ADVERTISEMENT

ಸತ್ಯದ ಮತ್ತೊಂದು ಮುಖ

ಡಾ. ಗುರುರಾಜ ಕರಜಗಿ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST

ನನ್ನ ಗೆಳೆಯನೊಬ್ಬ ನನಗೆ ಹೇಳಿದ ಘಟನೆ ನನ್ನ ಮನಸ್ಸನ್ನು ಚೆನ್ನಾಗಿ ಅಲುಗಾಡಿಸಿಬಿಟ್ಟಿತು. ಅದನ್ನು ಅವನ ಮಾತಿನಲ್ಲೇ ಕೇಳೋಣ.
‘ನಾನು ಅಂದು ರಾತ್ರಿ ಪ್ರಯಾಣಕ್ಕಾಗಿ ರೈಲನ್ನೇರಿದೆ. ನನ್ನ ಟಿಕೆಟ್ ಮೊದಲನೆ ದರ್ಜೆಯ ಹವಾನಿಯಂತ್ರಿತ ಬೋಗಿ­ಯಲ್ಲಿ ನಿರ್ಧಾರಿತವಾಗಿತ್ತು. ನನಗೆ ದೊರೆ­ತದ್ದು ಕೇವಲ ಎರಡೇ ಬರ್ತ್‌ಗಳಿದ್ದ ಕೋಣೆ ಹಾಗೂ ನನ್ನದು ಮೇಲಿನ ಬರ್ತ್‌. ನಾನು ಒಳಗೆ ಕಾಲಿಟ್ಟಾಗ ಮದ್ಯದ ವಾಸನೆ ಮುಖಕ್ಕೆ ರಾಚಿತು.

ಕೆಳಗಿನ ಬರ್ತ್‌­ನಲ್ಲಿ ಒಬ್ಬ ಮುದುಕ ಕುಳಿತಿದ್ದ. ಅವನ ಮುದ್ದೆ ಮುದ್ದೆಯಾದ ಬಟ್ಟೆ. ಬ್ಲೇಡು ಕಾಣದ ಮುಖ ನೋಡಿದರೆ ಅವನು ಫಸ್ಟಕ್ಲಾಸಿನಲ್ಲಿ ಹೇಗೆ ಬಂದ ಎನ್ನಿಸಿತು. ಇವನೊಂದಿಗೆ ಹ್ಯಾಗಪ್ಪಾ ಈ ರಾತ್ರಿ ಕಳೆಯುವುದು ಎಂದು ಭಯವಾಯಿತು. ಇಷ್ಟೇ ಸಾಲದೆಂಬಂತೆ ಆತ ಒಂದು ಕಾಗದದ ಪೊಟ್ಟಣದಲ್ಲಿ ಕಟ್ಟಿದ್ದ ಇಡ್ಲಿ­ಯೊಂದನ್ನು ತೆಗೆದು ತಿನ್ನತೊಡಗಿದ. ಆ ಕಾಗದ ಬಹುಶಃ ಚಟ್ನಿಯಲ್ಲಿ ನೆನೆದು ಹೋಗಿತ್ತು. ಆ ಮುದುಕನ ಕೈ ಥರಥರನೇ ಎಷ್ಟು ನಡುಗುತ್ತಿತ್ತೆಂದರೆ ಆತ ಇಡ್ಲಿ­ಯೊಂದಿಗೆ ಕಾಗದವನ್ನೂ ತಿನ್ನುತ್ತಿದ್ದ. ಅದನ್ನು ನೋಡಿ ನನಗೆ ಅಸಹ್ಯವೆನಿಸಿತು. ಬೇಜಾ­ರಾಗಿ ಸರಸರನೇ ಮೇಲಿನ ಬರ್ತ್‌ಗೆ ಸೇರಿಕೊಂಡು ಬಿಟ್ಟೆ. ಇಡೀ ದಿನದ ಕೆಲಸ­ದಿಂದ ದಣಿವಾಗಿದ್ದ ನನಗೆ ತಕ್ಷಣವೇ ನಿದ್ರೆ ಬಂದಿತು.

ಒಂದರ್ಧ ಗಂಟೆ ಕಳೆದಿ­ರ­ಬೇಕು, ಯಾರೋ ಬಾಗಿಲು ಬಡಿಯುತ್ತಿರುವ ಸದ್ದಾಯಿತು. ನಿದ್ರೆ ಭಂಗ­ವಾ­ದದ್ದಕ್ಕೆ ಕೋಪಗೊಂಡು ಕೆಳಗೆ ಬಗ್ಗಿ ನೋಡಿದೆ. ಆ ಮುದುಕ ದೀಪ ಆರಿಸುವ ಗುಂಡಿ­ಯನ್ನು ಒತ್ತುವುದರ ಬದಲು ಸಹಾಯಕನನ್ನು ಕರೆಯುವ ಗುಂಡಿ ಅದು­ಮಿದ್ದ. ಆ ಸಹಾಯಕ ಈಗ ಬಂದು ಬಾಗಿಲು ತಟ್ಟುತ್ತಿದ್ದ. ಅವನಿಗೆ ತಪ್ಪಾಗಿರು­ವು­ದನ್ನು ಹೇಳಿ ಕಳುಹಿಸಿದೆ. ಮತ್ತೆ ಮಲಗಲು ಪ್ರಯತ್ನಿಸಿದೆ. ನಿದ್ರೆ ಹತ್ತಿದ ಒಂದು ತಾಸಿಗೆ ಮತ್ತೆ ಏನೋ ಧಡಬಡ ಸದ್ದಾಯಿತು. ಮತ್ತೇನಪ್ಪಾ ಈ ಬಾರಿ ಎಂದು ಬಗ್ಗಿ ನೋಡಿದೆ.

ಮುದುಕ ಬಾಗಿಲು ತೆಗೆಯಲು ಪ್ರಯತ್ನಿಸುತ್ತಿದ್ದ. ಮೊದಲೇ ಕಂಠ­ಪೂರ್ತಿ ಕುಡಿದಿದ್ದಾನೆ, ನಿಲ್ಲಲು ಆಗದಷ್ಟು ಜೋಲಿ ಹೊಡೆಯುತ್ತಿದ್ದಾನೆ, ಕೈ ಮೇಲೆ ಎತ್ತಲೂ ಆಗುತ್ತಿಲ್ಲ. ಅವನ ಕಷ್ಟ ನೋಡಲಾಗದೇ ಕೆಳಗಿಳಿದು ಬಾಗಿಲು ತೆಗೆದೆ. ಅವನು ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಬಾಗಿಲು ಹಾಕಿ, ಮೇಲೆ ಹತ್ತಿ ಮಲಗಿದೆ.  ಗಾಢವಾದ ನಿದ್ರೆ ಬಂದಿತ್ತು. ತಕ್ಷಣ ಎಚ್ಚರವಾಯಿತು. ಯಾರೋ ಜೋರುಜೋರಾಗಿ ಮಾತನಾಡುತ್ತಿದ್ದಾರೆ. ಆಗ ಗಂಟೆ ಮೂರು ಗಂಟೆ. ಕೆಳಗೆ ನೋಡಿದೆ. ಆ ಮುದುಕನಿಗೆ ನಿದ್ರೆಯೇ ಇಲ್ಲವೆಂದು ತೋರುತ್ತದೆ. ಆದ್ದ­ರಿಂದ ನನ್ನ ನಿದ್ರೆಯನ್ನು ಹಾಳುಮಾಡುತ್ತಿದ್ದಾನೆ. ಆರಾಮವಾಗಿ ಪ್ರವಾಸ­ಮಾಡಲೆಂದು ತೆಗೆದುಕೊಂಡಿದ್ದ ಈ ಫಸ್ಟ್‌ಕ್ಲಾಸ್ ಟಿಕೆಟ್ಟು ದಂಡವಾಯಿತು ಎಂದು­ಕೊಂಡೆ. ಮುದುಕ ತನ್ನ ಮೊಮ್ಮಗ­ನೊಡನೆ ಮಾತನಾ­ಡುತ್ತಿದ್ದಾನೆಂದು ತೋರುತ್ತಿತ್ತು. ಹೇಗೂ ನನ್ನ ನಿದ್ರೆಯ ಕಥೆ ಮುಗಿದಿತ್ತಲ್ಲ. ಕೆಳಗೇ ಬಂದು ಕುಳಿತೆ. ಅವನೊಂದಿಗೆ ಮಾತನಾಡಿದಾಗ ನನಗೆ ಆಘಾತವಾಯಿತು.

ಆತ ಒಂದು ಕಂಪನಿಯ ಮ್ಯಾನೇ­ಜಿಂಗ್ ಡೈರೆಕ್ಟರಾಗಿ ನಿವೃತ್ತರಾದವರು, ಪ್ರಪಂಚ ಸುತ್ತಿದವರು. ಅವರಿಗೆ ಕರುಳಿನ ಕ್ಯಾನ್ಸರ್ ಆಗಿ ಮೂರು ತಿಂಗಳಿನ ಕೆಳಗೆ ಆಪರೇಷನ್ ಆಗಿದೆ. ಅವರ ಹೆಂಡತಿ ಬದುಕಿಲ್ಲ. ನನ್ನ ಮುಖಕ್ಕೆ ರಾಚಿದ್ದು ಮದ್ಯದ ವಾಸನೆಯಲ್ಲ, ಆತ ಸೇವಿಸಲೇಬೇಕಾಗಿದ್ದ ಔಷಧಿಗಳ ವಾಸನೆ. ಇಷ್ಟಾ­ದರೂ ಆತ ಬದುಕುವುದು ಹೆಚ್ಚೆಂದರೆ ಮೂರು ತಿಂಗಳು. ಈ ವಿಷಯ ತಿಳಿದ ಮೇಲೂ ಆತ ಶಾಂತ­ವಾಗಿಯೇ ಇದ್ದಾರೆ.

ಅದನ್ನು ಮಗನಿಗೆ ತಿಳಿಯದಂತೆ ನೋಡಿ­ದ್ದಾರೆ. ಆಪ­ರೇಷನ್ ಆದ ಮೇಲೆ ಕೈಗಳಿಗೆ ಒಂದು ರೀತಿಯ ಪಾರ್ಶ್ವ­ವಾಯು ಬಡಿದಂತಾಗಿ ಎರಡು ಕೈಗಳನ್ನೂ ಭುಜದ ಮೇಲಕ್ಕೆ ಎತ್ತಲಾಗುತ್ತಿಲ್ಲ. ಇವರ ಒಬ್ಬನೇ ಮಗ ಇಂದು ಬೆಳಿಗ್ಗೆ ಮರಳಿ ದುಬೈಗೆ ಹೊರಟಿ­ದ್ದಾನೆ, ತನ್ನ ಮಗ­ನನ್ನು ಕರೆದುಕೊಂಡು. ಇಲ್ಲಿ ಇದ್ದು ಯಾಕೆ ಕೆಲಸ ತಪ್ಪಿಸಿ­ಕೊಳ್ಳುತ್ತೀ ಎಂದು ಅವ­ನನ್ನು ಕಳುಹಿಸಿ­ಬಿಟ್ಟಿದ್ದಾರೆ. ತಮ್ಮ ಮೊಮ್ಮಗನೊಂದಿಗೆ ಅವನೊಂದಿಗೆ ಅವರು ಫೋನ್‌­ನಲ್ಲಿ ಮಾತನಾಡಿದ್ದು.

ಅವರು ಕಣ್ಣೊರೆಸಿ­ಕೊಂಡು ಹೇಳಿದರು, ಮತ್ತೊಮ್ಮೆ ಆ ಮಗುವನ್ನು ಹಾಗೂ ನನ್ನ ಮಗನನ್ನು ನೋಡಲಾರೆ ನಾನು. ಅವರ ಭುಜದ ಮೇಲೆ ಕೈಯಿಟ್ಟು ಸಮಾಧಾನ ಹೇಳಿದೆ. ಈಗ ನನಗವರು ಅಸಹ್ಯ ಮುದುಕ ಎನ್ನಿಸದೇ ಸಾವನ್ನು ಎಷ್ಟು ಧೈರ್ಯದಿಂದ ಏಕಾಂಗಿಯಾಗಿ ಎದುರಿ­ಸುತ್ತಿ­ರುವ ಧೀರ ಎನ್ನಿಸಿತು’. ನನ್ನ ಸ್ನೇಹಿತನಿಗೆ ಅಂದು ರಾತ್ರಿ ರೈಲಿನ ಬೋಗಿಯಲ್ಲಿ ಆಗಿದ್ದ ಮುಜುಗರ ಬೆಳಗಾಗುವುದರಲ್ಲಿ ಅಭಿಮಾನವಾಗಿ ಮಾರ್ಪಟ್ಟಿತ್ತು. ಜೀವ­ನವೇ ಹೀಗೆ.

ಯಾವುದನ್ನು ಸತ್ಯವೆಂದು ಭಾವಿಸಿ ನಡೆಯುತ್ತೇವೋ ಅದು ಸತ್ಯವಾ­ಗಿ­ರ­­ಲಿಕ್ಕಿಲ್ಲ, ಯಾವುದು ಅಸತ್ಯವೆಂದು ಘೋಷಿ­ಸುತ್ತೇವೋ ಅದು ಸತ್ಯವಾಗಿ­ರಲೂ ಸಾಧ್ಯ. ಮನಸ್ಸನ್ನು ಪೂರ್ವ­ಗ್ರಹಕ್ಕೆ ಸಿಲುಕಿಸದೆ ಆದಷ್ಟು ತೆರೆದುಕೊಂಡಿದ್ದರೆ ನಮ್ಮ ತಿಳಿವ­ಳಿಕೆಯನ್ನು ಸರಿಪಡಿಸಿ­ಕೊಳ್ಳಲು ಸಾಧ್ಯವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.