ADVERTISEMENT

ಅನಾಹುತಕ್ಕೆ ದಾರಿ?

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST

ಆಯುಷ್ ವೈದ್ಯರಿಗೆ 6 ತಿಂಗಳ ಅಲೋಪಥಿ ತರಬೇತಿ ನೀಡುವ ಸರ್ಕಾರದ ನಿಲುವನ್ನು ಅಲೋಪಥಿ ವೈದ್ಯರು ವಿರೋಧಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ. ಆಯುಷ್ ಎಂದರೆ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪಥಿ ಎನ್ನುವ ವಿವಿಧ ರೀತಿಯ ವೈದ್ಯ ಪದ್ಧತಿಗಳ ಸಮೂಹ. ಈ ಎಲ್ಲಾ ಪದ್ಧತಿಗಳಿಗೂ  ಅವುಗಳದೇ ಆದ ವಿಭಿನ್ನ ಇತಿಹಾಸ, ರೋಗನಿರ್ಧರಣಾ ಪದ್ಧತಿ ಹಾಗೂ ಚಿಕಿತ್ಸಾ ವಿಧಾನಗಳಿವೆ.

‘ಅಲೋಪಥಿಯವರು ಓದಿದ್ದನ್ನೇ ನಾವೂ ಓದಿದ್ದೇವೆ’ ಎಂದು ಆಯುಷ್‌ ವೈದ್ಯರು ಹೇಳಿದರೆ, ಅದು ಹಾದಿ ತಪ್ಪಿಸುವ ಮಾತಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿಯೇ ಚಿಕಿತ್ಸಾ ನೈಪುಣ್ಯದ ಅವಶ್ಯಕತೆ ಇರುತ್ತದೆ. ಇಂತಹ ಸಮಯದಲ್ಲಿ ಅಡ್ಡದಾರಿಯಲ್ಲಿ ಅರೆಬೆಂದ ವೈದ್ಯರು ಚಿಕಿತ್ಸೆ ನೀಡುವುದರಿಂದ ಅನಾಹುತಗಳಾಗುವ ಸಾಧ್ಯತೆ ಹೆಚ್ಚು.

ಮಾತ್ರವಲ್ಲ, ಅಲೋಪಥಿ ಪದ್ಧತಿಗೇ ಕಪ್ಪುಚುಕ್ಕೆ ಅಂಟಬಹುದು. ಈ ರೀತಿ ಚಿಕಿತ್ಸೆ ನೀಡುವ ವೈದ್ಯರಿಗೆ ಸರ್ಕಾರದ ಅನುಮತಿ ಸಿಕ್ಕರೂ ಕಾನೂನಿನ ರಕ್ಷಣೆಯಿಲ್ಲ.ಹೀಗಿರುವಾಗ, ಬೇರೆ ಪದ್ಧತಿಗಳವರು ಅಲೋಪಥಿ ಪದ್ಧತಿಯ ಅನುಸಾರ ತುರ್ತು ಚಿಕಿತ್ಸೆ ನೀಡುವುದು ನ್ಯಾಯಸಮ್ಮತ ಹೇಗಾದೀತು? ಈ ರೀತಿಯ ‘ಕ್ರಾಸ್ ಪಥಿ’– ಅಂದರೆ ಕಲಿತದ್ದು ಒಂದು ಮಾಡುವುದೊಂದು– ಚಿಕಿತ್ಸಾ ರೀತಿಯನ್ನು  ದೇಶದ ಹಲವಾರು ನ್ಯಾಯಾಲಯಗಳು ತಳ್ಳಿಹಾಕಿವೆ. ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿಯಲ್ಲೂ ಇಂತಹ  ವೈದ್ಯರು  ಲಕ್ಷಾಂತರ ರೂಪಾಯಿ ಪರಿಹಾರ ನೀಡಬೇಕಾದೀತು.

ತಾವು ನಂಬಿ ಪಡೆದಿರುವ ವಿಧಾನದಲ್ಲಿಯೇ ಸಂಶೋಧನೆಗಳ ಮುಖಾಂತರ ಸಾಧನೆ ಮಾಡುವು ದನ್ನು ಬಿಟ್ಟು ಮತ್ತೊಂದು ವಿಧಾನವನ್ನು ಅಳವಡಿಸಿ ಕೊಳ್ಳಲು ಗೋಗರೆಯುತ್ತಿರುವುದು ಅವರ ವ್ಯೆದ್ಯ ವಿಧಾನಕ್ಕೆ ಅವರೇ ಅವಮರ್ಯಾದೆ ಮಾಡಿದಂತೆ.  ಏನು ಕಲಿತಿದ್ದಾರೋ ಅದರ ಪಾಲನೆ  ವೃತ್ತಿಧರ್ಮ.

ಹಳ್ಳಿಯ ಜನರು ದೇಶದ ಎರಡನೇ ದರ್ಜೆಯ ಪ್ರಜೆಗಳಲ್ಲ. ನುರಿತ ಅಲೋಪಥಿ ವ್ಯೆದ್ಯರಿಂದ ಚಿಕಿತ್ಸೆ ಪಡೆಯುವ ಹಕ್ಕು ಅವರಿಗೂ ಇದೆ. ಅರೆತರಬೇತಿ ಪಡೆದ ವೈದ್ಯರಿಂದ ಹಳ್ಳಿಗರ ಜೀವದ ಮೇಲೆ ಪ್ರಯೋಗ ಮಾಡುವುದು ಬೇಡ. ಪ್ರಸ್ತುತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ವೈದ್ಯರು ಹಾಗೂ ಹೆಚ್ಚಿನ ವ್ಯೆದ್ಯೇತರ ಸಿಬ್ಬಂದಿ ನೇಮಿಸಿಕೊಳ್ಳುವುದು ಅತ್ಯಗತ್ಯ. ಇದಕ್ಕೆ ಬೇಕಾಗುವ ಹಣ ಸರ್ಕಾರದಲ್ಲಿ ಇಲ್ಲ ಎಂಬ ಆರೋಗ್ಯ ಸಚಿವರ ಹೇಳಿಕೆ ಕಳವಳಕಾರಿ. ಆರೋಗ್ಯದ ಸೌಲಭ್ಯವನ್ನೂ ಕೊಡದಷ್ಟು ಬಡವಾಗಿದೆಯೇ ನಮ್ಮ ಸ್ಥಿತಿ?
-ಡಾ. ಮಧುಸೂದನ ಕಾರಿಗನೂರು, ಸಿರುಗುಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.