ADVERTISEMENT

ಗುರುವಾರ, 13–7–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST

* ರಾಷ್ಟ್ರೀಯ ಭಾಷೆಯಾಗಿ ಹಿಂದಿ: ಪಕ್ಷದ ಮುಖಂಡರಿಗೆ ಪ್ರಧಾನಿ ಸೂಚನೆ
ನವದೆಹಲಿ, ಜುಲೈ 12–
ಹಿಂದಿಯು ಭಾರತದ ಏಕೈಕ ಅಧಿಕೃತ ಭಾಷೆ ಆಗಬೇಕು ಎಂಬ  ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು, ಇತರ ಭಾಷೀಯರು ತಮ್ಮ ಮೇಲೆ ಹಿಂದಿ ಹೇರಲಾಗುತ್ತದೆ ಎಂಬ ಭಾವನೆ ತಾಳಬಾರದು ಎಂದಿದ್ದಾರೆ.

ಕಾಂಗ್ರೆಸ್‌ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಇಂದು ಭಾರಿ ವಾದ–ವಿವಾದಕ್ಕೆ ಕಾರಣವಾದ ಉದ್ದೇಶಿತ ‘ಅಧಿಕೃತ ಭಾಷೆ ತಿದ್ದುಪಡಿ ಮಸೂದೆ’ಯ ಕುರಿತು ಮಾತನಾಡಿದ ಪ್ರಧಾನಿ, ‘ಅಧಿಕೃತ ಭಾಷೆಯ ವಿಚಾರದಲ್ಲಿ ನಾವು ಎಲ್ಲರಿಗೂ ಒಪ್ಪಿತವಾಗುವಂಥ ಒಂದು ತೀರ್ಮಾನ ಕೈಗೊಳ್ಳಬೇಕಾಗಿದೆ’ ಎಂದರಲ್ಲದೆ, ತಮ್ಮ ಭಾಷೆ ಅಪಾಯದಲ್ಲಿದೆ ಎಂಬ ಭಾವನೆ ಹಿಂದಿಯೇತರ ಭಾಷಿಕರಲ್ಲಿ ಮೂಡದಂತೆ ನೋಡಿಕೊಳ್ಳುವ ಹೊಣೆ ಪಕ್ಷದ ಮುಖಂಡರ ಮೇಲಿದೆ ಎಂದರು.

***

ADVERTISEMENT

* ಗಡಿಯಲ್ಲಿ ಚೀನಾ ಸೇನೆ: ತನಿಖೆ
ನವದೆಹಲಿ, ಜುಲೈ 12–
ಭೂತಾನ್‌–ಸಿಕ್ಕಿಂ ಗಡಿ ಪ್ರದೇಶದಲ್ಲಿ ಚೀನಾದ ಸೇನಾ ತುಕಡಿ ಜಮಾವಣೆಯಾಗುತ್ತಿದೆ ಎಂದು ಜಪಾನ್‌ನ ಪತ್ರಿಕೆಯೊಂದು ಮಾಡಿರುವ ವರದಿಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲು ರಕ್ಷಣಾ ಸಚಿವ ಶ್ರೀ ಸ್ವರಣ್‌ ಸಿಂಗ್‌ ಲೋಕಸಭೆಯಲ್ಲಿ ಒಪ್ಪಿದರು. ಈ ವಿಚಾರದಲ್ಲಿ ನಿಖರವಾದ ಮಾಹಿತಿ ಲಭ್ಯವಾದಲ್ಲಿ ಅದನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದೂ ಅವರು ತಿಳಿಸಿದರು.

***

* ದಾಳಿ: ಇಸ್ರೇಲ್‌ ಟ್ಯಾಂಕರ್‌ ನಾಶ
ಬೈರೂತ್‌, ಜುಲೈ 12–
ಸುಯೆಜ್‌ ಕಾಲುವೆ ಪ್ರದೇಶದಲ್ಲಿ ಇಂದು ಮತ್ತೆ ಎರಡು ಬಾರಿ ಇಸ್ರೇಲ್‌ ಹಾಗೂ ಈಜಿಪ್ಟ್‌ ಪಡೆಗಳು ಪರಸ್ಪರರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಇಸ್ರೇಲ್‌ನ ಎರಡು ಟ್ಯಾಂಕರ್‌ ಹಾಗೂ ಎರಡು ಲಘು ಯುದ್ಧ ವಾಹನಗಳು ನಾಶವಾಗಿವೆ ಎಂದು ಕೈರೊ ರೇಡಿಯೊ ವರದಿ ಮಾಡಿದೆ.

***

* ಈ ಅಧಿವೇಶನದಲ್ಲೇ ಬೆಳೆ ವಿಮೆ ಮಸೂದೆ
ನವದೆಹಲಿ, ಜುಲೈ 12–
ಬೆಳೆ ವಿಮೆಯನ್ನು ಆರಂಭಿಸುವ ಬಗೆಗಿನ ಮಸೂದೆಯೊಂದನ್ನು ಸರ್ಕಾರ ಈ ಅಧಿವೇಶನದಲ್ಲೇ ಮಂಡಿಸಲಿದೆ ಎಂದು ಕೇಂದ್ರದ ಆಹಾರ ಮತ್ತು ಕೃಷಿ ರಾಜ್ಯ ಸಚಿವ ಶ್ರೀ ಅಣ್ಣಾಸಾಹೇಬ ಶಿಂಧೆ ಇಂದು ಲೋಕಸಭೆಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.