ADVERTISEMENT

ಶುಕ್ರವಾರ, 23–6–1967

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST

ತುರ್ತು ಪರಿಸ್ಥಿತಿ ರದ್ದಾಗದು
ನವದೆಹಲಿ, ಜೂ. 22–
ಪರದೇಶಗಳಿಂದ ಆಕ್ರಮಣದ ಅಪಾಯ ಇನ್ನೂ ಹೆಚ್ಚಾಗಿರುವುದರಿಂದ ಮುಂದಿನ ತಿಂಗಳುಗಳಲ್ಲೂ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಮುಂದುವರಿಯುವುದು.

ಕೇಂದ್ರ ಗೃಹಸಚಿವ ಶ್ರೀ ವೈ.ಬಿ. ಚವಾಣ್‌ರು ಪಾರ್ಲಿಮೆಂಟಿನ ಉಭಯ ಸದನಗಳಲ್ಲೂ ಇಂದು ಇದನ್ನು ಪ್ರಕಟಿಸಿದರು.

ಕೆಲವು ಗಡಿಪ್ರದೇಶಗಳ ಹೊರತು, ರಾಷ್ಟ್ರದ ಉಳಿದ ಕಡೆ ಬರುವ ಜುಲೈ ಒಂದರಿಂದ ತುರ್ತು ಪರಿಸ್ಥಿತಿಯನ್ನು ಅಂತ್ಯಗೊಳಿಸಿಸುವುದಾಗಿ ಸರ್ಕಾರ ಈ ಮೊದಲೇ ಪ್ರಕಟಿಸಿತ್ತು.

ADVERTISEMENT

ಗಡಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ಎಷ್ಟರಮಟ್ಟಿಗೆ ತುರ್ತು ಪರಿಸ್ಥಿತಿ ಅಧಿಕಾರಗಳ ಜಾರಿ ಅಗತ್ಯವೊ ಅಷ್ಟು ಹೊರತು, ರಾಷ್ಟ್ರದ ಉಳಿದ ಭಾಗಗಳಲ್ಲಿ ತುರ್ತು ಪರಿಸ್ಥಿತಿ ಅಧಿಕಾರಗಳನ್ನು ಬಳಸಕೂಡದೆಂದು ಗೃಹಸಚಿವರು ಉಭಯ ಸದನಗಳಲ್ಲಿಯೂ ಭರವಸೆ ನೀಡಿದರು.

ಚಿನ್ನದ ಮೇಲಿನ್ನೂ ಮುರಾರಜಿ ಕಣ್ಣು
ನವದೆಹಲಿ, ಜೂ. 22–
ರಾಷ್ಟ್ರದಲ್ಲಿ ಸ್ವರ್ಣ ಹತೋಟಿಯನ್ನು ಪರಿಣಾಮಕಾರಿಯನ್ನಾಗಿ ಮಾಡುವ ಉದ್ದೇಶವನ್ನು ತಾವಿನ್ನೂ ಕೈಬಿಟ್ಟಿಲ್ಲವೆಂದು ಉಪ ಪ್ರಧಾನಿ ಹಾಗೂ ಸಚಿವ ಶ್ರೀ ಮುರಾರಜಿ ದೇಸಾಯಿ ಅವರು ಇಂದು ತಿಳಿಸಿದರು.

ಬಜೆಟ್‌ ಮೇಲಿನ ಸಾಮಾನ್ಯ ಚರ್ಚೆಗೆ ಶ್ರೀ ಮುರಾರಜಿ ದೇಸಾಯಿ ಅವರು ಉತ್ತರ ಕೊಡುತ್ತಾ, ತಾವು ಜಾರಿಗೆ ತಂದ ಸ್ವರ್ಣ ಹತೋಟಿ ಕ್ರಮಗಳು ಪರಿಣಾಮಕಾರಿಯಾಗದಿದ್ದುದಕ್ಕೆ ಜನರಿಗೆ ಅದು ಬೇಕಿಲ್ಲದಿದ್ದುದೇ ಕಾರಣವೆಂದರು.

ನಗರದ ಡೈರಿಗೆ ನೂರಾರು ಮೈಲಿಗಳಿಂದ ಹಾಲು
ಬೆಂಗಳೂರು, ಜೂ. 22–
ಮುನ್ನೂರು ಮೈಲಿ ದೂರವಿರುವ ಧಾರವಾಡದಂಥ ಪ್ರದೇಶಗಳಿಂದಲೂ ಬೆಂಗಳೂರಿಗೆ ಹಾಲು ಸರಬರಾಜಾಗುವ ಸಂಭವವಿದೆ.
ಇಂಥ ಯೋಜನೆಯೊಂದನ್ನು ಬೆಂಗಳೂರು ಕ್ಷೀರ ಯೋಜನೆ ಆಡಳಿತ ವರ್ಗವು ಸದ್ಯದಲ್ಲಿಯೇ ಕಾರ್ಯಗತ ಮಾಡಲಿದೆ.

ತನ್ನ ಅಸ್ತಿತ್ವದ 30 ತಿಂಗಳ ಅನುಭವದ ಪರಿಣಾಮವಾಗಿ ಬೆಂಗಳೂರು ಡೈರಿ ಈಗ ಕೊಳ್ಳುತ್ತಿರುವಂತೆ ನಗರದ 30 ಮೈಲಿ ಫಾಸಲೆಯಲ್ಲಿ ಮಾತ್ರ ಹಾಲನ್ನು ಕೊಳ್ಳುವುದರಿಂದ ಅಗತ್ಯವಾದಷ್ಟು ಹಾಲನ್ನು ಪಡೆಯಲು ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.