ADVERTISEMENT

ಬೇಕಿದೆ ಹೊಸ ‘ಭೀಮಯಾನ’

ವಡ್ಡಗೆರೆ ನಾಗರಾಜಯ್ಯ
Published 29 ಜೂನ್ 2015, 19:30 IST
Last Updated 29 ಜೂನ್ 2015, 19:30 IST

ಕನ್ನಡ ಪುಸ್ತಕ ಪ್ರಾಧಿಕಾರವು ಚಾಮರಾಜನಗರದಲ್ಲಿ ಇದೇ 27ರಂದು ದಲಿತ ಯುವ ಸಾಹಿತ್ಯ ಮೇಳವನ್ನು ಆಯೋಜಿಸಿತ್ತು.  ದಲಿತ ಪರ ಪ್ರಶ್ನೆಗಳನ್ನು ಚರ್ಚಿಸುವ ದಿಕ್ಕಿನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ  ರಾಜ್ಯದ ಮಟ್ಟಿಗೆ  ಮಹತ್ವದ ಕಾರ್ಯಕ್ರಮವಾಗಿತ್ತು. ಪ್ರಮುಖ ಯುವ ದಲಿತ ಲೇಖಕರು, ಸಾಮಾಜಿಕ ಹೋರಾಟದ ಹಿನ್ನೆಲೆಯಿಂದ ಬಂದ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಇಂತಹದ್ದೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪುಸ್ತಕ ಪ್ರಾಧಿಕಾರ ಹಿಂದೆಂದೂ ಇಂಥ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ. ಆದರೆ ಈ ಕಾರ್ಯಕ್ರಮದ ಬ್ಯಾನರ್ ಮತ್ತು ಆಮಂತ್ರಣ ಪತ್ರಿಕೆಯಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸಿಲ್ಲವೆಂಬುದನ್ನು ಮುಂದು ಮಾಡಿಕೊಂಡು ಕೆಲವು ದಲಿತ ಕಾರ್ಯಕರ್ತರು ವೇದಿಕೆ ಮೇಲೆ ಏರಿಬಂದು ಬ್ಯಾನರ್ ಹರಿದು, ಧಿಕ್ಕಾರ ಕೂಗಿ, ಕಾರ್ಯಕ್ರಮಕ್ಕೆ ಭಂಗ ತಂದರು. 

ದಲಿತ ಚಳವಳಿಯನ್ನು ಲಾಗಾಯ್ತಿನಿಂದಲೂ  ಬೆಂಬಲಿಸುತ್ತಾ ಬಂದಿರುವ ಪ್ರಾಧಿಕಾರದ ಅಧ್ಯಕ್ಷ  ಬಂಜಗೆರೆ ಜಯಪ್ರಕಾಶ್ ಅವರು ಅಲೆಮಾರಿಗಳು, ಕುಂಬಾರ, ಈಡಿಗ, ಗೊಲ್ಲ, ಅಗಸ ಮೊದಲಾದ ತಬ್ಬಲಿ ಸಮುದಾಯಗಳ ಕವಿ–ಸಾಹಿತಿಗಳನ್ನು ಒಳಗೊಂಡು ನಡೆಸಲು ಪ್ರಯತ್ನಿಸಿದ್ದ ಸಾಂಸ್ಕೃತಿಕ ರಾಜಕಾರಣದ ಸದಾಶಯಗಳನ್ನು ಅರ್ಥ ಮಾಡಿಕೊಳ್ಳದೆ, ಚಾಮರಾಜನಗರದ ದಲಿತ ಕಾರ್ಯಕರ್ತರು, ಕಾರ್ಯಕ್ರಮವನ್ನು ರದ್ದು ಮಾಡಬೇಕೆಂದು ಪಟ್ಟು ಹಿಡಿದು ರಂಪಾಟ ನಡೆಸಿದರು.

ಅವರ ಪ್ರಕಾರ ಈ ಕಾರ್ಯಕ್ರಮ ದಲಿತ ಜಾತಿಗಳಿಗಷ್ಟೇ ಸೀಮಿತವಾಗಬೇಕಿತ್ತು ಮತ್ತು ಆ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರದೊಂದಿಗೆ ನಡೆಸಬೇಕಿತ್ತು. ವಾಸ್ತವವಾಗಿ ದಲಿತ ಸಂಘರ್ಷ ಸಮಿತಿಯನ್ನು ದಲಿತರಷ್ಟೇ ಕಟ್ಟಿರಲಿಲ್ಲ ಅಥವಾ ದಲಿತರು ದಲಿತರ ಸಮಸ್ಯೆಗಳನ್ನಷ್ಟೇ ನಿರ್ವಹಿಸುವ ವೇದಿಕೆಯನ್ನಾಗಿ ಅದನ್ನು ರೂಪಿಸಿರಲಿಲ್ಲ. ಇದರಲ್ಲಿ ಎಲ್ಲ ಶೋಷಿತ ಸಾಮಾಜಿಕ ವಲಯಗಳನ್ನೂ ಒಳಗೊಳ್ಳುವ ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವಿತ್ತು.

ದಲಿತ ಸಂಘರ್ಷ ಸಮಿತಿಯ ಇಂತಹ ಆಶಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಎಲ್ಲ ಶೋಷಿತರ ಪ್ರಾತಿನಿಧಿಕ ದನಿಗಳನ್ನು ಜೊತೆಗೂಡಿಸಿಕೊಂಡು, ವರ್ತಮಾನದ ದಲಿತರ ಸಮಸ್ಯೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುಸ್ತಕ ಪ್ರಾಧಿಕಾರವು  ವಾಚನಾಭಿರುಚಿ ಕಮ್ಮಟವನ್ನೋ, ಪುಸ್ತಕ ಮಾರಾಟ ಮೇಳವನ್ನೋ ನಡೆಸದೆ ದಲಿತರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಾಧಿಕಾರದ ದಲಿತಪರ ಕಾಳಜಿಯೇ ಹೊರತು ದಲಿತ ವಿರೋಧಿಯಲ್ಲ.

ಬ್ಯಾನರ್‌ಗಳಲ್ಲಿ, ಆಮಂತ್ರಣ ಪತ್ರಿಕೆಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸಲು ಇದೇನು ಅಂಬೇಡ್ಕರ್ ಜಯಂತಿಯಾಗಿರಲಿಲ್ಲ. ದಲಿತ ಸಾಹಿತ್ಯ ಕೃತಿ ಇದು ಎಂದು ತೋರಿಸಲು ದಲಿತರು ಬರೆದ ಪುಸ್ತಕಗಳ ಬೆನ್ನಿಗೆ ಅಥವಾ ಮುಖಪುಟಕ್ಕೆ ಅಂಬೇಡ್ಕರ್ ಭಾವಚಿತ್ರ ಹಾಕಬೇಕೆಂದು ಕಡ್ಡಾಯ ಮಾಡಿರೆಂದು ಹೇಳಬರುತ್ತದೆಯೇ? ಅಂಬೇಡ್ಕರ್ ಅವರ ಭಾವಚಿತ್ರ ಇಲ್ಲದ ಹೊರತು ಅದು ದಲಿತ ಸಾಹಿತ್ಯ ಕೃತಿಯಲ್ಲವೇ?

ಮೀಸಲಾತಿ ಪಡೆದವರೆಲ್ಲ ಮೀಸಲಾತಿ ಫಲಾನುಭವಿಗಳೆಂದೂ, ಜೈಭೀಮ್ ಮಂತ್ರದ ಲೇಬಲ್ ಅಂಟಿಸಿಕೊಳ್ಳಬೇಕೆಂದೂ ಹೇಳಲಾದೀತೆ? ಅವರೆಲ್ಲರ ಎದೆಗಳಲ್ಲಿ ಅಂಬೇಡ್ಕರ್ ಇಲ್ಲವೇ? ಇಂತಹ ಕಾರ್ಯಕ್ರಮಗಳನ್ನು ದಲಿತ ಜಾತಿಗಳಿಗಷ್ಟೇ ಸೀಮಿತಗೊಳಿಸಿದರೆ ಅಲೆಮಾರಿಗಳು, ಆದಿವಾಸಿ-ಬುಡಕಟ್ಟುಗಳು, ಅನೇಕ ಅತಿ ಹಿಂದುಳಿದ ತಬ್ಬಲಿ ಜಾತಿಗಳು, ಅಮಾಯಕ ಮಹಿಳೆಯರು ಮುಂತಾದವರು ಯಾವ ವೇದಿಕೆಗೆ ಹೋಗಿ ಪಾಲು ಪಡೆಯಲು ಸಾಧ್ಯ? ಇನ್ಯಾರ ಬೆಂಬಲದಿಂದ ಅವರು ನ್ಯಾಯ ಪಡೆಯಲು ಸಾಧ್ಯ?

ಚಾಮರಾಜನಗರ ಜಿಲ್ಲೆಯಲ್ಲಿ ಆಗಿಹೋದ ಮಂಟೇಸ್ವಾಮಿ ಕುರಿತು ‘ಕುರುಬನ ಮನೆಗೂ ಜ್ಯೋತಿ, ಕುಂಬಾರನ ಮನೆಗೂ ಜ್ಯೋತಿ, ಬಡವನ ಮನೆಗೂ ಜ್ಯೋತಿ, ಬಲಿಗಾರನ ಮನೆಗೂ ಜ್ಯೋತಿ, ತಿಪ್ಪೆಮೇಲೆ ಹಚ್ಚಿಟ್ಟರೂ ಏಕಪ್ರಕಾರವಾಗಿ ಉರಿಯುವ ಪರಂಜ್ಯೋತಿ’ ಎಂದರು ಜನಪದರು. ಹಾಗೆಯೇ ಎಲ್ಲ ಶೋಷಿತ ಸಮುದಾಯಗಳು ಅಂಬೇಡ್ಕರ್ ಅವರನ್ನು ಸ್ವಾಭಿಮಾನದ ಸಂಕೇತವಾಗಿ ಸ್ವೀಕರಿಸುತ್ತಿವೆ.

ಬುದ್ಧ-ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಭಾವಚಿತ್ರಗಳಿಗಷ್ಟೇ ಜೋತುಬಿದ್ದಿರುವ ನಾವು, ಅವರ ಯಾವ ತಾತ್ವಿಕ ಗುಣವನ್ನು ಅಳವಡಿಸಿಕೊಂಡಿದ್ದೇವೆ? ನಮ್ಮೊಳಗೆ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗೂಡಿ ಸಾಗಬಹುದಲ್ಲವೇ? ದಲಿತ ಬಣಗಳ ನಡುವೆ ಉಂಟಾದ ಬಿರುಕು ಕೂಡ ಚಾಮರಾಜನಗರದಲ್ಲಿ ಜಾಹೀರಾಯಿತು.

ಭಗವದ್ಗೀತೆ, ಗೋಹತ್ಯೆ, ಘರ್‌ವಾಪಸಿ, ಸಾಂಸ್ಕೃತಿಕ ಪೊಲೀಸ್‌ಗಿರಿ, ಖಾಪ್ ಪಂಚಾಯಿತಿ ಮುಂತಾದ ಪುರೋಹಿತಶಾಹಿ ಗೊಡ್ಡು ಮೌಲ್ಯಗಳನ್ನು ಸಮಾಜದ ಮೇಲೆ ಹೇರಲಾಗುತ್ತಿರುವ ಕೇಸರಿ ರಾಜಕಾರಣದ ಈ ಹೊತ್ತಿನಲ್ಲಿ ಅಂಬೇಡ್ಕರ್ ಅವರ ಮರು ವ್ಯಾಖ್ಯಾನ ಮತ್ತು ಅಂಬೇಡ್ಕರ್ ಯುಗ ನಿರ್ಮಾಣದತ್ತ ಸಾಗುವ ಹೊಸ ಭೀಮಯಾನವೊಂದನ್ನು ಪ್ರಾರಂಭಿಸುವ ಅಗತ್ಯ ನಮ್ಮ ಮುಂದಿದೆ.

ಕರುಣೆ, ಮೈತ್ರಿ, ಕ್ಷಮೆ, ದಯೆ ದಲಿತರ ಮೂಲಗುಣಗಳು. ಕಾರ್ಯಕ್ರಮ ಮುಂದುವರಿಸಲು ಅನುವು ಮಾಡಿಕೊಡಬೇಕೆಂದು ಉದ್ರೇಕಿತ ದಲಿತ ಕಾರ್ಯಕರ್ತರೆದುರು ಕ್ಷಮೆ ಯಾಚಿಸಿದಾಗಲೂ ಒಪ್ಪಲಿಲ್ಲ. ಪುಣೆ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಗಾಂಧೀಜಿಯನ್ನು ಮನ್ನಿಸದೇ ಹೋಗಿದ್ದ ಪಕ್ಷದಲ್ಲಿ ಪರಿಣಾಮಗಳು ಬೇರೆ ರೀತಿ ಆಗುವ ಸಾಧ್ಯತೆ ಇತ್ತು. 

ಚಾಮರಾಜನಗರದಲ್ಲಿ ದಲಿತಪರ ಕಾರ್ಯಕ್ರಮವನ್ನು ದಲಿತರೇ ತಪ್ಪಿಸುವ ಮೂಲಕ ಅಂಬೇಡ್ಕರ್ ಅವರು ತೋರಿಸಿದ ಕ್ಷಮಾಗುಣಕ್ಕೆ ವಿರುದ್ಧವಾಗಿ ನಡೆದರು. ಕ್ಷಮೆಯೇ ದಲಿತರ ವಿವೇಕದ ದಾರಿ. ಅದು ಬುದ್ಧನ ದಾರಿ. ತನ್ನನ್ನು ಕೊಲೆ ಮಾಡಲು ಬಂದ ದೇವದತ್ತನನ್ನು ಕ್ಷಮಿಸಿ ಬುದ್ಧ ದೊಡ್ಡವನಾದ. ಅಂಬೇಡ್ಕರ್ ಭಾವಚಿತ್ರ ಹಾಕದೇ ಹೋದ ಸಣ್ಣ ತಪ್ಪನ್ನು ನೆಪ ಮಾಡಿಕೊಂಡು ಕಾರ್ಯಕ್ರಮ ತಡೆದ ದಲಿತ ಕಾರ್ಯಕರ್ತರಿಗೆ ಬುದ್ಧಗುರು ಮತ್ತು ಅಂಬೇಡ್ಕರ್ ಕಾಣದಾದರೇ? 

ಪುಸ್ತಕ  ಪ್ರಾಧಿಕಾರದ ಅಧ್ಯಕ್ಷರು ಕ್ಷಮೆ ಕೇಳಿದಾಗಲೂ, ಸ್ಥಳೀಯ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ ಅವರು ಸಂಧಾನ ಮಾಡಿದಾಗಲೂ ಕಾರ್ಯಕ್ರಮ ನಡೆಸದಂತೆ ತಡೆಗಟ್ಟಿದ ಈ ದಲಿತರ ನಡೆ ಯಾರಿಗೆ ಮಾದರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.