ADVERTISEMENT

ಕುಂಭಕರ್ಣ ನಿದ್ರೆಯಿಂದ ಎದ್ದೇಳಿ ಪೊಲೀಸ್‌ ಹುದ್ದೆ ಭರ್ತಿ ಮಾಡಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST
ಕುಂಭಕರ್ಣ ನಿದ್ರೆಯಿಂದ ಎದ್ದೇಳಿ ಪೊಲೀಸ್‌ ಹುದ್ದೆ ಭರ್ತಿ ಮಾಡಿ
ಕುಂಭಕರ್ಣ ನಿದ್ರೆಯಿಂದ ಎದ್ದೇಳಿ ಪೊಲೀಸ್‌ ಹುದ್ದೆ ಭರ್ತಿ ಮಾಡಿ   

ದೇಶದಲ್ಲಿ ಅತಿಹೆಚ್ಚು ಪೊಲೀಸ್‌ ಹುದ್ದೆಗಳು ಖಾಲಿಯಿರುವ ಆರು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸುವ ಮೂಲಕ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸದಿರುವ ಸಂಬಂಧ ಸುಪ್ರೀಂ ಕೋರ್ಟ್‌ನಿಂದ ಹಲವು ಬಾರಿ ನೋಟಿಸ್‌ ಪಡೆದಿದ್ದರೂ ಕುಂಭಕರ್ಣ ನಿದ್ರೆಯಿಂದ ಎಚ್ಚರಗೊಳ್ಳದೇ ಇರುವುದು ರಾಜ್ಯದ ಆಡಳಿತ ವ್ಯವಸ್ಥೆಗೆ ಆವರಿಸಿದ ಜಡತ್ವಕ್ಕೆ ಸಾಕ್ಷಿ. ಸಕಾಲಕ್ಕೆ ಸಿಬ್ಬಂದಿ ಭರ್ತಿ ಪ್ರಕ್ರಿಯೆಯನ್ನು ನಡೆಸಲು ಉದಾಸೀನ ಮನೋಭಾವ ತೋರಿದ ಪರಿಣಾಮ ರಾಜ್ಯದಲ್ಲಿ ಈಗ 26 ಸಾವಿರ ಪೊಲೀಸರ ಕೊರತೆ ಎದುರಾಗಿದೆ. ಲಭ್ಯವಿರುವ ಸಿಬ್ಬಂದಿಯಲ್ಲೂ ಫಾಲೋವರ್‌ಗಳು, ಗನ್‌ಮ್ಯಾನ್‌ ಎಂದೆಲ್ಲ ಸಾವಿರಾರು ಮಂದಿಯನ್ನು ಪೊಲೀಸಿಂಗ್‌ಗೆ ಹೊರತಾದ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗಿದೆ. ಅಲ್ಲದೆ ಪ್ರತಿವರ್ಷ ನಿವೃತ್ತರಾಗುವವರ ಸಂಖ್ಯೆಯೂ ದೊಡ್ಡದಿದೆ. ಹೀಗಾಗಿ ಅಪರಾಧಿಗಳ ಪತ್ತೆ, ಬಂದೋಬಸ್ತ್‌, ಗುಪ್ತಚರ ಮಾಹಿತಿ ಸಂಗ್ರಹದಂತಹ ಪೊಲೀಸ್‌ ಇಲಾಖೆಯ ಪ್ರಾಥಮಿಕ ಕೆಲಸಗಳಿಗೆ ಅಗತ್ಯ ಬಲವೇ ಇಲ್ಲದಂತಾಗಿದೆ.

ಕೆಲಸದ ಒತ್ತಡದಿಂದಾಗಿ ಪೊಲೀಸರಿಗೆ ವಾರದ ರಜೆ ಸಿಗುತ್ತಿಲ್ಲ ಎಂಬ ದೂರುಗಳೂ ಇವೆ. ಅವರು ಪ್ರತಿದಿನ ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡುವುದು  ಅನಿವಾರ್ಯ ಎಂಬಂತಾಗಿದೆ. ಈ ಎಲ್ಲ ಕಾರಣಗಳಿಂದ ಖಾಲಿ ಹುದ್ದೆಗಳ ಭರ್ತಿಗಾಗಿ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು ಹಾಗೂ ಮುಂದಿನ ವಿಚಾರಣೆಗೆ ಗೃಹ ಇಲಾಖೆಯ ಕಾರ್ಯದರ್ಶಿ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್‌, ಸರ್ಕಾರದ ಮೂಗು ಹಿಡಿದಿರುವುದು ಸರಿಯಾಗಿಯೇ ಇದೆ.

ಸಿಎಆರ್‌, ಡಿಎಆರ್‌, ಕೆಎಸ್‌ಆರ್‌ಪಿ ಅಂತೆಲ್ಲ ವಿಭಾಗ ಮಾಡುವ ಬದಲು ಎಲ್ಲ ಬಲವೂ ಸಿವಿಲ್‌ ಪೊಲೀಸ್‌ ವ್ಯವಸ್ಥೆಯಲ್ಲೇ ಒಳಪಡುವಂತೆ ಮಾಡಿದರೆ 40 ಸಾವಿರ ಹೆಚ್ಚುವರಿ ಸಿಬ್ಬಂದಿ ಠಾಣೆಗಳಿಗೆ ಲಭ್ಯವಾಗಲಿದ್ದಾರೆ ಎನ್ನುವುದು ಹಲವು ನಿವೃತ್ತ ಅಧಿಕಾರಿಗಳ ಸಲಹೆ. ಇಂತಹ ಸುಧಾರಣಾ ಕ್ರಮಗಳ ಸಾಧಕ–ಬಾಧಕ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕು. 150 ವರ್ಷಗಳಷ್ಟು ಹಿಂದಿನ ಪೊಲೀಸ್‌ ಕಾನೂನಿನ ಮುಖ್ಯ ಉದ್ದೇಶ ಬ್ರಿಟಿಷ್‌ ರಾಜ್‌ ವ್ಯವಸ್ಥೆಯ ಹಿತರಕ್ಷಣೆ ಆಗಿತ್ತು. 

ADVERTISEMENT

ಆ ಕಾನೂನನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡದ ಕಾರಣ ಪೊಲೀಸ್‌ ವ್ಯವಸ್ಥೆ ಈಗಲೂ ಜನರಿಂದ ಅಂತರ ಕಾಯ್ದುಕೊಂಡಿದೆ. ಬೇರೆ ಯಾವ ಇಲಾಖೆಯಲ್ಲೂ ಇಲ್ಲದಷ್ಟು ಶ್ರೇಣೀಕೃತ ವ್ಯವಸ್ಥೆ ಪೊಲೀಸ್‌ ಇಲಾಖೆಯಲ್ಲಿದೆ.  ಓಬೀರಾಯನ ಕಾಲದ ಇಂತಹ ಚೌಕಟ್ಟುಗಳನ್ನು ಮುರಿದು  ಹೊಸ ವ್ಯವಸ್ಥೆಯನ್ನು ಕಟ್ಟಬೇಕಾದ ಅಗತ್ಯವಿದೆ. ಪೊಲೀಸ್‌ ವರ್ಗಾವಣೆಯಲ್ಲಿ ರಾಜಕೀಯ ಆರ್ಥಿಕತೆ ಸಮ್ಮಿಳಿತಗೊಂಡಿರುವುದು ಸಮಸ್ಯೆಯು ಮತ್ತಷ್ಟು ಗಂಭೀರ ಸ್ವರೂಪ ಪಡೆಯುವಂತೆ ಮಾಡಿದೆ. ಭ್ರಷ್ಟಾಚಾರದ ಪಿಡುಗನ್ನು ತೊಡೆದುಹಾಕುವ ಸಲುವಾಗಿ ಪೊಲೀಸ್‌ ಆಡಳಿತ ಮಂಡಳಿಯನ್ನು ರಚಿಸಲೇಬೇಕು ಎನ್ನುವ ಆದೇಶವನ್ನು ಸುಪ್ರೀಂ ಕೋರ್ಟ್‌ ನೀಡಿತು. ನ್ಯಾಯಾಂಗ ನಿಂದನೆಯ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಾಜ್ಯದಲ್ಲೂ ಹೆಸರಿಗೊಂದು ಪೊಲೀಸ್‌ ಆಡಳಿತ ಮಂಡಳಿ ರಚನೆಯಾಯಿತು. ಆದರೆ, ವರ್ಗಾವಣೆ ಮಾಡಲು ಬೇರೆ ಮಂಡಳಿಗಳೇ ಸೃಷ್ಟಿಯಾಗಿದ್ದು ಗುಟ್ಟಿನ ಸಂಗತಿಯಾಗಿ ಏನೂ ಉಳಿದಿಲ್ಲ.

ರಾಜಧಾನಿಯಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿದ್ದರೆ, ರಾಯಚೂರಿನಂತಹ ದೂರದ ಪ್ರದೇಶಗಳ ಠಾಣೆಗಳಲ್ಲಿ ದೂರು ಸ್ವೀಕರಿಸುವವರಿಗೂ ಗತಿಯಿಲ್ಲ. ಯಾವುದೇ ಠಾಣೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಟ್‌ ನೀಡಲು ಅದೇ ಠಾಣೆಯ ಕಾನ್‌ಸ್ಟೆಬಲ್‌ ಬೇರೆ ಜಿಲ್ಲೆಗಳಿಗೆ ಏಕೆ ಹೋಗಬೇಕು? ಲಭ್ಯವಿರುವ ಮಾನವ ಸಂಪನ್ಮೂಲವನ್ನೂ ಇಂತಹ ಪರಿಪಾಠದಿಂದ ಪೋಲು ಮಾಡಿದಂತಾಗುತ್ತದೆ. ತಂತ್ರಜ್ಞಾನದ ಈ ಯುಗದಲ್ಲಿ ಇ–ಮೇಲ್‌ ಮೂಲಕ ಹತ್ತಿರದ ಠಾಣೆಗಳಿಗೆ ವಾರಂಟ್‌ ಕಳುಹಿಸಿ, ಸಂಬಂಧಪಟ್ಟವರಿಗೆ ಕೊಡಿಸುವ ವ್ಯವಸ್ಥೆಯನ್ನು ಮಾಡಬಹುದಲ್ಲವೇ? ಸುಧಾರಣೆಗೆ ಹಲವು ಅವಕಾಶಗಳಿವೆ. ಕಣ್ತೆರೆದು ನೋಡಬೇಕು. ಅಗತ್ಯ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಜತೆ–ಜತೆಗೆ ತಂತ್ರಜ್ಞಾನದ ನೆಲೆಯಲ್ಲೂ  ಠಾಣೆಗಳನ್ನು ಸನ್ನದ್ಧಗೊಳಿಸುವ ಮೂಲಕ ಪೊಲೀಸ್ ಪಡೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.