ADVERTISEMENT

ಲಿಂಗಾಯತ: ಹಿಂದೂ ಧರ್ಮಕ್ಕಿಂತ ಭಿನ್ನವೇ?

ವೇದಗಳ ಆಧಾರದಿಂದಲೇ ವಚನಗಳಲ್ಲಿ ಶಿವನ ಪಾರಮ್ಯವನ್ನು ಸಾಧಿಸಲಾಗಿದೆ

ಡಾ.ಆರ್.ಲಕ್ಷ್ಮೀನಾರಾಯಣ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST

ತಮ್ಮದು ಪ್ರತ್ಯೇಕ ಧರ್ಮ ಎಂದು ಸಾಧಿಸಲು ವೀರಶೈವ- ಲಿಂಗಾಯತರು ಹಲವಾರು ವರ್ಷಗಳಿಂದ ಹರಸಾಹಸ ಪಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಅದಕ್ಕೆ ಸಾಕಷ್ಟು ಬೌದ್ಧಿಕ ಸಾಮಗ್ರಿಯೂ ಉಂಟೆಂದು ಎಸ್.ಎಂ. ಜಾಮದಾರ ಅವರು ಪ್ರಬಲ ವಾದವನ್ನೂ ಮುಂದಿಟ್ಟಿದ್ದಾರೆ (ಪ್ರ.ವಾ., ಜುಲೈ 1). ವೇದಗಳ ಮತ್ತು ಯಜ್ಞಯಾಗಾದಿಗಳ ವಿರೋಧ, ಕರ್ಮ ಸಿದ್ಧಾಂತ ಒಪ್ಪದಿರುವುದು, ಚಾತುರ್ವರ್ಣ ತಿರಸ್ಕಾರ ಮುಂತಾದ ಅದರ ಕೆಲವು ತತ್ವಗಳು ಹಿಂದೂ–ವೈದಿಕಕ್ಕಿಂತ ಭಿನ್ನವಾಗಿರುವುದು ನಿಜ.

ಸಾವಿರಾರು ವರ್ಷಗಳ ಮುನ್ನವೇ ವೇದಗಳ ರುದ್ರನೊಂದಿಗೆ ಅಭಿನ್ನನಾದ ದ್ರಾವಿಡ ದೈವವಾದ ಶಿವಕೇಂದ್ರಿತವೂ, ಬಹುಪಾಲು ಹಿಂದೂಗಳ ಪರಮಾರಾಧ್ಯ ದೈವವಾದ ಶಿವನನ್ನೇ ಆರಾಧ್ಯ ದೈವವಾಗುಳ್ಳ, ಶಿವ ಸಂಸ್ಕೃತಿ ಪ್ರಾಧಾನ್ಯದ್ದೂ ಆದ ಈ ಧರ್ಮ ಅದು ಹೇಗೆ ಹಿಂದೂ ಧರ್ಮಕ್ಕಿಂತ ಭಿನ್ನ ಧರ್ಮವಾಗುತ್ತದೆ ಎಂಬ ಪ್ರಶ್ನೆ ಈ ಅನ್ಯಧರ್ಮ ವಾದದ ಮಧ್ಯೆ ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ಕಾಡಬಹುದು!

ಅಲ್ಲದೇ ವೇದಗಳ ಆಧಾರದಿಂದಲೇ ವಚನಗಳಲ್ಲಿ ಶಿವನ ಪಾರಮ್ಯವನ್ನು ಸಾಧಿಸಲಾಗಿದೆ. ಇನ್ನು ಲಾಂಛನವಾದರೂ ಬೇರೆಯೇ ಎಂದರೆ  ಅದ್ವೈತಿಗಳೂ ಸೇರಿದಂತೆ ಬಹುಸಂಖ್ಯಾತ ಹಿಂದೂಗಳ ಲಾಂಛನವಾದ ವಿಭೂತಿಯೇ ಆಗಿದೆ. ತಾತ್ವಿಕವಾಗಿ ನೋಡಹೋದರೆ ಒಂದು ಕಡೆ ಶಿವಾದ್ವೈತವನ್ನು ಸಾರುತ್ತ ಶಂಕರರ ಅದ್ವೈತಕ್ಕೆ ಹತ್ತಿರವಾದಂತಿದೆ. ಆದರೆ ಅವರ ‘ಜಗನ್ಮಿಥ್ಯಾ’ ಸಿದ್ಧಾಂತ ಅಥವಾ ಮಾಯಾವಾದವನ್ನೊಪ್ಪುವುದಿಲ್ಲ.

ADVERTISEMENT

ಇನ್ನೊಂದು ಕಡೆ ವೀರಶೈವಕ್ಕಿಂತ ಮುಂಚಿನ ವೀರವೈಷ್ಣವ ರಾಮಾನುಜರ ವಿಶಿಷ್ಟಾದ್ವೈತದ - ಜಗತ್ತು ಸತ್ಯವೆಂಬುದನ್ನು ಒಪ್ಪುತ್ತ ಒಂದು ರೀತಿಯಲ್ಲಿ ಆ ವೀರ ವೈಷ್ಣವದ ಹಾಗೆಯೇ ಅದರ ಪ್ರಪತ್ತಿ ಅಥವಾ ಅನನ್ಯ ಶರಣಾಗತಿ ತತ್ವದ (ಇಲ್ಲಿ ಶಿವನಲ್ಲಿ) ಮೂಲಕ ವಿಶಿಷ್ಟಾದ್ವೈತಕ್ಕೆ ಹತ್ತಿರವಾದ ಶರಣರ ಶಕ್ತಿ-ವಿಶಿಷ್ಟಾದ್ವೈತ ಸೈದ್ಧಾಂತಿಕವಾಗಿಯೂ ಹಿಂದೂ–ವೈದಿಕದ ಆ ಧರ್ಮಗಳಿಗಿಂತ ತೀರ ಭಿನ್ನವೇ ಎಂಬ ಪ್ರಶ್ನೆಯೂ ಏಳಬಹುದು.

ಶಿವನ ಪರಿವಾರದ ಗಣೇಶ, ಷಣ್ಮುಖ, ಪಾರ್ವತಿಯರನ್ನು ಪೂಜಿಸುವುದು ಹಾಗಿರಲಿ ವೀರಶೈವದಲ್ಲಿ ಸೇರಿಹೋಗಿರುವ ಇಷ್ಟಲಿಂಗಧಾರಿಗಳಾದ ನಾನಾ ಜಾತಿವರ್ಗದವರು ರಂಗನಾಥ, ವೆಂಕಟೇಶ್ವರ ಮುಂತಾದ ಅನೇಕ ಹಿಂದೂ ದೇವರನ್ನು ಮನೆದೈವವಾಗಿ ಹೊಂದಿದ್ದಾರೆ! ಇನ್ನು ಜೀವನ ವಿಧಾನವಂತೂ (way of life) ಜೈನ, ಬೌದ್ಧ, ಸಿಖ್ ಧರ್ಮದವರೂ ಸೇರಿದಂತೆ ಬಹುಸಂಖ್ಯಾತ ಹಿಂದೂಗಳ ರೀತಿಯೇ ಎನ್ನುವುದು ಗೊತ್ತಿರುವಂಥದೇ.

ಆದರೆ ವೀರಶೈವಕ್ಕೂ  ಜೈನ, ಸಿಖ್ ಮತ್ತು ಬೌದ್ಧ ಧರ್ಮಗಳಿಗೂ  ಇರುವ ಬಹುಮುಖ್ಯ ವ್ಯತ್ಯಾಸವೆಂದರೆ ಹಿಂದೂಗಳ ಆರಾಧ್ಯ ದೈವ ಆ ಧರ್ಮಾನುಯಾಯಿಗಳ ದೈವವಂತೂ ಖಂಡಿತಾ ಅಲ್ಲ. ಬಹುಶಃ ವಿಶಾಲ ಹಿಂದೂ ಕಕ್ಷೆಯಲ್ಲೇ ಬರುವ ಕಾಶ್ಮೀರ ಶೈವ (ಪ್ರತ್ಯಭಿಜ್ಞಾ ದರ್ಶನ) ಪಂಥವೇ ಮೊದಲಾದವುಗಳ ಹಾಗೆ ಒಂದು ಪ್ರಭೇದವೇ ಅಗಿರಬೇಕಲ್ಲವೇ? ಈ ಅಭಿಪ್ರಾಯವನ್ನು ಸಮರ್ಥಿಸುವ ರೀತಿಯಲ್ಲೇ ವೀರಶೈವವು ಹಿಂದೂ ಧರ್ಮದ ಅವಿಭಾಜ್ಯ ಅಂಗ ಎಂದು ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಮ್ಮ ಲೇಖನದಲ್ಲಿ ದೃಢಪಡಿಸಿದ್ದಾರೆ (ಪ್ರ. ವಾ., ಜುಲೈ 19).

ಹೀಗೆಲ್ಲಾ ವಸ್ತುಸ್ಥಿತಿ ಇದ್ದರೂ ಮುಖ್ಯಮಂತ್ರಿಯವರು  ಈ ಅನ್ಯಧರ್ಮವಾದಕ್ಕೆ ಶ್ರೀರಕ್ಷೆಯಾಗಿ ನಿಂತಿದ್ದಾರೆ! ಅಥವಾ ಯಾರಿಗೆ ಗೊತ್ತು ರಾಘವಾಂಕನ ‘ಸಿದ್ಧರಾಮಚರಿತೆ’ಯ ಆ ಸಿದ್ಧರಾಮನು,  ನರಕದಲ್ಲಿ ಕೊಳೆಯುತ್ತಿದ್ದವರನ್ನೆಲ್ಲ ತನ್ನ ಲಾಕುಳದಿಂದ (ಯೋಗದಂಡದಿಂದ) ಸ್ವರ್ಗಕ್ಕೆ (ಕೈಲಾಸಕ್ಕೆ) ಸೇರಿಸಿದ ಹಾಗೆ  ಹಿಂದೂ ನರಕದಲ್ಲಿ ಕೊಳೆಯುತ್ತಿರುವ ವೀರಶೈವ-ಲಿಂಗಾಯತರನ್ನೆಲ್ಲ ಈ ಸಿದ್ದರಾಮರೂ ತಮ್ಮ ರಾಜದಂಡದಿಂದ ಅಹಿಂದ ಸ್ವರ್ಗ ಸೇರಿಸುವ ಸಿದ್ಧರಾಗಿಬಿಡಬಹುದು! ಆ ದಿನಕ್ಕಾಗಿ ಕಾದಿರುವವರಿಗೆಲ್ಲ ಶುಭವಾಗಲೆಂದು ನಾವೆಲ್ಲರೂ ಹಾರೈಸೋಣವೇ?

ಹಿಂದೂ ಧರ್ಮಕ್ಕೆ ನಷ್ಟ
ಕರ್ನಾಟಕದಲ್ಲಿ  ಈಗ ಲಿಂಗಾಯತ ಸಮುದಾಯದ ಧಾರ್ಮಿಕ ಅಸ್ಮಿತೆಗಾಗಿ ಇನ್ನೂ ಸರಿಯಾಗಿ ಹೇಳಬೇಕೆಂದರೆ ಸಾಂಸ್ಥಿಕ ಅಸ್ತಿತ್ವಕ್ಕಾಗಿ ಆಗ್ರಹ ತಾರಕ ಮುಟ್ಟಿದೆ. ಮುಖ್ಯಮಂತ್ರಿ  ಸಿದ್ದರಾಮಯ್ಯಅವರು ಕೂಡಾ ಇದಕ್ಕೆ ಮನ್ನಣೆ ನೀಡುವ ಮಾತಾಡಿದ್ದಾರೆ.

ನನಗನಿಸುತ್ತಿರುವುದೇನೆಂದರೆ, ಬೌದ್ಧ, ಜೈನ, ಸಿಖ್‌ ಧರ್ಮಗಳು ಹಿಂದೂ ಧರ್ಮದ ವಿರುದ್ಧ ತೀವ್ರ ಸ್ವರೂಪದ ಭಿನ್ನಮತವನ್ನು ಎತ್ತಿದ ದನಿಗಳು. ಈ ಪ್ರತಿಭಟನೆಯ ಕಾರಣದಿಂದ ಇವುಗಳು  ಪ್ರತ್ಯೇಕಗೊಂಡು  ದೂರ ಸರಿಯಬೇಕಾಯಿತು. ಹಿಂದೂ ಎಂದು  ಗುರುತಿಸಿ   ಕರೆಯಲಾಗುವ  ಜೀವನ ಕ್ರಮ ಮತ್ತು ಲೋಕ ದೃಷ್ಟಿಗಳು ಈ ಭಿನ್ನ ಮತೀಯ ದನಿಗಳನ್ನು ವಿರೋಧಿಸಿ ಹಿಮ್ಮೆಟ್ಟಿಸಿದವು. ಈ ದಮನದ ಶಕ್ತಿಗಳೆಂದರೆ  ಇಲ್ಲಿನ ಯಥಾಸ್ಥಿತವಾದಿ  ಪುರೋಹಿತಶಾಹಿ ಹಾಗೂ ಫ್ಯೂಡಲ್‌ ವರ್ಗ. ಇವತ್ತಿಗೂ ಈ ಶಕ್ತಿಗಳು ಪರಸ್ಪರ ಕೈಜೋಡಿಸುತ್ತಿರುವುದನ್ನು  ನೋಡಬಹುದು. ಈಗ ಈ ಶಕ್ತಿದ್ವಯ ಒಗ್ಗೂಡಿ  ಕಾರ್ಪೊರೇಟ್‌ ರೂಪ  ತಾಳಿರುವುದನ್ನು ನೋಡುತ್ತೇವೆ.

ಆದರೆ, ಹೊಸ ಜ್ಞಾನ ಶೋಧದ, ಅನ್ಯಾಯದ  ವಿರುದ್ಧದ ಬಂಡಾಯದ ಈ ದನಿಗಳನ್ನು  ದೂರವಿಡುವ ಮೂಲಕ  ಜಾತಿಪದ್ಧತಿ  ಮೂಲದ ಹಿಂದೂ ಧರ್ಮ ಪ್ರತ್ಯೇಕವಾಗುಳಿದು ಹೊಲಸಲ್ಲಿ ಹೊರಳಾಡಬೇಕಾಗಿಬಂದಿದೆ. ಹಿಂದೆ ಬೇರೆ ಬೇರೆ  ಕಾಲಘಟ್ಟಗಳಲ್ಲಿ ಬೌದ್ಧ, ಜೈನ, ಸಿಖ್  ಮುಂತಾದ ಭಿನ್ನ ತಾತ್ವಿಕತೆಗಳು ಹೊರನಡೆದಂತೆ ಈಗ ಕರ್ನಾಟಕದಲ್ಲಿ ನಡೆಯುತ್ತಿರುವ  ಲಿಂಗಾಯತದ ಹೊರಹೋಗುವಿಕೆ ಪ್ರಯತ್ನ ನಮ್ಮ ಕಾಲದ ಚಾರಿತ್ರಿಕ ಘಟನೆ.

ವಚನ ಸಾಹಿತ್ಯದ ಕೇಂದ್ರ ತಾತ್ವಿಕತೆ, ಹಿಂದೂ ಧರ್ಮದ ಸಿದ್ಧಾಂತ ಮತ್ತು ಆಚರಣೆ ಎರಡನ್ನೂ ಜುಟ್ಟು  ಹಿಡಿದು ಪ್ರಶ್ನಿಸುತ್ತದೆ. ಆ ಕಾರಣ ಅದು ನಮ್ಮೊಡನಿರಬೇಕಾದ  ಅವಶ್ಯಕ ತಾತ್ವಿಕತೆಯಾಗಿ  ಕಾಣುತ್ತದೆ. ಹಿಂದೂ ಧರ್ಮ, ಈ ಅವೈದಿಕ  ತಾತ್ವಿಕತೆಗಳು ಎತ್ತಿದ  ಪ್ರಶ್ನೆಗಳಿಗೆ ಉತ್ತರಿಸದೆ ಏಕಮುಖ  ನಿರಾಕರಣೆಯ ಸ್ಥಾಯಿ  ವಿರೋಧವನ್ನಷ್ಟೇ  ಜಾರಿಯಲ್ಲಿಟ್ಟು ಎಲ್ಲ ಒಳಿತನ್ನು  ತಿರಸ್ಕರಿಸುವ ಜನವಿರೋಧಿ ಸಾಂಸ್ಥಿಕ ವ್ಯವಸ್ಥೆಯಾಗಿ  ಉಳಿದುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತದ ಹೊರಹೋಗುವಿಕೆ ಪ್ರಯತ್ನ ಈಡೇರಿದರೆ ಅದು ಹಿಂದೂ ಧರ್ಮಕ್ಕೆ ಆಗುವ ನಷ್ಟವೇ ಸರಿ.
ಕೆ.ಪಿ. ನಟರಾಜ


ಪ್ರತ್ಯೇಕ ಧರ್ಮ ಕಷ್ಟಸಾಧ್ಯ
ವಿವಿಧ ಲಿಂಗಾಯತ ಸಮುದಾಯಗಳು ರಾಜಕೀಯ ವೋಟ್‌ ಬ್ಯಾಂಕ್‌ಗಾಗಿ, ಜಾತಿ, ಜನಾಂಗ, ಪಂಥಗಳ ಹೆಸರಿನಲ್ಲಿ, ಲಾಭ ನಷ್ಟದ ದೃಷ್ಟಿಕೋನದ ಹಿನ್ನೆಲೆಯಲ್ಲಿ ಸಂಘಟಿತಗೊಂಡಿರುವ ಮತ್ತು ಪ್ರತ್ಯೇಕವಾಗುವ ಪ್ರಯತ್ನದ ಪ್ರಸ್ತುತ ಸಂದರ್ಭ ಸಂದಿಗ್ಧವಾದುದು. 

ಅನೇಕ ತಾರತಮ್ಯ, ಮತ ಪಂಥಗಳ ಭೇದಗಳನ್ನಿಟ್ಟುಕೊಂಡು ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆ ಮಾಡುವುದು ಅಸಾಧ್ಯ. ಹರಿದು ಹಂಚಿ ಹೋಗಿರುವ ಎಲ್ಲಾ ಲಿಂಗಾಯತ ಸಮುದಾಯಗಳು ಒಂದುಗೂಡಬೇಕು. ಈ ಎಲ್ಲಾ ಸಮುದಾಯಗಳಲ್ಲಿ ‘ನಾವೆಲ್ಲರೂ ಒಂದು’ ಎನ್ನುವ, ‘ನಾವು ನಮ್ಮವರು’ ಎನ್ನುವ ಸಾಮುದಾಯಿಕ ಪ್ರಜ್ಞೆ ಮೂಡಬೇಕು.

ಲಿಂಗಾಯತ ಸಮುದಾಯಗಳಲ್ಲಿರುವ ಶ್ರೇಷ್ಠ, ಕನಿಷ್ಠ, ಮಧ್ಯಮ ಮುಂತಾದ ಭೇದ ಭಾವಗಳು ಹೋಗಬೇಕು. ಎಲ್ಲಾ ಲಿಂಗಾಯತ ಸಮುದಾಯಗಳನ್ನು ಭಾವನಾತ್ಮಕ, ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ ಕಾಣಬೇಕು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯಗಳ ವಿದ್ವಾಂಸರು, ಸಾಹಿತಿಗಳು, ವಿಚಾರವಂತರು, ಮುಖಂಡರು, ರಾಜಕೀಯ ತಜ್ಞರು, ಮಠಾಧೀಶರು ಒಂದುಗೂಡಿ ಪರಿಣಾಮಕಾರಿಯಾದ ಚಿಂತನ ಮಂಥನ ನಡೆಸಬೇಕಾದುದು ಅಗತ್ಯವಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಸಜ್ಜಾಗಬೇಕು. ಇಲ್ಲದಿದ್ದರೆ ಲಿಂಗಾಯತ ಧರ್ಮ ಸ್ಥಾಪನೆ ಅಸಾಧ್ಯ ಎಂದು ಹೇಳಬಹುದು.
ರಾಘವೇಂದ್ರ ಹಾರಣಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.