ADVERTISEMENT

ಕಾಂಗ್ರೆಸ್ ಕುಟುಂಬದ ಪಕ್ಷ-, ಬಿಜೆಪಿ... !

ಈ.ಬಸವರಾಜು
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಹಿರಿಯ ಲೇಖಕ ಎಸ್.ಎಲ್.ಭೈರಪ್ಪ ಅವರು ಕಾಂಗ್ರೆಸ್ ಕುಟುಂಬದ ಪಕ್ಷ ಎಂದು ಹೇಳುತ್ತಾ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪ್ರಚಾರವನ್ನು ಯಾರೇ ಗಮನಿಸಿದರೂ ಅರ್ಥವಾಗುವ ಅಂಶವೆಂದರೆ ಬಿಜೆಪಿ ಈಗ ಒಬ್ಬ ವ್ಯಕ್ತಿಯ ಪಕ್ಷವಾಗಿದೆ ಎಂಬುದು.

ಮೋದಿ ಹೇಳುವಂತೆ ಕಾಂಗ್ರೆಸ್ ಕುಟುಂಬದ ಪಕ್ಷ ಅಂದುಕೊಂಡರೂ ರಾಜ್ಯದಲ್ಲಿ ಅವರು ನೀಡುವ ಜಾಹೀರಾತಿನಲ್ಲಿ ಆ ಪಕ್ಷದ ರಾಷ್ಟ್ರ ನಾಯಕರು, ರಾಜ್ಯ ನಾಯಕರ ಚಿತ್ರವಿದ್ದರೆ ಬಿಜೆಪಿ ಜಾಹೀರಾತಿನಲ್ಲಿ ಮೋದಿ ಅವರ ಭಾವಚಿತ್ರ ಮಾತ್ರ ಇದೆ. ಮೋದಿ ಸರ್ಕಾರಕ್ಕಾಗಿ ಮತ ನೀಡಿ ಎಂದು ಬಿಜೆಪಿ ಜಾಹೀರಾತು ನೀಡುತ್ತಿದೆಯೇ ಹೊರತು ಬಿಜೆಪಿ ಸರ್ಕಾರ ರಚನೆಗೆ ಅಲ್ಲ.

ಈ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿವೆ. ಹೀಗಿರುವಾಗ ಒಬ್ಬ ಸಾಹಿತಿಯಾಗಿ ಭೈರಪ್ಪನವರು ಈ ರೀತಿ ಹೇಳಿ ಜನರನ್ನು ದಿಕ್ಕುತಪ್ಪಿಸಬಾರದು. ಇನ್ನು ಅನಂತ­ಮೂರ್ತಿ­ಯವರು ಒಂದು ಪಕ್ಷದ ಪರವಿದ್ದು ಅವರಿಂದ ಅನುಕೂಲಗಳನ್ನು ಪಡೆಯುತ್ತಾರೆ, ತಾನು ಯಾವ ಪಕ್ಷದ ಪರವೂ ಇಲ್ಲ ಎಂದು ಭೈರಪ್ಪ ಹೇಳಿದ್ದಾರೆ. ಆದರೆ ಬಿಜೆಪಿ ಏರ್ಪಡಿಸಿದ್ದ ಆಯ್ದ ಸಾಹಿತಿಗಳ ಸಂವಾದ ಗೋಷ್ಠಿಯಲ್ಲಿ ಅವರು ಭಾಗವಹಿಸಿದ್ದಾರೆ. ಗುಜರಾತ್ ದೇಶದಲ್ಲೇ ಅತ್ಯುತ್ತಮ ರಾಜ್ಯ ಎಂದು ಹೇಳುತ್ತಾ ನರೇಂದ್ರಮೋದಿ ಅವರನ್ನು ಕೊಂಡಾಡಿದ್ದಾರೆ, ಯಡಿಯೂರಪ್ಪ­ನವರನ್ನು ಬೆಂಬಲಿಸುತ್ತಿದ್ದಾರೆ. ಇಷ್ಟಾದರೂ ತಾವು ಬಿಜೆಪಿ ಪರವಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.