ADVERTISEMENT

ಜಾಗೃತಿ ನಿರಂತರವಾಗಿರಲಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2014, 19:30 IST
Last Updated 1 ಡಿಸೆಂಬರ್ 2014, 19:30 IST

ರಾಜ್ಯದಲ್ಲಿ ಎಚ್‌ಐವಿ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಜನಜಾಗೃತಿ ಹೆಚ್ಚಳದಿಂದ ಇದು ಸಾಧ್ಯವಾಗಿರುವುದು ವಿಶ್ವ ಏಡ್‌್ಸ ದಿನಾಚರಣೆಯ (ಡಿ. 1) ಈ ಸಂದರ್ಭದಲ್ಲಿ ಆಶಾದಾಯಕ ಬೆಳವಣಿಗೆ. ಆದರೆ ದೇಶದಲ್ಲಿ ಅತಿ ಹೆಚ್ಚು ಎಚ್‌ಐವಿ ಸೋಂಕಿತರು ಇರುವ ಐದು ರಾಜ್ಯ­ಗಳಲ್ಲಿ ಕರ್ನಾಟಕವೂ ಒಂದು. ಅದರಲ್ಲೂ ರಾಷ್ಟ್ರದ ಶೇಕಡ 50ರಷ್ಟು ಎಚ್‌ಐವಿ ಪ್ರಕರಣಗಳು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ಒಳಗೊಂಡ ದಕ್ಷಿಣದ ನಾಲ್ಕು ರಾಜ್ಯಗಳಲ್ಲೇ ಇವೆ. ರಾಜ್ಯ­ದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದು ಬಾಗಲಕೋಟೆ, ವಿಜಯಪುರ, ಬೆಳಗಾವಿಯಲ್ಲಿ ಈ ಪ್ರಮಾಣ ಹೆಚ್ಚು.

ಹೀಗಾಗಿ  ಈ ನಿಟ್ಟಿನಲ್ಲಿ ‘ಶೂನ್ಯ’ ತಲುಪುವ ರಾಷ್ಟ್ರೀಯ ಗುರಿಗೆ ನಮ್ಮ ದಾರಿ ಇನ್ನೂ ಸಾಕಷ್ಟು ದೂರದಲ್ಲಿದೆ ಎಂಬುದನ್ನು ಮರೆಯುವಂತಿಲ್ಲ. ಪರಿಸ್ಥಿತಿ ಹೀಗಿರುವಾಗ, ಜನಜಾಗೃತಿ ಆಂದೋಲನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿದೇಶಿ ಎನ್‌.ಜಿ.ಒ.ಗಳಿಂದ ದೇಶಕ್ಕೆ ಹರಿದುಬರುತ್ತಿದ್ದ ವಿಶೇಷ ಧನಸಹಾಯ  ಇನ್ನು ಮುಂದೆ ಬಂದ್‌ ಆಗಲಿದೆ. ಈ ಮೊದಲೇ, ಎಚ್‌ಐವಿ ಸೋಂಕು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಏಡ್‌್ಸ ನಿಯಂತ್ರಣ ಸಂಸ್ಥೆಯಿಂದ (ನ್ಯಾಕೊ) ಕರ್ನಾಟಕ ಏಡ್‌್ಸ ತಡೆ ಸೊಸೈಟಿಗೆ (ಕೆಎಸ್‌ಎಪಿಎಸ್‌) ಬರುವ ಹಣ ವಿಳಂಬವಾಗುತ್ತಿದೆ. ಮೊದಲು ನ್ಯಾಕೊದಿಂದ ಸೊಸೈಟಿಗೆ ನೇರವಾಗಿ ಹಣ ಬರುತ್ತಿತ್ತು. ಈಗ ಹಣಕಾಸು ಇಲಾಖೆಗೆ ಹೋಗಿ ನಂತರ ಸೊಸೈಟಿಯನ್ನು ತಲುಪುತ್ತದೆ. ಈ ಎಲ್ಲ ಕಾರಣಗಳಿಂದ, ಎಚ್‌ಐವಿ  ಸೋಂಕು ತಡೆ  ಕಾರ್ಯಕ್ರಮಗಳಿಗೆ ಹಿನ್ನಡೆ ಆಗ­ಬಹುದೆಂಬ ಆತಂಕ ಈಗ ಎದುರಾಗಿದೆ.

ಎಚ್‌ಐವಿ ಸೋಂಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಾಮಾಜಿಕ, ಮಾನ­ಸಿಕ, ಆರ್ಥಿಕ ನೆಲೆಗಳಿರುವ ನಾನಾ ಆಯಾಮಗಳಿವೆ. ಸೋಂಕು ಇರುವ ವ್ಯಕ್ತಿ­ಗಳ ಆರೈಕೆಗೆ ಸಕಾಲಿಕ ಚಿಕಿತ್ಸೆ, ಪೌಷ್ಟಿಕ ಆಹಾರ ಅತ್ಯಗತ್ಯ. ಒಂದೇ ಒಂದು ಡೋಸ್‌ ಔಷಧ ಸೇವನೆ ತಪ್ಪಿದರೂ ಆರೋಗ್ಯದ ಗತಿ ಏರುಪೇರಾಗುತ್ತದೆ.  ಹೀಗಾಗಿ ಅವರ ಆರೈಕೆ ಮತ್ತು ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದಕ್ಕೆಲ್ಲ ಸರ್ಕಾರದ ಕಾರ್ಯಕ್ರಮಗಳು ಪೂರಕವಾಗಬೇಕು. ಈವರೆಗೇನೋ ಎಚ್‌ಐವಿ ಸೋಂಕು ತಡೆ ಪ್ರಚಾರಾಂದೋಲನ ರಾಜ್ಯದಲ್ಲಿ ಗಂಭೀರವಾಗಿಯೇ ನಡೆದಿದೆ. ಗಂಭೀರವಾದ ಈ ಆರೋಗ್ಯ ಸಮಸ್ಯೆ ಪರಿ-­ಹಾರಕ್ಕೆ ವಿದೇಶಿ ನೆರವು ನೆಚ್ಚಿ ಕೂರಲಾಗದು. ರಾಜ್ಯವೂ ಹೊಣೆಯನ್ನು ಹೊತ್ತು­ಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT