ADVERTISEMENT

ಕಳವಳ ಮತ್ತು ಕಾಳಜಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:30 IST
Last Updated 26 ಜೂನ್ 2016, 19:30 IST

‘ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಿರುವ ನೀರು ಇನ್ನು ಎರಡು ವಾರಕ್ಕೆ ಮಾತ್ರ ಸಾಕಾಗಲಿದ್ದು, ಮಳೆ ಬರದಿದ್ದರೆ ಕುಡಿಯುವ ನೀರಿನ ಪರಿಸ್ಥಿತಿ ಗಂಭೀರವಾಗಲಿದೆ’ ಎಂದಿದ್ದಾರೆ ಜಲಸಂಪನ್ಮೂಲ ಸಚಿವರು (ಪ್ರ.ವಾ., ಜೂನ್‌ 26). ಕಳವಳ ವ್ಯಕ್ತಪಡಿಸುವುದಷ್ಟೆ ಸರ್ಕಾರದ ಕಾಳಜಿ ಆಗಬಾರದು.

ಮಳೆ ಬಂದು ಜಲಾಶಯ ತುಂಬಿದಾಗ ನೀರು ಪೂರೈಸುವುದು ಸಾಧನೆ ಅಲ್ಲ. ಈ ಹಿಂದಿನ ಅನುಭವದ ಆಧಾರದ ಮೇಲೆ ಏನು ಪಾಠ ಕಲಿತಿದ್ದೇವೆ ಎಂಬುದು ಮುಖ್ಯವಾಗಬೇಕು. ಮಳೆಗಾಲ ಶುರುವಾಗಿದೆ. ಮಳೆನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ಅದನ್ನು ಸಂಗ್ರಹಿಸಿಡಲು ಮೊದಲೇ ಕ್ರಿಯಾಯೋಜನೆ ಸಿದ್ಧಪಡಿಸಬಹುದಿತ್ತು. ಬರದ ಬವಣೆ ಎದುರಿಸಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳುವುದು ಬೇಡವೇ? 

ಕೆರೆ–ಕಟ್ಟೆಗಳನ್ನು ತುಂಬಿಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡಬೇಕು. ನೀರಿನ ಪ್ರತೀ ಹನಿ ಅಮೂಲ್ಯ ಎಂಬ ಅರಿವು ಮೂಡಿಸುವ ಕೆಲಸವನ್ನು ಆಂದೋಲನ ರೂಪದಲ್ಲಿ ಕೈಗೆತ್ತಿಕೊಳ್ಳಬೇಕು. ಬೆಳೆ ಪದ್ಧತಿ ಬಗ್ಗೆ ಪುನರ್‌ ಅವಲೋಕನ ಮಾಡಬೇಕು. ರೈತರಿಗೆ ಮಾರ್ಗದರ್ಶನ ನೀಡಬೇಕು. ಈ ಯಾವ ಕೆಲಸವೂ ಆದಂತಿಲ್ಲ. ಬರಿ ಕಳವಳ ವ್ಯಕ್ತಪಡಿಸುವುದರಿಂದ ಏನು ಪ್ರಯೋಜನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.