ADVERTISEMENT

ದೇಶದ ವಿಕಾಸಕ್ಕೆ ಬೇಕು ಸಮಾನ ನಾಗರಿಕ ಸಂಹಿತೆ

ಕ್ಯಾಪ್ಟನ್‍ ಗೋಪಿನಾಥ್‍
Published 17 ಜುಲೈ 2014, 19:30 IST
Last Updated 17 ಜುಲೈ 2014, 19:30 IST

‘ಹಿಂದೂಗಳಿಗೆ ಸಮಾನ ನಾಗರಿಕ ಸಂಹಿತೆ ಬೇಕಾ?’ ಎಂದು ರಾಜ್ಯ­ಸಭಾ ಸದಸ್ಯ ಮಣಿಶಂಕರ್‌ ಅಯ್ಯರ್‌ ತಮ್ಮದೇ ಆದ, ಪ್ರಚೋದನಾತ್ಮಕ ಶೈಲಿಯಲ್ಲಿ ಇತ್ತೀಚೆಗೆ ಪ್ರಶ್ನಿಸಿ­ದರು. ಮದುವೆ, ಆಸ್ತಿ ಹಕ್ಕುಗಳಿಗೆ ಸಂಬಂ­ಧಿ­­ಸಿದಂತೆ ಮುಸ್ಲಿಮರು ಮತ್ತು ಇತರ ಅಲ್ಪ­ಸಂಖ್ಯಾತ ಸಮುದಾಯದವರಿಗೆ ಅವರದೇ ಆದ ವೈಯ­ಕ್ತಿಕ ಕಾನೂನುಗಳನ್ನು ಪಾಲಿಸಲು ಅವ­ಕಾಶ ನೀಡಬೇಕು ಎಂದೂ ಅಯ್ಯರ್‌ ವಾದಿಸಿದರು.

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತಂದರೆ ಬೇರೆ ಯಾವುದೇ ಸಮುದಾಯ­ದವ­ರಿಗಿಂತ ಹೆಚ್ಚಾಗಿ ಮುಸ್ಲಿಮರು ಕೋಪಿಸಿ­ಕೊ­ಳ್ಳು­ತ್ತಾರೆ ಎಂಬುದನ್ನು ಅಯ್ಯರ್‌ ಮುಚ್ಚಿಡಲಿಲ್ಲ.

‘ಭಾರತೀಯರೆಲ್ಲ ಒಂದು ನಾಗರಿಕ ಸಂಹಿ­ತೆಯ ವ್ಯಾಪ್ತಿಗೆ ಒಳಪಡಲು ಏಕೆ ಆಗದು?’ ಎಂದು ಅಯ್ಯರ್‌  ಪ್ರಶ್ನಿಸಬೇಕಿತ್ತು. ಅದಕ್ಕೆ ಅವರು ಉತ್ತರವನ್ನೂ ನೀಡಬೇಕಿತ್ತು. ತರ್ಕಬದ್ಧ­ವಾಗಿ ಮಾತನಾಡುವ ವಿಚಾರದಲ್ಲಿ ಅಯ್ಯರ್‌ ಅವ­­ರದ್ದು ಎತ್ತಿದ ಕೈ. ಈ ವಿಚಾರದಲ್ಲಿ ಅವರನ್ನು ಸೋಲಿ­ಸುವುದು ಕಷ್ಟ. ಅಯ್ಯರ್‌ ಅವರು ಸೆಕ್ಯುಲರ್‌ ಮೂಲಭೂತವಾದಿಯೋ, ಉದಾರ­ವಾದಿ ನಿಲುವಿರುವ ಸಂಪ್ರದಾಯವಾದಿಯೋ ಅಥವಾ ಅವರು ಆಡುವ ಮಾತು ಕೇವಲ ರಾಜ­ಕೀಯ ಪ್ರೇರಿತವೋ ಎಂದು ಊಹಿಸಬಹುದಷ್ಟೆ. ಅವರು ಆಡುವ ಮಾತು ಆ ಸಂದರ್ಭಕ್ಕೆ ಮಾತ್ರ ಸೀಮಿ­ತವಾದ ರಾಜಕೀಯ ಪ್ರತಿಕ್ರಿಯೆಗಳಾಗಿದ್ದರೆ, ಅವರ ವಿರುದ್ಧ ಪ್ರತಿಕ್ರಿಯಾತ್ಮಕವಾಗಿ ಹೆಚ್ಚು ಮಾತನಾಡಲಾಗದು.

ಸಭ್ಯ, ಜಾಗೃತ ಮತ್ತು ಸಮಾನತೆಯ ಸಮಾಜ ಕಟ್ಟಲು ಕಾನೂನುಗಳಿಗೆ, ಅಭಿವೃದ್ಧಿಗೆ ಪೂರಕವಾಗುವ ತಿದ್ದುಪಡಿಗಳನ್ನು ತರಬೇಕು. ನೂರೈವತ್ತು ವರ್ಷಗಳ ಹಿಂದೆ ನಮ್ಮಲ್ಲಿ ಸತಿ ಪದ್ಧತಿ ಇತ್ತು, ಬಾಲ್ಯ ವಿವಾಹ ಇತ್ತು. ಸಮಾಜ ಸುಧಾರ­ಕರಾದ ರಾಜಾರಾಮ ಮೋಹನ ರಾಯ್‌ ಅವರಂಥವರು ಇಂಥ ಪದ್ಧತಿಗಳನ್ನು ಕಾನೂನು­ಬಾಹಿರಗೊಳಿಸಿದರು. ಭಾರತ ಗಣ­ರಾಜ್ಯ­­ವಾದಾಗ ಜೀತ ಪದ್ಧತಿಗೆ ಕಾನೂನು ಮಾನ್ಯತೆ ಇಲ್ಲದಂತೆ ಮಾಡಲಾಯಿತು. ಆದರೆ, ಕಾನೂನು ಮಾನ್ಯತೆ ಇಲ್ಲದಿದ್ದರೂ, ಇಂಥ ಅನೇಕ ಪದ್ಧತಿ, ಆಚರಣೆಗಳು ದೇಶದ ವಿವಿಧ ಪ್ರದೇಶ­ಗ­ಳಲ್ಲಿ ಆಚರಣೆಯಲ್ಲಿವೆ. ಹಾಗೆ ನೋಡಿದರೆ, ಹಿಂದೂ ಸಮಾಜದಲ್ಲೇ ಏಕರೂಪದ ಆಚ­ರಣೆ­ಗಳಿಲ್ಲ. ಈ ಸಮಾಜದಲ್ಲಿ ಅಸಂಖ್ಯ ಜಾತಿ, ಉಪ ಜಾತಿ­­ಗಳಿವೆ. ಪ್ರತಿಯೊಂದು ಜಾತಿಗೂ ತನ್ನದೇ ಆದ ನಂಬಿಕೆ ಇದೆ. ಮದುವೆ, ಮರು ಮದುವೆ­ಯಿಂದ ಆರಂಭಿಸಿ ಆಸ್ತಿ ಹಕ್ಕಿನವರೆಗೆ ಏಕರೂಪದ ವ್ಯವಸ್ಥೆ ಇಲ್ಲ.

ದೇಶದ ಅನೇಕ ಪ್ರದೇಶಗಳಲ್ಲಿ ತಾರುಣ್ಯ­ದಲ್ಲೇ ವಿಧವೆಯಾದರೂ ಆಕೆಯ ಮರುಮದು­ವೆಗೆ ಅವಕಾಶ ನೀಡುವುದಿಲ್ಲ. ಆದರೆ ಪುರುಷ ತನ್ನ ಪತ್ನಿಯನ್ನು ಕಳೆದುಕೊಂಡರೆ, ಆಕೆಯ ತಂಗಿ­ಯನ್ನೇ ಮದುವೆಯಾಗುವ ಪದ್ಧತಿ ಜಾರಿ­ಯ­ಲ್ಲಿದೆ. ಖಾಪ್‌ ಪಂಚಾಯತ್‌ಗಳಿರಬಹುದು ಅಥವಾ ಇನ್ಯಾವುದೇ ಪುರಾತನ ವ್ಯವಸ್ಥೆ ಇರಬ­ಹುದು, ಅವು ನೀಡುವ ತೀರ್ಮಾನಗಳಿಂದ ಹೆಚ್ಚು ನೋವು ಅನುಭವಿಸುವವರು ಹೆಣ್ಣು ಮಕ್ಕಳು. ಯಾವುದೇ ಅಲ್ಪಸಂಖ್ಯಾತ ಸಮುದಾ­ಯ­ ಅಥವಾ ಬುಡಕಟ್ಟು ಸಮುದಾಯಗ­ಳಲ್ಲಿ ಕೂಡ ಇದೇ ಸ್ಥಿತಿ ಇದೆ.

ಧರ್ಮ ಮತ್ತು ಅದು ನೀಡುವ ಅಧಿಕಾರದ ಹೆಸರಿನಲ್ಲಿ ಹೆಣ್ಣನ್ನು ಅವ­ಮಾ­ನಕ್ಕೆ ಒಳಪಡಿಸಲಾಗುತ್ತಿದೆ. ಆಕೆಗೆ ಸಾಮಾ­ಜಿಕ, ಆರ್ಥಿಕ ಮತ್ತು ರಾಜಕೀಯ ಸಮಾ­ನತೆ­ಯನ್ನು ನಿರಾಕರಿಸಲಾಗುತ್ತಿದೆ.

‘ಫತ್ವಾ’ಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿತು. ಈ ತೀರ್ಪು ಹೊರಬಿದ್ದ ತಕ್ಷಣ ಮೌಲ್ವಿಗಳು ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ಮುಂದಿಟ್ಟು ‘ಫತ್ವಾ’ ಹೊರಡಿಸುವ ಹಕ್ಕು ಮತ್ತು ತಮ್ಮ ಆಚರಣೆಗಳ ಮೇಲಿನ ಹಕ್ಕನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಈ ತೀರ್ಪು ನೀಡುವ ಮುನ್ನ ನಡೆದ ವಿಚಾರಣೆಯ ಸಂದರ್ಭ­ದಲ್ಲಿ ಒಂದು ‘ಫತ್ವಾ’ ವಿಚಾರವನ್ನು ಸುಪ್ರೀಂ ಕೋರ್ಟ್‌ ನ್ಯಾಯಪೀಠದ ಮುಂದಿಡ­ಲಾ­ಗಿ­ತ್ತು.

ಮಾವನೊಬ್ಬ ತನ್ನ ಸೊಸೆಯ ಮೇಲೆ ಅತ್ಯಾ­ಚಾರ ನಡೆಸಿದ್ದ. ಅತ್ಯಾಚಾರ ನಡೆಸಿದ ಹೆಣ್ಣು­ಮಗಳ ಜೊತೆ ಸಂಸಾರ ನಡೆಸು ಎಂದು ‘ಫತ್ವಾ’ ಮೂಲಕ ಆ ಮಾವನಿಗೆ ‘ಶಿಕ್ಷೆ’ ವಿಧಿಸ­ಲಾ­ಯಿತು. ಕಾಮದಾಹಕ್ಕೆ ಬಳಸಿಕೊಂಡ ಹೆಣ್ಣನ್ನು ಕಡೆಯ­ತನಕ ಸಾಕಬೇಕು ಎಂಬ ಶಿಕ್ಷೆ ಇತ­ರ­ರಿಗೆ ಎಚ್ಚ­ರಿಕೆಯ ಸಂದೇಶ ರವಾನಿಸುತ್ತದೆ. ಹಾಗಾಗಿ ಆತ­ನಿಗೆ ಈ ಶಿಕ್ಷೆ ವಿಧಿಸಲಾಗಿದೆ ಎಂಬ ವಿಚಿತ್ರ ಸಮರ್ಥ­ನೆಯನ್ನು ಈ ‘ಫತ್ವಾ’ಕ್ಕೆ ನೀಡ­ಲಾ­ಯಿತು. ಅತ್ಯಾಚಾ­ರಕ್ಕೆ ಒಳ­ಗಾದ ಹೆಣ್ಣುಮಗಳು ಅನು­ಭ­ವಿ­­ಸಿದ ಮಾನ­ಸಿಕ ಹಿಂಸೆ ಎಷ್ಟಿದ್ದಿ­ರಬಹುದು ಎಂಬ ಬಗ್ಗೆ ಆಲೋಚಿಸ­ಲಿಲ್ಲ. ಆ ದುರದೃಷ್ಟವಂತ ಹೆಣ್ಣು­ಮಗಳನ್ನು ಯಾರಾದರೂ ಮಾತ­ನಾಡಿಸಿದರಾ?

ನನ್ನ ಮಗಳು ಫ್ರೆಂಚ್‌ ಯುವಕನನ್ನು ಮದುವೆ­ಯಾ­ದಳು. ಅವರು ಎರಡು ಬಗೆಯಲ್ಲಿ ಮದು­ವೆ­ಯಾದರು. ಮೊದಲನೆಯದು ಹಿಂದೂ ಸಂಪ್ರ­ದಾ­ಯದ ಪ್ರಕಾರ ನಡೆದ ವಿವಾಹ. ಎರಡನೆ­ಯದು ಪಾದ್ರಿಯೊಬ್ಬರಿಂದ ಆಶೀ­ರ್ವಾದ ಪಡೆದು, ಕ್ರೈಸ್ತ ಸಂಪ್ರದಾಯದ ಪ್ರಕಾರ ನಡೆದ ವಿವಾಹ. ದಂಪತಿ ಈಗ ಫ್ರಾನ್ಸ್‌ನಲ್ಲಿ ವಾಸಿ­­ಸು­ತ್ತಾರೆ. ಅವರ ಧರ್ಮವನ್ನು ಅವರು ಖಾಸ­ಗಿ­ಯಾಗಿ, ಮನೆಯೊಳಗೆ ಆಚರಿಸಬ­ಹುದು. ಆದರೆ ಅವರು ಫ್ರಾನ್ಸ್‌ನ ಎಲ್ಲ ನಾಗರಿಕರಿಗೆ, ಅಲ್ಲಿಗೆ ವಲಸೆ ಬಂದಿರುವವರಿಗೆ ಅನ್ವಯ ಆಗುವ ಸಮಾನ ನಾಗರಿಕ ಸಂಹಿತೆಯ ವ್ಯಾಪ್ತಿಗೆ ಒಳ­ಪಡುತ್ತಾರೆ. ಈ ಸಂಹಿತೆ ಅಲ್ಜೀರಿಯಾ, ಸೆನೆ­ಗಲ್‌, ಫ್ರೆಂಚ್‌ ಗಯಾನದಿಂದ ಬಂದ ಮುಸ್ಲಿ­ಮ­ರಿಗೆ, ವಿಯೆಟ್ನಾಂನಿಂದ ಫ್ರಾನ್ಸ್‌ಗೆ ಬಂದ ಬೌದ್ಧ­ರಿಗೆ ಸೇರಿದಂತೆ ಎಲ್ಲರಿಗೂ ಅನ್ವಯ ಆಗುತ್ತದೆ.

ವಲಸಿಗರ ನಾಡು ಎಂದೇ ಕರೆಯಲಾಗುವ ಅಮೆರಿಕ ಇಂದು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಿನ ಜನಾಂಗೀಯ ವೈವಿಧ್ಯವನ್ನು ತನ್ನ ಒಡ­ಲಲ್ಲಿ ಇರಿಸಿಕೊಂಡಿದೆ. ಅಲ್ಲಿನ ವಲಸಿಗರ ಸಂಖ್ಯೆ ‘ನೈಜ’ ಅಮೆರಿಕನ್ನರಿಗಿಂತ (ಬಾಸ್ಟನ್‌ ಬ್ರಾಹ್ಮ­ಣರು!) ಹೆಚ್ಚು.

ಅಮೆರಿಕದಲ್ಲಿ ಕೂಡ ಸಮಾನ ನಾಗ­ರಿಕ ಸಂಹಿತೆ, ಸಮಾನ ದಂಡ ಸಂಹಿತೆ ಇದೆ. ಅಲ್ಲಿನ ನ್ಯಾಯದಾನ ವ್ಯವಸ್ಥೆ 200ಕ್ಕೂ ಹೆಚ್ಚು ವರ್ಷ­ಗಳಿಂದ ವಿಕಾಸಗೊಳ್ಳುತ್ತ ಬಂದಿದೆ. ಅಮೆರಿ­ಕದಲ್ಲಿ ಕೆಲವು ದಶಕಗಳ ಹಿಂದೆ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ, ಅಲ್ಲಿ ಗುಲಾಮಗಿರಿ ಅಸ್ತಿತ್ವದಲ್ಲಿ ಇತ್ತು, ಆ ದೇಶದ ಮೊದಲ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ಆಫ್ರಿಕಾದ ಗುಲಾಮರನ್ನು ಇಟ್ಟುಕೊಂಡಿದ್ದರು ಎಂಬ ಮಾತನ್ನು ಇಂದು ಯಾರು ನಂಬುತ್ತಾರೆ ಹೇಳಿ?!

ಹಿಂದೂಗಳಿಗೆ ಮಾತ್ರ ಅನ್ವಯ ಆಗುವ ನಾಗರಿಕ ಸಂಹಿತೆಯನ್ನು  ಇತರೆ ಯಾವುದೇ ಅಲ್ಪ­ಸ­ಂಖ್ಯಾತ ಸಮುದಾಯದ ಮೇಲೆ ಹೇರ­ಬಾರದು. ‘ಫತ್ವಾ’ ಅಥವಾ ಷರಿಯಾ ನ್ಯಾಯಾ­ಲಯ ಮಾತ್ರವಲ್ಲ, ಖಾಪ್‌್ ಪಂಚಾಯತ್‌ ಕೂಡ ಮಹಿಳೆ ಮತ್ತು ಸಮಾಜದ ಪ್ರಗತಿಗೆ ಅಡ್ಡಗಾಲು ಆಗಬಲ್ಲದು.

ದೇಶದ ಪ್ರತಿಯೊಬ್ಬ ನಾಗರಿಕ ಕೂಡ ಸಮಾನ ನಾಗರಿಕ ಸಂಹಿತೆ ಮತ್ತು ದಂಡ ಸಂಹಿತೆಯ ವ್ಯಾಪ್ತಿಗೆ ಒಳಪಡಬೇಕು. ಆಗ ಕಾನೂನಿನ ಮುಂದೆ ಎಲ್ಲರೂ ಸಮಾನರಾದಂತೆ ಆಗುತ್ತದೆ. ಹೆಣ್ಣು ಕುಲವನ್ನು ರಕ್ಷಿಸಲು ಆಗದ, ಅವರಿಗೆ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶ­ಗ­ಳನ್ನು ನೀಡಲಾಗದ ದೇಶವನ್ನು ಅನಾಗರಿಕ ಎಂದೇ ಕರೆಯಬೇಕಾಗುತ್ತದೆ.

ಕೇಂದ್ರದಲ್ಲಿ ಹೊಸದಾಗಿ ಆಡಳಿತಕ್ಕೆ ಬಂದಿ­ರುವ ಸರ್ಕಾರ ಹಿರಿಯ ನ್ಯಾಯಶಾಸ್ತ್ರಜ್ಞರ ಸಹಾಯ ಪಡೆದು, ಸುಪ್ರೀಂ ಕೋರ್ಟ್‌ ಮಾರ್ಗ­ದರ್ಶನದಲ್ಲಿ ಸಮಾನ ನಾಗರಿಕ ಸಂಹಿತೆ ರೂಪಿಸ­ಬೇಕು. ಈ ಪ್ರಕ್ರಿಯೆಯಲ್ಲಿ ಪ್ರಪಂಚದ ಪ್ರಜಾಪ್ರ­ಭುತ್ವ ರಾಷ್ಟ್ರಗಳ ನಾಗರಿಕ ಸಂಹಿತೆಗಳು ಮತ್ತು ನಮ್ಮ ದೇಶದ ವಿವಿಧ ಸಮುದಾಯಗಳ ಸಂಹಿತೆ­ಗಳ­ಲ್ಲಿರುವ ಉತ್ತಮ ಅಂಶಗಳನ್ನು ಪರಿಗಣಿಸಿ, ಸಮಾನ ನಾಗರಿಕ ಸಂಹಿತೆ ರೂಪಿಸಬಹುದು. ಹೀಗೆ ರೂಪುಗೊಳ್ಳುವ ಸಮಾನ ನಾಗರಿಕ ಸಂಹಿತೆ ದೇಶದ ಎಲ್ಲ ರಾಜ್ಯಗಳಿಗೂ ಅನ್ವಯ ಆಗುವಂತೆ ಇರಬೇಕು. ಆಗ ನಮ್ಮ ದೇಶ ನಿಜ ಅರ್ಥದಲ್ಲಿ ಅಭಿವೃದ್ಧಿ ಹೊಂದಿದ ದೇಶ­ವಾಗುತ್ತದೆ. ಅಲ್ಲದೆ, ಆಧುನಿಕ ಮತ್ತು ನಾಗರಿಕ ಸಮಾಜವೂ ಆಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.