ADVERTISEMENT

ಕಟ್ಟಡ ಸಾಮಗ್ರಿ ಬೆಲೆ ಗರಿಷ್ಠ ಮನೆ ನಿರ್ಮಾಣ ಬಲು ಕಷ್ಟ

ಕೆ.ಎಸ್.ಗಿರೀಶ್
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ಎಲ್ಲ ಬಗೆಯ ವಸ್ತುಗಳ ಧಾರಣೆಯೂ ಗಗನಕ್ಕೇರಿವೆ...   ದರ ಏರಿಕೆ ಎಂಬುದು ಈಗಂಲೂ ರಾಕೆಟ್‌್ ವೇಗದಲ್ಲಿದೆ... ಬೆಲೆಗಳಷ್ಟೇ ಅಲ್ಲ, ಅದರ ಬಿಸಿಯಲ್ಲೂ ಏರಿಕೆ ಆಗುತ್ತಿದೆ... 

ಇಂತಹ ಪದ, ವಾಕ್ಯಗಳು ಎಷ್ಟರಮಟ್ಟಿಗೆ ಸವಕಲಾಗಿವೆ ಎಂದರೆ ‘ಬೆಲೆ ಎಂದರೆ ಅದು ಏರುವಂತಹುದೇ ಆಗಿದೆ. ಅದರಲ್ಲೇನೂ ವಿಶೇಷವಿಲ್ಲ’ ಎಂದೇ ಎಲ್ಲರೂ ಭಾವಿಸುವಂತಾಗಿದೆ.

ಹಿಂದಿನ ಕಾಲದಲ್ಲೂ ಹೀಗೇ ಇದ್ದಿತೇನೋ!  ಕೆ.ಜಿ. ಅಕ್ಕಿ ‘ಎಂಟಾಣೆ’ ಇದ್ದಾಗ ಅದು ಒಂದಾಣೆ ಏರಿದ್ದರೂ ಜನಮಾನಸಕ್ಕೆ ಇದೇ ರೀತಿ ಅನ್ನಿಸುತ್ತಿತ್ತೇನೋ...

ಮುದ್ದಣನ ‘ಶ್ರೀ ರಾಮಾಶ್ವಮೇಧ’ದಲ್ಲಿ ಮನೋರಮೆ ಹೇಳುವ ಹಾಗೆ ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು’ ಎಂಬ ಮಾತಿನಂತೆ ಬಡವರ ಪಾಲಿಗೆ ಬೆಲೆ ಏರಿಕೆ  ಎಂಬುದು ಗೋಚರಿಸುತ್ತಿದೆ. ಮಧ್ಯಮ ವರ್ಗದವರೂ ಸಹ ಪ್ರತಿ ಬಾರಿ ಪ್ರತಿ ವಸ್ತುವಿನ ಬೆಲೆ ಏರುತ್ತಿದ್ದಂತೆಯೇ ಸಂಕಟ ಪಡುತ್ತಲೇ ಇರುತ್ತಾರೆ.

ವೃತ್ತಿ ಬದುಕಿನ ಉದ್ದಕ್ಕೂ ಕಷ್ಟುಪಟ್ಟು ಉಳಿಸಿದ ಹಣದಲ್ಲಿಯೇ ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳೋಣ ಎಂದು ಕನಸು ಕಾಣುವವರ ಪಾಡಂತೂ ಕಳೆದ ಕೆಲವು ವರ್ಷಗಳಿಂದ ಹೇಳತೀರದಾಗಿದೆ.

ಮನೆ ಕಟ್ಟುವುದಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳ ಬೆಲೆಗಳೂ ಇತ್ತೀಚೆಗೆ (ಒಂದು ತಿಂಗಳಿಂದ) ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿವೆ. ಸಿಮೆಂಟ್, ಕಬ್ಬಿಣ, ಇಟ್ಟಿಗೆ, ಮರಳು, ಸೈಜುಗಲ್ಲು... ಹೀಗೆ ಬಹುತೇಕ ಕಟ್ಟಡ ನಿರ್ಮಾಣದ ಎಲ್ಲ ಪರಿಕರಗಳೂ ತುಟ್ಟಿಯಾಗಿವೆ. ಈ ಪರಿಯ ಬೆಲೆ ಏರಿಕೆಗೆ ಜನಸಾಮಾನ್ಯರಷ್ಟೇ ಅಲ್ಲ ಕಟ್ಟಡ ನಿರ್ಮಾಣವನ್ನೇ ವೃತ್ತಿಯಾಗಿಸಿಕೊಂಡಿರುವ ಬಿಲ್ಡರ್‌ಗಳೂ ತತ್ತರಿಸಿದ್ದಾರೆ.

ಮೈಸೂರಿನಲ್ಲಿ ಒಂದು ತಿಂಗಳ ಹಿಂದೆ ಒಂದು ಕೆ.ಜಿ ಕಬ್ಬಿಣಕ್ಕೆ ₨42 ನೀಡಬೇಕಿತ್ತು. ಈಗ ಅದು ₨49ಕ್ಕೆ ಮುಟ್ಟಿದೆ (ಸಾಮಾನ್ಯವಾಗಿ ಕಬ್ಬಿಣವನ್ನು ಟನ್‌ ಲೆಕ್ಕದಲ್ಲಿ ಅಳೆಯಲಾಗುತ್ತದೆ. ಅಂದರೆ, ಒಂದು ಟನ್‌ ಕಬ್ಬಿಣದ ಈಗಿನ ಬೆಲೆ ₨49,000). ಒಂದು ಮೂಟೆ ಸಿಮೆಂಟ್‌ನ ಬೆಲೆ ಆರು ತಿಂಗಳ ಹಿಂದೆ ₨300ರಷ್ಟಿತ್ತು. ಆದರೆ, ಈಗ ಗ್ರೇಡ್‌ ಮತ್ತು ಬ್ರಾಂಡ್‌ ಆಧರಿಸಿ ₨350ರಿಂದ ₨390ರ ಪ್ರಮಾಣದಲ್ಲಿದೆ.  ಈ ಎರಡೂ ಸಾಮಗ್ರಿಗಳು ಮನೆ ಕಟ್ಟುವುದಕ್ಕೆ ಅತ್ಯಗತ್ಯವಾಗಿ ಬೇಕಾದಂತಹವೇ ಆಗಿವೆ.
 

ಕಟ್ಟಡ ಕಾಮಗಾರಿಗೆ ಬೇಕಾದ ಎಲ್ಲಾ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇವೆ. ಆದರೆ, ಏರಿಕೆಗೆ ನಿಖರವಾದ ಕಾರಣವನ್ನು ಯಾರೂ ಕೊಡುತ್ತಿಲ್ಲ. ಸಿಮೆಂಟ್ ಕಂಪೆನಿಗಳು ಒಂದೇ ಸಲಕ್ಕೆ ಬೆಲೆಯನ್ನು ಹೆಚ್ಚಿಸುತ್ತಿವೆ. ಬೆಲೆ ಏರಿಕೆಗೆ ಕಾರಣವಾಗಿರುವ ಅಂಶಗಳನ್ನು ಕಂಪೆನಿಗಳು ಪ್ರಕಟಿಸಬೇಕು’
– ಎಂ.ಸಿ.ಮಲ್ಲಿಕಾರ್ಜುನ, ಅಧ್ಯಕ್ಷ, ಬಿಎಐ ಮೈಸೂರು ಶಾಖೆ

ಇದರೊಂದಿಗೆ ಮರಳಿನ ಕೊರತೆಯೂ ಎದುರಾಗಿದೆ. ಇದೇ ನೆಪವಾಗಿ ಮರಳಿಗೆ ಚಿನ್ನದ ಬೆಲೆ ಬಂದಾಗಿದೆ. ಈ ಹಿಂದೆ ₨14 ಸಾವಿರದಷ್ಟಿದ್ದ ಒಂದು ಲೋಡ್ ಮರಳು ಈ ₨22 ಸಾವಿರದವರೆಗೂ ಏರಿಕೆಯಾಗಿದೆ. ಮನೆ ನಿರ್ಮಾಣದ ಕೆಲಸ ಮುಗಿಸಬೇಕೆಂದರೆ ಅನಿವಾರ್ಯವಾಗಿ ಕಾಳಸಂತೆಯಲ್ಲೇ ಹೆಚ್ಚಿನ ಹಣ ಕೊಟ್ಟು ಮರಳನ್ನು ಖರೀದಿಸಬೇಕಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕಂಟ್ರಾಕ್ಟರ್ ಒಬ್ಬರು ಹೇಳುತ್ತಾರೆ.

ಒಂದು ತಿಂಗಳ ಹಿಂದೆ 6 ಇಂಚು ಅಗಲ, 8 ಇಂಚು ಎತ್ತರ ಹಾಗೂ 18 ಇಂಚು ಉದ್ದದ ಸಿಮೆಂಟ್ ಇಟ್ಟಿಗೆ ₨25 ರಿಂದ ₨26ಕ್ಕೆ ಸಿಗುತ್ತಿತ್ತು. ಆದರೆ ಈಗ ₨33ರಿಂದ ₨34ರ ಮಟ್ಟದಲ್ಲಿದೆ.

ಅಡಿಪಾಯಕ್ಕೆ ಬೇಕಾದ ಸೈಜುಗಲ್ಲು ಕೆಲ ದಿನಗಳ ಹಿಂದೆ ಕೇವಲ ₨6ರಿಂದ ₨7ರ ಆಸುಪಾಸಿನಲ್ಲಿತ್ತು. ಈಗ ₨9 ಕೆಲವೆಡೆ ₨10ರಂತೆ ಸರಬರಾಜಾಗುತ್ತಿದೆ.

ಹೀಗೆ, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ ಊಹೆಗೂ ನಿಲುಕದ ರೀತಿಯಲ್ಲಿದೆ. ಸ್ವಂತಕ್ಕೊಂದು ಪುಟ್ಟ ಮನೆ ನಿರ್ಮಿಸಿಕೊಳ್ಳೋಣ ಎಂದು ಆಶಿಸುವವರಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿದೆ.

‘ಕಳೆದ ವರ್ಷ ಸೋರುತ್ತಿದ್ದ ಪುಟ್ಟ ಮನೆಯನ್ನು ಕೆಡವಿ ಹೊಸದಾಗಿ ನಿರ್ಮಿಸಲು ಆರಂಭಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಕಬ್ಬಿಣದ ಬೆಲೆ ನೋಡಿ ತಾರಸಿ ಹಾಕಿಸುವ ಯೋಚನೆ ಕೈಬಿಟ್ಟೆ. ಕೊನೆಗೆ ಛಾವಣಿಗೆ ಕಲ್ನಾರ್ ಶೀಟ್ ಹಾಕಿಸುವಂತಾಯಿತು. ನೆಲಕ್ಕೆ ಟೈಲ್ಸ್ ಹಾಕಿಸಲಾಗದೆ ಕೆಲಸ ಬಾಕಿ ಉಳಿದಿದೆ. ಸಿಮೆಂಟ್ ಬೆಲೆ ಸ್ವಲ್ಪ ಇಳಿದರೆ ಆಗ ಟೈಲ್ಸ್‌ ಹಾಕಿಸಬಹುದೇನೋ?
– ನಾಗೇಶ, ಕಾಡಹಳ್ಳಿ


‘ಬಿಲ್ಡರ್‌ಗಳು, ರಿಯಲ್ ಎಸ್ಟೇಟ್‌ ಹೂಡಿಕೆದಾರರಿಗೆ ಇದರ ಬಿಸಿ ಅಷ್ಟೇನೂ ತಟ್ಟಿದಂತಿಲ್ಲ. ಸರ್ಕಾರದ ಕಾಮಗಾರಿ ಗುತ್ತಿಗೆ ಪಡೆದಿರುವವರಿಗೂ ಸಹ ಇದು ಅಷ್ಟೇನೂ ಗಂಭೀರ ವಿಷಯ ಎನಿಸಿಲ್ಲ. ಬಿಲ್ಡರ್‌ಗಳಾದರೆ ಅವರು ಕಟ್ಟಿದ ಮನೆಯ ಬೆಲೆಯನ್ನೂ ಅಷ್ಟೇ ಪ್ರಮಾಣದಲ್ಲಿ ಏರಿಕೆ ಮಾಡಿ ಮಾರಾಟ ಮಾಡುತ್ತಾರೆ. ಹಾಗಾಗಿ ಅವರು ಖರ್ಚು ಮಾಡಿದ್ದ ಹಣ ವಾಪಸ್ ಬಂದೇ ಬರುತ್ತದೆ. ಆದರೆ, ಬ್ಯಾಂಕಿನಿಂದ ಮನೆ ಕಟ್ಟುವುದಕ್ಕೆ ಸಾಲ ಪಡೆದ ಗ್ರಾಹಕರ ಕಥೆಯೇನು?’ ಎಂಬುದು ಮೈಸೂರಿನ ಆಲನಹಳ್ಳಿ ಬಳಿ ಮನೆ ಕಟ್ಟಿಸುತ್ತಿರುವ ಸುಂದರ್ ಅವರ ಪ್ರಶ್ನೆ.

ನಿಜಕ್ಕೂ ಜನಸಾಮಾನ್ಯರ ಮೇಲೆ ಇದರ ಪರಿಣಾಮ ನೇರವಾಗಿ ಮಾತ್ರವಲ್ಲ ಪರೋಕ್ಷವಾಗಿಯೂ ಆಗುತ್ತಿದೆ. ಕಟ್ಟಿದ ಮನೆಗಳ ಬೆಲೆಗಳು ಸಹಜವಾಗಿ ಏರಿಕೆಯಾಗಿ ನಿವೃತ್ತಿಯ ನಂತರ ನಮ್ಮದೇ ಸ್ವಂತ ಮನೆ ಖರೀದಿ ಮಾಡಬೇಕು ಎಂಬ ದಶಕಗಳಷ್ಟು ಹಳೆಯ ಕನಸನ್ನು ಸಾಕಾರಗೊಳಿಸಲಾಗದೆ ಪರಿತಪಿಸುವಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.