ADVERTISEMENT

ಆತಂಕವೇಕೆ?

ಪ್ರೊ.ಶಿವರಾಮಯ್/ಬೆಂಗಳೂರು
Published 27 ಜುಲೈ 2017, 19:36 IST
Last Updated 27 ಜುಲೈ 2017, 19:36 IST

ಸತತ ಬರಗಾಲದ ದವಡೆಗೆ ಸಿಕ್ಕಿ ದೇಶ ನಲುಗುತ್ತಿರುವಾಗ ಲಿಂಗಾಯತವು ವೀರಶೈವದಿಂದ ಬೇರೆ ಹಾಗೂ ಹಿಂದೂ ಧರ್ಮಕ್ಕಿಂತ ಭಿನ್ನ ಮುಂತಾಗಿ ವಾದ ವಿವಾದಗಳೂ, ಪರ– ವಿರೋಧ ಪ್ರಚಾರಗಳೂ ನಡೆಯುತ್ತಿವೆ. ಆದರೆ ಧರ್ಮ ಕಟ್ಟಿಕೊಂಡು ಜನಸಾಮಾನ್ಯರಿಗೆ ಆಗಬೇಕಾದ್ದೇನು? ಬಸವಣ್ಣನವರ ಕಾಲದಲ್ಲಿ ಪವಾಡವೋ ಎಂಬಂತೆ ಇವರಿಗೂ ಹಲವು ಬಗೆಯ ಅನುಕೂಲ ಆಯಿತು.

ಲಿಂಗಧಾರಿಗಳಾದ್ದರಿಂದ ಕೆಳವರ್ಗದ ಕುಲ ಹದಿನೆಂಟು ಜಾತಿ ಜನಾಂಗಗಳಿಗೆ ಸಾಮಾಜಿಕ ಮನ್ನಣೆಯೂ ಅವರ ವೃತ್ತಿ ಕಾಯಕಕ್ಕೆ ಗೌರವವೂ ವೈದಿಕಶಾಹಿಯ ಚಾತುರ್ವರ್ಣದ ಸಂಕೋಲೆಯಿಂದ ವಿಮೋಚನೆಯೂ ದೊರೆಯಿತು. ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರೂ ಲಿಂಗಾಯತರಾಗಿ ಒಂದೇ ಧರ್ಮಛತ್ರಿಯ ನೆರಳಿಗೆ ಬಂದರು. ಇವರ ಗುರು ಬಸವಣ್ಣ, ಜಗದ್ಗುರು ಅಲ್ಲಮಪ್ರಭು, ಶಾಸ್ತ್ರ ಸಂಹಿತೆಕಾರ ಚೆನ್ನಬಸವಣ್ಣ. ಇವರು ವೈದಿಕರ ಯಜ್ಞ ಯಾಗಾದಿ ಬಲಿಯನ್ನು ವಿರೋಧಿಸಿದರು; ವರ್ಣಾಶ್ರಮ ಧರ್ಮಗಳನ್ನು ಹುಸಿಗೊಳಿಸಿದರು, ಮತ ಮೌಢ್ಯಗಳ ಕತ್ತು ಹಿಸುಕಿದರು.

ಕ್ರಿಶ್ಚಿಯಾನಿಟಿಯ ಕ್ಯಾಥೊಲಿಕ್‌ರಲ್ಲಿದ್ದ ಕಂದಾಚಾರ, ಮತಮೌಢ್ಯಗಳನ್ನು ಪ್ರೊಟೆಸ್ಟ್ ಮಾಡಿದುದರಿಂದ ಪ್ರಾಟೆಸ್ಟೆಂಟ್ ಎಂಬ ಹೊಸ ಧರ್ಮ ಹೇಗೆ ಜನ್ಮ ತಾಳಿತೋ ಹಾಗೇ ಶೈವ ವೈದಿಕದಲ್ಲಿದ್ದ ಅಂಧಶ್ರದ್ಧೆ, ಕಂದಾಚಾರ, ಮತ ಮೌಢ್ಯಗಳನ್ನು ಲಿಂಗಾಯತ ಧರ್ಮ ಬೇರು ಸಹಿತ ಅಲ್ಲಾಡಿಸಿತು. ಹಾಗೆ ನೋಡಿದರೆ ಲಿಂಗಾಯತ ಎಂಬುದು ವೈದಿಕ ವೀರಶೈವಕ್ಕೆ ಭಿನ್ನವಾದ, ಕನ್ನಡದ ಪ್ರಾಟೆಸ್ಟೆಂಟ್ ಎಂಬಂತೆ ಬೇರೆ ಧರ್ಮವೇ ಸರಿ. ಪ್ರಸ್ತುತ ಇದು ಪ್ರತ್ಯೇಕ ಧರ್ಮ ಎಂದಾದರೆ ಹಿಂದುತ್ವವಾದಿಗಳಿಗೆ ಆತಂಕವೇಕೆ?

‘ನಾವೆಲ್ಲಾ ಹಿಂದೂ ಒಂದೇ’ ಎನ್ನುವ ಮಠಮಾನ್ಯಗಳು ಇದುವರೆಗೆ ಏಕೆ ಸುಮ್ಮನಿದ್ದವು? ಇದು ಧರ್ಮ ರಾಜಕಾರಣದ ರಹಸ್ಯ. ಸದ್ಯ ಲಿಂಗಾಯತರಲ್ಲಿರುವ ಹಿಂದುಳಿದ ಕೆಳವರ್ಗದ ಕಾಯಕ ಜೀವಿಗಳಿಗೆ ರಾಜಕೀಯವಾಗಿ ಮನ್ನಣೆ ಹಾಗೂ ಮೀಸಲಾತಿ ಸೌಲಭ್ಯಗಳು ದೊರಕುವ ಸಂಭವ ಇದೆ. ಆದ್ದರಿಂದ ಅವರ ಪ್ರತ್ಯೇಕತೆಯ ಮನವಿಯು ಜನತಂತ್ರದಲ್ಲಿ ಕಡೆಗಣಿಸುವಂತಹದಲ್ಲ. ದಾರಿಹೋಕರಿಗೆ ಯಾವ ದೇವರ ಗುಡಿಯಾದರೇನಂತೆ, ನಿದ್ದೆ ಬಂದರೆ ಸಾಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.