ADVERTISEMENT

ಸಿಗಾರ್ ಆಕಾರದ ಕ್ಷುದ್ರಗ್ರಹ ಪತ್ತೆ

ಪಿಟಿಐ
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಕಲಾವಿದರ ಕಲ್ಪನೆಯಲ್ಲಿ ‘ಔಮುವಾಮುವಾ‘ ಕ್ಷುದ್ರಗ್ರಹ
ಕಲಾವಿದರ ಕಲ್ಪನೆಯಲ್ಲಿ ‘ಔಮುವಾಮುವಾ‘ ಕ್ಷುದ್ರಗ್ರಹ   

ಲಂಡನ್: ಗಾಢ ಕೆಂಪು ಬಣ್ಣದ, ಸಿಗಾರ್ ಆಕಾರದ ಆಕಾಶಕಾಯವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದನ್ನು ‘ಸೌರಮಂಡಲದಾಚೆಯ ಮೊದಲ ಕ್ಷುದ್ರಗ್ರಹ’ ಎಂದು ಕರೆದಿದ್ದಾರೆ.

ಮಸುಕಾದ ಬೆಳಕೊಂದು ಆಕಾಶದಲ್ಲಿ ಸಂಚರಿಸುತ್ತಿದ್ದನ್ನು ಹವಾಯಿಯಲ್ಲಿರುವ ಅತ್ಯಂತ ಶಕ್ತಿಶಾಲಿ ‘ಪ್ಯಾನ್–ಸ್ಟಾರ್ಸ್ಟ್ 1 ಟೆಲಿಸ್ಕೋಪ್’ ಕಳೆದ ತಿಂಗಳು ಗುರುತಿಸಿತ್ತು. ಆದರೆ ಅದರ ಕಕ್ಷೆಯನ್ನು ನಿಖರವಾಗಿ ಗುರುತಿಸಿದಾಗ ತಿಳಿದ ಅಂಶವೆಂದರೆ, ಅದು ನಮ್ಮ ಸೌರಮಂಡಲಕ್ಕೆ ಸೇರಿಲ್ಲ ಎಂಬುದು.

ಆರಂಭದಲ್ಲಿ ಇದನ್ನು ಕ್ಷುದ್ರಗ್ರಹ ಅಥವಾ ಧೂಮಕೇತು ಎಂದು ಗುರುತಿಸಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಸೂರ್ಯನ ಸನಿಹದಲ್ಲಿ ಸಂಚರಿಸಿದಾಗ ಇದರಲ್ಲಿ ಧೂಮಕೇತುವಿನ ಲಕ್ಷಣ ಕಂಡುಬರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಳಿಕ ಇದನ್ನು ಸೌರಮಂಡಲದಾಚೆಯ ಕ್ಷುದ್ರಗ್ರಹ ಎಂದು ವರ್ಗೀಕರಣ ಮಾಡಲಾಯಿತು.

ADVERTISEMENT

ಈ ಆಕಾಶಕಾಯಕ್ಕೆ  ‘ಔಮುವಾಮುವಾ‘ (Oumuamua) ಎಂದು ಹೆಸರಿಡಲಾಗಿದೆ. ಈ ಹೆಸರನ್ನು ನೀಡಿದ್ದು ಪ್ಯಾನ್–ಸ್ಟಾರ್ಸ್ಟ್ ತಂಡ. ಇದು ಹವಾಯಿಯ ಮೂಲವನ್ನು ಸೂಚಿಸುತ್ತದೆ. ‘ನಮ್ಮನ್ನು ತಲುಪಲು ದೂರದ ದಿಗಂತದಿಂದ ಸಂದೇಶ ಹೊತ್ತು ಬಂದಿರುವುದು’ ಎಂಬ ಅರ್ಥವನ್ನು ಇದು ಧ್ವನಿಸುತ್ತದೆ.

ಗಾತ್ರ: ಇದು 400 ಮೀಟರ್‌ನಷ್ಟು ಉದ್ದವಿದೆ. ಅಂದರೆ ಸರಿಸುಮಾರು ಇದರ ಅಗಲದ 10 ಪಟ್ಟು ಉದ್ದ. ಇಲ್ಲಿಯವರೆಗೆ ನಮ್ಮ ಸೌರಮಂಡಲದಲ್ಲಿ ಪತ್ತೆಯಾದ ಯಾವ ಕ್ಷುದ್ರಗ್ರಹವೂ ಇದಕ್ಕಿರುವಷ್ಟು ಅನುಪಾತ ಹೊಂದಿಲ್ಲ. ಇದರ ಉದ್ದನೆಯ ಆಕಾರವು ಅಚ್ಚರಿ ಮೂಡಿಸಿದ್ದು, ಇತರ ಸೌರಮಂಡಲಗಳು ಹೇಗೆ ಸೃಷ್ಟಿಯಾದವು ಎಂದು ಅಧ್ಯಯನ ನಡೆಸಲು ಈ ಅಂಶ ಸಹಕಾರಿಯಾಗಲಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಅದು ಪತ್ತೆಯಾದ ವೇಳೆ ಅದಾಗಲೇ ಸೂರ್ಯನ ಅತ್ಯಂತ ಸನಿಹದ ತಾಣದಿಂದ ತನ್ನ ಮೂಲ ಸೌರಮಂಡಲದ ಕಕ್ಷೆಗೆ ಮರಳುತ್ತಿತ್ತು ಎಂದು ಅವರು ಹೇಳಿದ್ದಾರೆ. ಇದು ಸಂಪೂರ್ಣ ನಿಷ್ಕ್ರಿಯವಾಗಿದ್ದು, ಸುತ್ತಲೂ ದೂಳಿನ ಕಣಗಳಿಲ್ಲ. ಇದರರ್ಥ ಗಟ್ಟಿಯಾದ ಕಲ್ಲು ಅಥವಾ ಉತ್ಕೃಷ್ಟ ಲೋಹದಿಂದ ಕೂಡಿರುವ ಸಾಧ್ಯತೆಯಿದೆ. ನೀರು ಅಥವಾ ಮಂಜಿನ ಸುಳಿವಿಲ್ಲ. ಲಕ್ಷಾಂತರ ವರ್ಷಗಳಿಂದ ಆಗಿರುವ ಕಾಸ್ಮಿಕ್ ವಿಕಿರಣಗಳ ದಾಳಿಯಿಂದ ಗಾಢ ಕೆಂಪು ಬಣ್ಣ ಬಂದಿರುವ ಸಾಧ್ಯತೆಯಿದೆ ಎಂದಿದ್ದಾರೆ.

ಹೊಳೆಯುತ್ತಿರುವ ವೆಗಾ ನಕ್ಷತ್ರದ ದಿಕ್ಕಿನಿಂದ ಇದು ಬಂದಿದೆ ಎನ್ನಲಾಗಿದೆ. ಗಂಟೆಗೆ 95 ಸಾವಿರ ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಯಾವ ನಕ್ಷತ್ರದ ಗುರುತ್ವ ವ್ಯಾಪ್ತಿಗೂ ಒಳಪಡದ ಇದು ನಮ್ಮ ಸೂರ್ಯನಿರುವ ಹಾಲುಹಾದಿ ಗ್ಯಾಲಕ್ಸಿಯಲ್ಲಿ (ಮಿಲ್ಕಿವೇ) ಲಕ್ಷಾಂತರ ವರ್ಷಗಳಿಂದ ಗಿರಕಿ ಹೊಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.