ADVERTISEMENT

ಬೇಜವಾಬ್ದಾರಿತನದ ಪರಮಾವಧಿ ಇನ್ನೂ ವಿಳಂಬ ಸಲ್ಲದು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2017, 19:30 IST
Last Updated 9 ಆಗಸ್ಟ್ 2017, 19:30 IST
ಬೇಜವಾಬ್ದಾರಿತನದ ಪರಮಾವಧಿ ಇನ್ನೂ ವಿಳಂಬ ಸಲ್ಲದು
ಬೇಜವಾಬ್ದಾರಿತನದ ಪರಮಾವಧಿ ಇನ್ನೂ ವಿಳಂಬ ಸಲ್ಲದು   

ನಗರಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಒಂದು ರಾಷ್ಟ್ರೀಯ ಹೆದ್ದಾರಿಯನ್ನು ಡಿನೋಟಿಫೈ ಮಾಡಿ ಸ್ಥಳೀಯ ರಸ್ತೆ ಎಂದು ಘೋಷಿಸಲು ಎಷ್ಟು ದಿನ ಅಥವಾ ಎಷ್ಟು ತಿಂಗಳು ಬೇಕು? ‘ಇದು ಒಬ್ಬ ಸಾಮಾನ್ಯ ಗುಮಾಸ್ತ ಮಾಡಬಹುದಾದ ಕೆಲಸ’ ಎಂದು ರಾಜ್ಯ ಹೈಕೋರ್ಟ್ ಮೂರು ವಾರಗಳ ಹಿಂದೆಯೇ ಕೇಂದ್ರ– ರಾಜ್ಯ ಸರ್ಕಾರಗಳ ಕಿವಿ ಹಿಂಡಿದೆ.

ಇದರರ್ಥ ಇಷ್ಟೇ, ‘ಇದೇನೂ ಮಹಾ ಘನಂದಾರಿ ಕೆಲಸ ಅಲ್ಲ; ಬೇಗ ಮಾಡಬಹುದು’. ಆದರೂ ಎರಡೂ ಸರ್ಕಾರಗಳು ತ್ವರಿತ ಕ್ರಮ ತೆಗೆದುಕೊಳ್ಳದೆ ವಿನಾಕಾರಣ ವಿಳಂಬ ಮಾಡುತ್ತಿವೆ.

ಬೆಂಗಳೂರಿನ 77 ಕಿ.ಮೀ. ಸೇರಿದಂತೆ ರಾಜ್ಯದಲ್ಲಿನ ನಗರ ಪ್ರದೇಶಗಳ 858 ಕಿ.ಮೀ. ಹೆದ್ದಾರಿ ಡಿನೋಟಿಫೈ ಮಾಡಲು ರಾಜ್ಯ ಸರ್ಕಾರ ಜೂನ್‌ 15ರಂದು ಪ್ರಸ್ತಾವನೆ ಕಳಿಸಿ ಕೈಕಟ್ಟಿ ಕುಳಿತುಕೊಂಡಿತ್ತು. ಅದಕ್ಕೆ ಕೇಂದ್ರ ಸರ್ಕಾರ ಈಗ ಇನ್ನಷ್ಟು ವಿವರಣೆ ಕೇಳಿದೆ. ಇದು ಬರೀ ಕಾಲಹರಣ. ಇದರ ಪರಿಣಾಮ ಎಂದರೆ, ಹೆದ್ದಾರಿಯ 500 ಮೀಟರ್‌ ಇಕ್ಕೆಲಗಳಲ್ಲಿ ಮದ್ಯದ ಅಂಗಡಿಗಳು ಇರುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶದ ನಂತರ ಬೆಂಗಳೂರು ಮಹಾನಗರವೊಂದರಲ್ಲಿಯೇ ಮುಚ್ಚಿರುವ 630ಕ್ಕೂ ಹೆಚ್ಚು ಮದ್ಯದ ಅಂಗಡಿಗಳು ಇನ್ನೂ ತೆರೆದಿಲ್ಲ.

ADVERTISEMENT

ಇಡೀ ರಾಜ್ಯದಲ್ಲಿ ಬೀಗ ಹಾಕಿರುವ ಮದ್ಯದ ಅಂಗಡಿಗಳ ಸಂಖ್ಯೆ 2,987. ಇವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸಹಸ್ರಾರು ನೌಕರರು ಬೀದಿಪಾಲಾಗಿದ್ದಾರೆ. ಅತ್ತ ಪರ್ಯಾಯ ಕೆಲಸವೂ ಇಲ್ಲ. ದುಬಾರಿಯ ದಿನಗಳಲ್ಲಿ ಅವರು ಕುಟುಂಬವನ್ನು ಸಾಕುವುದಾದರೂ ಹೇಗೆ? ಸರ್ಕಾರಗಳಿಗೆ ಜನರ ಈ ಕಷ್ಟದ ಅರಿವೇ ಆಗುತ್ತಿಲ್ಲ.

ಬೇಜವಾಬ್ದಾರಿಯ ಪರಮಾವಧಿ ಎಂದರೆ ಇದು. ‘ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತು ಹೊಣೆಗೇಡಿತನದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ’ ಎಂದು ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾತ್ರ ತಮಗೇನೂ ಆಗಿಯೇ ಇಲ್ಲ ಎಂಬಂತಿವೆ.

ಜನರ ಬಗ್ಗೆ ಕಾಳಜಿ, ಕನಿಕರ ತೋರಿಸದೆ ತೂಕಡಿಸುತ್ತಿವೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಜಾಸ್ತಿ. ಏಕೆಂದರೆ ಅಬಕಾರಿ ಶುಲ್ಕ ಸಂಗ್ರಹ, ಮದ್ಯದ ಅಂಗಡಿಗಳ ಪರವಾನಗಿ, ನಿಯಂತ್ರಣಗಳೆಲ್ಲ ಅದರ ಅಧಿಕಾರ ವ್ಯಾಪ್ತಿಯ ವಿಷಯ. ಹೀಗಾಗಿ ಅದು ಕೇಂದ್ರದ ಮೇಲೆ ಒತ್ತಡ ತರಬೇಕಾಗಿತ್ತು.

ಕಳೆದ ತಿಂಗಳು ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಕೀಲರು ‘ಬೆಂಗಳೂರು ನಗರ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ, ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ವಿವರಣೆ ನೀಡಿದ್ದರು. ‘ನಗರಗಳ ಮಿತಿಯೊಳಗೆ ಬರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿ ಸ್ಥಳೀಯ ರಸ್ತೆ ಎಂದು ಪರಿಗಣಿಸುವುದು ತಪ್ಪೇನಲ್ಲ; ಅದಕ್ಕೆ ಯಾವುದೇ ಆಕ್ಷೇಪವೂ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಒಂದು ತಿಂಗಳ ಹಿಂದೆಯೇ ಹೇಳಿತ್ತು.

ರಾಜ್ಯ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಅಸ್ತ್ರ ಬೇರೇನು ಬೇಕಿತ್ತು? ಬೆಂಗಳೂರಿನ ವಿಷಯಕ್ಕೇ ಬರುವುದಾದರೆ, ಬ್ರಿಗೇಡ್‌ ರಸ್ತೆ, ಮಹಾತ್ಮ ಗಾಂಧಿ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಸ್ವರೂಪ ಕಳೆದುಕೊಂಡು ಯಾವುದೋ ಕಾಲವಾಗಿದೆ. ಇವು ರಾಷ್ಟ್ರೀಯ ಹೆದ್ದಾರಿಗಳು ಎಂದರೆ ಜನ ನಗುತ್ತಾರೆ.

ಇವನ್ನು ಬಿಬಿಎಂಪಿಯೇ ನಿರ್ವಹಿಸುತ್ತಿದೆ. ಆದರೂ ಇಲ್ಲಿ ಮದ್ಯದಂಗಡಿಗಳಿಗೆ ಬೀಗ ಹಾಕಿಸಲಾಗಿದೆ. ಇದೇ ಸ್ಥಿತಿ ರಾಜ್ಯದ ಪ್ರಮುಖ ನಗರ, ಪಟ್ಟಣಗಳಲ್ಲೂ ಇದೆ. ಹೀಗಿದ್ದೂ ಕೇಂದ್ರ– ರಾಜ್ಯ ಸರ್ಕಾರಗಳು ಇನ್ನೂ ಪ್ರಸ್ತಾವ– ವಿವರಣೆ ಹಂತ ದಾಟಿ ಮುಂದೆ ಹೋಗಿಲ್ಲ.

ಹೆದ್ದಾರಿ ಉದ್ದಕ್ಕೂ ಮದ್ಯ ಸಿಕ್ಕರೆ ಚಾಲಕರು ಕುಡಿದು ಯದ್ವಾತದ್ವಾ ವಾಹನ ಓಡಿಸುತ್ತಾರೆ. ಇದು ತೀರಾ ಅಪಾಯಕಾರಿ. ಇದನ್ನು ತಡೆಯಬೇಕು ಎಂಬ ಸದುದ್ದೇಶ ಸುಪ್ರೀಂ ಕೋರ್ಟ್ ಆದೇಶದ ಹಿಂದಿದೆ. ಆದರೆ, ನಗರ ಪ್ರದೇಶದ ಒಳಗೆ ದಟ್ಟಣೆಯಿಂದಾಗಿ ವಾಹನಗಳು ವೇಗವಾಗಿ ಚಲಿಸಲು ಸಾಧ್ಯವಿಲ್ಲ. ಅಲ್ಲೆಲ್ಲ ನಿಯಮ ಸಡಿಲಿಸಬಹುದು ಎಂದೂ ಅದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ನಿರ್ಧಾರ ತೆಗೆದುಕೊಳ್ಳುವಲ್ಲಿ ಈಗಾಗಲೇ ಬಹಳಷ್ಟು ತಡವಾಗಿದೆ; ಬೊಕ್ಕಸಕ್ಕೂ ಹಾನಿಯಾಗಿದೆ. ಈ ಪ್ರವೃತ್ತಿ ಇಲ್ಲಿಗೇ ನಿಲ್ಲಲಿ. ತಕ್ಷಣವೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಎಲ್ಲ ಮಾಹಿತಿಯನ್ನು ಕೊಡಬೇಕು. ಕೇಂದ್ರ ಸರ್ಕಾರ ಕೂಡ ಸ್ಪಂದಿಸಬೇಕು. ಕೆಲಸ ಕಳೆದುಕೊಂಡು ಕಂಗಾಲಾಗಿರುವ ಜನರ ತಾಳ್ಮೆಗೂ ಮಿತಿಯಿದೆ ಎನ್ನುವುದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.