ADVERTISEMENT

ಸಮುದ್ರದಲ್ಲಿ ತೈಲ ಸೋರಿಕೆ ನಿರ್ವಹಣಾ ಸನ್ನದ್ಧತೆ ಸಾಲದು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2017, 19:43 IST
Last Updated 5 ಫೆಬ್ರುವರಿ 2017, 19:43 IST
ಸಮುದ್ರದಲ್ಲಿ ತೈಲ ಸೋರಿಕೆ ನಿರ್ವಹಣಾ ಸನ್ನದ್ಧತೆ ಸಾಲದು
ಸಮುದ್ರದಲ್ಲಿ ತೈಲ ಸೋರಿಕೆ ನಿರ್ವಹಣಾ ಸನ್ನದ್ಧತೆ ಸಾಲದು   

ಚೆನ್ನೈ ತೀರದಲ್ಲಿ ಹಡಗಿನಿಂದ ಸೋರಿಕೆಯಾಗಿ ಸಮುದ್ರದ ನೀರಿನ ಮೇಲೆ ಹರಡಿಕೊಂಡ ತೈಲದ  ಜಿಡ್ಡು ತೆಗೆಯುವ ಕಾರ್ಯ ಆರು ದಿನಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಅದರ ವೇಗ ನೋಡಿದರೆ, ಪೂರ್ಣಗೊಳ್ಳಲು ಇನ್ನೂ ಕೆಲ ದಿನಗಳೇ ಬೇಕು. ಈ ಸೋರಿಕೆಯಿಂದ ಈಗಲೇ ಸಾಕಷ್ಟು ಅನಾಹುತ ಆಗಿದೆ. ಲೆಕ್ಕವಿಲ್ಲದಷ್ಟು ಜಲಚರಗಳು ಅಸು ನೀಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಇದು ನಮ್ಮಲ್ಲಿರುವ ಸನ್ನದ್ಧತೆಯ ಕೊರತೆಯನ್ನು, ಇಂತಹ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ನಮಗಿರುವ ಜ್ಞಾನ ಸಾಲದು ಎಂಬ  ವಾಸ್ತವವನ್ನು ಎತ್ತಿ ತೋರಿಸುತ್ತಿದೆ. ಪ್ರಮುಖ ಬಂದರು ಹೊಂದಿರುವ, ಸಮುದ್ರ ಮಾರ್ಗದ ವ್ಯಾಪಾರ ವಹಿವಾಟುಗಳು ಮತ್ತು ಕಡಲ ಸುರಕ್ಷತೆಗೆ ಸಂಬಂಧಿಸಿದ ಅನೇಕ ಸಂಸ್ಥೆಗಳು, ಇಲಾಖೆಗಳ ಪ್ರಧಾನ ಕೇಂದ್ರಗಳು ಇರುವ ಚೆನ್ನೈಯಲ್ಲೇ ಇಂತಹ ಸ್ಥಿತಿ ಇದೆ ಎನ್ನುವುದು ಆಶ್ಚರ್ಯವಷ್ಟೇ ಅಲ್ಲ, ಆತಂಕಕಾರಿಯೂ ಹೌದು.

ಏಕೆಂದರೆ ಹಡಗುಗಳ ಎಂಜಿನ್‌ ಆಯಿಲ್‌, ಅವು ಸಾಗಿಸುವ ತೈಲ ಮುಂತಾದವುಗಳ ಸೋರಿಕೆಯ ದುಷ್ಪರಿಣಾಮ ಅಲ್ಪಾವಧಿಯದಲ್ಲ; ದೀರ್ಘಾವಧಿಯದು. ಅದು ಸಮುದ್ರದ ಜೀವಜಾಲಕ್ಕೆ ಕಂಟಕ ತರಬಲ್ಲದು. ಚೆನ್ನೈ ಕಡಲ ತೀರಕ್ಕೆ ಬಂದು ಬಿದ್ದ ಆಮೆಗಳ ಮೃತ ದೇಹಗಳು, ಸತ್ತ ಮೀನುಗಳು ಇಂತಹ ಜೈವಿಕ ಸಂಕಷ್ಟದ ಮುನ್ಸೂಚನೆ ನೀಡಿವೆ. ನೀರಿನ ಮೇಲೆ ತೇಲುವ ತೈಲದ ಪದರ ಅಥವಾ ಎಣ್ಣೆಯ ಜಿಡ್ಡಿನಿಂದ ಆಹಾರ ಮತ್ತು ಆಮ್ಲಜನಕದ ಕೊರತೆ ಕಾಣಿಸಿಕೊಂಡು ಜಲಚರಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಸೂರ್ಯನ ಬೆಳಕು ಸಾಗರದ ಕೆಳಗೆ ಹೋಗದಂತೆ ತಡೆಯುತ್ತದೆ. ಇದರಿಂದ ಜಲ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅದನ್ನು ಅವಲಂಬಿಸಿದ ಜೀವರಾಶಿಗಳು ಅಪಾಯಕ್ಕೆ ಸಿಕ್ಕಿಹಾಕಿಕೊಳ್ಳುತ್ತವೆ. ಕಡಲ ಸಂಪತ್ತನ್ನೇ ನೆಚ್ಚಿಕೊಂಡ ಮೀನುಗಾರರ ಬದುಕು ಏರುಪೇರಾಗುತ್ತದೆ.

ಕಲುಷಿತ ಸಮುದ್ರದಲ್ಲಿ ಸಿಕ್ಕ ಮೀನುಗಳನ್ನು ಸೇವಿಸುವವರು ಉಸಿರುಕಟ್ಟುವಿಕೆ, ಚರ್ಮ ರೋಗ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಒಂದು ಘಟನೆಯಿಂದ ಎಲ್ಲ ಬಗೆಯ ಜೀವಜಾಲದ ಮೇಲೆ ಸರಣಿ ಪರಿಣಾಮಗಳಾಗುತ್ತವೆ ಎಂದು ಗೊತ್ತಿದ್ದೂ ಮುನ್ನೆಚ್ಚರಿಕೆ ಮತ್ತು ಸಮರ್ಪಕ ನಿರ್ವಹಣಾ ವ್ಯವಸ್ಥೆ ಮಾಡಿಕೊಳ್ಳದೇ ಇರುವುದು ಗಂಭೀರ ಲೋಪ. ಅದರಲ್ಲೂ ಸಾವಿರಾರು ಕಿಲೋಮೀಟರ್‌ ಉದ್ದದ ಕಡಲ ತಡಿ, ನೂರಾರು ಸಣ್ಣ ಮತ್ತು ದೊಡ್ಡ ಬಂದರುಗಳು, ಗಣನೀಯ ಸಂಖ್ಯೆಯಲ್ಲಿ ಹಡಗುಗಳು ಸಂಚಾರ ಇರುವಾಗ ಇಂತಹ ಅವಘಡಗಳು ನಡೆಯುವ ಸಂಭವ ಹೆಚ್ಚು. ಅಲ್ಲದೆ ತೈಲ ಸೋರಿಕೆ ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಸಲ ಆಗಿವೆ. ನಮ್ಮಲ್ಲಷ್ಟೇ ಅಲ್ಲದೆ ವಿಶ್ವದ ಬೇರೆ ಬೇರೆ ದೇಶಗಳೂ ಇಂತಹ ಸಮಸ್ಯೆಯನ್ನು ಎದುರಿಸಿವೆ. ಆ ಅನುಭವವನ್ನಾದರೂ ಬಳಸಿಕೊಂಡು ನಾವು ಸದಾ ಸಜ್ಜಾಗಿರಬೇಕಿತ್ತು. ಆದರೆ ಇಲ್ಲಿ, ಈ ವಿಚಾರದಲ್ಲಿ ನಮ್ಮ ಲೋಪ ಎದ್ದು ಕಾಣುತ್ತಿದೆ.

ಹಡಗುಗಳ ಡಿಕ್ಕಿ ನಡೆದದ್ದು ಜನವರಿ 28ರ ಬೆಳಗಿನ ಜಾವ ಕಾಮರಾಜರ್‌ ಬಂದರಿನಲ್ಲಿ.  ಎಲ್‌ಪಿಜಿ ಇಳಿಸಿ ಹೋಗುತ್ತಿದ್ದ  ಹಡಗು ಮತ್ತು 33 ಸಾವಿರ ಟನ್‌ ತೈಲ, ಕೀಲೆಣ್ಣೆ ತರುತ್ತಿದ್ದ ಹಡಗಿನ ನಡುವೆ. ಒಂದು ಹಡಗಿನ ಎಂಜಿನ್‌ ಭಾಗಕ್ಕೆ ಮತ್ತೊಂದು ಹಡಗು ಅಪ್ಪಳಿಸಿದ್ದರಿಂದ 70–80 ಟನ್‌ನಷ್ಟು  ಎಂಜಿನ್‌ ಆಯಿಲ್‌ ಮಾತ್ರ ಸೋರಿಕೆಯಾಯಿತು. ಒಂದು ವೇಳೆ ಅದರಲ್ಲಿದ್ದ ಅಪಾರ ತೈಲವೇನಾದರೂ ಸಮುದ್ರ ಸೇರಿದ್ದರೆ ಅನಾಹುತ ಇನ್ನಷ್ಟು ಭೀಕರವಾಗುತ್ತಿತ್ತು. ಈಗಂತೂ ಜಿಪಿಎಸ್‌ ಮತ್ತಿತರ ಆಧುನಿಕ ಸಾಧನಗಳಿವೆ. ಯಾವ ಹಡಗು ಎಲ್ಲಿದೆ ಎಂಬ ಮಾಹಿತಿ ಸಿಗುತ್ತದೆ. ಹೀಗಿರುವಾಗ ಬಂದರಿನ  ಸಮೀಪದಲ್ಲೇ ಡಿಕ್ಕಿ ಸಂಭವಿಸಿದೆ ಎಂದರೆ ಎರಡೂ ಹಡಗುಗಳ ಚಾಲಕ ಸಿಬ್ಬಂದಿ ಮತ್ತು ಬಂದರು ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ.

ಚೆನ್ನೈಯ ಒಳಚರಂಡಿಗಳನ್ನು ಸ್ವಚ್ಛ ಮಾಡುವ ಸೂಪರ್‌ ಸಕ್ಕರ್‌ಗಳನ್ನು  ತೈಲದ ಜಿಡ್ಡು ಹೀರಲು ಬಳಸಲಾಗಿದೆ. ವಿವಿಧ ಪ್ರಾಧಿಕಾರಗಳ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಬಕೆಟ್‌ಗಳನ್ನು ಹಿಡಿದು ಕೈಯಿಂದ ಜಿಡ್ಡು ಹೊರ ತೆಗೆಯುತ್ತಿರುವುದು, ವೈಜ್ಞಾನಿಕವಾಗಿ ನಿರ್ವಹಿಸುವುದರಲ್ಲಿ ನಾವೆಷ್ಟು ಹಿಂದೆ ಇದ್ದೇವೆ ಎನ್ನುವುದಕ್ಕೆ ಸಾಕ್ಷಿ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಂತಹ ಮಾನವ ನಿರ್ಮಿತ ಅವಘಡಗಳನ್ನು ಎದುರಿಸುವ ಶಾಶ್ವತ ವ್ಯವಸ್ಥೆ ರೂಪಿಸಬೇಕು. ಈಗಿನ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.