ADVERTISEMENT

ಒಳಾಂಗಣ ತಾರಸಿಯ ಚಿತ್ತಾರ...

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ಒಳಾಂಗಣ ತಾರಸಿಯ ಚಿತ್ತಾರ...
ಒಳಾಂಗಣ ತಾರಸಿಯ ಚಿತ್ತಾರ...   

ಮನೆ ಅಂದರೆ ನೆಮ್ಮದಿಯ ತಾಣ. ಈ ದಿನಗಳಲ್ಲಿ ಮನೆಗಳು ಅಂತಸ್ತು ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ ಆಯಾಮ ಪಡೆದುಕೊಂಡಿರುವುದು ಸುಳ್ಳಲ್ಲ!
ಮನೆಯನ್ನು ಇತರರು ಮೆಚ್ಚಬೇಕೆಂಬ ಉಮೇದಿನಲ್ಲಿ ಮನೆಗಳನ್ನು ಅಲಂಕೃತಗೊಳಿಸಿರುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ.

ಇತ್ತೀಚಿನ ದಿನಗಳಲ್ಲಿ ಮನೆಯ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸವನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುವವರೇ  ಹೆಚ್ಚು. ಮನೆಯ ಪ್ರತಿ ವಸ್ತುವಿನ ಅಂದಕ್ಕೂ ಹೆಚ್ಚು ಗಮನ ಕೊಡುವ ಜೊತೆಗೆ ಒಳತಾರಸಿ ವಿನ್ಯಾಸತೇರು ಜನಪ್ರಿಯವಾಗುತ್ತಿದೆ. ಮನೆಯ ಒಳಾಂಗಣದಲ್ಲಿನ ತಾರಸಿ ಅಂದವಾಗಿ ಕಂಗೊಳಿಸುವಂತೆ ಮಾಡಲು ಹೆಚ್ಚಿನ ಆದ್ಯತೆ ನೀಡುತ್ತಿರುವುದು ವಿಶೇಷ.

ಮೊದಲೆಲ್ಲ ಒಳಾಂಗಣ ತಾರಸಿಗೆ ಹೆಚ್ಚಿನ ಗಮನ ನೀಡುತ್ತಿರಲಿಲ್ಲ! ಮನೆಗೆ ಬಂದ ಅತಿಥಿಗಳು ಸೋಫಾ ಅಥವಾ ಕುರ್ಚಿಯ ಮೇಲೆ ಕುಳಿತ ಕೂಡಲೆ ಮನೆಯ ಗೋಡೆಗಳನ್ನು ಒಮ್ಮೆ ನೋಡಿ, ಬಳಿಕ ಕತ್ತೆತ್ತಿ ತಾರಸಿಯತ್ತ ದೃಷ್ಟಿ ಹರಿಸುವುದು ಸಹಜ. ಹಾಗಾಗಿ ತಾರಸಿಯನ್ನು ಚಂದಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಆಗಿದೆ ಎನ್ನುತ್ತಾರೆ ವಾಸ್ತುಶಿಲ್ಪಿಗಳು.

ಸಾಮಾನ್ಯವಾಗಿ ಒಳತಾರಸಿಯನ್ನು ಸಿಮೆಂಟ್, ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಹಾಗೂ ಪ್ಲೈವುಡ್ ಬಳಸಿ ಆಕರ್ಷಕವಾಗಿ ವಿನ್ಯಾಸ ಮಾಡಲಾಗುತ್ತದೆ. ಹಳೆಯ ಮನೆಗಳಲ್ಲಿ ಸಿಮೆಂಟಿನಲ್ಲೇ ವಿನ್ಯಾಸ ಮಾಡಲಾಗುತ್ತಿತ್ತು. ತಾರಸಿಗೆ ಹೊಂದಿಕೊಂಡಂತೆ ನಾಲ್ಕು ಗೋಡೆಗಳ ಹಂಚಿನಲ್ಲಿ ಹೂ ಬಳ್ಳಿ ಹಾಗೂ ತಾರಸಿಯ ಮಧ್ಯದಲ್ಲಿ ಒಂದು ಚಿತ್ತಾರ ಬಿಡಿಸಲಾಗುತ್ತಿತ್ತು.

ಸಿಮೆಂಟಿನಲ್ಲಿ ಸಣ್ಣ ಸಣ್ಣ ಎಳೆ ಅಥವಾ ಸೂಕ್ಷ್ಮ ಕುಸರಿ ಕಲೆಯನ್ನು ಆನಾವರಣಗೊಳಿಸಲು ಕಷ್ಟ ಸಾಧ್ಯವಾದ್ದರಿಂದ ಇತ್ತೀಚಿನ ದಿನಗಳಲ್ಲಿ ಸಿಮೆಂಟಿನ ತಾರಸಿ ವಿನ್ಯಾಸಕ್ಕೆ ಅಷ್ಟೊಂದು ಮಾನ್ಯತೆ ನೀಡಲಾಗುತ್ತಿಲ್ಲ. ಪಿಒಪಿ ಮತ್ತು ಪ್ಲೈವುಡ್ ಬಳಕೆಗೆ ಬಂದ ನಂತರವಂತೂ ಸಿಮೆಂಟಿನ ಬಳಕೆಯ ವಿನ್ಯಾಸದತ್ತ ಗ್ರಾಹಕರು ಚಿತ್ತ ಹರಿಸುತ್ತಿಲ್ಲ ಎನ್ನುತ್ತಾರೆ ಬಿಲ್ಡರ್‌ಗಳು.

ಪ್ರಸ್ತುತ ದಿನಗಳಲ್ಲಿ ನಿರ್ಮಾಣವಾಗುತ್ತಿರುವ ಶೇ. 80 ರಷ್ಟು ಮನೆಗಳ ತಾರಸಿಯ ವಿನ್ಯಾಸ ಪಿಒಪಿ ಮತ್ತು ಪ್ಲೈವುಡ್‌ನಿಂದ ಆಗಿರುತ್ತದೆ. ಇವುಗಳ ಮೂಲಕ ಕುಸುರಿ ಕಲೆಯನ್ನು ಆಕರ್ಷಕವಾಗಿ ವಿನ್ಯಾಸ ಮಾಡುಬಹುದು ಎನ್ನುತ್ತಾರೆ ಕಲಾವಿದರು.

ಗ್ರಾಹಕರು ಅಪೇಕ್ಷಿಸುವ ಗುಣಮಟ್ಟದಲ್ಲಿ ವಿನ್ಯಾಸ ಮಾಡಬಹುದು. ತರಹೇವಾರಿ ಬಳ್ಳಿಗಳು, ಹೂಗಳು ಹಾಗೂ ಲೈಟಿಂಗ್‌ಗೆ ಅನುಕೂಲವಾಗುವ ರೀತಿಯಲ್ಲಿ ಪಿಒಪಿ ಮತ್ತು ಪ್ಲೈವುಡ್ ಬಳಸಿ ವಿನ್ಯಾಸ ಮಾಡಬಹುದು. ಯಾವುದೇ ತೆರನಾದ ಬಣ್ಣವನ್ನು ಪಿಒಪಿ ಹಾಗೂ ಪ್ಲೈವುಡ್‌ಗೆ ಲೇಪಿಸಬಹದು.

ಒಟ್ಟಿನಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಮನೆಯ ತಾರಸಿಯನ್ನು ಚೆಂದವಾಗಿ ವಿನ್ಯಾಸ ಮಾಡಬಹುದು. ಮನೆ ಮಾಲೀಕರು ಪಿಒಪಿ ಮತ್ತು ಪ್ಲೈವುಡ್‌ಗೆ ನೀರು ಮತ್ತು ಬೆಂಕಿ ತಾಗದಂತೆ ನೋಡಿಕೊಂಡರೆ ಇವುಗಳು ಕೂಡ ದೀರ್ಘಕಾಲ ಬಾಳಿಕೆ ಬರುತ್ತವೆ.
 

ಕಡಿಮೆ ಖರ್ಚು, ಆಕರ್ಷಣೆ ಹೆಚ್ಚು…
ಸುಲಭವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತಹ ಪಿಒಪಿ ಮತ್ತು ಪ್ಲೈವುಡ್ ಬಳಸಿ ಮನೆಯ ಒಳಾಂಗಣದ ತಾರಸಿ ಮಾತ್ರವಲ್ಲದೆ ಗೋಡೆಗಳನ್ನು ಕೂಡ ಆಕರ್ಷಕ ರೀತಿಯಲ್ಲಿ ವಿನ್ಯಾಸ ಮಾಡಬಹುದು. ಪಿಒಪಿ ಮಿಶ್ರಣದಲ್ಲಿ ಲೋಹ ಮತ್ತು ಗಾಜನ್ನು ಬಳಸದಂತೆ ಎಚ್ಚರ ವಹಿಸಬೇಕು.

ಯಾಕೆಂದರೆ ಪಿಒಪಿಗೆ ನೀರು ಬಿದ್ದರೆ ಅದು ಸುಲಭವಾಗಿ ಕರಗುವುದರಿಂದ ಗಾಜು ಮತ್ತು ಭಾರವಾದ ಲೋಹಗಳು ಮನೆಯವರ ಮೇಲೆ ಬೀಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹತ್ತಿ, ಪ್ಲಾಸ್ಟಿಕ್ ಬಳಸಿ ವಿನ್ಯಾಸ ಮಾಡಿಕೊಳ್ಳಲು ಯಾವುದೇ ಅಡ್ಡಿ ಇಲ್ಲ.

ವಾಸ್ತುಶಿಲ್ಪಿಗಳು ಮತ್ತು ಕಲಾವಿದರ ಸಹಾಯದಿಂದ ವಿವಿಧ ಬಣ್ಣಗಳನ್ನು ಬಳಸಿಕೊಂಡು ತಾರಸಿಯನ್ನು ಅಂದವಾಗಿ ವಿನ್ಯಾಸ ಮಾಡಬಹುದು. ಇವುಗಳ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
-ಚಂದ್ರಶೇಖರ್,
ವಾಸ್ತುಶಿಲ್ಪಿ, ಡಾ.ರಾಜ್‌ಕುಮಾರ್ ರಸ್ತೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.