ADVERTISEMENT

ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಏಜೆನ್ಸೀಸ್
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST

ಕಾಬೂಲ್‌: ತಾಲಿಬಾನ್‌ ಉಗ್ರರು ನಡೆಸಿದ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲಿನ ಒಳಗಿದ್ದವರೇ ಉಗ್ರರಿಗೆ ಸಹಕರಿಸಿರುವ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಂತಹ ಪ್ರತಿಷ್ಠಿತ ಹೋಟೆಲ್‌ ಒಳಗೆ ಭದ್ರತೆಯನ್ನು ಭೇದಿಸಿ ಉಗ್ರರು ಪ್ರವೇಶ ಮಾಡಿದ್ದಾರೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ವಾರಗಳಿಂದಷ್ಟೆ ಖಾಸಗಿ ಸಂಸ್ಥೆಗೆ ಭದ್ರತೆಯ ಜವಾಬ್ದಾರಿಯನ್ನು ನೀಡಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಆರು ಅಂತಸ್ತಿನ ಹೋಟೆಲಿಗೆ ಪ್ರವೇಶಿಸಿದ ಉಗ್ರರು ದಾಳಿಗೆ ಮುಂದಾಗುತ್ತಿದ್ದಂತೆ ಕಂಬಗಳ ಮರೆಯಲ್ಲಿ ಮತ್ತು ಕೋಣೆಗಳಲ್ಲಿ ಅವಿತಿದ್ದರು. ಕೆಲವರು ಬೆಡ್‌ಶೀಟ್‌ಗಳನ್ನು ಬಳಸಿ ಬಾಲ್ಕನಿಗಳಿಂದ ಜಿಗಿಯಲು ಪ್ರಯತ್ನಿಸಿದ್ದರು.

ADVERTISEMENT

ಸುಮಾರು 12 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಅಫ್ಗನ್‌ ಪಡೆಗಳು ಆರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

22 ಮೃತದೇಹಗಳನ್ನು ಕಾಬೂಲ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೆಲವು ಮೃತದೇಹಗಳು ಸುಟ್ಟುಹೋಗಿವೆ. ಗುರುತು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆಯ ಅಗತ್ಯವಿದೆ ಎಂದು ಅಫ್ಗನ್‌ ಆರೋಗ್ಯ ಸಚಿವಾಲಯದ ವಕ್ತಾರ ವಹೀದ್‌ ಮಜ್ರೊ ತಿಳಿಸಿದ್ದಾರೆ.

ಸತ್ತವರಲ್ಲಿ ಆರು ಮಂದಿ ಉಕ್ರೇನ್‌ ಪ್ರಜೆಗಳು ಎಂದು ಉಕ್ರೇನ್‌ ವಿದೇಶಾಂಗ ಸಚಿವಾಲಯ ಸ್ಷಷ್ಟಪಡಿಸಿದೆ. ದಾಳಿಗೂ ಮುನ್ನ ಆಕರ್ಷಕ ಉಡುಗೆ ತೊಟ್ಟ ಇಬ್ಬರು ಬಂದೂಕುಧಾರಿಗಳನ್ನು ರೆಸ್ಟೊರೆಂಟ್‌ನಲ್ಲಿ ಕಂಡಿರುವುದಾಗಿ ಹೋಟೆಲ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

‘ಸುಮಾರು  ರಾತ್ರಿ 8.30ರ ಸಮಯ. ಅವರು ಹೋಟೆಲ್‌ನ ಮೂಲೆಯೊಂದರಲ್ಲಿ ಕುಳಿತಿದ್ದರು. ತಕ್ಷಣವೇ ಗುಂಡಿನ ದಾಳಿ ನಡೆಸಲು ಶುರು ಮಾಡಿದರು’ ಎಂದು ಹೋಟೆಲ್‌ನ ಸಿಬ್ಬಂದಿ 20 ವರ್ಷದ ಹಸೀಬುಲ್ಲಾ ತಿಳಿಸಿದ್ದಾನೆ.ಈತ ಕೂಡಾ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದಾಳಿ ನಡೆಯುತ್ತಿದ್ದಂತೆ ನಾನು ಐದನೇ ಮಹಡಿಗೆ ಓಡಿದೆ ಕೊಠಡಿಯೊಂದರ ಒಳಹೋಗಿ ಚಿಲಕ ಹಾಕಿಕೊಂಡೆ. ಬಂದೂಕುಧಾರಿಗಳು ಪ್ರತಿ ಕೊಠಡಿಯ ಬಾಗಿಲು ಬಡಿಯುತ್ತಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಗುಂಡಿಟ್ಟು ಸಾಯಿಸುತ್ತಿದ್ದರು. ಅವರು ವಿದೇಶೀಯರಿಗಾಗಿ ಹುಡುಕಾಟ ನಡೆಸುತ್ತಿದ್ದರು’ ಎಂದು ಆತ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.