ADVERTISEMENT

ಶನಿವಾರ, 21–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST

ಭೂಸ್ವಾಧೀನದ ಬಗ್ಗೆ ರಾಷ್ಟ್ರಪತಿ ಜರೂರು ಶಾಸನ
ನವದೆಹಲಿ, ಜ. 20–
ಸಾರ್‍ವಜನಿಕ ಉದ್ದೇಶಕ್ಕಾಗಿ ಬೇಕಾಗಿದೆಯೆಂದು ಪ್ರಕಟಿಸಿ ಸರ್ಕಾರವು ಈಗಾಗಲೇ ಕಂತುಗಳಲ್ಲಿ ಮಾಡಿಕೊಂಡಿರುವ ಭೂ ಸ್ವಾಧೀನವನ್ನು ಸಕ್ರಮಗೊಳಿಸಲು ರಾಷ್ಟ್ರಪತಿಯು ಇಂದು ಜರೂರು ಶಾಸನವೊಂದನ್ನು ಹೊರಡಿಸಿದರು.

***
23ರಿಂದ ಆಯುರ್‍ವೇದ ಔಷಧಿ ಸ್ವೀಕರಿಸುವುದಾಗಿ ಪುರಿ ಜಗದ್ಗುರುಗಳು
ಕಟಕ್‌, ಜ. 20–
ಗೋಹತ್ಯೆಯನ್ನು ನಿಷೇಧಿಸಬೇಕೆಂದು ಒತ್ತಾಯಪಡಿಸುವ ಸಲುವಾಗಿ ಪುರಿ ಜಗದ್ಗುರು ಶ್ರೀ ಶಂಕರಾಚಾರ್ಯರು ಉಪವಾಸ ಕೈಗೊಂಡು ಇಂದಿಗೆ 92 ದಿನಗಳಾದವು. ಅವರ ಆರೋಗ್ಯ ಪರಿಸ್ಥಿತಿಯು ಇಂದೇನೂ ಮತ್ತಷ್ಟು ಹದಗೆಡಲಿಲ್ಲವೆಂದು ಇಲ್ಲಿಗೆ ವರದಿ ಬಂದಿದೆ. ಅವರಿಗೆ ನಿದ್ರೆ ಬರುತ್ತಿಲ್ಲವೆಂದೂ, ಸರಿಯಾಗಿ ನಡೆಯುವುದು ಅವರಿಗೆ ಸಾಧ್ಯವಾಗುತ್ತಿಲ್ಲವೆಂದೂ ಗೊತ್ತಾಗಿದೆ.

***
ಆಹಾರ ಆಮದು: ಅಮೆರಿಕಾ ಷರತ್ತುಗಳಿಗೆ ಭಾರತದ ಒಪ್ಪಿಗೆ
ನವದೆಹಲಿ, ಜ. 20–
ಅಮೆರಿಕದ 1966ರ ಶಾಂತಿಗಾಗಿ ಆಹಾರ ಕಾಯಿದೆಯ ಪ್ರಕಾರ ಆಹಾರ ಆಮದು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಕೆಲವು ಕಾರ್ಯವಿಧಾನ ಗಳಿಗೆ ಭಾರತ ಒಪ್ಪಿಕೊಂಡಿದೆ.

ಈ ಕಾಯಿದೆಯ ಪ್ರಕಾರ ಅಮೆರಿಕದ ಕೃಷಿ ಉತ್ಪನ್ನಗಳನ್ನು ಪಡೆಯುವವರು ಯಾವ ರೀತಿಯಲ್ಲೂ ಉತ್ತರ ವಿಯಟ್ನಾಂನೊಡನೆ ವಾಣಿಜ್ಯ ವ್ಯವಹಾರನ್ನಿಟ್ಟುಕೊಳ್ಳಕೂಡದು. ಅಂತೆಯೇ ಕ್ಯೂಬಾದೊಡನೆ ನಡೆಸುವ ವ್ಯಾಪಾರವು ಸಮರಕ್ಕೆ ಸಂಬಂಧಪಡದ ಕಚ್ಚಾವಸ್ತುಗಳು, ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳಿಗೆ ಮಾತ್ರ ಸೀಮಿತವಾಗಿರಬೇಕು.

***
ಲೋಕಸಭೆಗೆ ಕೆ.ಎಲ್‌. ರಾವ್‌ ಅವಿರೋಧ ಆಯ್ಕೆ ಸಂಭವ
ವಿಜಯವಾಡ, ಜ. 20–
ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕೇಂದ್ರದ ನೀರಾವರಿ ಮತ್ತು ವಿದ್ಯುತ್‌ ಸಚಿವ ಡಾ. ಕೆ.ಎಲ್‌. ರಾವ್‌ ಅವರೊಬ್ಬರು ಮಾತ್ರ ಇದುವರೆಗೆ ಆ ಕ್ಷೇತ್ರದ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆಂದು ಇಂದು ಸಂಜೆ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

***
ಟಿ. ಚೌಡಯ್ಯ ಅವರ ಅಂತ್ಯಕ್ರಿಯೆ
ಮೈಸೂರು, ಜ. 20–
ಖ್ಯಾತ ಪಿಟೀಲು ವಾದಕ ದಿವಂಗತ ಶ್ರೀ ಟಿ. ಚೌಡಯ್ಯ ಅವರಿಗೆ ಸಾವಿರಾರು ಮಂದಿ ಇಂದು ಅಂತಿಮ ಪ್ರಣಾಮ ಸಲ್ಲಿಸಿದರು. ನಿನ್ನೆ ಇಲ್ಲಿ ನಿಧನರಾದ ಶ್ರೀ ಚೌಡಯ್ಯನವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಿತು.

ಝಾನ್ಸಿ ಲಕ್ಷ್ಮಿಬಾಯಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಶಿವರಾಂಪೇಟೆ ಮತ್ತು ಸಂತೇಪೇಟೆಗಳ ಮೂಲಕ ರುದ್ರಭೂಮಿಗೆ ಹೋದ ಮೆರವಣಿಗೆಯಲ್ಲಿ ಶ್ರೀ ಚೌಡಯ್ಯನವರ ಮಿತ್ರರು,  ಶಿಷ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ ಚೌಡಯ್ಯನವರ ಅಂತಿಮ ದರ್ಶನ ಪಡೆಯುವುದಕ್ಕಾಗಿ ನೂರಾರು ಜನ ಅವರ ಮನೆಗೆ ಭೇಟಿ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.