ADVERTISEMENT

ಭಾನುವಾರ, 22–10–1967

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST

ಶಿಕ್ಷಕರ ಸಂಬಳದಲ್ಲಿ ಪಾಲುಪಡೆವ ಆಡಳಿತ ವರ್ಗದವರ ಮೇಲೆ ಕ್ರಮ
ಬೆಂಗಳೂರು, ಅ. 21–
ಶಿಕ್ಷಕರಿಗೆ ಕೊಡುವ ಸಂಬಳ ಅವರ ಕೈಗೆ ಪೂರ್ಣವಾಗಿ ಪಾವತಿಯಾಗದಂತೆ ಏನಾದರೊಂದು ಆಡಚಣೆ ತರುವ ಖಾಸಗಿ ಶಾಲಾ ಆಡಳಿತ ವರ್ಗದವರ ಮೇಲೆ ತೀವ್ರ ಕ್ರಮ ಕೈಗೊಳ್ಳಲಾಗುವುದೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.

ದುರಾಚಾರ ಆಪಾದನೆಗಳ ವಿಚಾರಣೆ: ಉತ್ತರ ಪ್ರದೇಶದಲ್ಲಿ ರಾಜ್ಯಪಾಲರ ವಿಶೇಷಾಜ್ಞೆ
ಲಖನೌ, ಅ. 21–
ಉತ್ತರ ಪ್ರದೇಶದಲ್ಲಿ ಗುರುತರವಾದ ಹುದ್ದೆಗಳಲ್ಲಿರುವ ಸಚಿವೋಪಸಚಿವರ ಹಾಗೂ ಇತರರಿಗೆ ಸಂಬಂಧಿಸಿದಂತೆ ಬರುವ ದುರಾಚಾರಗಳ ವಿಚಾರಣೆಗಾಗಿ ವಿಶೇಷಾಜ್ಞೆಯೊಂದನ್ನು ರಾಜ್ಯಪಾಲ ಡಾ. ಬಿ. ಗೋಪಾಲರೆಡ್ಡಿ ಅವರು ಇಂದು ಘೋಷಿಸಿದರು.

ಅಧಿಕಾರದಲ್ಲಿ ಇದ್ದ ಅಥವಾ ಈಗ ಇರುವ ಸಚಿವರು, ಸ್ಟೇಟ್ ಸಚಿವರು, ಉಪಸಚಿವರು, ಪಾರ್ಲಿಮೆಂಟರಿ ಕಾರ್ಯದರ್ಶಿಗಳು, ರಾಜ್ಯ ವಿಧಾನ ಮಂಡಲದ ಸದಸ್ಯರು, ನಗರ ಸಭೆಯ ಅಥವಾ ಪೌರಸಭೆಯ ನಗರ ಪ್ರಮುಖ ಅಥವಾ ಉಪನಗರ ಪ್ರಮುಖರು, ಜಿಲ್ಲಾ ಪರಿಷತ್ತಿನ ಅಥವಾ ನಗರ ಪೌರ ಮಂಡಲಿಯ ಅಧ್ಯಕ್ಷರು ಅಥವಾ ಉಪಾಧ್ಯಕ್ಷರ ವಿರುದ್ಧ ಇರುವ ಅಥವಾ ಬರುವ ದುರಾಚಾರದ ಆಪಾದನೆಗಳನ್ನು ವಿಚಾರಣೆ ಮಾಡಲು ವ್ಯವಸ್ಥೆಯೊಂದನ್ನು ರೂಪಿಸುವುದಕ್ಕೆ ಈ ವಿಶೇಷಾಜ್ಞೆಯಲ್ಲಿ ಅಧಿಕಾರ ನೀಡಲಾಗಿದೆ.

ADVERTISEMENT

19ನೇ ಬಾರಿಗೂ ಮದುವಣಿಗ?
ಲಾಸ್‌ಏಂಜಲೀಸ್, ಅ. 21
– ವಿವಾಹದ ಮೂರು ಗಂಟೆಗಳ ನಂತರ ದಾಂಪತ್ಯ ವಿಚ್ಛೇದನ! ಗ್ಲಿನ್ ಡೆಮೋಸ್ ವುಲ್ಫ್ ಅವರ ಜೀವನದಲ್ಲಿ ಇದು ಮುರಿದುಬಿದ್ದ 18ನೇ ಮದುವೆ. 19ನೇ ವಿವಾಹ ಕುರಿತು ಯೋಚಿಸುವುದಕ್ಕೆ ಅಥವಾ ಹಿಂದಿನ ಘಟನೆಗಳ ಬಗ್ಗೆ ಚಿಂತೆಪಡುವುದಕ್ಕೆ ತಮಗೇ ಬಿಡುವಿಲ್ಲ ಎನ್ನುತ್ತಾರೆ ಅವರು.

‘ವಿವಾಹ ಸಮಾರಂಭದ ಮೂರು ಗಂಟೆಗಳ ಮೇಲೆ ಪರಿಸ್ಥಿತಿ ಬಿಗಿಡಾಯಿಸಿತು’ ಎಂದು 59 ವರ್ಷ ವಯಸ್ಸಿನ ಹೊಟೇಲ್ ಮಾಲಿಕ ವುಲ್ಫ್ ಹೇಳಿದ್ದಾರೆ. ‘ನನ್ನನ್ನು ಕೃಪಣ ಎಂದು ಕರೆದಿದ್ದರಿಂದ, ನನ್ನ ಪತ್ನಿ ಎಸ್ತರ್ ತಾಜ್ ಹೊಟೇಲಿನಲ್ಲಿ ಊಟದ ಬಿಲ್ ಹಣ ಕೊಡುವಂತೆ ಮಾಡಿದೆ. ಇದೇ ವಿವಾಹ ವಿಚ್ಛೇದನಕ್ಕೆ ಕಾರಣ’ ಎಂದರು. ‘ನನ್ನ 18 ಮದುವೆಗಳಲ್ಲಿ ಇದು ಅತ್ಯಂತ ಅಲ್ಪಾವಧಿಯ ವಿವಾಹ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.