ADVERTISEMENT

ಅಮೆರಿಕ: ಆಡಳಿತ ಬಿಕ್ಕಟ್ಟು ಅಂತ್ಯ

ಏಜೆನ್ಸೀಸ್
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ತಾತ್ಕಲಿಕ ವೆಚ್ಚ ಮಸೂದೆಗೆ ಒಪ್ಪಿಗೆ ನೀಡಿದ ಬಳಿಕ ವಾಷಿಂಗ್ಟನ್‌ನ ಕ್ಯಾಪಿಟಲ್‌ ಹಿಲ್‌ ನಿಂದ ಹೊರನಡೆದು ಬರುತ್ತಿರುವ ಜನಪ್ರತಿನಿಧಿ ಸಭೆಯ ಸದಸ್ಯರು –ಎಎಫ್‌ಪಿ ಚಿತ್ರ
ತಾತ್ಕಲಿಕ ವೆಚ್ಚ ಮಸೂದೆಗೆ ಒಪ್ಪಿಗೆ ನೀಡಿದ ಬಳಿಕ ವಾಷಿಂಗ್ಟನ್‌ನ ಕ್ಯಾಪಿಟಲ್‌ ಹಿಲ್‌ ನಿಂದ ಹೊರನಡೆದು ಬರುತ್ತಿರುವ ಜನಪ್ರತಿನಿಧಿ ಸಭೆಯ ಸದಸ್ಯರು –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ ಮೂರು ದಿನಗಳಿಂದ ಸ್ಥಗಿತಗೊಂಡಿದ್ದ ಆಡಳಿತ ಬಿಕ್ಕಟ್ಟು ಅಂತ್ಯಗೊಂಡಿದೆ. ಸೆನೆಟ್‌ನಲ್ಲಿ ಅನುಮೋದನೆಗೊಂಡಿದ್ದ ‘ತಾತ್ಕಾಲಿಕ ವೆಚ್ಚ ಮಸೂದೆ’ಗೆ ಜನಪ್ರತಿನಿಧಿಗಳ ಸಭೆಯು  ಒಪ್ಪಿಗೆ ನೀಡಿದ್ದು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಸೂದೆಗೆ ಸಹಿಹಾಕಿದ್ದಾರೆ.

‘ತಾತ್ಕಾಲಿಕ ಮಸೂದೆ’ ಸಂಬಂಧ ಸೋಮವಾರ ರಾತ್ರಿ ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್‌ ಸದಸ್ಯರ ನಡುವೆ ಬಿರುಸಿನ ಚರ್ಚೆ ನಡೆಯಿತು.  ಅಕ್ರಮ
ವಾಗಿ ವಲಸೆ ಬಂದ ಯುವಜನರ ಭವಿಷ್ಯದ ಬಗ್ಗೆ ಚರ್ಚೆ ನಡೆಸಲು ಸಿದ್ಧವಿರುವ ಬಗ್ಗೆ ರಿಪಬ್ಲಿಕನ್ನರು ಖಚಿತ ಭರವಸೆ ನೀಡಿದ ಬಳಿಕ ತಾತ್ಕಾಲಿಕ ಮಸೂದೆಗೆ ಡೆಮಾಕ್ರಟಿಕ್ ಸದಸ್ಯರು ಒಪ್ಪಿಗೆ ಸೂಚಿಸಿದರು. 

ಈ ಮಸೂದೆಯು ಸೆನೆಟ್‌ನಲ್ಲಿ 81–18 ಹಾಗೂ ಜನಪ್ರತಿನಿಧಿ ಸಭೆಯಲ್ಲಿ 266–150 ಮತಗಳಿಂದ ಒಪ್ಪಿಗೆ ಪಡೆಯಿತು. ಸದನದಲ್ಲಿ ಒಪ್ಪಿಗೆ ಪಡೆದ ವೆಚ್ಚ ಮಸೂದೆಯೂ ಫೆಬ್ರುವರಿ 8ಕ್ಕೆ ಅಂತ್ಯಗೊಳ್ಳಲಿದೆ.

ADVERTISEMENT

ಸಹಜಸ್ಥಿತಿಯತ್ತ ಜನಜೀವನ: ವಲಸೆ ನೀತಿ ಚರ್ಚೆಗೆ ಒಪ್ಪಿಗೆ ನೀಡಿರುವುದನ್ನು ಡೆಮಾಕ್ರಟಿಕ್‌ ಸದಸ್ಯರು ತಮಗಾದ ಗೆಲುವು ಎಂದು ಬಣ್ಣಿಸಿದರು.  ಸರ್ಕಾರಿ ಚಟುವಟಿಕೆಗಳು ಎಂದಿನಂತೆ ಆರಂಭವಾದವು.

ತಾತ್ಕಾಲಿಕ ವೆಚ್ಚ ಮಸೂದೆಯ ಅವಧಿ ಕೆಲವೇ ದಿನಗಳಿವೆ. ಅದಕ್ಕೂ ಮುನ್ನವೇ, ವೆಚ್ಚ ಮಸೂದೆ ಹಾಗೂ ಅಕ್ರಮ ವಲಸೆಗೆ ಸಂಬಂಧಿಸಿದಂತೆ ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್‌ ಸದಸ್ಯರು ದೀರ್ಘಕಾಲಿಕ ಪರಿಹಾರ ಕಂಡುಕೊಂಡು ಒಪ್ಪಿಗೆ ನೀಡಬೇಕಿದೆ.

‘ವಲಸೆಗಾರರ ಸಂಬಂಧ ದೀರ್ಘಕಾಲಿಕ ಒಪ್ಪಂದಕ್ಕೆ ಸಿದ್ಧವಿದ್ದೇನೆ, ಇದರಿಂದ ದೇಶಕ್ಕೆ ಒಳ್ಳೆಯದಾಗುವುದಾದರೆ, ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ’ ಎಂದು ಮಸೂದೆಗೆ ಸಹಿಹಾಕಿದ ಬಳಿಕ ಡೊನಾಲ್ಡ್‌ ಟ್ರಂಪ್‌ ತಿಳಿಸಿದರು.

‘ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಡೆಮಾಕ್ರಟಿಕ್‌ ಸದಸ್ಯರ ನಡುವೆ ಒಂದಿಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಸಂಧಾನ ನಡೆಸಲು ಶ್ವೇತಭವನವೂ ಸಿದ್ಧವಾಗಿದೆ ’  ಎಂದು ಇಲ್ಲಿನ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.