ADVERTISEMENT

ಪ್ಯಾನ್‌ಗೆ ಆಧಾರ್‌ ಕಡ್ಡಾಯ ಮಾಹಿತಿ ಸೋರಿಕೆ ತಡೆ ಮುಖ್ಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ಪ್ಯಾನ್‌ಗೆ ಆಧಾರ್‌ ಕಡ್ಡಾಯ ಮಾಹಿತಿ ಸೋರಿಕೆ ತಡೆ ಮುಖ್ಯ
ಪ್ಯಾನ್‌ಗೆ ಆಧಾರ್‌ ಕಡ್ಡಾಯ ಮಾಹಿತಿ ಸೋರಿಕೆ ತಡೆ ಮುಖ್ಯ   

ಪ್ಯಾನ್‌ ಕಾರ್ಡ್‌ ಮತ್ತು ತೆರಿಗೆ ರಿಟರ್ನ್‌ ಸಲ್ಲಿಕೆಗೆ ಆಧಾರ್‌ ಸಂಖ್ಯೆ ಜೋಡಣೆಯನ್ನು ಕಡ್ಡಾಯಗೊಳಿಸುವ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದರಿಂದಾಗಿ ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಆಧಾರ್ ಮಾಹಿತಿಯನ್ನು ವ್ಯಾಪಕವಾಗಿ ಬಳಸಿಕೊಳ್ಳುವ  ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಕಾನೂನಿನ ಬಲದ ಜತೆಗೆ ನ್ಯಾಯಾಂಗದ ಸಮ್ಮತಿಯೂ  ಸಿಕ್ಕಂತಾಗಿದೆ.

ಅಲ್ಲದೆ, ಪ್ಯಾನ್‌ ಮತ್ತು ಆಧಾರ್ ಜೋಡಣೆಗೆ ಇದ್ದ ಅಡೆತಡೆ, ಅನಿಶ್ಚಯಗಳು ಸದ್ಯಕ್ಕಂತೂ ನಿವಾರಣೆಯಾಗಿವೆ. ಇನ್ನೇನಿದ್ದರೂ, ‘ಆಧಾರ್‌ ಕಾರ್ಡ್‌ಗಾಗಿ ಸಂಗ್ರಹಿಸಿದ ಮಾಹಿತಿಯು ವ್ಯಕ್ತಿಯೊಬ್ಬನ ಖಾಸಗಿತನವನ್ನು ಉಲ್ಲಂಘಿಸುತ್ತದೆಯೇ’ ಎಂಬ ಸಂವಿಧಾನಾತ್ಮಕ ಮಹತ್ವದ ಅರ್ಜಿಯ ವಿಚಾರಣೆ ಆಗುವುದೊಂದೇ ಬಾಕಿ. ಆ ತೀರ್ಪು ಏನೇ ಬಂದರೂ, ಸರ್ಕಾರವಂತೂ ಈಗ ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಾಗದ ಸ್ಥಿತಿಯಲ್ಲಿ ಇದೆ.

ಏಕೆಂದರೆ ಸರ್ಕಾರಿ ಅಂಕಿಅಂಶಗಳೇ ಹೇಳುವಂತೆ, 2009ರಿಂದ ಇಲ್ಲಿಯವರೆಗೆ ಆಧಾರ್‌ಗೆ ಸುಮಾರು ₹ 8800 ಕೋಟಿ ಖರ್ಚಾಗಿದೆ. ದೇಶದ 114.5 ಕೋಟಿ ಜನ ಆಧಾರ್‌ ಸಂಖ್ಯೆ ಪಡೆದುಕೊಂಡಿದ್ದಾರೆ. ಅಂದರೆ ಸರಿಸುಮಾರು ಶೇ 90ರಷ್ಟು ಜನರ ಬಳಿ ಆಧಾರ್‌ ಇದೆ. ಸಮಾಜ ಕಲ್ಯಾಣ ಯೋಜನೆಗಳು, ಪಡಿತರ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಸಬ್ಸಿಡಿ... ಹೀಗೆ ನೇರ ನಗದು ವರ್ಗಾವಣೆಯ 78 ಯೋಜನೆಗಳನ್ನು  ಆಧಾರ್‌ಗೆ ಜೋಡಿಸಲಾಗಿದೆ.

ADVERTISEMENT

‘ಇದರಿಂದ ₹ 34 ಸಾವಿರ ಕೋಟಿಗೂ ಹೆಚ್ಚು ಹಣ ಸಬ್ಸಿಡಿ ರೂಪದಲ್ಲಿ ಅನರ್ಹರ ಪಾಲಾಗುವುದು   ತಪ್ಪುತ್ತದೆ; ಬೊಕ್ಕಸಕ್ಕೆ ಉಳಿತಾಯವಾಗುತ್ತದೆ’ ಎಂದು ಕೇಂದ್ರ ಹಣಕಾಸು ಖಾತೆ ಕಾರ್ಯದರ್ಶಿಯೇ ಹೇಳಿದ್ದಾರೆ.  ಈಗ ಕೋರ್ಟ್ ಅನುಮೋದನೆಯೂ ಸಿಕ್ಕಿದ ಕಾರಣ ಆದಾಯ ತೆರಿಗೆಗೆ ಸಂಬಂಧಿಸಿದ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಮತ್ತು ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವಾಗ ಆಧಾರ್ ಸಂಖ್ಯೆ ನಮೂದಿಸುವುದು ಅನಿವಾರ್ಯವಾಗಲಿದೆ.

ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್‌ ಕಾರ್ಡ್‌ಗಳನ್ನು ಇಟ್ಟುಕೊಂಡು ತೆರಿಗೆ ವಂಚಿಸುವುದಕ್ಕೆ ಕಡಿವಾಣ ಹಾಕಲು ಆಧಾರ್‌ ಜೋಡಣೆ ಅತ್ಯಂತ ಪರಿಣಾಮಕಾರಿ ಮಾರ್ಗ ಎಂಬ ಸರ್ಕಾರದ ವಾದದಲ್ಲಿ ಹುರುಳಿದೆ. ತೆರಿಗೆ ತಪ್ಪಿಸುವುದನ್ನು ತಡೆಯುವ ಅದರ ಉದ್ದೇಶ ಇನ್ನು ಫಲಿಸುತ್ತದೆ. ತೆರಿಗೆ ಆಡಳಿತದಲ್ಲಿ ಇರುವ ಲೋಪದೋಷ ಸರಿಪಡಿಸಲು ಈ ಅವಕಾಶವನ್ನು ಸರ್ಕಾರ ಉಪಯೋಗಿಸಿಕೊಳ್ಳಬೇಕು.

ಆಧಾರ್‌ ಸಂಖ್ಯೆ ಇಲ್ಲ ಎಂಬ ಕಾರಣಕ್ಕಾಗಿ ಪ್ಯಾನ್‌ ಕಾರ್ಡ್‌ಗಳನ್ನು ಅಸಿಂಧುಗೊಳಿಸುವಂತಿಲ್ಲ ಎಂದು ಕೋರ್ಟ್ ತಾತ್ಕಾಲಿಕ ವಿನಾಯಿತಿಯನ್ನೇನೋ ನೀಡಿದೆ. ಆದರೆ ಅದರಿಂದ  ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತದೆ ಎನ್ನುವುದನ್ನೂ ನೋಡಬೇಕು. ಏಕೆಂದರೆ ಕೇಂದ್ರ ನೇರ ತೆರಿಗೆ ಮಂಡಳಿ ಶನಿವಾರ ನೀಡಿದ ಸ್ಪಷ್ಟೀಕರಣದ ಪ್ರಕಾರ, ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಮತ್ತು ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಸಂಖ್ಯೆ ನಮೂದಿಸುವುದು ಕಡ್ಡಾಯ. ಆಧಾರ್ ಸಂಖ್ಯೆ ಹೊಂದಿದವರು ಪ್ಯಾನ್‌ ಕಾರ್ಡ್‌ಗೆ ಅದನ್ನು ಜೋಡಿಸಲೇಬೇಕು. ಇಲ್ಲದಿದ್ದರೆ ಅವರು ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಬರೀ ಪ್ಯಾನ್‌ ಕಾರ್ಡ್ ಇಟ್ಟುಕೊಂಡು ಹೆಚ್ಚೆಂದರೆ ಸಣ್ಣಪುಟ್ಟ ಸಾಮಾನ್ಯ ಹಣಕಾಸು ವಹಿವಾಟು ನಿರ್ವಹಿಸಬಹುದು.

ನಮ್ಮ ಸರ್ಕಾರಿ ವ್ಯವಸ್ಥೆಯ ದಕ್ಷತೆಯ ಬಗ್ಗೆ ಅಪನಂಬಿಕೆಗಳು ಇದ್ದೇ ಇವೆ. ಏಕೆಂದರೆ ಬೇರೆ ಬೇರೆ ಮಾಹಿತಿಗಳು ಖಾಸಗಿಯವರ, ಅನಪೇಕ್ಷಿತ ವ್ಯಕ್ತಿಗಳ ಕೈಗೆ ಸಿಕ್ಕ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಆಧಾರ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿನ ವಿವರಗಳು ಬಹಿರಂಗಗೊಂಡಿದ್ದವು. ಬೆಂಗಳೂರಿನಲ್ಲಿ ಪಾಕಿಸ್ತಾನದ ಪ್ರಜೆಗಳು ಆಧಾರ್ ಕಾರ್ಡ್ ಪಡೆದುಕೊಂಡ ಪ್ರಸಂಗವೂ ನಡೆದಿದೆ. 

ಆದ್ದರಿಂದ, ಆಧಾರ್‌ಗೆ ಸಂಗ್ರಹಿಸಲಾಗುವ ಜೈವಿಕ ಮತ್ತು ಇತರ ಮಾಹಿತಿಗಳು ಸೋರಿಕೆಯಾಗಬಹುದು ಎಂಬ ಆತಂಕವನ್ನು ಹೋಗಲಾಡಿಸುವುದು ಸರ್ಕಾರದ ಕರ್ತವ್ಯ. ದತ್ತಾಂಶಗಳ ಸುರಕ್ಷತೆ, ಭದ್ರತೆ ಬಗ್ಗೆ ಅದು ಕಾಳಜಿ ವಹಿಸಬೇಕು. ಆಧಾರ್ ಮಾಹಿತಿ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಯಾರಾದರೂ ತಪ್ಪು ಮಾಡಿದರೆ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ನಾಗರಿಕರ ವಿಶ್ವಾಸ ಉಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.