ADVERTISEMENT

ನಿರ್ಬಂಧಿಸಬೇಕಿರುವುದು ಸುಳ್ಳು ಸುದ್ದಿಯ ರಾಜಕಾರಣವನ್ನು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 1:03 IST
Last Updated 24 ಆಗಸ್ಟ್ 2018, 1:03 IST
   

ವಾಟ್ಸ್ಆ್ಯಪ್ ಎಂಬ ಅಂತರ್ಜಾಲ ಆಧಾರಿತ ಸಂದೇಶವಾಹಕ ಸೇವೆ ಸುಳ್ಳು ಸುದ್ದಿಗಳ ಹರಡುವಿಕೆಗೆ ವ್ಯಾಪಕವಾಗಿ ಬಳಕೆಯಾಗುತ್ತಿದೆ ಎಂಬ ಆರೋಪ ಹಳೆಯದು. ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಎಂದು ಕರೆಯಲಾಗುವ ತಂತ್ರಜ್ಞಾನ ಬಳಸುವ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ ಸಂದೇಶಗಳ ಮೂಲವನ್ನು ಪತ್ತೆ ಹಚ್ಚುವುದು ಅಸಾಧ್ಯವೆನಿಸುವಷ್ಟು ಕಷ್ಟ. ಸುಳ್ಳು ಸುದ್ದಿಯ ಹರಡುವಿಕೆಗೆ ಈ ತಂತ್ರಜ್ಞಾನ ಬಳಕೆಯಾಗುವುದರಿಂದ ಕಾನೂನು ಪಾಲಕರಿಗೆ ಅದರ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿ ಇದೆ. ಈ ಬಗೆಯ ಸಂದೇಶಗಳು ಕೊಲೆಗಳಿಗೂ ಕಾರಣವಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಟ್ಸ್ಆ್ಯಪ್‌ನ ಮೇಲೆ ಕೆಲವು ನಿಯಂತ್ರಣಗಳನ್ನು ಹೇರಲು ಹೊರಟಿದೆ. ಇತ್ತೀಚೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ವಾಟ್ಸ್ಆ್ಯಪ್‌ನ ಸಿಇಒ ಕ್ರಿಸ್ ಡೇನಿಯಲ್ಸ್ ಅವರ ನಡುವಣ ಭೇಟಿಯಲ್ಲಿ ಪ್ರಸ್ತಾಪವಾದ ವಿಚಾರಗಳೆಲ್ಲವೂ ಇದನ್ನೇ ಸೂಚಿಸುತ್ತಿವೆ. ವಾಟ್ಸ್ಆ್ಯಪ್ ಭಾರತದಲ್ಲಿ ತನ್ನ ಕಚೇರಿಯನ್ನು ತೆರೆದು ದೂರು ನಿರ್ವಹಣೆಯ ವ್ಯವಸ್ಥೆಯೊಂದನ್ನು ರೂಪಿಸಬೇಕು. ತನ್ನ ಪಾವತಿ ಸೇವೆಯನ್ನು ಆರಂಭಿಸುವುದಕ್ಕೆ ಅದು ಭಾರತೀಯ ಕಂಪನಿಯೊಂದನ್ನು ಸ್ಥಾಪಿಸಬೇಕು. ಬಳಕೆದಾರರ ವಿವರಗಳನ್ನು ಭಾರತದಲ್ಲಿಯೇ ಸಂಗ್ರಹಿಸಬೇಕು.

ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವ ಇಲಾಖೆಗಳಿಗೆ ಸಂಸ್ಥೆ ಸಹಕರಿಸಬೇಕು ಎಂದು ರವಿಶಂಕರ್ ಪ್ರಸಾದ್ ಸ್ಪಷ್ಟವಾಗಿಯೂ ಸೂಚಿಸಿದ್ದಾರೆ. ಇವೆಲ್ಲವನ್ನೂ ಸಕಾರಾತ್ಮಕವಾಗಿ ಪರಿಶೀಲಿಸುವ ಭರವಸೆಯನ್ನು ಕ್ರಿಸ್ ಡೇನಿಯಲ್ಸ್ ಕೂಡಾ ನೀಡಿದ್ದಾರೆ. ವಾಟ್ಸ್ಆ್ಯಪ್‌ಗೆ ಭಾರತ ಸರ್ಕಾರದ ಬೇಡಿಕೆಗಳನ್ನು ನಿರಾಕರಿಸುವುದು ಕಷ್ಟ. ಏಕೆಂದರೆ ಈ ಸೇವೆಗೆ ಅತಿ ಹೆಚ್ಚು ಸಂಖ್ಯೆಯ ಗ್ರಾಹಕರಿರುವುದು ಭಾರತದಲ್ಲಿ. ಭಾರತದಲ್ಲಿ ನೋಂದಣಿಯಾದ ಸಂಸ್ಥೆಗಳಷ್ಟೇ ಪಾವತಿ ಸೇವೆಗಳನ್ನು ನೀಡಲು ಸಾಧ್ಯವಿರುವುದರಿಂದ ವಾಟ್ಸ್ಆ್ಯಪ್ ಅದನ್ನು ಮಾಡಬಹುದು.

ADVERTISEMENT

ಬಳಕೆದಾರರ ಮಾಹಿತಿಯನ್ನು ದೇಶದೊಳಗೇ ಸಂಗ್ರಹಿಸಿಡಬೇಕು ಎಂಬ ಷರತ್ತನ್ನು ನಿವಾರಿಸಿಕೊಳ್ಳಲು ಅದು ಕೆಲವು ಸರ್ಕಸ್ ನಡೆಸಬಹುದು. ಆದರೆ ಈ ಎಲ್ಲದರಿಂದ ಸುಳ್ಳು ಸುದ್ದಿಯ ಹರಡುವಿಕೆ ಕಡಿಮೆಯಾಗುತ್ತದೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ದೊರೆಯುವ ಉತ್ತರ ನಿರಾಶಾದಾಯಕವಾಗಿರುತ್ತದೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸುವ ಇಲಾಖೆಗಳ ಜೊತೆಗೆ ವಾಟ್ಸ್ಆ್ಯಪ್ ಸಹಕರಿಸಬೇಕು ಎಂಬ ಬೇಡಿಕೆಯನ್ನು ಹಲವು ಅರ್ಥದಲ್ಲಿ ಗ್ರಹಿಸಬಹುದು. ಇದರ ಸರಳಾರ್ಥ ಸುಳ್ಳು ಸುದ್ದಿಗಳ ಹುಟ್ಟನ್ನು ಕಂಡುಕೊಳ್ಳುವುದು. ಈ ಅರ್ಥದಲ್ಲಿ ಮುಚ್ಚಿಡಲಾಗಿರುವ ಮತ್ತೊಂದು ವಿಷಯವಿದೆ. ಬಳಕೆದಾರರ ಮೇಲಿನ ಪ್ರಭುತ್ವದ ಗೂಢಚರ್ಯೆ. ವಾಟ್ಸ್ಆ್ಯಪ್ ತನ್ನ ಎಂಡ್ ಟು ಎಂಡ್ ಎನ್ಕ್ರಿಪ್ಷನ್‌ನಲ್ಲಿ ಯಾರಿಗಾದರೂ ಮೂಗು ತೂರಿಸಲು ಅವಕಾಶ ಕೊಟ್ಟರೆ ಅದರ ಗ್ರಾಹಕರ ಸಂಖ್ಯೆಯೂ ಇಳಿಯಬಹುದಾದ ಸಾಧ್ಯತೆ ಇದೆ. ಈ ವಿಷಯ ವಾಟ್ಸ್ಆ್ಯಪ್‌ನ ಮಟ್ಟಿಗೆ ಬಿಸಿ ತುಪ್ಪ.

ಒಂದು ವೇಳೆ ಇದಕ್ಕೆ ವಾಟ್ಸ್ಆ್ಯಪ್ ಒಪ್ಪಿದರೂ ಸುಳ್ಳು ಸುದ್ದಿ ಹರಡುವಿಕೆಯ ಸಮಸ್ಯೆಯೇನೂ ಇಲ್ಲವಾಗುವುದಿಲ್ಲ. ಸುಳ್ಳು ಸುದ್ದಿಯ ಸೃಷ್ಟಿಕರ್ತರು ಮರೆಯಲ್ಲಿರುವ ‘ದುಷ್ಕರ್ಮಿ’ಗಳಲ್ಲ. ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಪ್ರತಿಪಾದನೆಗಾಗಿ ಮುಖ್ಯವಾಹಿನಿಯ ಮಾಧ್ಯಮಗಳನ್ನು ಹಣಿಯುವ ಉದ್ದೇಶದಿಂದಲೇ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತದೆ ಎಂಬುದರ ಅರಿವು ನಮಗಿರಬೇಕು. ಸುಳ್ಳು ಸುದ್ದಿಗಳ ಪ್ರಚಾರಕ್ಕಾಗಿ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ವೆಬ್‌ಸೈಟ್‌ಗಳನ್ನು ನಡೆಸುತ್ತಿರುವ ವ್ಯಕ್ತಿಯ ಬಂಧನವಾದಾಗ ಕೇಂದ್ರದ ಆಡಳಿತಾರೂಢ ಪಕ್ಷದ ಸಂಸದರೇ ಆತನ ಪರವಾಗಿ ಟ್ವೀಟ್ ಮಾಡಿ ಪ್ರತಿಭಟಿಸಿದ್ದರು ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬೇಕಿದೆ.

ಸುಳ್ಳು ಸುದ್ದಿ ಹರಡುವಿಕೆಗೆ ನಿರ್ದಿಷ್ಟ ತಂತ್ರಜ್ಞಾನವೊಂದು ಕಾರಣ ಎಂದು ಆರೋಪಿಸಿ ಅದನ್ನು ಮಾತ್ರ ನಿಯಂತ್ರಣಕ್ಕೆ ಒಳಪಡಿಸಲು ಹೊರಡುವುದರಲ್ಲಿ ಅರ್ಥವಿಲ್ಲ. ಸುಳ್ಳು ಸುದ್ದಿ ಎಲ್ಲಿಂದ ಮತ್ತು ಯಾರಿಂದ ಉತ್ಪಾದನೆಯಾಗುತ್ತಿದೆ ಎಂಬ ಮಾಹಿತಿಗಳು ಬಹಿರಂಗವಾಗಿರುವ ಸಂದರ್ಭಗಳಲ್ಲಿಯೂ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸಿದ ಉದಾಹರಣೆಗಳು ಇಲ್ಲ ಎನ್ನುವಷ್ಟು ಕಡಿಮೆ. ಈ ಹಿನ್ನೆಲೆಯಲ್ಲೇ ರವಿಶಂಕರ್ ಪ್ರಸಾದ್ ಅವರ ಮಾತುಗಳನ್ನೂ ಗ್ರಹಿಸಬೇಕಾಗುತ್ತದೆ. ಅಂದರೆ ಸರ್ಕಾರಕ್ಕೆ ಬೇಹುಗಾರಿಕೆಯಲ್ಲಿ ಇರುವ ಉತ್ಸಾಹ, ಸುಳ್ಳು ಸುದ್ದಿಗಳ ನಿಯಂತ್ರಣಕ್ಕಿಲ್ಲ ಎಂದರ್ಥ.

ಸುಳ್ಳು ಸುದ್ದಿಗಳ ಹರಡುವಿಕೆಯನ್ನು ನಿಯಂತ್ರಿಸಬೇಕೆಂಬ ಸರ್ಕಾರದ ಕಾಳಜಿ ನಿಜವೇ ಆಗಿದ್ದಲ್ಲಿ ಮೊದಲು ಲಭ್ಯವಿರುವ ಮಾಹಿತಿಗಳನ್ನು ಬಳಸಿ ಕಠಿಣ ಕ್ರಮ ಜರುಗಿಸುವ ಹಾದಿಯಲ್ಲಿ ಸಾಗಬೇಕು. ವಾಟ್ಸ್ಆ್ಯಪ್‌ ಸಂದೇಶಗಳ ಮೂಲ ಕಂಡುಹಿಡಿಯಲು ಅಗತ್ಯವಿರುವ ಸ್ಪಷ್ಟ ಮತ್ತು ಪಾರದರ್ಶಕ ನಿಯಮಾವಳಿಗಳನ್ನೂ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.