ADVERTISEMENT

ಕಪ್ಪುಹಣ ಸಕ್ರಮಕ್ಕೆ ಕೊನೆಯ ಅವಕಾಶ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ಕಪ್ಪುಹಣ ಸಕ್ರಮಕ್ಕೆ ಕೊನೆಯ ಅವಕಾಶ
ಕಪ್ಪುಹಣ ಸಕ್ರಮಕ್ಕೆ ಕೊನೆಯ ಅವಕಾಶ   

ತೆರಿಗೆ ಕಾಯ್ದೆಗಳು (2ನೇ  ತಿದ್ದುಪಡಿ) ಮಸೂದೆ– 2016ನ್ನು ಲೋಕಸಭೆ ಅಂಗೀಕರಿಸಿದ್ದು, ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ಆರಂಭಿಸಿರುವ ಸಮರ ಈಗ ಇನ್ನೊಂದು ಮಜಲು ತಲುಪಿದೆ. ತೆರಿಗೆ ವಂಚಿಸಿ ಇಟ್ಟುಕೊಂಡಿದ್ದ ಅಘೋಷಿತ ಹಣವನ್ನು ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಸಕ್ರಮಗೊಳಿಸಲು ಕಾಳಧನಿಕರು  ನಡೆಸುತ್ತಿದ್ದ ಹತ್ತಾರು ವಾಮಮಾರ್ಗಗಳಿಗೆ ಕಡಿವಾಣ ವಿಧಿಸುವುದೇ ಈ ಮಸೂದೆಯ ಮುಖ್ಯ ಉದ್ದೇಶ. 

ತೆರಿಗೆ ವ್ಯಾಪ್ತಿಗೆ ತೋರಿಸದೆ ಬಚ್ಚಿಟ್ಟಿದ್ದ  ಕಪ್ಪುಹಣವನ್ನು ಸಕ್ರಮ  ಮಾಡಿಕೊಳ್ಳಲು ಜನರನ್ನು ಬಾಡಿಗೆಗೆ ಪಡೆಯುವುದು, ಬಡವರ ಜನಧನ ಖಾತೆಗೆ ಹಣ ಜಮೆ ಮಾಡುವುದು, ಸಗಟು ರೂಪದಲ್ಲಿ ಚಿನ್ನಾಭರಣ ಖರೀದಿಯಂತಹ ಹಲವು ಕುತಂತ್ರಗಳಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ನವೆಂಬರ್ 8ರಂದು ನೋಟುಗಳ ರದ್ದತಿಯ ಅಚ್ಚರಿಯ ಘೋಷಣೆ ನಂತರ  ಕೈಗೊಳ್ಳಲಾದ ಮತ್ತೊಂದು ಕಠಿಣ ಕ್ರಮ ಇದು. ಒಂದೇ ತಿಂಗಳಲ್ಲಿ  ಕೈಗೊಳ್ಳಲಾದ ಈ ಎರಡು ಕ್ರಮಗಳು, ಆರ್ಥಿಕ ವ್ಯವಸ್ಥೆಯಿಂದ ಹೊರಗಿರುವ ಮಾರ್ಗ ಆಯ್ಕೆ ಮಾಡಿಕೊಂಡವರಿಗೆ ಕಠಿಣ ಸಂದೇಶವನ್ನು ನೀಡುತ್ತವೆ.

ತಮ್ಮ ಬಳಿ ತೆರಿಗೆಗೆ ಒಳಪಡದ  ಸಂಪತ್ತು ಹೊಂದಿದವರು ಸ್ವಯಂಪ್ರೇರಿತರಾಗಿ  ಘೋಷಣೆ ಮಾಡಿಕೊಂಡು ಶೇ 50 ತೆರಿಗೆ ಪಾವತಿಸಿ ಅದನ್ನು ಸಕ್ರಮಗೊಳಿಸಿಕೊಳ್ಳಬಹುದು. ಕಪ್ಪು ಹಣದ ಕಳಂಕದಿಂದ ಪಾರಾಗಲು ಇದೊಂದು ಅಂತಿಮ ಸುವರ್ಣ ಅವಕಾಶವೂ ಆಗಿದೆ. ಆದರೆ, ಘೋಷಿಸದ ಮತ್ತು ನವೆಂಬರ್‌ 8ರ ನಂತರ ಬ್ಯಾಂಕ್‌ ಖಾತೆಗಳಲ್ಲಿ ಠೇವಣಿ ಇರಿಸಿದ ₹ 2.50 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸದಿದ್ದರೆ ಶೇ 15ರಷ್ಟು ಮಾತ್ರ ಠೇವಣಿದಾರರಿಗೆ ದಕ್ಕಲಿದೆ.

ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಮಾಡುವ ಹಣಕ್ಕೆ ಶೇ 85 ರಷ್ಟು ಭಾರಿ ಪ್ರಮಾಣದ ತೆರಿಗೆ ಹಾಗೂ ದಂಡ  ವಿಧಿಸಲು ಉದ್ದೇಶಿಸಲಾಗಿದೆ. ಕಪ್ಪುಹಣ ಹೊಂದಿದವರು ತಮ್ಮ ಬಳಿ ಇರುವ  ‘ಲೆಕ್ಕಕ್ಕೆ ಸಿಗದ ಹಣವನ್ನು’  ಸ್ವಯಂ ಪ್ರೇರಣೆಯಿಂದ ಘೋಷಿಸಿಕೊಂಡಲ್ಲಿ ಅದು ಉತ್ಪಾದನಾ ಆರ್ಥಿಕತೆಯಲ್ಲಿ ಹಣ ತೊಡಗಿಸುವ ಸ್ವೀಕಾರಾರ್ಹ ಮಾರ್ಗವಾಗಲಿದೆ.

ಕಪ್ಪುಹಣ ಇದ್ದವರು ತಮ್ಮ ಸಂಪತ್ತಿನ ಶೇ 25ರಷ್ಟನ್ನು ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆ–2016ರ ಅಡಿ ನಾಲ್ಕು ವರ್ಷಗಳ ಕಾಲ ಶೂನ್ಯ ಬಡ್ಡಿದರಕ್ಕೆ ಠೇವಣಿ ಇರಿಸಬೇಕಾಗುತ್ತದೆ. ಹೀಗಾಗಿ ಘೋಷಿಸಿಕೊಂಡ ಕಪ್ಪುಹಣದ ಶೇ 25ರಷ್ಟು  ಮೊತ್ತ, ನಾಲ್ಕು ವರ್ಷಗಳ ನಂತರವೇ ಕಾಳಧನಿಕರಿಗೆ ಬಳಕೆಗೆ ದೊರೆಯಲಿದೆ. ಕಾಳಧನಿಕರಿಂದ ಪಡೆದ ದುಡ್ಡನ್ನು ಜನರ ಕಲ್ಯಾಣಕ್ಕೆ ಸದ್ವಿನಿಯೋಗ ಮಾಡುವ ಕೇಂದ್ರದ  ನಿರ್ಧಾರ ಹೊಸ ರೀತಿಯದು. ವಸತಿ, ಆರೋಗ್ಯ, ಶಿಕ್ಷಣ  ಸೇರಿದಂತೆ ಹಲವು ವಲಯಗಳಲ್ಲಿ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಈ ಹಣ ಹಂಚಿಕೆಯಾಗುತ್ತದೆ.

ADVERTISEMENT

ಇತ್ತೀಚೆಗಷ್ಟೇ ಕೊನೆಗೊಂಡ ‘ಆದಾಯ ಘೋಷಣೆ ಯೋಜನೆ’ ಮೂಲಕ ಶೇ 45ರಷ್ಟು ತೆರಿಗೆ ವಿಧಿಸುವ ಮೂಲಕ ₹ 65 ಸಾವಿರ ಕೋಟಿ ಸಂಗ್ರಹವಾಗಿದೆ. ರದ್ದಾದ ನೋಟುಗಳನ್ನು ಡಿಸೆಂಬರ್‌ 30ರ ಒಳಗೆ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಇರುವ ಕೊನೆಯ ಅವಕಾಶವು ಕಪ್ಪುಹಣದ ಪರ್ಯಾಯ ಆರ್ಥಿಕತೆಯನ್ನು ಸ್ವಚ್ಛಗೊಳಿಸಲು ನೆರವಾಗಲಿದೆ.

ಕಪ್ಪುಹಣ ವಿರುದ್ಧದ ಸಮರಕ್ಕೆ  ಈಗ ಬಡವರ ಕಲ್ಯಾಣದ ಮಾನವೀಯ ಮುಖವೂ ಪ್ರಾಪ್ತವಾಗಿರುವುದು ಹೊಸ ಬೆಳವಣಿಗೆಯಾಗಲಿದೆ. ಕಪ್ಪುಹಣದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಸಮರದ ಫಲಿತಾಂಶವು ಜನವರಿ ತಿಂಗಳ ಮೊದಲ ವಾರದಲ್ಲಿ  ಸ್ಪಷ್ಟಗೊಳ್ಳಲಿದೆ. ಕಪ್ಪುಹಣ ಕ್ಷಮಾದಾನದ ಕೊನೆಯ ಕ್ರಮ ಇದಾಗಿರುವುದರಿಂದ ತೆರಿಗೆ ಹೊರೆ ಹೆಚ್ಚಿದ್ದರೂ ಕಳಂಕದಿಂದ ಮುಕ್ತರಾಗಲು ದೊರೆತಿರುವ ಅಂತಿಮ ಅವಕಾಶವನ್ನು  ಕಾಳಧನಿಕರು ಬಳಕೆ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.