ADVERTISEMENT

ಜಾತಿ ಗಣತಿ ಸಮರ್ಪಕವಾಗಿರಲಿ

​ಪ್ರಜಾವಾಣಿ ವಾರ್ತೆ
Published 1 ಮೇ 2014, 19:30 IST
Last Updated 1 ಮೇ 2014, 19:30 IST

ರಾಜ್ಯದಲ್ಲಿ ಜಾತಿ ಗಣತಿಗೆ ಸಿದ್ಧತೆಗಳು ಆರಂಭವಾಗಿವೆ. ರಾಜ್ಯ ಸಚಿವ ಸಂಪುಟ ಕಳೆದ ಡಿಸೆಂಬರ್‌ನಲ್ಲಿ ಕೈಗೊಂಡ ತೀರ್ಮಾನದಂತೆ ಇದೇ ಏಪ್ರಿಲ್‌–ಮೇ ತಿಂಗಳ ಅವಧಿಯಲ್ಲಿ ಈ ಸಮೀಕ್ಷೆ ನಡೆಯಬೇಕಿತ್ತು. ಸಾರ್ವ­ತ್ರಿಕ ಚುನಾವಣೆಯಿಂದಾಗಿ ವಿಳಂಬವಾಯಿತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರ ನೇಮಕಾತಿ ಆಗದಿರುವ ಕಾರಣ, ಗಣತಿಯನ್ನು ಮತ್ತೆ ಮುಂದೂಡಬಹುದೆಂಬ ಆತಂಕವಿತ್ತು. ಈಗ ಅದೂ ನಿವಾರಣೆ ಆಗಿದೆ. ಗಣತಿ ಕಾರ್ಯದ ಉಸ್ತುವಾರಿಗೆ ವಿಶೇಷಾಧಿಕಾರಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಿಕೊಂಡಿದೆ.

ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಬರುವ ಅಕ್ಟೋಬರ್‌ನಲ್ಲಿ ಜಾತಿಗಣತಿ ಕಾರ್ಯಕ್ಕೆ ಚಾಲನೆ ನೀಡಲಿದೆ. ರಾಜ್ಯದಲ್ಲಿ ಹಿಂದು­ಳಿದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮೇಲೆ ವೈಜ್ಞಾನಿಕ ನೆಲೆಯಲ್ಲಿ ಈ ಜಾತಿ ಗಣತಿ ಬೆಳಕು ಚೆಲ್ಲುವಂತಾಗ­ಬೇಕು. ಜಾತಿ ಆಧಾರಿತ ಗಣತಿ ನಡೆಯಬೇಕೆಂಬ ಒತ್ತಾಯ ಬಹಳ ಹಳೆ­ಯದು. 1931ರ ನಂತರ ದೇಶದಲ್ಲಿ ಜಾತಿ ಗಣತಿ ನಡೆದಿಲ್ಲ. ಅದಕ್ಕೆ ಕೆಲ ರಾಜ­ಕೀಯ ಪಕ್ಷಗಳು ಮತ್ತು ಬಲಿಷ್ಠ ಜಾತಿಗಳು ಅವಕಾಶ ನೀಡಿರಲಿಲ್ಲ. ನಿರಂತರ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ 2005ರಲ್ಲಿ ಮೊದಲ ಹಂತದ ಜಾತಿ ಗಣತಿಗೆ ಕರ್ನಾಟಕವನ್ನು ಆಯ್ಕೆ ಮಾಡಿ  ₨ 21.5 ಕೋಟಿ  ಹಣವನ್ನು ಬಿಡುಗಡೆ ಮಾಡಿತ್ತು.

ಆದರೆ ಹಿಂದಿನ ರಾಜ್ಯ ಸರ್ಕಾರಗಳು ಜಾತಿ ಗಣತಿಗೆ ಆಸಕ್ತಿಯನ್ನೇ ತೋರಲಿಲ್ಲ. ನಂತರ ಸಿದ್ದರಾಮಯ್ಯ ಅವರು ಮುಖ್ಯ­ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿ, ಜಾತಿ ಗಣತಿ ನಡೆ­ಸುವ ನಿರ್ಧಾರ ಪ್ರಕಟಿಸಿದ್ದರು. ಅಂತೂ ಈಗ ಅದಕ್ಕೆ ಚಾಲನೆ ಸಿಕ್ಕಿದೆ.  ಈ ಸಮೀಕ್ಷೆಗೆ ಅಳವಡಿಸಿಕೊಳ್ಳಬೇಕಾದ ಮಾನದಂಡಗಳು ನಿಖರವಾಗಿರಬೇಕಾ­ದುದು ಅಗತ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದುವರೆಗೆ ರೂಪಿಸಿ­ರುವ ಕ್ಷೇಮಾಭಿವೃದ್ಧಿ  ಯೋಜನೆಗಳಿಂದ ಎಷ್ಟು ಪ್ರಯೋಜನವಾಗಿದೆ ಎಂಬ ಮಾಹಿತಿಯೂ ಈ ಸಮೀಕ್ಷೆಯಿಂದ  ಸ್ಪಷ್ಟವಾಗಬೇಕು. ಹಾಗಾದಾಗ, ಮುಂದಿನ ದಿನಗಳಲ್ಲಿ ಸರ್ಕಾರದ ನೀತಿಗಳನ್ನು ರೂಪಿಸಲು ಈ  ಸಮೀಕ್ಷೆ ಮಾರ್ಗಸೂಚಿಯಾಗಲಿದೆ.

ಜಾತಿ ಗಣತಿಗೆ ಈಗಲೂ ಕೆಲ ರಾಜಕೀಯ ಶಕ್ತಿಗಳು ಮತ್ತು ಬಲಿಷ್ಠ ಜಾತಿಗಳು ತಡೆ ಒಡ್ಡುವ ಸಾಧ್ಯತೆ ಇದೆ.  ಸರ್ಕಾರ ಅದಕ್ಕೆ ಅವಕಾಶ ಕೊಡ­ಬಾರದು. ಜಾತಿ ಗಣತಿಯ ಯಶಸ್ಸು ಆ ಕಾರ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಯ ದಕ್ಷತೆ ಮತ್ತು ಶ್ರದ್ಧೆಯನ್ನು ಅವಲಂಬಿಸಿದೆ. ಗಣತಿ ಮಾಡು­ವವರಿಗೆ ಜಾತಿಗಳ ಸಂಕೀರ್ಣ ಸಮಸ್ಯೆ ತಿಳಿದಿರಬೇಕು. ಈ ಬಗ್ಗೆ ಅವರಿಗೆ ಸರಿಯಾದ ತರಬೇತಿ ನೀಡಿರಬೇಕು. ರಾಜ್ಯದಲ್ಲಿ ವಿವಿಧ ಬುಡಕಟ್ಟು ಮತ್ತು ಅಲೆಮಾರಿ ಜನಾಂಗಗಳನ್ನು ಗುರುತಿಸುವ ಕೆಲಸದಲ್ಲಿ ಸಾಕಷ್ಟು ಪ್ರಗತಿ­ಯಾಗಿದ್ದರೂ ಇನ್ನೂ ಹಲವು ಜನಾಂಗಗಳು ಸರ್ಕಾರದ ಪರಿಗಣನೆಗೆ ಬಾರದೆ ಹೊರಗೇ ಉಳಿದಿವೆ. ಈ ಬುಡಕಟ್ಟು ಜನರ ಹೆಸರಲ್ಲಿ ಬೇರೆ­ಯವರು ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ಅಂಥವರನ್ನು ಗುರುತಿಸುವ ಕೆಲಸ ಮೊದಲು ಆಗಬೇಕು.  ಜಾತಿ ಸಮೀಕ್ಷೆಯ ಅಗತ್ಯವನ್ನು ರಾಜ್ಯದ ಜನರು  ಅರ್ಥಮಾಡಿಕೊಳ್ಳಬೇಕು. ಸಮೀಕ್ಷೆಗೆ ಬರುವ ಸಿಬ್ಬಂದಿಗೆ ಸಹಕಾರ ನೀಡಿ ಜಾತಿ ಗಣತಿ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.