ADVERTISEMENT

ನಾಯಕತ್ವದಲ್ಲಿ ನಿಷ್ಠೆಗೆ ಕಾರಣ

ಡಾ. ಗುರುರಾಜ ಕರಜಗಿ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ಕೆಲವರು ಕಷ್ಟಪಟ್ಟು ನಾಯಕರಾ­ಗುತ್ತಾರೆ, ಕೆಲವರಿಗೆ ನಾಯಕತ್ವ ಅನಾ­ಯಾಸವಾಗಿ ಒದಗಿಬರುತ್ತದೆ. ಬಹಳಷ್ಟು ಜನರು ನಾಯಕರಾದರೂ ಯಾವ ಛಾಪು ಬಿಡದೇ ಜನರ ನೆನಪಿನಿಂದ ಮರೆಯಾಗಿ ಹೋಗುತ್ತಾರೆ. ಆದರೆ, ಕೆಲವು ನಾಯಕರು ತುಂಬ ಯಶಸ್ವಿಗಳಾಗುತ್ತಾರೆ. ಇಂತಹ ನಾಯಕರ ಯಶಸ್ಸಿಗೆ ಕಾರಣಗಳೇನಿರ­ಬಹುದೆಂದು ತಿಳಿಯಲು ಅನೇಕ ಸಂಶೋಧನೆಗಳು ನಡೆದಿವೆ.

ಸಂಶೋಧನೆ­ಗಳು ತಿಳಿಸಿದ ಅನೇಕ ಕಾರಣಗಳಲ್ಲಿ ನನಗೆ ತಿಳಿದಂತೆ ಬಹುಮುಖ್ಯವಾದದ್ದು ನಾಯಕರು ತಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ತೋರುವ ವಿಶ್ವಾಸ. ದರ್ಪದಿಂದ ದಬ್ಬಾಳಿಕೆ ಮಾಡುವವ­ರನ್ನು ಜನ ಆತ ನಿವೃತ್ತನಾಗುವವರೆಗೆ ಅಥವಾ ಹುದ್ದೆಯಿಂದ ದೂರಹೋಗು­ವ­ವರೆಗೆ ತಾಳಿಕೊಳ್ಳು­ತ್ತಾರೆ. ನಂತರ ಅವನ ಬಗ್ಗೆ ತಿರಸ್ಕಾರ ಹುಟ್ಟುತ್ತದೆ. ಆದರೆ, ಯಾವ ನಾಯಕ ತನ್ನ ತಂಡದ ಸದಸ್ಯರನ್ನು ಪ್ರೀತಿಯಿಂದ, ಸಹೃದಯತೆ­ಯಿಂದ ಕಾಣುತ್ತಾನೋ ಅವನು ಮಾನ್ಯನಾಗುತ್ತಾನೆ, ಬಹಳ ಕಾಲ ನೆನಪಿನಲ್ಲಿ ಉಳಿಯುತ್ತಾನೆ.

ಕಳೆದ ತಿಂಗಳು ರೇ ಮರ್ಫಿ ಬರೆದ ಲಾಸ್ಟ್ ವೈಸರಾಯ್ ಎಂಬ ಪುಸ್ತಕ ಓದುವಾಗ ಈ ವಿಷಯ ಎದ್ದು ಕಂಡಿತು. ಲಾರ್ಡ್‌ ಮೌಂಟಬ್ಯಾಟನ್ ತನ್ನ ಮೂವತ್ನಾಲ್ಕನೇ ವಯಸ್ಸಿಗೇ ‘ಎಚ್ಎಮ್ಎಸ್ ಡಾರ್ಲಿಂಗ್’ ಎಂಬ ಯುದ್ಧ ನೌಕೆಗೆ ಕಮಾಂಡರ್ ಆಗಿ ನೇಮಕಗೊಂಡ.  ಮೂರು ವಿಷಯಗಳ ಬಗ್ಗೆ ಜಾಗರೂಕ­ರಾಗಿರಬೇಕೆಂದು ಆತ ತೀರ್ಮಾನಿ­ಸಿದ್ದನಂತೆ. ಅವು– ಸಹೋದ್ಯೋಗಿ­ಗಳ ಆತ್ಮಸ್ಥೈರ್ಯ, ಮಲೇರಿಯಾ ಮತ್ತು ಮಾನ್ಸೂನ್.

ಸದಾಕಾಲ ಹಡಗಿನ­ಲ್ಲಿಯೇ, ಏಕತಾನತೆಯಲ್ಲೇ ಬದುಕ­ಬೇಕಾದ ಜನರಿಗೆ ಇವು ಮುಖ್ಯ. ಆತ್ಮಸ್ಥೈರ್ಯ ಕುಸಿದು ಹೋದರೆ ಯುದ್ಧ ಮಾತ್ರವಲ್ಲ, ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಮಲೇರಿಯಾ ಪಿಡುಗೇನಾದರೂ ಹಬ್ಬಿದರೆ ಸರ್ವನಾಶ. ಮಳೆಗಾಲದಲ್ಲಿ ಬರುವ ಅಬ್ಬರದ ಮಳೆ ಹಡಗಿನಲ್ಲಿ­ರುವವರ ಬದುಕನ್ನೇ ಅಸಹನೀಯವಾಗಿ ಮಾಡುತ್ತದೆ. ಈ ಮೂರು ವಿಷಯ­ಗಳಲ್ಲಿ ಲಾರ್ಡ ಮೌಂಟಬ್ಯಾಟನ್ ಹೆಚ್ಚು ಮಹತ್ವ ನೀಡಿದ್ದು ಸಹೋದ್ಯೋಗಿಗಳ ಆತ್ಮಸ್ಥೈರ್ಯಕ್ಕೆ. ಅವರ ಯುದ್ಧ ನೌಕೆಯಲ್ಲಿ ನೂರಾ ಐವತ್ತೊಂಬತ್ತು ಜನರಿದ್ದರಂತೆ. ಅವರೆಲ್ಲ ಬೇರೆ ಬೇರೆ ಸ್ಥಾನದ ಅಧಿಕಾರಿಗಳು.

ಮೌಂಟಬ್ಯಾಟನ್ ಅಧಿಕಾರ­ವಹಿಸಿ­ಕೊಂಡ ಮರುದಿನವೇ ತನ್ನ ಆಡಳಿತಗಾರನಿಗೆ ಹೇಳಿ ಪ್ರತಿಯೊಬ್ಬ ಕೆಲಸಗಾರನ ಫೋಟೊ ಮತ್ತು ಅವನ ಜೀವನದ, ಪರಿವಾರದವರ ವಿವರ­ಗಳನ್ನು ತರಿಸಿಕೊಂಡ. ನಿತ್ಯ ಕ್ಷೌರ ಮಾಡಿಕೊಳ್ಳುವಾಗ ಯಾವುದೋ ಒಬ್ಬನ ಫೋಟೊ ಮುಂದಿಟ್ಟು ಗಮನಿಸಿ, ನಂತರ ಅವನ ಹಿನ್ನೆಲೆ, ಪರಿವಾರದವರ ವಿಷಯಗಳನ್ನು ಓದಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಪ್ರತಿ ಭಾನುವಾರ ಸೈನಿಕರ ಕವಾಯಿತಿನ ಪರಿವೀಕ್ಷಣೆಯಾದ ಮೇಲೆ ಹತ್ತು ಜನರನ್ನು ಹಡಗಿನ ಮುಖ್ಯಸ್ಥಂಭದ ಹಿಂಭಾಗದಲ್ಲಿದ್ದ ತನ್ನ ಕೊಠಡಿಗೆ ಕರೆಸಿಕೊಳ್ಳುತ್ತಿದ್ದ.

ಅವರು ಒಬ್ಬೊಬ್ಬರಾಗಿ ಬಂದು ಸೆಲ್ಯೂಟ್ ಮಾಡಿದಾಗ ಇವರು ಕೈಚಾಚಿ, ಕುಲುಕಿ, ‘ಹಲೋ, ನಿಮ್ಮ ಹೆಸರು ಜೇಮ್ಸ್ ವೀಜರ್ ಅಲ್ಲವೇ?’ ಎಂದು ಕೇಳುವರು. ಆ ಸೈನಿಕನಿಗೆ ಇದು ಬಲು ಆಶ್ಚರ್ಯ ಮತ್ತು ಸಂತೋಷ. ಕಮಾಂಡರ್ ತನ್ನ ಹೆಸರು ನೆನಪಿನಲ್ಲಿಟ್ಟುಕೊಂಡಿದ್ದಾರಲ್ಲ ಎಂಬ ಸಂತೋಷ. ಮೌಂಟ್‌ಬ್ಯಾಟನ್ ಅಷ್ಟಕ್ಕೇ ನಿಲ್ಲದೇ ಅವನ ಕೆಲವು ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸುವರು, ‘ಜೇಮ್ಸ್, ಈಗ ನಿಮ್ಮ ಅತ್ತೆ ಹೇಗಿದ್ದಾರೆ? ಪಾಪ!

ಅವರ ಆರೋಗ್ಯ ಸರಿ ಇರಲಿಲ್ಲ­ವಲ್ಲವೇ? ಮನೆಯಲ್ಲಿ ಅನಾರೋಗ್ಯದ ಅತ್ತೆ ಮತ್ತು ಇಬ್ಬರು ಮಕ್ಕಳನ್ನು ನಿಭಾಯಿಸುವುದು ನಿಮ್ಮ ಹೆಂಡತಿಗೆ ಬಹಳ ಕಷ್ಟವಾಗಿರಬೇಕು. ನೀವು ಮನೆಗೆ ಫೋನ್ ಮಾಡಿದಾಗ ನಿಮ್ಮ ಹೆಂಡತಿಗೆ ನನ್ನ ನಮಸ್ಕಾರ ತಿಳಿಸಿ’ ಎನ್ನುವರು. ಜೇಮ್ಸನಿಗೆ ಆಕಾಶ ಮುಟ್ಟಿದಷ್ಟು ಸಂತೋಷ. ಕಮಾಂಡರ್ ತನ್ನ ಬಗ್ಗೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ ಮತ್ತು ಪ್ರತಿಯೊಂದರ ಬಗ್ಗೆಯೂ ಎಷ್ಟು ಕಾಳಜಿ ಮಾಡುತ್ತಾರೆ ಎಂಬ ವಿಚಾರದಿಂದ ಅವನಿಗೆ ಕಮಾಂಡರ್‌ನಲ್ಲಿ ಅತ್ಯಂತ ಗೌರವ ಮೂಡುತ್ತಿತ್ತು.

ಆತ ಅವರಿ­ಗೋಸ್ಕರ ಏನನ್ನಾದರೂ ಮಾಡಲು ಸಿದ್ಧನಾಗುತ್ತಿದ್ದ. ಮೌಂಟ್‌ಬ್ಯಾಟನ್ ಹೇಳುತ್ತಿದ್ದರು, ‘ನಾನು ಪರಿಶ್ರಮದಿಂದ ಗಳಿಸಿದ ವೈಯಕ್ತಿಕ ನಿಷ್ಠೆಯಿಂದಾಗಿ ನನ್ನ ಯುದ್ಧನೌಕೆ ಎಂದೂ ಸೋಲು ಕಾಣಲಿಲ್ಲ’. ಯಜಮಾನಿಕೆ, ನಾಯಕತ್ವ ಸುಲಭ­ವಲ್ಲ. ನೀವು ನಿಮ್ಮೊಂದಿಗಿರು­ವವರೊಡನೆ ಎಷ್ಟು ಪ್ರೀತಿ, ವಿಶ್ವಾಸ ತೋರುತ್ತೀರೋ ಅಷ್ಟು ಅವರ ನಿಷ್ಠೆ ನಿಮ್ಮೊಂದಿಗಿರುತ್ತದೆ. ನಿಷ್ಠೆ ಹೆಚ್ಚಾ­ದಷ್ಟೂ, ನಾಯಕತ್ವದ ಮಟ್ಟ ಮೇಲೇರುತ್ತದೆ. ಕೇವಲ ಅಧಿಕಾರದ ದರ್ಬಾರು, ನಾಯಕತ್ವಕ್ಕೆ ಮಾಡಿದ ಅಗೌರವ. ನಾಯಕತ್ವ ಅಧಿಕಾರವಲ್ಲ. ಅದೊಂದು ಅಪೂರ್ವ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.