ADVERTISEMENT

ಮಂಗಳವಾರ, 16–5–1967

​ಪ್ರಜಾವಾಣಿ ವಾರ್ತೆ
Published 15 ಮೇ 2017, 19:30 IST
Last Updated 15 ಮೇ 2017, 19:30 IST

‘ಕಾಸರಗೋಡು ಮೈಸೂರಿಗೇ’
ಮಂಗಳೂರು, ಮೇ 15–
ಕಾಸರಗೋಡು ತಾಲ್ಲೂಕಿನಲ್ಲಿ 300 ಚದರ ಮೈಲಿ ವಿಸ್ತೀರ್ಣ ಹಾಗೂ ಎರಡು ಲಕ್ಷ ಜನಸಂಖ್ಯೆಯುಳ್ಳ 71 ಗ್ರಾಮಗಳು ಮೈಸೂರು ರಾಜ್ಯಕ್ಕೆ ಸೇರಬೇಕೆಂಬ ಒತ್ತಾಯವನ್ನು ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಸಮಿತಿಯು ಮಹಾಜನ ಆಯೋಗದ ಮುಂದೆ ಪುನಃ ಸಮರ್ಥಿಸಿತು.

ಆಡೂರ್‌ ಬೆಟ್ಟದ ಉತ್ತರಕ್ಕಿರುವ ಇಡೀ ಪ್ರದೇಶ ಮತ್ತು ಇದರ ಮೇಲಿರುವ ಮೀಸಲು ಅರಣ್ಯ ಪ್ರದೇಶ ಹಾಗೂ ಪಯಸ್ವಿನಿ ಚಂದ್ರಗಿರಿ ನದಿಗಳು ಮೈಸೂರು ರಾಜ್ಯಕ್ಕೇ ಸೇರಬೇಕಾದ್ದು ಯುಕ್ತವೆಂದು ಸಮಿತಿಯು ತೀವ್ರವಾಗಿ ಒತ್ತಾಯಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ತಾಲ್ಲೂಕಿನ ನಡುವೆ ಸಂಪರ್ಕವು ಎಷ್ಟೊಂದು ನಿಕಟವಾಗಿದೆ ಎಂದರೆ, ತಾಯಿ ಜಿಲ್ಲೆಯಿಂದ ಕಾಸರಗೋಡಿನ ಪ್ರತ್ಯೇಕತೆಯು ದೇಹದ ಅವಯವವನ್ನು ಕತ್ತರಿಸಿ ಹಾಕಿದಂತಾಗಿದೆಯೆಂದೂ ಹೀಗೆ ಮಾಡುವುದರಿಂದ ಈ ಪ್ರದೇಶಗಳ ನಡುವೆ ದೀರ್ಘಕಾಲದಿಂದ ಬೆಸೆದು ಬಂದಿದ್ದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಭಾಷಾವಾರು ಸಂಪರ್ಕವನ್ನು ಅಸ್ತವ್ಯಸ್ತಗೊಳಿಸಲಾಗಿದೆಯೆಂದೂ ಮನವಿಯಲ್ಲಿ ತಿಳಿಸಲಾಗಿದೆ.

ಲಾಕ್–ಅಪ್‌ನಲ್ಲಿ ಪೋಲೀಸರು!
ಗುಲ್ಬರ್ಗ, ಮೇ 15–
ಹನ್ನೆರಡಕ್ಕೂ ಹೆಚ್ಚು ಮಂದಿ ಪೋಲೀಸರು ಕಳೆದ ಶನಿವಾರ ಇಲ್ಲಿನ ಜಗತ್ ಪೋಲೀಸ್ ಠಾಣೆಯ ಲಾಕ್‌ಅಪ್‌ನಲ್ಲಿ ಮೂರು ಗಂಟೆ ಕಾಲ ಇದ್ದರು.

ಎ.ಎಸ್.ಪಿ. ಅವರಿಗೆ ತೃಪ್ತಿಯಾಗುವಂತೆ ಪ್ರಶ್ನೆಯೊಂದಕ್ಕೆ ಉತ್ತರ ನೀಡದಿದ್ದುದೇ ಇದಕ್ಕೆ ಕಾರಣ. ಕಾನ್ಸ್‌ಟೇಬಲ್‌ಗಳನ್ನು ಲಾಕ್‌ಅಪ್‌ನಲ್ಲಿ ಹಾಕುವುದನ್ನು ವೀಕ್ಷಿಸಲು ಪೋಲೀಸ್ ಠಾಣೆಯ ಹೊರಗಡೆ ಸೇರಿದ್ದ ಭಾರಿ ಜನಸಂದಣಿಗೆ ಪ್ರಶ್ನೆಪತ್ರಿಕೆಗೆ ಸರಿಯಾಗಿ ಉತ್ತರ ಕೊಡದಿದ್ದುಕ್ಕಾಗಿ ಈ ಶಿಕ್ಷೆ ನೀಡಲಾಯಿತು ಎಂದು ಹೇಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.