ADVERTISEMENT

ಚರಂಡಿ– ಮಂಗಳದೀಪ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:30 IST
Last Updated 10 ಮಾರ್ಚ್ 2017, 19:30 IST

‘ನಾವು ಏಕಕಾಲಕ್ಕೆ 104 ಉಪಗ್ರಹಗಳನ್ನು ಹಾರಿಸಿದ್ದೇವೆ, ಮಂಗಳನತ್ತ ಶೋಧನೌಕೆ ಕಳಿಸಿದ್ದೇವೆ, ಆದರೆ ಮಲದ ಗುಂಡಿಗೆ ಮನುಷ್ಯರನ್ನು ಸುರಕ್ಷಿತ ಇಳಿಸಲು ಸಾಧ್ಯವಾಗಿಲ್ಲ’ ಎಂದು ಪೌರಕಾರ್ಮಿಕರ ಮುಖಂಡ ನಾರಾಯಣ ಎಂಬುವರು ಹೇಳಿದ್ದು ಮೊನ್ನೆ ವರದಿಯಾಗಿದೆ (ಪ್ರ.ವಾ., ಮಾರ್ಚ್ 8).

ವಾಸ್ತವದಲ್ಲಿ ವ್ಯಂಗ್ಯ ಅದಕ್ಕಿಂತ ತೀಕ್ಷ್ಣವಾಗಿದೆ: ನಮ್ಮ ವಿಜ್ಞಾನಿಗಳು ಮಂಗಳನಲ್ಲಿ ಮೀಥೇನ್ ಅನಿಲ ಇದೆಯೆಂದು ಆರು ಕೋಟಿ ಕಿ.ಮೀ. ದೂರದಿಂದಲೇ ಪತ್ತೆ ಮಾಡಿದ್ದೇವೆಂದು ಹೇಳಿದ್ದಾರೆ. ನಮ್ಮ ಚರಂಡಿಗುಂಡಿಗಳಲ್ಲಿ ಆರು ಅಡಿ ಕೆಳಗೆ ಮೀಥೇನ್ ವಿಷಾನಿಲ ಇದೆಯೇ ಇಲ್ಲವೆ ಎಂಬುದನ್ನು ಪತ್ತೆ ಮಾಡಲು ಬೆಂಗಳೂರು ಮಹಾನಗರಪಾಲಿಕೆ ಬಳಿ ಸಾಧನಗಳು ಇಲ್ಲವಲ್ಲ! ಇಲ್ಲದಿದ್ದರೆ ಹೋಗಲಿ, 202 ವರ್ಷಗಳ ಹಿಂದೆ (1815ರಲ್ಲಿ) ಸರ್‍ ಡೇವಿಡ್‍ ಹಂಫ್ರಿ ಎಂಬಾತ ಗಣಿಗಳಲ್ಲಿ ಮೀಥೇನ್ ವಿಷಾನಿಲ ಇದೆಯೇ ಇಲ್ಲವೆ ಎಂಬುದನ್ನು ಪತ್ತೆ ಮಾಡಲೆಂದು ಲಾಟೀನಿನಂಥ ಸರಳ ದೀಪವನ್ನು ರೂಪಿಸಿದ್ದ.

ಹೈಸ್ಕೂಲ್ ಪಾಠಗಳಲ್ಲಿ ಆ ‘ಡೇವಿದೀಪ’ದ ಬಗ್ಗೆ ನಾವೆಲ್ಲ ಓದಿರುತ್ತೇವೆ. ಗುಂಡಿಗಳಲ್ಲಿ ಆ ಲಾಟೀನನ್ನು ಇಳಿಬಿಟ್ಟಾಗ ದೀಪ ಆರಿ ಹೋದರೆ ಅಲ್ಲಿ ವಿಷಾನಿಲ ಇದೆ ಎಂಬುದು ಖಾತ್ರಿಯಾಗುತ್ತದೆ. ಇಂಥ ಸರಳ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವವರೂ ಇಲ್ಲವೆ ಬಿಬಿಎಂಪಿಯ ತಜ್ಞರ ವಲಯದಲ್ಲಿ?
-ನಾಗೇಶ ಹೆಗಡೆ, ಕೆಂಗೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.