ADVERTISEMENT

ವಿಷ್ಣು ಪಾತ್ರ ನೋಡಿ ರಾಜ್ ಕಣ್ಣಲ್ಲಿ ನೀರು

ಎಸ್‌.ವಿ ರಾಜೇಂದ್ರ ಸಿಂಗ್ ಬಾಬು
Published 30 ಆಗಸ್ಟ್ 2014, 19:30 IST
Last Updated 30 ಆಗಸ್ಟ್ 2014, 19:30 IST
ವಿಷ್ಣು ಪಾತ್ರ ನೋಡಿ ರಾಜ್ ಕಣ್ಣಲ್ಲಿ ನೀರು
ವಿಷ್ಣು ಪಾತ್ರ ನೋಡಿ ರಾಜ್ ಕಣ್ಣಲ್ಲಿ ನೀರು   

ರಾಜಕುಮಾರ್ ಹತ್ತಿರ ಯಾರು ಸಿನಿಮಾ ಪ್ರಸ್ತಾಪ ಮಾಡಬೇಕು ಎಂದು ಒಂದಿಷ್ಟು ಹೊತ್ತು ಯೋಚಿಸಿದ್ದೇ ಆಯಿತು. ವಿಷ್ಣು ನೀನೇ ಹೇಳು ಎನ್ನುವಂತೆ ನನಗೆ ಕಣ್ಣಿನಿಂದಲೇ ಇಶಾರೆ ಮಾಡಿದ. ಕೊನೆಗೆ ಧೈರ್ಯ ಮಾಡಿ ನಾನೇ ಹೇಳಿದೆ: ‘ಸಾರ್ ನಮ್ಮಿಬ್ಬರಿಗೂ ಹಿಂದಿಯ ‘ಶೋಲೆ’ ತರಹ ಒಂದು ಸಿನಿಮಾ ಮಾಡುವ ಆಸೆ ಇದೆ. ನೀವು ಒಪ್ಪುವುದಾದರೆ ಕಥೆ ರೆಡಿ ಮಾಡುತೀನಿ. ನೀವು, ವಿಷ್ಣು ಇಬ್ಬರೂ ಒಟ್ಟಾಗಿ ಅಭಿನಯಿಸಿದರೆ ಒಂದು ಅದ್ಭುತವಾದ ಸಿನಿಮಾ ಮಾಡಬಹುದು’.ನನ್ನ ಮಾತನ್ನು ಕೇಳಿದ ತಕ್ಷಣ, ‘ಅದಕ್ಕೇನಂತೆ. ಶಿವಾ ಶಿವಾ ಅಂತ ಜಮಾಯಿಸಿ’ ಎಂದು ರಾಜಕುಮಾರ್ ಹೇಳಿದರು. ನನಗೂ, ವಿಷ್ಣುವಿಗೂ ಹೇಳಿಕೊಳ್ಳಲಾರದಷ್ಟು ಸಂತೋಷ. ನನ್ನ ತಲೆಯಲ್ಲಿ ಆ ಕ್ಷಣದಿಂದಲೇ ಅನೇಕ ಕಥೆಗಳ ಯೋಚನೆ ಮೊಳಕೆಯೊಡೆಯತೊಡಗಿತು. ಅಷ್ಟರಲ್ಲಿ ಊಟದ ಬ್ರೇಕ್‌ನ ಸಮಯವಾಯಿತು. ‘ಊಟ ಮಾಡಿಕೊಂಡೇ ಹೋಗಬೇಕು’ ಎಂದು ನಮ್ಮಿಬ್ಬರನ್ನೂ ರಾಜಕುಮಾರ್ ಒತ್ತಾಯಿಸಿದರು. ಮೇಕಪ್ ರೂಮ್‌ನಲ್ಲಿ ಅವರ ಜೊತೆ ಭರ್ಜರಿ ಮಾಂಸದೂಟ ಮಾಡಿದೆವು. ಇಬ್ಬರೂ ಪಟ್ಟಾಗಿ ಉಂಡೆವು. ‘ಸರಿ ಸಾರ್, ನಾನು ಕಥೆ ರೆಡಿ ಮಾಡಿಕೊಂಡು ಬರುತೀನಿ’ ಎಂದೆ. ಅಲ್ಲಿಂದ ಹೊರಟೆವು.

ನಾನು ಸುಮಾರು ದಿನಗಳಿಂದ ‘ಶೋಲೆ’ ಕಥೆ ಇಟ್ಟುಕೊಂಡು ಏನೇನೋ ಯೋಚಿಸಿದೆ. ಆದರೆ ಯಾವ ವಸ್ತುವೂ ಸರಿಬರಲಿಲ್ಲ. ‘ಶೋಲೆ’ ಒಂದು ಜಪಾನೀಸ್ ಚಿತ್ರ. ಅಕಿರಾ ಕುರಸವಾ ಅವರ ‘ಸೆವೆನ್ ಸಮುರಾಯ್’ ಕಥೆಯನ್ನು ಆಧರಿಸಿದ್ದು. ಆ ಮೂಲ ಚಿತ್ರವನ್ನು ನೋಡಿದೆ. ವಿಷ್ಣುವಿಗೂ ತೋರಿಸಿದೆ. ವೈಯಕ್ತಿಕವಾಗಿ ನನಗೆ ರೀಮೇಕ್ ಇಷ್ಟವಿರಲಿಲ್ಲ. ಹಾಗಾಗಿ ‘ಸೆವೆನ್ ಸಮುರಾಯ್’ ಚಿತ್ರದಿಂದ ಸ್ಫೂರ್ತಿ ಪಡೆದು ಇನ್ನೊಂದು ಕಥೆ ಮಾಡಬೇಕು ಎಂದು ನಿರ್ಧರಿಸಿದೆ. ನಾನು, ಎಚ್.ವಿ. ಸುಬ್ಬರಾವ್ ಅನೇಕ ಕಥಾ ಎಳೆಗಳನ್ನು ಬರೆದೆವು. ಆದರೆ ರಾಜಕುಮಾರ್ ಮತ್ತು ವಿಷ್ಣುವಿಗೆ ಹೊಂದುವಂಥ ಪಾತ್ರಗಳು ನನ್ನ ಮನಸ್ಸಿನಲ್ಲಿ ಮೂಡಲೇ ಇಲ್ಲ. ಒಮ್ಮೆ ರಾಜಕುಮಾರ್ ಅವರು ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ನನ್ನನ್ನು ನೋಡಿದವರೇ, ‘ಎಲ್ಲಿ ಬರಲಿಲ್ಲ’ ಎಂದು ವಿಚಾರಿಸಿದರು. ‘ಸರಿಯಾದ ಕಥೆ ಮೂಡುತ್ತಿಲ್ಲ. ಕಥೆ ಸಿಕ್ಕಿದೊಡನೆ ಬರುತ್ತೇನೆ’ ಎಂದೆ. ರಾಜಕುಮಾರ್ ಅಭಿನಯದ ಸಿನಿಮಾ ನಿರ್ದೇಶಿಸಬೇಕು ಎಂಬ ಆಸೆ ನನಗೆ ಬಹುದಿನಗಳಿಂದ ಇತ್ತು. ಕಾಲ ಕೂಡಿಬರಲಿ ಎಂದು ಕಾಯುತ್ತಾ ಇದ್ದೆ.

ಸುಮಾರು ಹದಿನೈದು ವರ್ಷಗಳ ನಂತರ ಸುಧಾ ವಾರಪತ್ರಿಕೆಯಲ್ಲಿ ‘ಯುದ್ಧ’ ಎಂಬ ಧಾರಾವಾಹಿ ಬಂತು. ವಿಜಯ ಸಾಸನೂರ ಅವರಿಂದ ಆ ಕಥೆಯ ಹಕ್ಕನ್ನು ಪಡೆದುಕೊಂಡೆ. ಅದನ್ನು ಓದುತ್ತಾ ಹೋದಂತೆ ನನ್ನ ಮನಸ್ಸಿನಲ್ಲಿ ಬಂದದ್ದು ರಾಜಕುಮಾರ್, ವಿಷ್ಣು ಹಾಗೂ ಅಂಬಿ. ಈ ಮೂರು ನಟರಿಗೆ ಹೇಳಿ ಬರೆಸಿದಂತೆ ಇದ್ದ ಕಥೆ ಅದು. ಕಥೆ ಸಿದ್ಧಪಡಿಸಿ, ವಿಜಯ ಸಾಸನೂರ್ ಅವರಿಗೆ ಹೇಳಿದೆ. ಅವರು ಈ ಕಾಂಬಿನೇಷನ್ ಕೇಳಿ ಥ್ರಿಲ್ ಆದರು. ಆಗ ಅವರಿಗೆ ರಾಜಕುಮಾರ್ ಹತ್ತಿರದ ಸ್ನೇಹಿತರಾಗಿದ್ದರು. ಅವರು ಖುದ್ದು ರಾಜಕುಮಾರ್ ಜೊತೆ ಮಾತನಾಡಿ, ಓದಲು ಪುಸ್ತಕ ಕೊಟ್ಟರು. ನಾನು ವಿಷ್ಣು, ಅಂಬಿಗೆ ಹೇಳಿದೆ. ರಾಜಕುಮಾರ್ ಕಥೆ ಓದಿ ತುಂಬಾ ಇಷ್ಟಪಟ್ಟರು.

ಚಿ. ಉದಯಶಂಕರ್ ಮೂಲಕ ಪಾರ್ವತಮ್ಮನವರು ನನ್ನನ್ನು ಚೆನ್ನೈಗೆ ಕರೆಸಿಕೊಂಡರು. ಅಲ್ಲಿಗೆ ಹೋಗಿ ರಾಜಕುಮಾರ್ ಅವರನ್ನು ಭೇಟಿ ಮಾಡಿದೆ. ನೀವು ಮೂರೂ ಜನ ಈ ಕಥೆಗೆ ಅಭಿನಯಿಸಿದರೆ ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲಿನ ಸಿನಿಮಾ ಮಾಡಬಹುದು ಎಂದು ಹೇಳಿದೆ. ಆಗ ರಾಜಕುಮಾರ್ ಅವರು ನಮ್ಮ ಮಹಾತ್ಮಾ ಪಿಕ್ಚರ್‍್ಸ್ ಸಂಸ್ಥೆಗೆ ಒಂದು ಕಾಲ್‌ಷೀಟ್ ಕೊಡಬೇಕು ಎಂದು ಕೂಡ ನಿರ್ಧರಿಸಿದ್ದರು. ಸುಮಾರು ಐದು ವರ್ಷದಿಂದ ನನಗೆ ಕಾಲ್‌ಷೀಟ್ ಕೊಡಬಹುದಾದ ವಸ್ತುವಿಗಾಗಿ ಅವರೂ ಕಾಯುತ್ತಾ ಇದ್ದರು. ‘ಇದು ದೊಡ್ಡ ಬಜೆಟ್‌ನ ಚಿತ್ರವಾದದ್ದರಿಂದ ನೀವೇ ನಿರ್ಮಿಸಿ. ನನಗೆ ಒಂದು ರೂಪಾಯಿ ಸಂಭಾವನೆ ಕೊಡಿ. ಇಲ್ಲವೆಂದರೆ ನಮ್ಮ ಮಹಾತ್ಮಾ ಸಂಸ್ಥೆಗೆ ರಾಜಕುಮಾರ್ ಅವರ ಡೇಟ್ಸ್ ಕೊಡಿ. ‘ಶೋಲೆ’ಯನ್ನೂ ಮೀರಿಸುವಂಥ ಸಿನಿಮಾ ಮಾಡುತ್ತೇನೆ’ ಎಂದೆ. ‘ಸ್ವಲ್ಪ ಸಮಯ ಕೊಡು. ಎಲ್ಲಾ ವಿಚಾರ ಮಾಡೋಣ’ ಎಂದು ಪಾರ್ವತಮ್ಮನವರು ಹೇಳಿದರು.

ನಾನು ಬೆಂಗಳೂರಿಗೆ ಬಂದು, ವಿಷ್ಣು, ಅಂಬಿ ಇಬ್ಬರಿಗೂ ನಡೆದ ವಿಷಯ ಹೇಳಿದೆ. ಅಷ್ಟರಲ್ಲಿ ಉದಯಶಂಕರ್, ‘ರಾಜಕುಮಾರ್ ಕೈಯಲ್ಲಿ ಮೂರು ಚಿತ್ರಗಳಿದ್ದು ಅವೆಲ್ಲಾ ಆದಮೇಲೆ ಈ ಸಿನಿಮಾ ಆಗಬಹುದು’ ಎಂದು ತಿಳಿಸಿದರು. ಸುಮಾರು ಒಂದು ವರ್ಷ ತಡವಾಗಿ ಆ ಸಿನಿಮಾ ಸೆಟ್ಟೇರಿದರೆ ವಸ್ತು ಎಲ್ಲಿ ಹಳೆಯದಾಗಿಬಿಡುತ್ತದೋ ಎಂಬ ಆತಂಕ ನನಗೆ. ಆದ್ದರಿಂದ ವಿಷ್ಣು, ಅಂಬಿ, ಶಂಕರ್‌ನಾಗ್ ಮೂವರನ್ನೇ ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದೆ. ಅದಕ್ಕೆ ಜಾಹೀರಾತನ್ನೂ ಕೊಟ್ಟೆ. ವಿಷ್ಣುವಿಗೆ ಆ ಸಿನಿಮಾ ಬಗೆಗೆ ತುಂಬಾ ಆಸೆ ಇತ್ತು. ರಾಜಕುಮಾರ್ ಜೊತೆ ನಟಿಸಲು ತುಂಬಾ ಕುತೂಹಲದಿಂದ ಕಾಯುತ್ತಿದ್ದ. ಅಷ್ಟರಲ್ಲಿ ಪತ್ರಿಕೆಗಳು ರೆಕ್ಕೆ ಪುಕ್ಕ ಹಚ್ಚಿ, ಸುದ್ದಿ ಪ್ರಕಟಿಸಿಬಿಟ್ಟವು. ಅಂಬಿ ಹಿಂದೆ ಸರಿದ. ಆಗ ವಿಷ್ಣು, ನಾನು ಅಂಬಿ ಮನೆಗೆ ಹೋದೆವು. ‘ಅಂಬಿಯೇ ನಾಯಕನ ಪಾತ್ರ ಮಾಡಲಿ. ನಾನು ಎರಡನೇ ಕ್ಯಾರೆಕ್ಟರ್ ಮಾಡುತ್ತೇನೆ. ಶಂಕರ್‌ನಾಗ್ ಮೂರನೇ ಕ್ಯಾರೆಕ್ಟರ್ ಮಾಡಲಿ’ ಎಂದು ವಿಷ್ಣು ನನ್ನ ಕಿವಿಯಲ್ಲಿ ಹೇಳಿದ. ಶಂಕರ್‌ನಾಗ್ ಯಾವ ಪಾತ್ರ ಕೊಟ್ಟರೂ ಮಾಡಲು ಸಿದ್ಧನಿದ್ದ. ಅಂಬಿ ನಮ್ಮ ಒತ್ತಡಕ್ಕೆ ಮಣಿದು ಡೇಟ್ಸ್ ಕೊಟ್ಟ. ನಾನು ಎಲ್ಲಾ ತಯಾರಿ ಆರಂಭಿಸಿದೆ. ಒಂದು ದಿನ ನನಗೆ ಮೂರ್‍್ನಾಲ್ಕು ಇಂಚಿನ ಚೀಟಿ ಬಂತು. ಅಂಬಿ ತನ್ನ ಹಸ್ತಾಕ್ಷರದಲ್ಲಿ ‘ನಾನು ಯುದ್ಧ ಮಾಡೋಲ್ಲ’ ಎಂದು ಬರೆದು ಕಳುಹಿಸಿದ್ದ. ಕೊನೆಗೆ ‘ಯುದ್ಧ’ ಹಾಳೆಗಳಲ್ಲಿಯೇ ಉಳಿಯಿತು.

ರಾಜಕುಮಾರ್, ವಿಷ್ಣು ಇಬ್ಬರನ್ನೂ ಸೇರಿಸಿ ಸಿನಿಮಾ ಮಾಡುವ ನನ್ನ ಯತ್ನಗಳು ಸಫಲವಾಗಲಿಲ್ಲ. ಇವತ್ತೂ ಅಂಬಿಯನ್ನು ‘ಯಾಕೆ ಯುದ್ಧ ಮಾಡಲಿಲ್ಲ’ ಎಂದು ಬಯ್ಯುತ್ತಾ ಇರುತ್ತೇನೆ.

ಸಿನಿಮಾ ಮಾಡದೇ ಹೋದರೂ ನನ್ನ, ರಾಜಕುಮಾರ್ ನಡುವಿನ ಸಂಬಂಧ ಚೆನ್ನಾಗಿಯೇ ಇತ್ತು. ನನ್ನ ನಿರ್ದೇಶನದ ಸಿನಿಮಾಗಳನ್ನು ಬಿಡುಗಡೆಗೆ ಮೊದಲೇ ಅವರಿಗೆ ತೋರಿಸುತ್ತಾ ಇದ್ದೆ. ‘ಬಂಧನ’ ಸಿನಿಮಾದ ಮೊದಲ ಪ್ರತಿ ರೆಡಿ ಆಯಿತು. ಅವರ ಮನೆಗೆ ಹೋಗಿ, ‘ಸಿನಿಮಾ ನೋಡಿ ಆಶೀರ್ವಾದ ಮಾಡಿ’ ಎಂದು ಆಮಂತ್ರಿಸಿದೆ. ತಕ್ಷಣ ಪ್ರೊಜೆಕ್ಷನ್ ಅರೇಂಜ್ ಮಾಡಿ ಎಂದರು. ಪ್ರಸಾದ್ ೧೦ ಎಂ.ಎಂ ಥಿಯೇಟರ್‌ನಲ್ಲಿ ಚಿತ್ರದ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ. ರಾಜಕುಮಾರ್ ಹಾಗೂ ವರದಪ್ಪನವರು ಬಂದರು. ನನಗೆ ಒಂದು ತರಹ ಹೆದರಿಕೆ. ರಾಜಕುಮಾರ್ ಒಂದು ಯೂನಿವರ್ಸಿಟಿ ಇದ್ದಹಾಗೆ. ಕಥೆ ಆರಿಸುವುದರಲ್ಲಿ ವರದಪ್ಪನವರದ್ದು ಎತ್ತಿದ ಕೈ. ಕಾದಂಬರಿ ಆಧರಿಸಿದ ಸಿನಿಮಾ ಇದು, ದುರಂತ ಅಂತ್ಯ. ಅವರಿಗೆ ಹಿಡಿಸುವುದೋ ಇಲ್ಲವೋ ಎನ್ನುವ ಚಿಂತೆ ನನಗೆ.

ವಿಶಾಲವಾದ ಥಿಯೇಟರ್‌ನಲ್ಲಿ ಇಬ್ಬರೇ ದಿಗ್ಗಜರು ಕುಳಿತು ಸಿನಿಮಾ ನೋಡಿದರು. ಅವರ ಜೊತೆ ಕುಳಿತು ನೋಡಲು ಭಯವಾಗಿ, ನಾನು ಬಾಗಿಲ ಬಳಿ ನಿಂತಿದ್ದೆ. ನನ್ನಂಥ ನಿರ್ದೇಶಕರು ಸಿನಿಮಾ ಪರಿಣಾಮಕಾರಿಯಾಗಿ ಮೂಡಿಬಂದಿದೆಯೋ ಇಲ್ಲವೋ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವ ತಂತ್ರವೂ ಅದಾಗಿತ್ತು. ಎಷ್ಟೋ ಸಲ ಚಿತ್ರಮಂದಿರದ ಬಾಗಿಲಲ್ಲಿ ನಿಂತು ಪ್ರೇಕ್ಷಕರ ಮುಖಭಾವ, ಪ್ರತಿಕ್ರಿಯೆಗಳನ್ನು ಗಮನಿಸಿದ ಮೇಲೆ ನಾವು ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿಕೊಳ್ಳುತ್ತಿದ್ದೆವು.
ನಾನು ಸಿನಿಮಾ ಶುರುವಾದಾಗಿನಿಂದ ಪದೇಪದೇ ರಾಜಕುಮಾರ್ ಅವರ ಮುಖವನ್ನೇ ನೋಡುತ್ತಿದ್ದೆ. ಇಂಟರ್‌ವಲ್‌ನಲ್ಲಿ ಅವರು ಏನೂ ಮಾತನಾಡಲಿಲ್ಲ. ನನ್ನ ಎದೆಯಲ್ಲಿ ಢವಢವ. ಕಾಫಿ, ತಿಂಡಿ ಸೇವಿಸಿದ ನಂತರ ಸಿನಿಮಾ ಪ್ರದರ್ಶನ ಮುಂದುವರಿಯಿತು. ಒಂದೂಕಾಲು ಗಂಟೆಯ ನಂತರ ಸಿನಿಮಾ ಮುಗಿದದ್ದೇ ಲೈಟ್ಸ್ ಆನ್ ಆದವು. ರಾಜಕುಮಾರ್ ಅವರ ಕಣ್ಣಲ್ಲಿ ನೀರು. ಬೆಳ್ಳಿಪರದೆಗೆ ಅವರು ಕೈಮುಗಿದು, ‘ಏನು ಅಭಿನಯಿಸಿದ್ದಾರೆ ಇಬ್ಬರೂ. ವಿಷ್ಣು, ಸುಹಾಸಿನಿ ಇಬ್ಬರಿಗೂ ಹ್ಯಾಟ್ಸಾಫ್’ ಎಂದರು. ಸುಮಾರು ಹದಿನೈದು ನಿಮಿಷ ಅವರು ಥಿಯೇಟರ್ ಬಿಟ್ಟು ಕದಲಲಿಲ್ಲ. ಕಣ್ಣಲ್ಲಿ ನೀರು ಒಸರುತ್ತಲೇ ಇತ್ತು. ಸಿನಿಮಾ ಅದ್ಭುತವಾಗಿ ಬಂದಿದೆ ಎಂದು ಕೊಂಡಾಡಿದರು. ಅದು ನನಗೆ ಸಿಕ್ಕ ನಿಜವಾದ ಅಭಿನಂದನೆ. ನನ್ನನ್ನು ಮನೆಗೆ ಕರೆದುಕೊಂಡು ಹೋಗಿ, ಪಾರ್ವತಮ್ಮನವರು ಹಾಗೂ ಅವರ ಮನೆಯ ಎಲ್ಲರಿಗೂ ನನ್ನ ಬಂಧನ ಸಿನಿಮಾ ನೋಡುವಂತೆ ಶಿಫಾರಸು ಮಾಡಿದರು.

ರಾಜಕುಮಾರ್ ಹಾಗೂ ವಿಷ್ಣು ಇಬ್ಬರ ನಡುವೆ ಪರಸ್ಪರ ಪ್ರೀತಿ ಇತ್ತು. ಅವರ ಆತ್ಮೀಯತೆ ಸಿನಿಮಾಗಳಾಗಿ ಬದಲಾಗಿದ್ದಿದ್ದರೆ ಕನ್ನಡ ಚಿತ್ರರಂಗ ಇವತ್ತು ತಮಿಳು, ತೆಲುಗು ಚಿತ್ರರಂಗಗಳಿಗೆ ಏನೂ ಕಡಿಮೆ ಇಲ್ಲದಂತೆ ಬೆಳೆದಿರುತ್ತಿದ್ದವು. ಚಾಣಕ್ಯ-–ಚಂದ್ರಗುಪ್ತ, ರಾಮಾಯಣದ ರಾಮ–ಭರತ, ಮಹಾಭಾರತದ ಅರ್ಜುನ–ಕರ್ಣ, ನೃಪತುಂಗ, ತ.ರಾ.ಸು ಅವರ ಅನೇಕ ಕಾದಂಬರಿಗಳನ್ನು ಇಟ್ಟುಕೊಂಡು ರಾಜ್–ವಿಷ್ಣು ಒಟ್ಟಿಗೆ ನಟಿಸುವ ಸಾಧ್ಯತೆಗಳಿದ್ದವು. ಚರಿತ್ರೆಯಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯುವಂಥ ಚಿತ್ರಗಳು ಅವಾಗುತ್ತಿದ್ದವು. ನಮ್ಮ ಕನ್ನಡ ಚಿತ್ರರಂಗದ ದುರದೃಷ್ಟ, ಹಾಗೆ ಆಗಲೇ ಇಲ್ಲ. ದಿಲೀಪ್‌ಕುಮಾರ್–ಅಮಿತಾಭ್ ಬಚ್ಚನ್, ಎಂಜಿಆರ್–ಶಿವಾಜಿ ಗಣೇಶನ್, ರಜನಿಕಾಂತ್–ಕಮಲ ಹಾಸನ್, ಎನ್.ಟಿ. ರಾಮರಾವ್–ಕೃಷ್ಣ ಹೀಗೆ ಹಲವಾರು ಮಹಾನ್ ನಟರು ಒಟ್ಟಿಗೆ ನಟಿಸಿ ಅಭಿಮಾನಿಗಳಿಗೆ ಹಬ್ಬದ ವಾತಾವರಣ ನಿರ್ಮಿಸಿದರು. ಆದರೆ ಕೆಲವು ಚಾಡಿಕೋರರು ರಾಜಕುಮಾರ್ ಹಾಗೂ ವಿಷ್ಣು ಬಗೆಗೆ ಇಲ್ಲಸಲ್ಲದ ಗಾಳಿಮಾತು ತೇಲಿಬಿಟ್ಟರು. ಅವರಿಗೆ ಆಪ್ತರಾಗಿದ್ದವರೂ ಇಬ್ಬರ ನಡುವೆ ಸುವರ್ಣ ಸೇತುವೆ ನಿರ್ಮಿಸುವ ಯತ್ನ ಮಾಡಲಿಲ್ಲ. ನಾನು ಪ್ರಯತ್ನಿಸಿದರೂ ಫಲ ಸಿಗಲಿಲ್ಲ.

ಮುಂದೆ ನಾನು ‘ಮುತ್ತಿನಹಾರ’ ಸಿನಿಮಾ ಮಾಡಿದಾಗ ನನಗೆ ಇಂಥ ಪಾತ್ರ ಸಿಗಬೇಕಿತ್ತು ಎಂದು ರಾಜಕುಮಾರ್ ಹೃದಯದಾಳದಿಂದ ಪ್ರತಿಕ್ರಿಯಿಸಿದ್ದರು. ಅದು ಅವರ  ಸೌಜನ್ಯ, ಸಜ್ಜನಿಕೆ.  ಕನ್ನಡ ಚಿತ್ರರಂಗದ ಎಷ್ಟೋ ಉತ್ತಮ ಸಂಬಂಧಗಳ ಹಾಲಿಗೆ ಹುಳಿ ಹಿಂಡುವವರು ಅದರಿಂದ ಕ್ಷೇತ್ರಕ್ಕೆ ಆಗುವ ಕೆಡುಕಿನ ಕುರಿತು ಚಿಂತಿಸುವುದಿಲ್ಲ. ರಾಜಕುಮಾರ್, ವಿಷ್ಣು ಒಟ್ಟಿಗೆ ನಟಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಈಗಲೂ ನನಗೆ ಪದೇಪದೇ ಅನಿಸುತ್ತಲೇ ಇರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.