ADVERTISEMENT

ಸ್ವಯಂಕೃತ ಅಪರಾಧ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ಮಾರನ್‌ ಕುಟುಂಬದ ಸನ್‌ ಸಮೂಹಕ್ಕೆ ಸೇರಿದ ವಿಮಾನ ಸಂಸ್ಥೆ ಸ್ಪೈಸ್‌ಜೆಟ್‌ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಬಾಕಿ ಉಳಿಸಿ­ಕೊಂಡಿದ್ದ­ಕ್ಕಾಗಿ ತೈಲ ಸಂಸ್ಥೆಗಳು ಇಂಧನ ಪೂರೈಕೆ ನಿಲ್ಲಿಸಿದ್ದರಿಂದ ಬುಧವಾರ ಸುಮಾರು 150 ಮಾರ್ಗಗಳಲ್ಲಿ ಅದರ ವಿಮಾನಗಳ ಹಾರಾಟ ರದ್ದಾ­ಗಿತ್ತು. ಹಣ ಹೊಂದಿಸಿಕೊಂಡು ಸಂಜೆ ಪಾವತಿಸಿದ ನಂತರವೂ ಅರ್ಧದಷ್ಟು ಮಾರ್ಗ­ಗಳಲ್ಲಿ ಮಾತ್ರ ಹಾರಾಟ ಪುನರಾರಂಭಿಸಲು ಅದಕ್ಕೆ ಸಾಧ್ಯ­ವಾಯಿತು ಎನ್ನುವುದು ಗಂಭೀರ ವಿಷಯ.

ಇಂಧನಕ್ಕಾಗಿಯೇ ವರ್ಷಕ್ಕೆ ₨ 3 ಸಾವಿರ ಕೋಟಿ ಖರ್ಚು ಮಾಡುವ ಸ್ಪೈಸ್‌ಜೆಟ್‌ಗೆ ತೈಲ ಸಂಸ್ಥೆಗಳ ಜುಜುಬಿ ₨ 14 ಕೋಟಿ ಬಾಕಿ ಕೊಡಲು ಆಗಿರಲಿಲ್ಲ. ಸಂಸ್ಥೆಯ ಆರ್ಥಿಕ ಸ್ಥಿತಿ ಈ ಮಟ್ಟಕ್ಕೆ ನೆಲ ಕಚ್ಚಲು ದೀರ್ಘಾವಧಿ ಮಾರುಕಟ್ಟೆ ಕಾರ್ಯತಂತ್ರದ ಕೊರತೆ, ದುರಾಡಳಿತಗಳೇ ಕಾರಣ. ಇದು ಸ್ವಯಂಕೃತ ಅಪರಾಧ. ಕ್ಷಣಿಕ ಲಾಭಕ್ಕಾಗಿ ಹೆಚ್ಚು ಪ್ರಯಾಣಿಕರನ್ನು ತನ್ನತ್ತ ಸೆಳೆಯುವ ಭರದಲ್ಲಿ ದರಗಳನ್ನು ಇಳಿಸುತ್ತಿದ್ದ ಸ್ಪೈಸ್‌ಜೆಟ್‌ ಇತರ ದೇಶಿ ವಿಮಾನಯಾನ ಸಂಸ್ಥೆಗಳ ನಿದ್ದೆ ಕೆಡಿಸಿತ್ತು.

ಮಾರ್ಚ್‌ ಅಂತ್ಯಕ್ಕೆ ನಷ್ಟ  ₨ 2,500 ಕೋಟಿ ತಲುಪಿದರೂ ಅದು ದರ ಸಮರ ಕೈಬಿಟ್ಟಿರಲಿಲ್ಲ. ಇಲ್ಲಿ ಅದರ ತಂತ್ರಗಾರಿಕೆ ಕೈಕೊಟ್ಟಿದೆ. ಒಂದು ತಿಂಗಳಿಗಿಂತ ಹೆಚ್ಚು ಅವಧಿಯ ಮುಂಗಡ ಬುಕಿಂಗ್ ಮಾಡದಂತೆ ನಾಗರಿಕ ವಿಮಾನಯಾನ ಖಾತೆಯ ನಿರ್ಬಂಧ, ಬಳಕೆ ಮತ್ತು ನಿಲುಗಡೆ ಶುಲ್ಕವನ್ನು ನಗದಾಗಿ ಪಾವತಿಸದಿದ್ದರೆ ನಿಲ್ದಾಣಗಳಲ್ಲಿ ಇಳಿಯಲು ಅವಕಾಶ ಕೊಡುವುದಿಲ್ಲ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಸೂಚನೆ ಬಂದಾಗಲೇ  ಎಚ್ಚೆತ್ತುಕೊಳ್ಳಬೇಕಾಗಿತ್ತು. ಈಗ ಅದರ ಆರ್ಥಿಕ ಅಶಿಸ್ತಿನ ಬಿಸಿ ತಟ್ಟಿದ್ದು ಸುಮಾರು 20 ಸಾವಿರ ಅಮಾಯಕ ಪ್ರಯಾಣಿಕರಿಗೆ.

ಕಡಿಮೆ ಪ್ರಯಾಣ ದರದಲ್ಲೂ ಲಾಭ ಗಳಿಸುತ್ತಿರುವ ವಿಮಾನಯಾನ ಸಂಸ್ಥೆಗಳು ನಮ್ಮಲ್ಲೇ ಇವೆ. ಆರ್ಥಿಕವಾಗಿಯೂ ಸಶಕ್ತವಾಗಿವೆ. ಇಂಡಿಗೊ ವಿಮಾನ ಸಂಸ್ಥೆಯೊಂದೇ  ₨ 1.5 ಲಕ್ಷ ಕೋಟಿ ಮೌಲ್ಯದ ವಿಮಾನಗಳ ಖರೀದಿಗೆ ಬೇಡಿಕೆ ಸಲ್ಲಿಸಿದೆ. ಆದರೆ ಸ್ಪೈಸ್‌ಜೆಟ್‌ ಮಾತ್ರ ಬ್ಯಾಂಕ್‌ಗಳಿಂದ ಸಾಲ ಕೊಡಿಸುವಂತೆ ಕೇಂದ್ರ ವಿಮಾನಯಾನ ಖಾತೆಗೆ ದುಂಬಾಲು ಬಿದ್ದಿದೆ. ಈ ಒತ್ತಾಯಕ್ಕೆ ಮಣಿದ ಸರ್ಕಾರ ₨ 600 ಕೋಟಿ ಸಾಲ ಕೊಡಲು ಬ್ಯಾಂಕ್‌ಗಳಿಗೆ ಸಲಹೆ ಮಾಡಿದ್ದಂತೂ ಅಚ್ಚರಿ ಮೂಡಿಸುತ್ತಿದೆ.

ವಿಜಯ್‌ ಮಲ್ಯ ಒಡೆತನದ ಕಿಂಗ್‌ಫಿಷರ್‌ ವಿಮಾನ ಸಂಸ್ಥೆಗೆ ಬ್ಯಾಂಕುಗಳು ಕೊಟ್ಟ ಸಾವಿರಾರು ಕೋಟಿ ಸಾಲವೇ ಇನ್ನೂ ಮರುಪಾವತಿಯಾಗಿಲ್ಲ. ವಸೂಲಾ­ಗದ ಸಾಲದ ಪ್ರಮಾಣ ಬೆಳೆಯುತ್ತಲೇ ಇದೆ. ಬ್ಯಾಂಕ್‌ಗಳಲ್ಲಿ ಇರುವುದು ಸಾರ್ವಜನಿಕರ ಹಣ. ಹೀಗಿರುವಾಗ, ವಿಪರೀತ ನಷ್ಟದಲ್ಲಿರುವ ಸ್ಪೈಸ್‌­ಜೆಟ್‌ಗೆ ಸಾಲ ಕೊಡಿಸಿ ಕೈತುತ್ತು ಉಣಿಸುವ ಉಸಾಬರಿಗೆ ಸರ್ಕಾರ ಏಕೆ ಕೈ­ಹಾಕ­ಬೇಕು? ವಿಮಾನ ಇಂಧನದ ದರ, ವಿಮಾನ ನಿಲ್ದಾಣ ಬಳಕೆ ಶುಲ್ಕ ವಿಶ್ವದ ಇತರ ದೇಶಗಳಿಗಿಂತ ಭಾರತದಲ್ಲಿಯೇ ದುಬಾರಿ, ಆದ್ದರಿಂದ ಇದನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸುವುದೇನೋ ನ್ಯಾಯ. ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯ ಈ ಕಾಲದಲ್ಲಿ ಸ್ಪೈಸ್‌­ಜೆಟ್‌ ಕೂಡ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಬೇಕು. ತಪ್ಪುಗಳಿಂದ ಪಾಠ ಕಲಿತು ಸಂಕಷ್ಟದಿಂದ ಪಾರಾಗುವ ಹಾದಿಯನ್ನು ತಾನೇ ಹುಡುಕಿ­ಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.