ADVERTISEMENT

ವಿಮಾನಯಾನ: ದುರ್ವರ್ತನೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 20:09 IST
Last Updated 26 ಮಾರ್ಚ್ 2017, 20:09 IST
ವಿಮಾನಯಾನ: ದುರ್ವರ್ತನೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ
ವಿಮಾನಯಾನ: ದುರ್ವರ್ತನೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ   

ಅಧಿಕಾರದ ಮದ ಮಿತಿಮೀರಿದಾಗ ಜನ ವಿವೇಕವನ್ನೇ ಕಳೆದುಕೊಳ್ಳುವುದುಂಟು. ಇದಕ್ಕೆ ದ್ಯೋತಕ, ಕಳೆದ ವಾರ ಪುಣೆಯಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಮಹಾರಾಷ್ಟ್ರದ ಶಿವಸೇನಾ ಸಂಸತ್ ಸದಸ್ಯ ರವೀಂದ್ರ ಗಾಯಕ್‌ವಾಡ್ ಅವರು ತೋರಿದ ಉದ್ಧಟತನದ ವರ್ತನೆ. ಬರೀ ಎಕಾನಮಿ ದರ್ಜೆ  ಸೀಟುಗಳಿದ್ದ  ಪುಣೆ– ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ದರ್ಜೆ  ಸೀಟ್ ನೀಡಲಿಲ್ಲ ಎಂದು ವಿಮಾನ ಸಿಬ್ಬಂದಿಯ ಜೊತೆ ಅವರು ವರ್ತಿಸಿರುವ ರೀತಿ ಆಘಾತಕಾರಿಯಾದುದು. 

ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಲ್ಲಿ ಹೊಡೆದಿರುವುದಾಗಿ ಅವರೇ ಸ್ವತಃ ಟಿ.ವಿ. ಚಾನೆಲ್‌ಗಳ ಮುಂದೆ ಜಂಬ ಕೊಚ್ಚಿಕೊಂಡಿರುವುದಂತೂ ಹೇಯವಾದುದು. ತಮ್ಮ ಪಕ್ಷದ ಸಂಸತ್ ಸದಸ್ಯನ ಈ ದುಂಡಾವರ್ತನೆಗೆ ಶಿವಸೇನೆ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದೇನೂ  ನಿರೀಕ್ಷಿಸುವಂತಿಲ್ಲ.  ತಮ್ಮ  ವರ್ತನೆಯ ಬಗ್ಗೆ ನಿಗಾ ಇಟ್ಟುಕೊಂಡಿರಬೇಕಿತ್ತು ಎಂದಷ್ಟೇ ಈ ಘಟನೆಗೆ ಅದು ಪ್ರತಿಕ್ರಿಯಿಸಿದೆ. ಈ ಹಿಂದೆ ದೆಹಲಿಯ ‘ಮಹಾರಾಷ್ಟ್ರ ಸದನ’­ದಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಕಾರಣಕ್ಕಾಗಿ ರಮ್ಜಾನ್ ಉಪವಾಸ ವ್ರತದಲ್ಲಿದ್ದ  ನೌಕರನಿಗೆ ಬಲವಂತವಾಗಿ ಚಪಾತಿ ತಿನ್ನಿಸಿದ  ಶಿವಸೇನೆಯ ಸಂಸತ್ ಸದಸ್ಯರ ಗುಂಪಿನಲ್ಲೂ ರವೀಂದ್ರ ಗಾಯಕ್‌ವಾಡ್‌ ಇದ್ದರು. ಹೀಗಾಗಿ ಇಂತಹ ಗೂಂಡಾ ವರ್ತ­ನೆ­ಗಿ­ಳಿ­ಯು­ವುದು ಶಿವಸೇನೆಗೆ  ಹೊಸತೇನೂ ಅಲ್ಲ.  ಶಿವಸೇನೆಯ ಮಿತ್ರ ಪಕ್ಷವಾಗಿರುವ ಬಿಜೆಪಿ ಅಥವಾ ಲೋಕಸಭೆ ಸ್ಪೀಕರ್, ಈ ಸಂಸತ್ ಸದಸ್ಯನ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳುತ್ತಾರೆಂದೂ ನಿರೀಕ್ಷಿಸಲಾಗದು. ಹೀಗಿದ್ದೂ ಈ ವಿಷಯವನ್ನು ಇಲ್ಲಿಗೇ ಬಿಡಬಾರದು.  ತಮ್ಮ  ದುರ್ವರ್ತನೆಗಳಿಗೆ ತಕ್ಕ ಶಿಕ್ಷೆಯನ್ನು ಅವರು ಅನುಭವಿಸಲೇಬೇಕು.

ಅಧಿಕಾರ ಬಲದಿಂದಾಗಿ ವಿಶೇಷ ಸವಲತ್ತುಗಳನ್ನು ಹೊಂದಬಯಸುವ ಸಂಸತ್ ಸದಸ್ಯರು ವಿಮಾನ ಹಾರಾಟವನ್ನು ವಿಳಂಬ ಮಾಡಿದಂತಹ ಅನೇಕ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಆದರೆ ಈ ಬಗೆಯ ದೈಹಿಕ ಹಲ್ಲೆ ಅತಿರೇಕದ್ದು. ಗಾಯಕ್‌ವಾಡ್ ಅವರು ತಮ್ಮ ದುಂಡಾವರ್ತಿಗೆ  ಕ್ಷಮಾಪಣೆ ಕೋರದೇ ಇರುವುದರಿಂದ  ಅವರು ತಮ್ಮ ವಿಮಾನಗಳಲ್ಲಿ ಪ್ರಯಾಣಿಸುವುದಕ್ಕೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಹಾಗೂ ಆರು ಖಾಸಗಿ ಏರ್‌ಲೈನ್‌ಗಳು ನಿಷೇಧ ಹೇರಿವೆ. ಜೊತೆಗೆ ಎರಡು ವಿಮಾನ ಸಂಸ್ಥೆಗಳು ರವೀಂದ್ರ ಅವರು  ಖರೀದಿಸಿದ್ದ  ಟಿಕೆಟ್ ಕೂಡ ರದ್ದುಪಡಿಸಿದವು. ಎಲ್ಲಾ ಏರ್‌ಲೈನ್ಸ್‌ ಸಂಸ್ಥೆಗಳು ಹೀಗೆ  ಒಗ್ಗಟ್ಟಾಗಿ ಪ್ರತಿರೋಧ ತೋರಿದ್ದು  ಶ್ಲಾಘನೀಯ. ದುರ್ವರ್ತನೆಗಳಿಗೆ ನಾಗರಿಕ ಸಮಾಜದಲ್ಲಿ ಅವಕಾಶವಿಲ್ಲ ಎಂಬಂತಹ ಸಂದೇಶವನ್ನು ಈ ಕ್ರಿಯೆ ನೀಡುತ್ತದೆ. ಹೀಗಾಗಿ ದೆಹಲಿಯಿಂದ ಮುಂಬೈಗೆ ಗಾಯಕ್‌ವಾಡ್‌ ಅವರು ರೈಲಿನಲ್ಲಿ ಮರಳಬೇಕಾಯಿತು.

ADVERTISEMENT

ಪ್ರಯಾಣಕ್ಕೆ ನಿರ್ಬಂಧ ಹೇರುವ ಅಥವಾ ಟಿಕೆಟ್‌ ನಿರಾಕರಿಸುವ ಕಾನೂನು ಇಲ್ಲ ಎಂದು ಕೇಂದ್ರದ ಕಾನೂನು ಇಲಾಖೆಯ ರಾಜ್ಯ ಸಚಿವ ಪಿ.ಪಿ. ಚೌಧರಿ ಈ ಮಧ್ಯೆ ಹೇಳಿದ್ದಾರೆ. ‘ಯಾರಾದರೂ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ವಿಧಿಸಬಹುದು. ಅದರ ಬದಲಿಗೆ ಅವರು ಪ್ರಯಾಣಿಸದಂತೆ ಟಿಕೆಟ್‌ ನಿರಾಕರಿಸುವುದು ದೊಡ್ಡ ತಪ್ಪು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಮಾನಯಾನ ಸಂದರ್ಭದಲ್ಲಿ ಅನಪೇಕ್ಷಣೀಯ ವರ್ತನೆಗಳನ್ನು ನಿಯಂತ್ರಿಸಲು ಸಾಂಸ್ಥಿಕ ವ್ಯವಸ್ಥೆಯೊಂದನ್ನು ರೂಪಿಸಲು ಪ್ರಯತ್ನಿಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ  ಪಿ. ಅಶೋಕ್ ಗಜಪತಿರಾಜು ಅವರು ಹೇಳಿರುವುದು ಸ್ವಾಗತಾರ್ಹ. ಈ ಪ್ರಕ್ರಿಯೆಯನ್ನು ಸಚಿವರು ತ್ವರಿತಗೊಳಿಸಬೇಕು. 

ದುರ್ವರ್ತನೆ ತೋರುವ ವ್ಯಕ್ತಿಗಳನ್ನು ನಿಷೇಧಿಸುವಂತಹ ವಿಚಾರ 2014ರಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಕಟಿಸಿರುವ ‘ನಾಗರಿಕ ವಿಮಾನ ಯಾನ ಸಂದರ್ಭದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳ ಪಟ್ಟಿ’ಯಲ್ಲೂ ಪ್ರಸ್ತಾಪಗೊಂಡಿದೆ. ಆದರೆ ಇದಕ್ಕಾಗಿ ಅಂತಹವರನ್ನು ಪತ್ತೆ ಮಾಡುವ ಯಾವುದೇ ವಿಧಾನವನ್ನೂ ರೂಪಿಸಿಲ್ಲ. ದುರ್ವರ್ತನೆ ತೋರಬಹುದಾದವರ ಮೇಲೆ ಸೂಕ್ತ ನಿಗಾ ಇಡಬೇಕು. ಅಗತ್ಯ ಬಿದ್ದಲ್ಲಿ ವಿಮಾನ ಏರಲು ಬಿಡಬಾರದು ಹಾಗೂ ವಿಮಾನದಿಂದ ಕೆಳಗಿಳಿಸಬೇಕು ಎಂದಷ್ಟೇ ಇದು ಹೇಳುತ್ತದೆ.  ಹೀಗಾಗಿ, ಇಂತಹವರ ಅಧಿಕೃತ ಪಟ್ಟಿ ಸಿದ್ಧಪಡಿಸಲೂ (ನೋ ಫ್ಲೈ ಲಿಸ್ಟ್) ಇದು ಸಕಾಲ. ಅಮೆರಿಕದಲ್ಲಿ ಇಂತಹ ವ್ಯವಸ್ಥೆ ಈಗಾಗಲೇ  ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.