ADVERTISEMENT

ಸರ್ಕಾರ– ಖಾಸಗಿ ವೈದ್ಯರ ಜಟಾಪಟಿ

ಕೆಪಿಎಂಇ ಕಾಯ್ದೆ ತಿದ್ದುಪಡಿ ಮಸೂದೆಯ ಸುತ್ತ...

ರಾಜೇಶ್ ರೈ ಚಟ್ಲ
Published 10 ನವೆಂಬರ್ 2017, 19:30 IST
Last Updated 10 ನವೆಂಬರ್ 2017, 19:30 IST
ಸರ್ಕಾರ– ಖಾಸಗಿ ವೈದ್ಯರ ಜಟಾಪಟಿ
ಸರ್ಕಾರ– ಖಾಸಗಿ ವೈದ್ಯರ ಜಟಾಪಟಿ   

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳು ರೋಗಿಗಳನ್ನು ಸುಲಿಗೆ ಮಾಡುತ್ತಿವೆ ಎಂದು ಹೇಳಿ ಅದಕ್ಕೆ ಕಡಿವಾಣ ಹಾಕುವ ಸಲುವಾಗಿ  ಸಿದ್ಧಪಡಿಸಿರುವ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ತಿದ್ದುಪಡಿ) ಮಸೂದೆ– 2017‌’ (ಕೆಪಿಎಂಇ) ಅನ್ನು ಬೆಳಗಾವಿಯಲ್ಲಿ ನ. 13ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮತ್ತೊಮ್ಮೆ ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೆ, ಪರಿಷ್ಕರಣೆ ಅಗತ್ಯವಿದ್ದರೆ ಅದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಟ್ಟಿದೆ.

ಈ ಮಸೂದೆಯ ಕೆಲವು ಅಂಶಗಳಿಗೆ ಖಾಸಗಿ ವೈದ್ಯರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಇದನ್ನು ವಿಧಾನಮಂಡಲದ ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಸಮಿತಿ ಹಲವು ಶಿಫಾರಸುಗಳನ್ನು ನೀಡಿದೆ. ಇದಕ್ಕೂ ಭಾರತೀಯ ವೈದ್ಯಕೀಯ ಸಂಘ ‌(ಐಎಂಎ) ವಿರೋಧ ವ್ಯಕ್ತಪಡಿಸಿದೆ. ನ. 3ರಂದು ಹೊರರೋಗಿಗಳ ಚಿಕಿತ್ಸಾ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದೆ. ಮಸೂದೆ ಮಂಡನೆಯಿಂದ ಸರ್ಕಾರ ಹಿಂದೆ ಸರಿಯದಿದ್ದರೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ತಿದ್ದುಪಡಿಗೆ ಪ್ರೇರಣೆ?
ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಲು ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ನೇತೃತ್ವದ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತ್ತು. ಈ ಸಮಿತಿ ನೀಡಿರುವ ವರದಿ ಆಧರಿಸಿ ತಿದ್ದುಪಡಿ ಮಸೂದೆ ರೂಪಿಸಲಾಗಿದೆ.

ADVERTISEMENT

‘ರೋಗಿಯ ಆರ್ಥಿಕ ಸಾಮರ್ಥ್ಯ ತಿಳಿದುಕೊಂಡು ವಿನಾಕಾರಣ ತಪಾಸಣೆಗೆ ಒಳಪಡಿಸುವುದು, ಚಿಕಿತ್ಸೆ ನೀಡುವುದು, ಕೊನೆಗೆ ಹವಾನಿಯಂತ್ರಿತ ವಾಹನದಲ್ಲಿ ಮನೆಗೆ ಕಳುಹಿಸಿಕೊಡುವ ಪ್ರವೃತ್ತಿ ಖಾಸಗಿ ಆಸ್ಪತ್ರೆಗಳಲ್ಲಿ ಕಂಡುಬರುತ್ತಿದೆ. ಜೀವ ಹೋದರಂತೂ ಹಣ ಕೊಡದೆ ಹೆಣ ನೀಡುವುದಿಲ್ಲ. ಖಾಸಗಿ ಆಸ್ಪತ್ರೆಗಳ ಈ ಪ್ರವೃತ್ತಿಗೆ ಕಡಿವಾಣ ಹಾಕಲು ಕಠಿಣ ಕಾನೂನಿನ ಅಗತ್ಯವಿದೆ’ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ ಕುಮಾರ್‌ ಸಮರ್ಥಿಸಿಕೊಂಡಿದ್ದರು.

ಮಸೂದೆಯಲ್ಲಿರುವ ಪ್ರಮುಖ ಅಂಶಗಳೇನು?
* ರಾಜ್ಯ ಸರ್ಕಾರ ನಿಗದಿಪಡಿಸುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಖಾಸಗಿ ಆಸ್ಪತ್ರೆಯವರು ವಸೂಲು ಮಾಡಿದರೆ ₹ 25 ಸಾವಿರದಿಂದ ₹ 5 ಲಕ್ಷದವರೆಗೆ ದಂಡ ಮತ್ತು ಆರು ತಿಂಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ.

* ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಯಿಂದ ಅಥವಾ ಅವರ ಪ್ರತಿನಿಧಿಯಿಂದ ಮುಂಗಡ ಪಾವತಿಸುವಂತೆ ಒತ್ತಾಯಿಸುವಂತಿಲ್ಲ.

* ಆಸ್ಪತ್ರೆಯಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೆ ಸಂಬಂಧಿಕರಿಗೆ ದೇಹ ಹಸ್ತಾಂತರಿಸುವ ಮೊದಲು ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯಿಸುವಂತಿಲ್ಲ. ಬಾಕಿ ಮೊತ್ತವನ್ನು ನಂತರ ಸಂಗ್ರಹಿಸಬಹುದು.

* ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಂಬಂಧಿಸಿದ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯ. ನೋಂದಣಿ ನಿಬಂಧನೆಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸುವಂತಿಲ್ಲ.

* ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರತಿಯೊಂದು ಚಿಕಿತ್ಸೆಗೂ ಶುಲ್ಕ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ. ತಜ್ಞರ ಸಮಿತಿಯ ಶಿಫಾರಸು ಮೇರೆಗೆ ಬೇರೆ ಬೇರೆ ವರ್ಗದ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಶುಲ್ಕ ನಿಗದಿ ಆಗಲಿದೆ.

* ಪ್ರತಿಯೊಂದು ಆಸ್ಪತ್ರೆಯಲ್ಲೂ ಚಿಕಿತ್ಸಾ ಶುಲ್ಕದ ಪಟ್ಟಿ ಪ್ರದರ್ಶಿಸಬೇಕು.

* ರೋಗಿಗಳ ಕುಂದುಕೊರತೆ ವಿಚಾರಣೆಗೆ ಜಿಲ್ಲಾ ಅಥವಾ ಮಹಾನಗರ ಮಟ್ಟದಲ್ಲಿ ಕುಂದುಕೊರತೆ ಪರಿಹಾರ ಸಮಿತಿ ರಚನೆ. ಈ ಸಮಿತಿಗೆ ಜಿಲ್ಲಾ ಪಂಚಾ­ಯಿತಿ ಮುಖ್ಯ
ಕಾರ್ಯನಿರ್ವಹಣಾ­ಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್‌ ವರಿಷ್ಠ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ಒಬ್ಬ ಪ್ರತಿ­ನಿಧಿ, ಜಿಲ್ಲಾ ಸರ್ಜನ್‌, ಸರ್ಕಾರಿ ವಕೀಲ ಮತ್ತು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿದ ಮಹಿಳಾ ಪ್ರತಿನಿಧಿ ಇರುತ್ತಾರೆ.

ಯಾರಿಗೆಲ್ಲ ಅನ್ವಯ?
ಖಾಸಗಿ ಆಸ್ಪತ್ರೆ, ದವಾಖಾನೆ, ನರ್ಸಿಂಗ್‌ ಹೋಂ, ಡೆಂಟಲ್‌ ಕ್ಲಿನಿಕ್‌, ಡೆಂಟಲ್‌ ಪಾಲಿ ಕ್ಲಿನಿಕ್, ಚಿಕಿತ್ಸಾ ಪ್ರಯೋಗಾಲಯ, ಡಯಾಗ್ನೊಸ್ಟಿಕ್‌ ಕೇಂದ್ರ, ಹೆರಿಗೆ ಆಸ್ಪತ್ರೆ, ರಕ್ತನಿಧಿ, ಎಕ್ಸ್‌ರೇ ಕೇಂದ್ರ, ಸ್ಕ್ಯಾನಿಂಗ್‌ ಕೇಂದ್ರ, ಫಿಸಿಯೋಥೆರಪಿ, ಪಾಲಿ ಕ್ಲಿನಿಕ್‌, ವೈದ್ಯ ಸಲಹಾ ಕೇಂದ್ರ, ಸಾರ್ವಜನಿಕ ರೋಗ ತಪಾಸಣೆ, ರೋಗ ತಡೆಗಟ್ಟುವಿಕೆ ಅಥವಾ ರೋಗ­ಗುಣಪಡಿಸುವ ಹೆಸರುಗಳಿಂದ ಕರೆಯುವ ಸಂಸ್ಥೆಗಳು, ಸ್ವಯಂಸೇವಾ ಅಥವಾ ಖಾಸಗಿ ಸಂಸ್ಥೆಗಳು.

ಐಎಂಎ ಬೇಡಿಕೆ ಏನು?
ಕಾಯ್ದೆ ತಿದ್ದುಪಡಿ ಸಂಬಂಧ ನ್ಯಾಯಮೂರ್ತಿ ವಿಕ್ರಮ್‌ ಜಿತ್ ಸೇನ್ ಸಮಿತಿ ನೀಡಿದ ವರದಿಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಬೇಕು. ಈಗ ಮಸೂದೆಯಲ್ಲಿ ಸೇರಿಸಿರುವ ಹಲವು ಅಂಶಗಳ ಬಗ್ಗೆ ಸಮಿತಿ ಮುಂದೆ ಮೊದಲೇ ಐಎಂಎ ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗಾಗಿ ಸಮಿತಿಯವರು ಆ ಅಂಶಗಳನ್ನು ಕೈಬಿಟ್ಟಿದ್ದರು. ಆದರೆ, ಸಮಿತಿಯ ವರದಿ ಕಡೆಗಣಿಸಿ, ತಮಗೆ ಬೇಕಾದ ಅಂಶಗಳನ್ನು ಜಾರಿಗೆ ತರಲು ಆರೋಗ್ಯ ಸಚಿವರು ತೀರ್ಮಾನಿಸಿದ್ದಾರೆ. ಇದು ಪೂರ್ವಗ್ರಹಪೀಡಿತ. ಆಸ್ಪತ್ರೆಗಳ ಮೇಲೆ, ವೈದ್ಯರ ಮೇಲೆ, ವೈದ್ಯಕೀಯ ಸಿಬ್ಬಂದಿ ಮೇಲೆ ಮತ್ತು ಬಹುಮುಖ್ಯವಾಗಿ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುವುದು ಖಾಸಗಿ ವೈದ್ಯರ ಆಕ್ಷೇಪ. ‘ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಬೇಕೆಂದಾದರೆ 2010ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿರುವ ಕೇಂದ್ರದ ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ ಆ್ಯಕ್ಟ್‌ ಜಾರಿಗೆ ತನ್ನಿ. ಕೇರಳ ಸರ್ಕಾರ ಅದನ್ನು ಈಗಾಗಲೇ ಜಾರಿಗೆ ತಂದಿದೆ. ಇದರ ಪ್ರಕಾರ ಸರ್ಕಾರಿ ಆಸ್ಪತ್ರೆಗಳೂ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ’ ಎನ್ನುವುದು ಅವರ ವಾದ.

ಯಾವೆಲ್ಲ ತಿದ್ದುಪಡಿಗಳಿಗೆ ಐಎಂಎ ವಿರೋಧ, ಸಮರ್ಥನೆಗಳೇನು?
ರೋಗಿಗಳಿಗೆ ನ್ಯಾಯ ಒದಗಿಸಲು ಗ್ರಾಹಕರ ವೇದಿಕೆ ಮತ್ತು ಮೆಡಿಕಲ್ ಕೌನ್ಸಿಲ್‍ ಎಂಬ ಎರಡು ಸಂಸ್ಥೆಗಳಿವೆ. ತಪ್ಪಿತಸ್ಥರೆಂದು ತೀರ್ಮಾನವಾದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶಗಳಿವೆ. ಹೀಗಾಗಿ, ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಕುಂದುಕೊರತೆ ಪರಿಹಾರ ಸಮಿತಿ ರಚನೆ ಅಗತ್ಯ ಇಲ್ಲ. ರಾಜ್ಯದಲ್ಲಿ ಶೇ 95ಕ್ಕಿಂತಲೂ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳಿವೆ. ಈ ಆಸ್ಪತ್ರೆಗಳ ಮಾಲೀಕರು ವೈದ್ಯರು. ಮಾಲೀಕರಿಗೆ ಶಿಕ್ಷೆ ಎಂದಾದರೂ, ವೈದ್ಯರನ್ನೇ ಶಿಕ್ಷಿಸಿದಂತಾಗುತ್ತದೆ. ಚಿಕಿತ್ಸೆ ವೈಫಲ್ಯ ಅಥವಾ ಚಿಕಿತ್ಸಾ ವೆಚ್ಚಗಳ ಏರುಪೇರಿನ ಕಾರಣಕ್ಕೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದು ಎಷ್ಟು ಸರಿ?

ಸಣ್ಣ ಮತ್ತು ಮಧ್ಯಮ ಗಾತ್ರದ ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಯಾವುದೇ ಸವಲತ್ತು ಪಡೆಯುತ್ತಿಲ್ಲ. ಚಿಕಿತ್ಸಾ ಶುಲ್ಕಗಳ ವಿವರ ಪ್ರಕಟಿಸಲು ವೈದ್ಯರು ಸಿದ್ಧ. ಆದರೆ, ಸರ್ಕಾರ ಈ ದರ ನಿಗದಿಪಡಿಸುವುದು, ಪರಿಷ್ಕರಿಸುವುದು ಎಷ್ಟರಮಟ್ಟಿಗೆ ಸರಿ? ವಕೀಲರಿಗೆ, ಚಾರ್ಟರ್ಡ್ ಅಕೌಂಟೆಂಟ್‍ರುಗಳಿಗೆ, ಸಿನಿಮಾ ನಟರಿಗೆ ಇಲ್ಲದ ಕಟ್ಟುಪಾಡುಗಳು ವೈದ್ಯರಿಗೇಕೆ?

ಹಣ ಪಾವತಿಸುವವರೆಗೂ ಆಸ್ಪತ್ರೆಗಳು ಶವ ನೀಡುವುದಿಲ್ಲ ಎನ್ನುವ ವಿಚಾರವನ್ನು ಭಾವನಾತ್ಮಕವಾಗಿ ಬಳಸಿ ವೈದ್ಯ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ವೈದ್ಯಕೀಯ ವೆಚ್ಚಗಳಿಗೆ ಸಂಬಂಧಪಟ್ಟಂತೆ ರೋಗಿಗಳ ಕಡೆಯವರು ಮನವಿ ಮಾಡಿಕೊಂಡಾಗ ಬಹಳಷ್ಟು ಸಲ ವೈದ್ಯರು ಅಂತಹ ಮನವಿಗಳನ್ನು ಪುರಸ್ಕರಿಸುತ್ತಾರೆ.
ಹೀಗಾಗಿ ಈ ಅಂಶವನ್ನೂ ತಿದ್ದುಪಡಿಯಿಂದ ಹೊರಗಿಡಬೇಕು.

ಈ ಮೇಲಿನ ಅಂಶಗಳನ್ನು ಕೈಬಿಟ್ಟು ಉಳಿದ ತಿದ್ದುಪಡಿಗಳಿಗೆ ತಕರಾರು ಇಲ್ಲ.

ಖಾಸಗಿ ವೈದ್ಯರ ಬೇಡಿಕೆಗಳಿಗೆ ಯಾವೆಲ್ಲ ಸಂಸ್ಥೆಗಳು ಬೆಂಬಲ ನೀಡಿವೆ?

ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ದಂತ ವೈದ್ಯರ ಒಕ್ಕೂಟ, ಪ್ರಯೋಗಾಲಯಗಳ ಒಕ್ಕೂಟ, ಕರ್ನಾಟಕ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ವಿವಿಧ ತಜ್ಞ ವೈದ್ಯರ ಸಂಘಟನೆಗಳು, ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್, ರಕ್ತನಿಧಿಗಳು.

ಖಾಸಗಿ ವೈದ್ಯರ ಮುಂದಿನ ನಡೆ ಏನು?

ಈಗಿನ ಸ್ವರೂಪದ ಮಸೂದೆಯನ್ನು ಕೈಬಿಡದಿದ್ದರೆ ವೃತ್ತಿಯನ್ನೇ ತೊರೆಯುವುದಾಗಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ನಿಲುವು ಏನು?

ಮಸೂದೆಯಲ್ಲಿರುವ ಅಂಶಗಳ ಕುರಿತು ಖಾಸಗಿ ಆಸ್ಪತ್ರೆಗಳ ಮಾಲೀಕರ ಜೊತೆ ಸರ್ಕಾರ ಈಗಾಗಲೇ ಚರ್ಚೆ ನಡೆಸಿದೆ. ಅವರ ಬೇಡಿಕೆಗಳಿಗೂ ಸ್ಪಂದಿಸುವ ಭರವಸೆ ನೀಡಿದೆ. ಆದರೆ, ಈ ಅಂಶಗಳ ವಿಚಾರ ಸದನದಲ್ಲಿ ನಿರ್ಧಾರ ಆಗಬೇಕಿದೆ.
* * *
ಅಂಕಿ ಅಂಶ
ಖಾಸಗಿ ಆಸ್ಪತ್ರೆಗಳಿಗೆ ಬರುವ ಹೊರರೋಗಿಗಳ ಪ್ರಮಾಣ ಶೇ 70

ರಾಜ್ಯದಲ್ಲಿರುವ ಖಾಸಗಿ ಅಸ್ಪತ್ರೆ, ಕ್ಲಿನಿಕ್‌ಗಳು 40 ಸಾವಿರ

ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿರುವ ವೈದ್ಯರು 70 ಸಾವಿರಕ್ಕೂ ಹೆಚ್ಚು

ನೋಂದಾಯಿತ ವೈದ್ಯರು 1.25 ಲಕ್ಷ

ಪ್ರತ್ಯಕ್ಷ– ಪರೋಕ್ಷವಾಗಿ ಖಾಸಗಿ ಆಸ್ಪತ್ರೆ ನಂಬಿ ಕೆಲಸ ಮಾಡುತ್ತಿರುವವರು 15 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.