ADVERTISEMENT

ದ್ವೇಷಕ್ಕೆ ಮಿತಿ ಇರಲಿ

​ಪ್ರಜಾವಾಣಿ ವಾರ್ತೆ
Published 1 ಮೇ 2015, 19:30 IST
Last Updated 1 ಮೇ 2015, 19:30 IST

ಐಎಎಸ್ ಅಧಿಕಾರಿ ಎಂ.ಎನ್.ವಿಜಯಕುಮಾರ್‌ ಏಪ್ರಿಲ್ 30ಕ್ಕೆ ನಿವೃತ್ತರಾಗಬೇಕಿತ್ತು. ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ಮುಜುಗರವುಂಟು ಮಾಡುತ್ತಿದ್ದಾರೆಂಬ ಆರೋಪ ವಿಜಯಕುಮಾರ್‌ ವಿರುದ್ಧ ಸೇವಾ ಅವಧಿಯಲ್ಲಿ ಪದೇ ಪದೇ ಕೇಳಿ ಬಂದಿತ್ತು. ಅವರ ಸೇವಾ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಬಾರಿ ವರ್ಗಾವಣೆ ಮಾಡಿ ಸರ್ಕಾರದ ಉನ್ನತಾಧಿಕಾರಿಗಳು ಮತ್ತು ರಾಜಕಾರಣಿಗಳು ಅವರನ್ನು ಇನ್ನಿಲ್ಲದಂತೆ ಕಾಡಿದರು.

ಇನ್ನೇನು ಅವರು ವಯೋನಿವೃತ್ತಿಯಾಗಿ ವಿಶ್ರಾಂತ ಜೀವನ ಕಳೆಯಬೇಕೆಂಬ ತಯಾರಿಯಲ್ಲಿದ್ದಾಗ, ತಮ್ಮ ನೆಮ್ಮದಿಗೆ ಭಂಗ ತಂದ ವಿಜಯಕುಮಾರರ ನಿವೃತ್ತ ಜೀವನ ಸಂಕಷ್ಟದಿಂದ ಕೂಡಿರಲೆಂಬ ‘ಸದಾಶಯ’ದಿಂದ ಸರ್ಕಾರವು ಅವರ ಸೇವಾ ಅವಧಿ ಕೇವಲ ಮೂರೇ ಮೂರು ದಿನ ಬಾಕಿ ಇರುವಾಗ ಅವರನ್ನು ಕಡ್ಡಾಯ ನಿವೃತ್ತಿ ಮಾಡುತ್ತದೆ! ಇದು ಅಸೂಯೆಯ ಪರಾಕಾಷ್ಠೆ ಸೂಚಿಸುವುದಲ್ಲದೇ, ಭ್ರಷ್ಟತೆಯನ್ನು ವಿರೋಧಿಸುವವರಿಗೆ ಇಂಥ ಶಿಕ್ಷೆಗಳು ಕಾಯ್ದಿವೆಯೆಂಬ ಸಂದೇಶ ಸಾರುತ್ತವೆ! ಏಕೆ ಇಂತಹ ಮನೋಭಾವ? ನಾವು ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದೇವೆ? ಆತ್ಮಾವಲೋಕನಕ್ಕೆ ಇದು ಸಕಾಲ!
- ಡಾ. ಚನ್ನು ಅ. ಹಿರೇಮಠ,
ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.