ADVERTISEMENT

24 ಗಂಟೆಯಲ್ಲಿ ವಾಸಯೋಗ್ಯ ಮನೆ ಸಿದ್ಧ

ಪ್ರಿಂಟ್ ಹಾಕಿ ಮನೆ ನಿರ್ಮಿಸಿ

ಏಜೆನ್ಸೀಸ್
Published 8 ಮಾರ್ಚ್ 2017, 14:04 IST
Last Updated 8 ಮಾರ್ಚ್ 2017, 14:04 IST
24 ಗಂಟೆಯಲ್ಲಿ ವಾಸಯೋಗ್ಯ ಮನೆ ಸಿದ್ಧ
24 ಗಂಟೆಯಲ್ಲಿ ವಾಸಯೋಗ್ಯ ಮನೆ ಸಿದ್ಧ   

ಮಾಸ್ಕೋ: ಮನೆ ಕಟ್ಟುವುದು ಸಾಮಾನ್ಯರ ಮಟ್ಟಿಗೆ ಸುಲಭದ ಮಾತೇನಲ್ಲ. ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ಆಸೆ ನೆರವೇರಿಸಿಕೊಳ್ಳಲು ಕೆಲವರು ಇಡೀ ಜೀವನ ಕಷ್ಟಪಡುತ್ತಾರೆ.

ಮನೆ ನಿರ್ಮಾಣವು ಶ್ರಮ ಬೇಡುವ ಕೆಲಸ. ಎಷ್ಟೇ ಯಂತ್ರಗಳ ಸಹಾಯ  ಪಡೆದುಕೊಂಡರೂ, ಕೂಲಿ ಕಾರ್ಮಿಕರ ಅವಲಂಬನೆ ಅತ್ಯಗತ್ಯ. ಸಣ್ಣ ಮನೆ ಎಂದರೆ ಕನಿಷ್ಠ ಎರಡು ಮೂರು ತಿಂಗಳಾದರೂ ನಿರ್ಮಾಣಕ್ಕೆ ಕಾಯಬೇಕು.

ಪ್ರಸ್ತುತ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಆಗುತ್ತಿರುವ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಈ ಎಲ್ಲಾ ಸಮಸ್ಯೆಗಳು ಇನ್ನು ದೂರವಾಗಲಿವೆ. 3ಡಿ ತಂತ್ರಜ್ಞಾನದಿಂದಾಗಿ ಕೇವಲ 24 ಗಂಟೆಯಲ್ಲಿ ಉತ್ತಮ ವಾಸಯೋಗ್ಯ ಮನೆಯನ್ನು ಕಡಿಮೆ ಖರ್ಚಿನಲ್ಲಿ ನಿರ್ಮಿಸಬಹುದು!

ADVERTISEMENT

3ಡಿ ತಂತ್ರಜ್ಞಾನ ಬಳಸಿ ಮನೆ ನಿರ್ಮಿಸುವ ಪ್ರಯತ್ನಗಳು ಈ ಹಿಂದೆ ನಡೆದಿವೆ. ಆದರೆ ಅವು ತಂತ್ರಜ್ಞಾನದ ಪರಿಚಯ ಮತ್ತು ಪ್ರಯೋಗಕ್ಕೆ ಮಾತ್ರ ಸೀಮಿತವಾಗಿದ್ದವು.

ಆದರೆ ಇತ್ತೀಚೆಗಷ್ಟೇ ಸ್ಪೇನ್‌ನಲ್ಲಿ  ವಿಶ್ವದ ಮೊದಲ 3ಡಿ ಕಿರು ಸೇತುವೆ ನಿರ್ಮಿಸಲಾಗಿದೆ. ಇದಾದ ನಂತರ ಇದೇ ಮೊದಲ ಬಾರಿಗೆ ವಾಸಯೋಗ್ಯ 3ಡಿ ಮುದ್ರಿತ ಮನೆ ಕೂಡ ನಿರ್ಮಿಸಲಾಗಿದೆ. ಈ ಕುರಿತು ಒಂದಿಷ್ಟು ಮಾಹಿತಿ.

ಎಲ್ಲಿದೆ?

*ಮೊದಲ 3ಡಿ ಮುದ್ರಿತ ತಂತ್ರಜ್ಞಾನ ಮನೆಯನ್ನು ರಷ್ಯಾದ ಮಾಸ್ಕೋದಲ್ಲಿ ನಿರ್ಮಿಸಲಾಗಿದೆ.
*ರಷ್ಯಾ ಮೂಲದ ‘ಅಪಿಸ್‌ ಕೋರ್’ ಎಂಬ ಸಂಸ್ಥೆ ಈ ಮನೆಯನ್ನು ನಿರ್ಮಿಸಿದೆ.

3ಡಿ ಮನೆಯ ವಿಶೇಷ

*ಕಡಿಮೆ ಖರ್ಚು, ಅತಿ ಕಡಿಮೆ ಅವಧಿ
*ಹೆಚ್ಚು ಉಷ್ಣಾಂಶವನ್ನು ತಡೆಯಲು ಹಾಗೆ ಗೋಡೆಯೊಳಗೆ ವಿವಿಧ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ
*–35 ಡಿಗ್ರಿಯಿಂದ ಹಿಡಿದು ಗರಿಷ್ಠ 80 ಡಿಗ್ರಿ ಉಷ್ಣಾಂಶವಿದ್ದರೂ ಮನೆಯೊಳಗಿನ ವಾತಾವರಣ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ.
*175 ವರ್ಷದವರೆಗೂ ಯಾವುದೇ ತೊಂದರೆ ಇಲ್ಲದೆ ಮನೆ ಬಳಸಬಹುದು ಎಂದು ಸಂಸ್ಥೆ ಭರವಸೆ ನೀಡಿದೆ

ನಿರ್ಮಾಣ ಹೇಗೆ?
*ನಿರ್ಮಿಸಲು ಉದ್ದೇಶಿಸಿರುವ ಮನೆ ವಿನ್ಯಾಸ, ವಿಸ್ತೀರ್ಣ ಕುರಿತ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ.
*ಮನೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ 3ಡಿ ಪ್ರಿಂಟರ್ (ಇದು ಸಣ್ಣ ಪೆಟ್ಟಿಗೆ ಆಕಾರದ ಮಾಮೂಲಿ ಕಂಪ್ಯೂಟರ್‌ ಪ್ರಿಂಟರ್‌ ಅಲ್ಲ. ದೊಡ್ಡ ಗಾತ್ರದ ‘ಕಾಂಕ್ರೀಟ್‌ ಪ್ರಿಂಟರ್‌’) ಇಡಲಾಗುತ್ತದೆ.
*ಕಂಪ್ಯೂಟರ್‌ನಲ್ಲಿ ದಾಖಲಾಗಿರುವ ವಿನ್ಯಾಸದಂತೆ ಈ ಪ್ರಿಂಟರ್  ಕಾಂಕ್ರೀಟ್‌ ಮಿಶ್ರಣವನ್ನು ಪೊರೆ ಪೊರೆಯಾಗಿ ಕಟ್ಟುತ್ತಾ ಮೊದಲು ಗೋಡೆಗಳನ್ನು ನಿರ್ಮಿಸುತ್ತದೆ.
*ಗೋಡೆಯ ನಡುವೆ, ಉಕ್ಕು ಮತ್ತು ಕಬ್ಬಿಣದ ಸರಳುಗಳನ್ನು ಜೋಡಿಸಲಾಗುತ್ತದೆ.
*ಗೋಡೆಗಳನ್ನು ನಿರ್ಮಿಸಿದ ನಂತರ ಪ್ರಿಂಟರ್ ಅನ್ನು ಕ್ರೇನ್‌ ಸಹಾಯದಿಂದ ಮೇಲಕ್ಕೆತ್ತಿ, ಅದನ್ನು ಮನೆಯಿಂದ ಹೊರಗಿಟ್ಟು ಮೇಲ್ಛಾವಣಿ ನಿರ್ಮಿಸಲಾಗುತ್ತದೆ.

ವಿಸ್ತೀರ್ಣ: 4,413 ಚ.ಅಡಿ

ಖರ್ಚು: ₹7ಲಕ್ಷ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.