ADVERTISEMENT

89ನೇ ಆಸ್ಕರ್‌: ಮೂನ್‌ಲೈಟ್‌ ಅತ್ಯುತ್ತಮ ಚಿತ್ರ

ನನ್ನ ಕನಸಿನಲ್ಲಿಯೂ ಇದು ನಿಜವಾಗಲು ಸಾಧ್ಯವಿಲ್ಲ’

ಪಿಟಿಐ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
89ನೇ ಆಸ್ಕರ್‌: ಮೂನ್‌ಲೈಟ್‌ ಅತ್ಯುತ್ತಮ ಚಿತ್ರ
89ನೇ ಆಸ್ಕರ್‌: ಮೂನ್‌ಲೈಟ್‌ ಅತ್ಯುತ್ತಮ ಚಿತ್ರ   
ಲಾಸ್‌ ಏಂಜಲಿಸ್‌ : 89ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ರಾತ್ರಿ ನಡೆದಿದ್ದು, ಬ್ಯಾರಿ ಜೆಂಕಿನ್ಸ್‌ ಅವರ ‘ಮೂನ್ ಲೈಟ್‌’ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.  ಆದರೆ ಅತ್ಯುತ್ತಮ ಚಿತ್ರ ಘೋಷಣೆ ಸಂದರ್ಭದಲ್ಲಿ ಮೊದಲು ‘ಲಾ ಲಾ ಲ್ಯಾಂಡ್‌’ ಹೆಸರನ್ನು ತಪ್ಪಾಗಿ ಹೇಳಿದ್ದರಿಂದ ಗೊಂದಲ ಸೃಷ್ಟಿಯಾಯಿತು.
 
ಕಾರ್ಯಕ್ರಮದ ನಿರೂಪಕ ವಾರನ್‌ ಬೆಟಿ ಹಾಗೂ ಲಾಲಾ ಲ್ಯಾಂಡ್‌  ಚಿತ್ರದ ಹೆಸರನ್ನು ತಪ್ಪಾಗಿ ಘೋಷಿಸಿದ್ದರು. ತಪ್ಪಿನ ಅರಿವಾಗುವಷ್ಟರಲ್ಲಿ ಆ ಚಿತ್ರದ ನಿರ್ಮಾಪಕರು  ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸಿ, ತಮ್ಮ ಭಾಷಣವನ್ನೂ ಪೂರ್ಣಗೊಳಿಸುವ ಹಂತದಲ್ಲಿದ್ದರು.
 
ಆಗ ನಿರೂಪಕ ಬೆಟಿ ಅವರು ಭಾಷಣವನ್ನು ತಡೆದು ಆಗಿರುವ ತಪ್ಪನ್ನು ಸರಿಪಡಿಸಿದರು. ‘ಮೂನ್‌ಲೈಟ್‌’ ಹೆಸರು ಘೋಷಣೆಯಾಗುತ್ತಿದ್ದಂತೆ ಲಾ ಲಾ ಲ್ಯಾಂಡ್‌ ಚಿತ್ರದ ನಿರ್ಮಾಪಕ ಜೊರ್ಡಾನ್‌ ಹೊರೊವಿಟ್ಜ್‌ ಅವರೇ  ಪ್ರಶಸ್ತಿ ಸ್ವೀಕರಿಸಲು ಆ ಚಿತ್ರತಂಡವನ್ನು ವೇದಿಕೆಗೆ ಸ್ವಾಗತಿಸಿದರು.
 
‘ಒಂದು ತಪ್ಪಾಗಿದೆ. ಮೂನ್‌ಲೈಟ್‌ ... ನೀವು ಗೆಲುವು ಸಾಧಿಸಿದ್ದೀರಿ. ಇದು  ತಮಾಷೆಯಲ್ಲ’ ಎಂದು ಹೊರೊವಿಟ್ಜ್‌ ಅವರು ಘೋಷಿಸಿದರು. ಆಶ್ಚರ್ಯಕ್ಕೆ ಒಳಗಾದ ಜೆಂಕಿನ್ಸ್‌ ಅವರು ‘ನನ್ನ ಕನಸಿನಲ್ಲಿಯೂ ಇದು ನಿಜವಾಗಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. 
 
ಕ್ಷಮೆ ಯಾಚಿಸಿದ ಅಕಾಡೆಮಿ: ಅತ್ಯುತ್ತಮ ಚಿತ್ರ ಘೋಷಿಸುವ ವೇಳೆ ಆದ ತಪ್ಪಿಗಾಗಿ ಅಕಾಡೆಮಿ ಕ್ಷಮೆ ಯಾಚಿಸಿದೆ. ಹೆಸರು ತಪ್ಪಾಗಿ ಘೋಷಿಸಿದ್ದಕ್ಕೆ, ವಾರನ್‌ ಬೆಟಿ ಹಾಗೂ ಫೇಯ್‌ ಡನ್‌ವೇ ಅವರು ಹೊಣೆಯಲ್ಲ. ಅವರಿಗೆ ನೀಡಿದ್ದ ಲಕೋಟೆ ಬದಲಾಗಿತ್ತು ಎಂದು ಅಕಾಡೆಮಿ ಸ್ಪಷ್ಟನೆ ನೀಡಿದೆ. 
ಈ ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆಗಿರುವ ತಪ್ಪಿಗೆ ವಿಷಾದಿಸುತ್ತೇವೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ. 
 
ಬಾಲಿವುಡ್‌ಗೂ ಅಚ್ಚರಿ:
89ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಘೋಷಣೆ ವೇಳೆ ಉಂಟಾದ ಗೊಂದಲ ಕುರಿತು ಹಾಲಿವುಡ್‌್ ಕಲಾವಿದರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 
 
ಗೊಂದಲದಿಂದಾಗಿ ಗೆಲುವಿನ ಸಂಭ್ರಮವನ್ನು ಸಂಪೂರ್ಣವಾಗಿ ಅನುಭವಿಸಲಾಗಲಿಲ್ಲ ಎಂದು ನಟಿ ಜೆಸ್ಸಿಕಾ ಚೆಸ್ಟಿನ್‌ ಪ್ರತಿಕ್ರಿಯೆ ನೀಡಿದ್ದಾರೆ.
ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದ ಬಳಿಕ ‘ಮೂನ್‌ಲೈಟ್‌’ ನಿರ್ದೇಶಕ ಜೆಂಕಿನ್ಸ್‌ ಅವರು ‘ಇನ್ನೂ ಸಹ ಮಾತನಾಡಲಾಗುತ್ತಿಲ್ಲ’ ಎಂದು ಪ್ರಶಸ್ತಿ ಪತ್ರದೊಂದಿಗೆ ಟ್ವೀಟ್‌ ಮಾಡಿದ್ದಾರೆ. ಘಟನೆ ಕುರಿತು ಬಾಲಿವುಡ್‌ ಕಲಾವಿದರು ಸಹ ಆಘಾತ ವ್ಯಕ್ತಪಡಿಸಿದ್ದಾರೆ. 
 
ದೇವ್‌ಗೆ ತಪ್ಪಿದ ಪ್ರಶಸ್ತಿ: ‘ಲಯನ್‌’ ಚಿತ್ರದ ನಟನೆಗಾಗಿ ಭಾರತೀಯ ಮೂಲದ ದೇವ್‌ ಪಟೇಲ್‌ ಅತ್ಯುತ್ತಮ ಪೋಷಕ ನಟ ಸ್ಪರ್ಧೆಯಲ್ಲಿದ್ದ ರು. ಆದರೆ ಈ ಪ್ರಶಸ್ತಿ ‘ಮೂನ್‌ಲೈಟ್‌’ ಚಿತ್ರದ ನಟ ಮೆಹರ್ಷಾಲಾ ಅಲಿ ಪಾಲಾಯಿತು.
 
ಗೂಗಲ್‌ ಮ್ಯಾಪ್‌ ಮೂಲಕ ಭಾರತದಲ್ಲಿನ ತನ್ನ ಕುಟುಂಬವನ್ನು ಅರಸುವ ಆಸ್ಟ್ರೇಲಿಯನ್‌ ಭಾರತೀಯ ಸರೂ ಬ್ರಯರ್ಲಿಯ ನೈಜ ಜೀವನ ಕಥೆ ಆಧರಿಸಿ ‘ಲಯನ್‌’ ಚಿತ್ರ ನಿರ್ಮಿಸಲಾಗಿದೆ. 
 
‘ದ ಸೇಲ್ಸ್‌ಮನ್‌’ ಅತ್ಯುತ್ತಮ ವಿದೇಶಿ  ಚಿತ್ರ
ಇರಾನಿ ನಿರ್ದೇಶಕ ಆಸ್ಗರ್‌ ಫರ್ಹಾದಿ ಅವರ ‘ದ ಸೇಲ್ಸ್‌ಮನ್‌’ ಈ ಬಾರಿಯ ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರ ಎನಿಸಿಕೊಂಡಿದೆ. ಆ ಮೂಲಕ ಅವರು ಆಸ್ಕರ್‌ ಪಡೆದ ಮೊದಲ ಇರಾನಿ ನಿರ್ದೇಶಕ ಎನಿಸಿದ್ದಾರೆ.

ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಏಳು ಮುಸ್ಲಿಂ ರಾಷ್ಟ್ರಗಳ ಪ್ರವಾಸಿಗರ ಮೇಲೆ ಹೇರಿದ್ದ ನಿಷೇಧ ವನ್ನು ಖಂಡಿಸಿ ಅವರು ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ. ಅವರ ಪ್ರತಿನಿಧಿಯಾಗಿ ಸಮಾರಂಭಕ್ಕೆ ಬಂದಿದ್ದ ವ್ಯಕ್ತಿ ಟ್ರಂಪ್‌ ನೀತಿಯ ಬಗ್ಗೆ ತೀಕ್ಷ್ಣ  ಪ್ರತಿಕ್ರಿಯೆ ಉಳ್ಳ ಅವರ ಲಿಖಿತ ಭಾಷಣವನ್ನು ಓದಿದ್ದು ಗಮನ ಸೆಳೆಯಿತು.
 
ಅತ್ಯುತ್ತಮ ಚಿತ್ರ: ಮೂನ್‌ಲೈಟ್‌
ನಿರ್ದೇಶಕ: ಡೇಮಿಯನ್‌ ಶಾಜೆಲ್‌, (ಲಾ ಲಾ ಲ್ಯಾಂಡ್‌)
ನಟ: ಕೇಸಿ ಅಫ್ಲೆಕ್‌, ಮ್ಯಾಂಚೆಸ್ಟರ್‌ ಬೈ ದ ಸೀ
ನಟಿ: ಎಮ್ಮಾ ಸ್ಟೋನ್‌, ಲಾ ಲಾ ಲ್ಯಾಂಡ್‌
ಪೋಷಕ ನಟ: ಮೆಹರ್‌ಶಾಲಾ ಅಲಿ, ಮೂನ್‌ಲೈಟ್‌
ಪೋಷಕ ನಟಿ: ವಿಯೋಲ ಡೇವಿಸ್, ಫೆನ್ಸಸ್‌
ಆ್ಯನಿಮೇಟೆಡ್‌ ಚಿತ್ರ: ಝೂಟೊಪಿಯ
ಚಿತ್ರಕಥೆ (ಮೂಲ): ಮ್ಯಾಂಚೆಸ್ಟರ್‌ ಬೈ ದಿ ಸೀ
ಚಿತ್ರಕಥೆ (ಅಳವಡಿಕೆ): ಮೂನ್‌ಲೈಟ್‌
ನಿರ್ಮಾಣ ವಿನ್ಯಾಸ: ಲಾ ಲಾ ಲ್ಯಾಂಡ್‌
ಛಾಯಾಗ್ರಹಣ: ಲಾ ಲಾ ಲ್ಯಾಂಡ್‌
ವಸ್ತ್ರ ವಿನ್ಯಾಸ: ಫೆಂಟಾಸ್ಟಿಕ್‌ ಬೀಸ್ಟ್ಸ್‌ ಆ್ಯಂಡ್‌ ವೇರ್‌ ಟು ಫೈಂಡ್‌ ದೆಮ್‌
ಸಂಕಲನ: ಹ್ಯಾಕ್‌ಸಾ ರಿಡ್ಜ್‌
ಸಾಕ್ಷ್ಯ ಚಿತ್ರ: ಓ.ಜೆ.: ಮೇಡ್‌ ಇನ್‌ ಅಮೆರಿಕ
ಕಿರು ಸಾಕ್ಷ್ಯಚಿತ್ರ: ದ ವೈಟ್‌ ಹೆಲ್ಮೆಟ್ಸ್‌
ವಿದೇಶಿ ಭಾಷೆ ಚಿತ್ರ: ದ ಸೇಲ್ಸ್‌ಮ್ಯಾನ್‌ (ಇರಾನ್‌)
ಮೂಲ ಸಂಗೀತ: ಲಾ ಲಾ ಲ್ಯಾಂಡ್‌, ಜಸ್ಟಿನ್‌ ಹರ್ವಿಟ್ಜ್‌
ಹಾಡು: ‘ಸಿಟಿ ಆಫ್‌ ಸ್ಟಾರ್‍ಸ’ , ಲಾ ಲಾ ಲ್ಯಾಂಡ್‌
ಪ್ರಸಾದನ ಮತ್ತು ಕೇಶವಿನ್ಯಾಸ: ಸೂಸೈಡ್‌ ಸ್ಕ್ವಾಡ್‌
ಆ್ಯನಿಮೇಟೆಡ್‌ ಕಿರುಚಿತ್ರ: ಪೈಪರ್‌
ಲೈವ್ ಧ್ವನಿಮುದ್ರಣ ಕಿರುಚಿತ್ರ: ಸಿಂಗ್‌
ಧ್ವನಿ ಸಂಕಲನ: ಅರೈವಲ್‌
ವಿಶೇಷ ಧ್ವನಿ ಸಂಸ್ಕರಣೆ: ಹ್ಯಾಕ್‌ಸಾ ರಿಡ್ಜ್‌
ವಿಶೇಷ ಗ್ರಾಫಿಕ್‌ ಬಳಕೆ: ದ ಜಂಗಲ್‌ ಬುಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.