ADVERTISEMENT

ಮೂರು ಕಾಲಿನ ಕಪ್ಪೆ ಮೋಡಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಮೂರು ಕಾಲಿನ ಕಪ್ಪೆ ಮೋಡಿ
ಮೂರು ಕಾಲಿನ ಕಪ್ಪೆ ಮೋಡಿ   
ಮನೆಯಲ್ಲಿ ಮೂರು ಕಾಲಿನ ಹಿತ್ತಾಳೆಯ ಕಪ್ಪೆಯನ್ನು ಇಟ್ಟುಕೊಳ್ಳುವುದು ವಾಸ್ತುಪ್ರಕಾರ ಬಹಳ ಶ್ರೇಷ್ಠ ಎನ್ನುವ ನಂಬಿಕೆ ಈಗೀಗ ಭಾರತೀಯ ಮನಸುಗಳಲ್ಲೂ ನೆಲೆಯೂರಿದೆ.
 
ಫೆಂಗ್ ಶುಯಿ ವಾಸ್ತು ವಿಜ್ಞಾನದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಮೂರು ಕಾಲಿನ ಕಪ್ಪೆ ಈಗ ಭಾರತೀಯ ಮನೆಗಳಲ್ಲಿಯೂ ಸ್ಥಾನ ಪಡೆಯುತ್ತಿವೆ. ವೃತ್ತಿಯಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ, ಆಯಸ್ಸು– ಆರೋಗ್ಯ... ಧನಿಕರಾಗುವ ಜೊತೆಗೆ ಇವಿಷ್ಟು ಬೇಡಿಕೆಗಳು ಪ್ರತಿಯೊಬ್ಬ ಮಾನವನ ಇಂಗಿತಗಳಾಗಿರುತ್ತವೆ.
 
ಈ ಬಯಕೆಗಳ ಜೊತೆಗೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡುವಲ್ಲಿ ಈ ಕಪ್ಪೆಯ ಪಾತ್ರ ಮುಖ್ಯವಾಗಿದೆ ಎನ್ನುತ್ತದೆ ಫೆಂಗ್ ಶುಯಿ ವಾಸ್ತುಶಾಸ್ತ್ರ. ಭಾರತವಷ್ಟೇ ಅಲ್ಲ, ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮೂರು ಕಾಲಿನ ಕಪ್ಪೆಯ ಅದೃಷ್ಟವನ್ನು ಬಲವಾಗಿ ನಂಬಲಾಗುತ್ತಿದೆ. ಮನೆಯಲ್ಲಿ, ಕಚೇರಿಯಲ್ಲಿ ಮೂರು ಕಾಲಿನ ಹಿತ್ತಾಳೆಯ ಕಪ್ಪೆಯನ್ನು ಇಡುವುದು ಶ್ರೇಷ್ಠ ಎನ್ನುವ ನಂಬಿಕೆಗೆ ಈಗ ಬಲ ಬಂದಿದೆ. 
 
ಅದೃಷ್ಟ ತರುವ ಕಪ್ಪೆಯನ್ನು ಮನೆಯ ಯಾವ ಮೂಲೆಯಲ್ಲಿಟ್ಟರೆ ಉತ್ತಮ, ಹೇಗೆ ನಿರ್ವಹಿಸುವುದು ಎನ್ನುವ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ಅದನ್ನು ತಪ್ಪು ಜಾಗದಲ್ಲಿ ಇರಿಸುವುದರಿಂದ ಪರಿಣಾಮ ವ್ಯತಿರಿಕ್ತವಾಗುವುದೂ ಇದೆ.
 
* ಬಾಯಿಯಲ್ಲಿ ಒಂದು ಕಾಯಿನ್‌ ಇಟ್ಟುಕೊಂಡಿರುವ ಮೂರು ಕಾಲಿನ ಕಪ್ಪೆಯನ್ನು ಯಾವಾಗಲೂ ಮನೆಯ ಅಥವಾ ಕಚೇರಿಯ ಒಳಾಂಗಣದಲ್ಲಿ, ಒಳಮುಖವಾಗಿ ಇರಿಸಬೇಕು. 
 
* ಬಾಯಿಯಲ್ಲಿ ನಾಣ್ಯ ಇರಿಸಿಕೊಳ್ಳದ ಕಪ್ಪೆಯನ್ನು ಮನೆ ಅಥವಾ ಕಚೇರಿಯ ಹೊರಭಾಗದಲ್ಲಿ, ಹೊರಮುಖವಾಗಿ ಇರಿಸಬೇಕು.
 
* ಮನೆಯ ಒಳಗೆ ಇರಿಸುವ ಕಪ್ಪೆ ಕಿಟಕಿ, ಬಾಗಿಲು ಅಥವಾ ಶೌಚ–ಸ್ನಾನ ಗೃಹದ ಕಡೆ ಮುಖ ಮಾಡಿರಬಾರದು.
 
* ಹಾಗೆಯೇ ಮಲಗುವ ಕೋಣೆ, ಅಡುಗೆಮನೆಯಲ್ಲಿಯೂ ಅದನ್ನು ಇಡಬಾರದು.
 
* ಕಪ್ಪೆ ಅಕ್ವೇರಿಯಂ ಕಡೆಗೂ ಮುಖ ಮಾಡಿರಬಾರದು.
 
* ಮನೆಗೆ ಬರುವ ಅತಿಥಿಗಳು ಈ ಕಪ್ಪೆಯನ್ನು ಮುಟ್ಟದಂತೆ ನೋಡಿಕೊಳ್ಳಿ. ಒಂದು ವೇಳೆ ಮುಟ್ಟಿದರೂ ಅವರು ಹೋದ ಮೇಲೆ ಅದನ್ನು ಶುಚಿಯಾದ ನೀರಿನಲ್ಲಿ ತೊಳೆದು, ಶುಭ್ರವಾದ ಬಿಳಿ ಬಟ್ಟೆಯಿಂದ ಒರೆಸಿ, ಐದು ನಿಮಿಷ ಸೂರ್ಯನ ಕಿರಣಗಳಿಗೆ ಇಟ್ಟು ನಂತರ ಮತ್ತೆ ಅದರ ಜಾಗದಲ್ಲಿಡಿ.
 
* ಒಂದು ವೇಳೆ ಕಪ್ಪೆಯು ಕೈಜಾರಿ ಬಿದ್ದು ಹಾನಿಗೊಳಗಾದರೆ ಅದನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ನೆಲದಡಿಯಲ್ಲಿ ಮುಚ್ಚಿಬಿಡಿ.  ಆದರೆ ನೀವು ಓಡಾಡುವ ಜಾಗದಲ್ಲಿ ಬೇಡ. ಸಾಧ್ಯವಾದರೆ ಅದರ ಮೇಲೆ ಒಂದು ಗಿಡ ನೆಡಿ. ಇದರಿಂದ ಯಾರಾದರೂ ಅದರ ಮೇಲೆ ಕಾಲೂರುವುದನ್ನು ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.