೆಯಲ್ಲಿ ಸುಮಾರು 25 ಸಾವಿರ ಜನರು ಪಾಲ್ಗೊಂಡಿದ್ದರು.

ಆಸ್ಟ್ರೇಲಿಯಾ ಬೆಂಬಲ: ಗ್ರೀಕ್ ಸರ್ಕಾರದ ಪರ ಶನಿವಾರ ಮೆಲ್ಬರ್ನ್‌ನಲ್ಲಿ ಮೆರವಣಿಗೆ ನಡೆಯಿತು. ಮೆಲ್ಬರ್ನ್‌ನಲ್ಲಿ ಗ್ರೀಕ್ ಜನರ ಸಂಖ್ಯೆ ಹೆಚ್ಚಾಗಿದ್ದು,  ಸಾಲ ಮರುಪಾವತಿ ಯೋಜನೆಗೆ ‘ಇಲ್ಲ’ ಎಂದು ಮತ ನೀಡಿ ಎಂದು ಮನವಿ ಮಾಡಿದ್ದಾರೆ.
*
‘ಹಣಕಾಸು ಸಂಸ್ಥೆಗಳ ಭಯೋತ್ಪಾದನೆ’
ಮ್ಯಾಡ್ರಿಡ್ (ಎಎಫ್‌ಪಿ):
‘ಸಾಲ ಮರುಪಾವತಿ ಯೋಜನೆ’ಗೆ ಜನಮತಗಣನೆಗೆ ಕ್ಷಣಗಣನೆ ನಡೆಯುತ್ತಿರುವಾಗಲೇ, ಗ್ರೀಕ್‌ನ ಹಣಕಾಸು ಸಚಿವ ಯಾನಿಸ್ ವಾರೌಫಕ್ಸಿ ಯೂರೋಪ್ ಒಕ್ಕೂಟದ ಹಣಕಾಸು ಸಂಸ್ಥೆಗಳ ನಡೆಯನ್ನು ‘ಭಯೋತ್ಪಾದನೆ’ ಎಂದು ಕರೆದಿದ್ದಾರೆ. ‘ಗ್ರೀಕ್‌ ವಿಚಾರದಲ್ಲಿ ಹಣಕಾಸು ಸಂಸ್ಥೆಗಳ ನಡೆಯನ್ನು ಭಯೋತ್ಪಾದನೆ ಎನ್ನಬಹುದು’ ಎಂದು ಅವರು ಸಂದರ್ಶನವೊಂದರಲ್ಲಿ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.