ADVERTISEMENT

ಮನೆ ಕಟ್ಟುವ ಮೊದಲೇ ಒಳಗೆಲ್ಲಾ ಓಡಾಡಿ ಬನ್ನಿ!

ಮಂಜುನಾಥ ರಾಠೋಡ
Published 3 ಆಗಸ್ಟ್ 2017, 19:30 IST
Last Updated 3 ಆಗಸ್ಟ್ 2017, 19:30 IST
ಮನೆ ಕಟ್ಟುವ ಮೊದಲೇ ಒಳಗೆಲ್ಲಾ ಓಡಾಡಿ ಬನ್ನಿ!
ಮನೆ ಕಟ್ಟುವ ಮೊದಲೇ ಒಳಗೆಲ್ಲಾ ಓಡಾಡಿ ಬನ್ನಿ!   

ಸದಾ ಹೊಸತನಕ್ಕೆ ತೆರೆದುಕೊಳ್ಳುವ, ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಉದ್ಯಮಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕೂಡ ಒಂದು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಅವರ ನಂಬಿಕೆ ಗಳಿಸಲು, ಗ್ರಾಹಕರ ಮೇಲೆ ಪ್ರಭಾವ ಬೀರಲು ತಂತ್ರಜ್ಞಾನಗಳನ್ನು ಶಕ್ತವಾಗಿ ಬಳಸುತ್ತಿದೆ ಈ ಕ್ಷೇತ್ರ.

ಈಗಾಗಲೇ ಮನೆ ಕಟ್ಟಲು ನವೀನ ತಂತ್ರಜ್ಞಾನಗಳ ಬಳಕೆ, ಯಂತ್ರಗಳ ಬಳಕೆ, ಸ್ಮಾರ್ಟ್‌ ಹೋಂಗಳ ನಿರ್ಮಾಣ ಮಾಡಿರುವ ಈ ಕ್ಷೇತ್ರ, ಗ್ರಾಹಕ ಸ್ನೇಹಿಯಾಗಲೂ ಕೂಡ ತಂತ್ರಜ್ಞಾನವನ್ನು ಅವಲಂಬಿಸಿದೆ. ಅವುಗಳಲ್ಲಿ ಹೊಸದು ‘ವರ್ಚುವಲ್ ರಿಯಾಲಿಟಿ’ ತಂತ್ರಜ್ಞಾನ (ವಿಆರ್‌). 

ಖಾಲಿ ಹಾಳೆಯ ಮೇಲೆ ಗೀಟುಗಳನ್ನು ಗೀಚಿ ಮಾಡುತ್ತಿದ್ದ ಮನೆಯ ನಕ್ಷೆ ಗ್ರಾಹಕರು ಅರ್ಥ ಮಾಡಿಕೊಳ್ಳಲು ಕಬ್ಬಿಣದ ಕಡಲೆಯಾಗಿರುತ್ತಿತ್ತು. ವಾಸ್ತುಶಿಲ್ಪಿಗಳನ್ನು ಬಿಟ್ಟರೆ ಬೇರೆಯವರು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ನಂತರದಲ್ಲಿ ಬಂದ ತ್ರೀಡಿ ತಂತ್ರಜ್ಞಾನ ಬಹು ಮಟ್ಟಿಗೆ ಉಪಯುಕ್ತವಾಗಿತ್ತು. ಕಂಪ್ಯೂಟರ್‌ನಲ್ಲಿ ನಿರ್ದಿಷ್ಟ ತಂತ್ರಜ್ಞಾನ ಬಳಸಿ ಮೂರು ಆಯಾಮದ ನಕ್ಷೆ ಬಿಡಿಸಿ ಇಡೀ ಮನೆ ನಿರ್ಮಾಣಗೊಂಡ ನಂತರ ಹೇಗೆ ಕಾಣುತ್ತದೆ ಎಂಬುದನ್ನು ಮೊದಲೇ ಕಂಪ್ಯೂಟರ್‌ನಲ್ಲಿ ‘3ಡಿ’ ರೂಪದಲ್ಲಿಯೇ ಕಂಡುಕೊಳ್ಳಬಹುದಾಗಿತ್ತು.

ADVERTISEMENT

ಈಗ 3ಡಿ ತಂತ್ರಜ್ಞಾನಕ್ಕಿಂತಲೂ ಪರಿಣಾಮಕಾರಿಯಾಗಿರುವ ವರ್ಚುವಲ್ ತಂತ್ರಜ್ಞಾನ ಕಟ್ಟಡ ನಿರ್ಮಾಣ ಸಂಸ್ಥೆಗಳು ಬಳಸುತ್ತಿವೆ. ಇದರಿಂದ ಮನೆ ನಿರ್ಮಾಣಕ್ಕೂ ಮೊದಲೇ ಕನಸಿನ ಮನೆಯ ಕಲ್ಪನೆಯಲ್ಲಿ ಒಂದು ಸುತ್ತು ಸುತ್ತಿ ಬರುವ ಅನುಭವ ಪಡೆಯಬಹುದು. ಮನೆ ಪೂರ್ಣಗೊಂಡ ಬಳಿಕ ಹೇಗೆ ಕಾಣುತ್ತದೆ ಎಂಬುದನ್ನು ಮುಂಚೆಯೇ ನೋಡಿ ತಿಳಿದುಕೊಳ್ಳಬಹುದು. ಇಷ್ಟವಾಗದಿದ್ದಲ್ಲಿ ಮನೆ ನಿರ್ಮಾಣ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು.

ಕಟ್ಟಲಿರುವ ಮನೆಗಳು ಮಾತ್ರವಲ್ಲ ಈಗಾಗಲೇ ಕಟ್ಟಿರುವ ಮನೆಗಳನ್ನು 360 ಡಿಗ್ರಿ ವಿಡಿಯೊ ಮಾಡಿ ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಮನೆಯ ಸಂಪೂರ್ಣ ದರ್ಶನ ಮಾಡಿಸುತ್ತಾರೆ ಬಿಲ್ಡರ್‌ಗಳು. ಇದು ಸಮಯವನ್ನು ಉಳಿಸುತ್ತದೆ ಮತ್ತು ಗ್ರಾಹಕ ಮತ್ತು ಮಾರಾಟಗಾರರ ನಡುವಿನ ಗೊಂದಲವನ್ನು ನಿವಾರಿಸುತ್ತದೆ.

ವರ್ಚುವಲ್ ರಿಯಾಲಿಟಿ ತಂತ್ರಜ್ಞಾನ ರಿಯಲ್ ಎಸ್ಟೇಟ್‌ನಲ್ಲಿ ಗ್ರಾಹಕ ಕಟ್ಟಡ ನಿರ್ಮಾಣ ಸಂಸ್ಥೆಗಳ ನಡುವಿನ ಸಂವಹನ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ. ಇಲ್ಲಿಯವರೆಗಿನ ಸಾಮಾನ್ಯ ಸಮಸ್ಯೆಯಾಗಿದ್ದ ‘ನೀವು ತೋರಿಸಿದ ನಕ್ಷೆಯಂತೆ ಮನೆ ಇಲ್ಲ’ ಎಂಬ ಗ್ರಾಹಕರ ಸಾಮಾನ್ಯ ದೂರನ್ನು ಈ ವರ್ಚುವಲ್ ರಿಯಾಲಿಟಿ ದೂರ ಮಾಡುತ್ತಿದೆ. ಏಕೆಂದರೆ ಗ್ರಾಹಕರು ತಮ್ಮ ಮನೆಯನ್ನು ಮುಂಚೆಯೇ ನೋಡಿರುತ್ತಾರೆ.

ಈ ತಂತ್ರಜ್ಞಾನ ಹಲವು ಅನುಕೂಲಗಳನ್ನು ಹೊಂದಿದೆ. ಇದರಿಂದ ಕಟ್ಟಲಿರುವ ಮನೆಯ ಸಂಪೂರ್ಣ ಮಾಹಿತಿ ಮೊದಲೇ ಸಿಗುತ್ತದೆ. ಖಚಿತ ನಿರ್ಧಾರ, ಸೂಕ್ತ ನಿಲುವು ತಳೆಯಬಹುದು. ಬಣ್ಣಗಳು ಹಾಗೂ ಒಳಾಂಗಣ ವಿನ್ಯಾಸದ ಚಿತ್ರಣ ನಮ್ಮ ಕಣ್ಣ ಮುಂದೆ ಸುಳಿಯುತ್ತದೆ. ಬೆಳಕಿನ ವಿನ್ಯಾಸ, ಜಾಗದ ಸಮರ್ಪಕ ಬಳಕೆ ಇದರಿಂದ ಸಾಧ್ಯ. ಕ್ರಮಬದ್ಧ, ಯೋಜನಾಬದ್ಧ ಹಾಗೂ ಮನೆ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡವರು ಮೋಸ ಮಾಡುವ ಶಂಕೆ ಇದ್ದರೆ ಅದನ್ನು ಮೊದಲೇ ತಡೆಯಲು ಈ ವಿಧಾನ ಪ್ರಯೋಜನಕಾರಿ. ಮನೆಯ ವಿನ್ಯಾಸದ ಹಂತದಲ್ಲಿಯೇ ವಿದ್ಯುತ್‌ ಸಂಪರ್ಕ ಮತ್ತು ವಿನ್ಯಾಸ, ಒಳಾಂಗಣ ವಿನ್ಯಾಸ, ಬಣ್ಣ, ಬೆಳಕು ಎಲ್ಲವನ್ನೂ ನಿರ್ಧರಿಸಬಹುದು ಮತ್ತು ಹೋಲಿಕೆ ಮಾಡಿ ನೋಡಬಹುದು.

‘ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದಿದ್ದೇವೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದೇವೆ. ಗ್ರಾಹಕ ರಿಗೆ ತೃಪ್ತಿ ನೀಡುವುದು ರಿಯಲ್ ಎಸ್ಟೇಟ್ ಉದ್ಯಮ ಎದುರಿಸುತ್ತಿರುವ ದೊಡ್ಡ ಸವಾಲು, ಈ ಹೊಸ ತಂತ್ರಜ್ಞಾನ ಈ ನಿಟ್ಟಿನಲ್ಲಿ ಒಂದು ಉತ್ತಮ ಹೆಜ್ಜೆ’ ಎನ್ನುತ್ತಾರೆ ವಿ2 ಹೋಲ್ಡಿಂಗ್ ಹೌಸಿಂಗ್ ಡೆವೆಲಪ್‌ಮೆಂಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಲ್.ವೆಂಕಟರಾಮ ರೆಡ್ಡಿ.

ಹೊಸ ತಂತ್ರಜ್ಞಾನಗಳ ಬಗ್ಗೆ ಆಶಾದಾಯಕ ನಿಲುವು ಹೊಂದಿರುವ ವೆಂಟಕರಾಮ ರೆಡ್ಡಿ ಅವರು, ತಂತ್ರಜ್ಞಾನ ಆಧಾರಿತ ಪ್ರಾಪರ್ಟಿ ಡಾಕ್ಯುಮೆಂಟೇಶನ್‌ (ಇ–ಪ್ರಾಪರ್ಟಿ) ಜಾರಿಯಾದಲ್ಲಿ ಗ್ರಾಹಕರು ಮತ್ತು ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ.

*


ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ರಿಯಲ್ ಎಸ್ಟೇಟ್ ಉದ್ಯಮ ಹೆಣಗಾಡುತ್ತಿದೆ. ಸರಿಯಾದ ಸಂವಹನ ಸಾಧ್ಯವಾಗದಿದ್ದರೆ ನಂಬಿಕೆ ಉಳಿಯುವುದಿಲ್ಲ. ತಂತ್ರಜ್ಞಾನಗಳು ಗ್ರಾಹಕರೊಂದಿಗಿನ ಸಂವಹನವನ್ನು ಸರಳ ಮಾಡಿ ವಿಶ್ವಾಸ ಹೆಚ್ಚಲು ನೆರವಾಗುತ್ತಿದೆ.
– ಪಿ.ಎಲ್.ವೆಂಕಟರಾಮ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕರು, ವಿ2ಹೋಲ್ಡಿಂಡ್‌ ಹೌಸಿಂಹ್‌ ಡೆವೆಲಪ್‌ಮೆಂಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.